ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಕತೆಗಳ ಕೈ ಜಗ್ಗಿದರೆ ಅಂತಃಕರಣ ಜುಮ್ಮೆಂದಿತು!

ಹಾಗೆ ನೋಡಿದರೆ ನಾನು ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನ, ಸಂಪುಟ ವಿಸ್ತರಣೆ ಅವಾಂತರ, ಕೊಳಕು ರಾಜಕಾರಣ, ಅಧಿಕಾರಕ್ಕೆ ಕಿತ್ತಾಟ… ಬಗ್ಗೆ ಬರೆಯಬೇಕಾ ಗಿತ್ತು. ಬರೆದಿದ್ದರೆ  ನೀವೂ ಓದುತ್ತಿದ್ದಿರಿ. ಪ್ರಯೋಜನವೇನು ಬಂತು? ರಾಜಕಾರಣಿಗಳು ಅವರ ಕೊಳಕು ವ್ಯವಹಾರವನ್ನು ಮುಂದುವರಿಸುತ್ತಿ ದ್ದರು. ಹಾಗೆಲ್ಲ ಬರೆದು ನಾವು ಕೊಳಕಾಗಬೇಕಾಗುತ್ತಿತ್ತು. ಅವರ ದೃಷ್ಟಿಯಲ್ಲಿ ಕೆಟ್ಟವರಾಗಬೇಕಾಗುತ್ತಿತ್ತು. ಅದರ ಬದಲು ಇತ್ತೀಚೆಗೆ ಯೋಗಿ ದುರ್ಲಭಜೀ ಹೇಳಿದ ಕೆಲವು ಪ್ರಸಂಗಗಳನ್ನು ನಿಮಗೆ ಹೇಳೋಣವೆನಿಸಿತು. ಇಲ್ಲಿನ ಪ್ರತಿ ಪ್ರಸಂಗವೂ ನಿಮ್ಮ ಅಂತಃಕರಣ ತಟ್ಟದೇ ಇರದು. ಅದರಲ್ಲಿ ಅಡಕವಾಗಿರುವ ನೀತಿ  ನಿಮ್ಮ ಅಂತ ರಂಗದೊಳಗೆ ನೆಲೆಸದೇ ಇರದು. ಕ್ಷಣಕಾಲ ರಾಜಕೀಯ, ಜಂಜಾಟ ಗಳನ್ನು ಮರೆತು ಇದನ್ನು ಓದಿ.

ಒಂದು ದಿನ ಹತ್ತು ವರ್ಷದ ಬಾಲಕ ತನ್ನ ತಂದೆಗೆ ಒಂದೇ ಸಮನೆ ತನಗೊಂದು ನಾಯಿ ಮರಿಯನ್ನು ಕೊಡಿಸುವಂತೆ ಹಟ ಮಾಡುತ್ತಿದ್ದ. ಮಗನ ಆಸೆಯನ್ನು ತಿರಸ್ಕರಿಸಲು ತಂದೆಗೆ ಮನಸ್ಸಾಗಲಿಲ್ಲ. ತಂದೆ ಮಗನನ್ನು ಪೇಟೆಗೆ ಕರೆದುಕೊಂಡು ಹೋದ. ನಾಯಿ ಎಲ್ಲಿ  ಸಿಗುತ್ತದೆಂದು ಹುಡುಕಿದ. ಕೊನೆಗೊಂದು ನಾಯಿ ಅಂಗಡಿ (ಪೆಟ್ ಶಾಪ್) ಸಿಕ್ಕಿತು.

ಅಲ್ಲಿ  ನೂರಾರು ಬೇರೆ ಬೇರೆ ತಳಿ, ಜಾತಿಯ ನಾಯಿ ಮರಿಗಳಿ ದ್ದವು. ಆದರೆ ಒಂದು ನಾಯಿ ಮರಿಯನ್ನು ಮಾತ್ರ ಪ್ರತ್ಯೇಕವಾಗಿ ಇಡಲಾಗಿತ್ತು. ಆ ಬಾಲಕ ಆ ನಾಯಿಮರಿ ಬಳಿ ಹೋಗಿ ನಿಂತು ಅದನ್ನು ತದೇಕಚಿತ್ತದಿಂದ ನೋಡುತ್ತಿದ್ದ.

ಆ ಅಂಗಡಿಯ ಮಾಲೀಕ ಸನಿಹ ಬಂದು, ‘ಮಗು, ನನ್ನ ಅಂಗಡಿ ಯಲ್ಲಿ  ನೂರಾರು ಒಳ್ಳೆಯ ನಾಯಿಮರಿಗಳಿವೆ. ಅವೆಲ್ಲವನ್ನೂ ಬಿಟ್ಟು ಕಾಲು ಸರಿಯಿಲ್ಲದ ಈ ನಾಯಿಮರಿಯನ್ನೇಕೆ ನೋಡುತ್ತಿದ್ದೀಯಾ?’ ಎಂದು ಕೇಳಿದ.

‘ಯಾಕೋ ಈ ಮರಿ ನನಗೆ ಇಷ್ಟವಾಯಿತು’ ಎಂದ ಬಾಲಕ.

ಅದಕ್ಕೆ ಅಂಗಡಿ ಮಾಲೀಕ, ‘ಈ ನಾಯಿಮರಿಯ ಒಂದು ಕಾಲು ಹುಟ್ಟಿದಂದಿನಿಂದಲೇ ಸರಿ ಇಲ್ಲ. ಅದು ಎಂದೂ ಸರಿಯಾಗದು. ಸಾಯಿಸಬಾರದೆಂಬ ಕಾರಣಕ್ಕೆ ಅದನ್ನು ಇಲ್ಲಿ  ಇಟ್ಟುಕೊಂಡಿದ್ದೇನೆ ಅಷ್ಟೆ’ ಎಂದ.

ಆ ಮಾತಿನಿಂದ ಆ ಬಾಲಕನಿಗೆ ಬಹಳ ಬೇಸರವಾಯಿತು. ತನ್ನ ತಂದೆಯನ್ನು ಕರೆದು ಈ ನಾಯಿಮರಿಯೇ ತನಗೆ ಬೇಕೆಂದು ಹೇಳಿದ. ತಂದೆಯೂ ಅವನಿಗೆ ಹೇಳುವಷ್ಟು  ಹೇಳಿದ. ಆದರೆ ಮಗ ಕೇಳಲಿಲ್ಲ. ಕೊನೆಗೆ ಅದೇ ಮರಿಯನ್ನು ಕೊಡುವಂತೆ ಹೇಳಿದ. ಆಗಲೂ ಅಂಗಡಿ ಮಾಲೀಕ, ‘ಈ ಕುಂಟ ನಾಯಿಮರಿ ಮೇಲೇಕೆ ಅಂಥ ಪ್ರೀತಿ? ಬೇರೆಯದನ್ನು ಖರೀದಿಸಬಾರದಾ?’ ಎಂದು ಪರಿಪರಿಯಾಗಿ ಬೇಡಿಕೊಂಡ.

ಆಗ ಆ ಬಾಲಕ ತನ್ನ ಪ್ಯಾಂಟನ್ನು ಮೇಲಕ್ಕೆತ್ತಿ ‘ಈ ಪುಟ್ಟ ನಾಯಿಮರಿ ಕಾಲು ಹೇಗೋ, ನನ್ನ ಕಾಲೂ ಹಾಗೇ. ಅದು ಎಂಥ ನೋವು, ಸಂಕಟ ಅನುಭವಿಸುತ್ತಿರಬಹುದೋ, ಅಂಥದೇ ನೋವನ್ನು ನಾನೂ ಅನುಭವಿಸುತ್ತಿದ್ದೇನೆ. ಅದರ ದುಃಖ, ವೇದನೆ ಏನೆಂಬುದು ನನಗೆ ಗೊತ್ತು. ನನಗೆ ಇದಕ್ಕಿಂತ ಉತ್ತಮ ಸಂಗಾತಿ ಬೇರೊಂದಿರಲಾರದು.’ ಎಂದ.

ಆ ಮಾತನ್ನು ಕೇಳಿ ತಂದೆಗೆ ದುಃಖ ತಡೆದುಕೊಳ್ಳಲಾಗಲಿಲ್ಲ. ಅಂಗಡಿ ಮಾಲೀಕನ ಕಣ್ಣುಗಳೂ ತೇವಗೊಂಡವು.

ಆಕೆ ಎಂಬತ್ತರ ವೃದ್ಧೆ. ವಾರಕ್ಕೊಂದು ಸಲ ಪೋಸ್ಟ್ ಆಫೀಸಿಗೆ ಹೋಗಿ ಪತ್ರಗಳನ್ನು ಪೋಸ್ಟ್ ಮಾಡುವುದು, ಸ್ಟಾಂಪ್, ಅಂತರದೇಶಿ, ಕಾರ್ಡ್‌ಗಳನ್ನು ಖರೀದಿಸುವುದು ಆಕೆಯ ರೂಢಿ. ಆ ಪೋಸ್ಟಾಫೀಸಿ ನಲ್ಲಿರುವ ಎಲ್ಲ ಸಿಬ್ಬಂದಿಯೂ ಆಕೆಗೆ ಪರಿಚಿತರೇ. ಪ್ರತಿಯೊಬ್ಬ ರೊಂದಿಗೆ ಕೆಲಕಾಲ ಕಳೆಯದಿದ್ದರೆ ಆಕೆಗೆ ಸಮಾಧಾನವಿಲ್ಲ.

ಒಂದು ದಿನ ಆಕೆ ಪೋಸ್ಟಾಫೀಸಿಗೆ ಹೋದಾಗ ಅಲ್ಲಿ ಉದ್ದದ ಕ್ಯೂ ಇತ್ತು. ಆಕೆಗೆ ಸ್ಟಾಂಪ್‌ಗಳನ್ನು ಖರೀದಿಸಬೇಕಿತ್ತು. ಆಕೆಯನ್ನು ಗಮನಿಸಿದ ಕ್ಯೂದಲ್ಲಿ ನಿಂತ ಯಜಮಾನರೊಬ್ಬರು, ‘ಅಮ್ಮಾ, ಸ್ಟಾಂಪ್ ಖರೀದಿಸಲು ಕ್ಯೂದಲ್ಲಿ ನಿಲ್ಲಬೇಕಾಗಿಲ್ಲ. ಆ ಮೂಲೆಯಲ್ಲಿ ಸ್ಟಾಂಪ್ ಮಶೀನ್ ಇದೆ. ಆ ಮಶೀನಿನಿಂದ ಸೀಲ್ ಹಾಕಿಸಿಕೊಂಡು ಪತ್ರ ಪೋಸ್ಟ್ ಮಾಡಬಹುದಲ್ಲ’ ಎಂದರು.

ಅದಕ್ಕೆ ಆ ವೃದ್ಧೆ ಹೇಳಿದಳು-‘ಹೌದೌದು. ಅದು ನನಗೆ ಗೊತ್ತು. ಆದರೆ ನನ್ನ ಸೊಂಟನೋವು, ಕೆಮ್ಮು, ಮಂಡಿನೋವನ್ನು ಆ ಮಶೀನು ವಿಚಾರಿಸುವುದಿಲ್ಲವಲ್ಲ’.

ರಾಬರ್ಟ್ ಡಿ ವೆನ್ಸೆಂಜೋ ಎಂಬ ಗಾಲ್ಫ್ ಆಟಗಾರನ ಬಗ್ಗೆ ಕೇಳಿರ ಬಹುದು. ಆತ ಮೂಲತಃ ಅರ್ಜೆಂಟೀನಾದವ. ಒಮ್ಮೆ ಟೂರ್ನ ಮೆಂಟ್‌ನಲ್ಲಿ ಗೆದ್ದ ವೆನ್ಸೆಂಜೋಗೆ ದೊಡ್ಡ ಮೊತ್ತದ ಚೆಕ್ ಸಿಕ್ಕಿತು. ಕ್ಯಾಮೆರಾಕ್ಕೆ ಪೋಸು ನೀಡಿ, ಅಭಿಮಾನಿಗಳಿಗೆಲ್ಲ ಹಸ್ತಾಕ್ಷರ ನೀಡಿ, ಅಲ್ಲಿಂದ ಹೊರಡಬೇಕೆನ್ನುವಷ್ಟರಲ್ಲಿ ಹೆಂಗಸೊಬ್ಬಳು ಅವನ ಸನಿಹ ಬಂದು ಅವನ ಗೆಲುವಿಗೆ ಅಭಿನಂದಿಸಿದಳು. ಆನಂತರ ವೆನ್ಸೆಂಜೋನ ಕೈ ಹಿಡಿದುಕೊಂಡು, ‘ನನ್ನ ಮಗನ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿದ್ದಾನೆ. ಹಣ ಕೊಡದಿದ್ದರೆ ಅವನಿಗೆ ಚಿಕಿತ್ಸೆ ಕೊಡುವುದಿಲ್ಲ. ದಯವಿಟ್ಟು ಸಹಾಯ ಮಾಡಿ’ ಎಂದಳು.

ಅವಳ ಸ್ಥಿತಿ ಕಂಡು ವೆನ್ಸೆಂಜೋನ ಮನಕಲಕಿತು.

ತಕ್ಷಣ ಚೆಕ್‌ಬುಕ್ ಹಾಗೂ ಪೆನ್ ಹೊರತೆಗೆದ ಆತ ಟೂರ್ನ ಮೆಂಟ್‌ನಲ್ಲಿ ಗೆದ್ದ ಹಣವನ್ನೆಲ್ಲ ಆಕೆಗೆ ಬರೆದುಬಿಟ್ಟ. ‘ನಿನ್ನ ಮಗನಿಗೆ ಒಳ್ಳೆಯ ಚಿಕಿತ್ಸೆ ಕೊಡಿಸು. ಆತ ಬೇಗನೆ ಗುಣಮುಖನಾಗಲಿ’ ಎಂದು ಹೇಳಿ ಹೊರಟ.

ನಾಲ್ಕೈದು ತಿಂಗಳುಗಳ ಬಳಿಕ ವೆನ್ಸೆಂಜೋ ಗಾಲ್ಫ್ ಕ್ಲಬ್‌ಗೆ ಹೋದ. ಅಲ್ಲಿ ಅವನಿಗೆ ಹತ್ತಾರು ಮಂದಿ ಸ್ನೇಹಿತರು ಸಿಕ್ಕರು. ಆ ಪೈಕಿ ಒಬ್ಬಾತ, ‘ವೆನ್ಸೆಂಜೋ, ನಾಲ್ಕೈದು ತಿಂಗಳುಗಳ ಹಿಂದೆ, ನೀನು ಟೂರ್ನಮೆಂಟ್ ಗೆದ್ದ ದಿನ ಹೆಂಗಸೊಬ್ಬಳು ನಿನ್ನನ್ನು ಭೇಟಿ ಮಾಡಿ ದ್ದಳಂತೆ. ಆಸ್ಪತ್ರೆಯಲ್ಲಿರುವ ತನ್ನ ಮಗನಿಗೆ ಚಿಕಿತ್ಸೆಗೆ ಹಣ ಬೇಕೆಂದು ಕಣ್ಣೀರಿಟ್ಟಾಗ ನೀನು ಆಕೆಗೆ ಟೂರ್ನಿಯಲ್ಲಿ ಗೆದ್ದ ಹಣವನ್ನೆಲ್ಲ ನೀಡಿದೆಯಂತೆ ನಿಜಾನಾ?’ ಎಂದು ಕೇಳಿದ. ಅದಕ್ಕೆ ವೆನ್ಸೆಂಜೋ ಹೌದೆಂಬಂತೆ ತಲೆ ಅಲ್ಲಾಡಿಸಿದ.

‘ನಿಜಸಂಗತಿಯೇನೆಂದರೆ, ಆ ಹೆಂಗಸಿಗೆ ಮದುವೆಯೇ ಆಗಿಲ್ಲ ವಂತೆ. ಆಕೆಗೆ ಮಗನೂ ಇಲ್ವಂತೆ.   ಆತನ ಸ್ಥಿತಿ ಗಂಭೀರವೂ ಆಗಿರಲಿ ಲ್ಲವಂತೆ’ ಎಂದು ಸ್ನೇಹಿತ ಜೋರಾಗಿ ನಕ್ಕ.

ಅದಕ್ಕೆ ವೆನ್ಸೆಂಜೋ ಹೇಳಿದ್ದೇನು ಗೊತ್ತಾ?

‘ಹಾಗಂದ್ರೆ ಮಗು ಸಾಯುತ್ತಿಲ್ಲ ಎಂದಂತಾಯಿತು. ಅದಕ್ಕಿಂತ ಸಂತಸದ ಸಂಗತಿ ಇನ್ನೇನಿದೆ? ಹಣ ಬರುತ್ತದೆ, ಹೋಗುತ್ತದೆ. ಆದರೆ ಮಗುವಿನ ಪ್ರಾಣ ಹೋದರೆ ಬರೊಲ್ಲ. ಪರವಾಗಿಲ್ಲ. ನನಗೆ ಸಮಾಧಾನ ಸಿಕ್ತು’

ಒಬ್ಬ ಸನ್ಯಾಸಿ ಪರ್ವತ ದಾಟಿ ದಣಿವಾರಿಸಿಕೊಳ್ಳಲು ಮರದ ಕೆಳಗೆ ಕುಳಿತಾಗ ಒಂದು ವಜ್ರದ ಹರಳು ಸಿಕ್ಕಿತು. ಅದನ್ನು ಆತ ತನ್ನ ಜೋಳಿಗೆಯೊಳಗೆ ಹಾಕಿಕೊಂಡ. ಮರುದಿನ ಈ ಸನ್ಯಾಸಿಗೆ ಒಬ್ಬ  ದಾರಿಹೋಕ ಸಿಕ್ಕಿದ. ಪರಿಚಯವಾಯಿತು. ಅವರಿಬ್ಬರು ಮರದ ನೆರಳಿನಲ್ಲಿ  ಊಟಕ್ಕೆ ಕುಳಿತರು. ಬುತ್ತಿಬಿಚ್ಚುವಾಗ ದಾರಿಹೋಕನಿಗೆ ಸನ್ಯಾಸಿಯ ಜೋಳಿಗೆಯಲ್ಲಿನ ಹೊಳೆವ ವಜ್ರದ ಹರಳು ಕಾಣಿಸಿತು. ಪ್ರಾಯಶಃ ಈ ಸನ್ಯಾಸಿಗೆ ಅದು ವಜ್ರದ ಹರಳೆಂಬುದು ಗೊತ್ತಿರಲಿಕ್ಕಿಲ್ಲ, ಅದರ ಬೆಲೆಯೂ ಅವನಿಗೆ ಗೊತ್ತಿರಲಿಕ್ಕಿಲ್ಲ. ಅದನ್ನು ಕೊಡುವಂತೆ ಕೇಳಿದರೆ ಕೊಟ್ಟಾನು. ಅದನ್ನು ಮಾರಿದರೆ ಜೀವನವಿಡಿ ಸುಖವಾಗಿ ಇರಬಹುದಲ್ಲ ಎಂದು ದಾರಿಹೋಕ ಯೋಚಿಸಿದ.

‘ಸ್ವಾಮೀಜಿ, ನಿಮ್ಮ ಜೋಳಿಗೆಯಲ್ಲಿರುವ ಆ ಕಲ್ಲನ್ನು ನನಗೆ ಕೊಡುತ್ತೀರಾ?’ ಎಂದು ಕೇಳಿದ.

ಆ ಸನ್ಯಾಸಿ ಹಿಂದೆಮುಂದೆ ನೋಡದೇ ಅದನ್ನು ಕೊಟ್ಟುಬಿಟ್ಟ. ಅದನ್ನು ಪಡೆದ ನಂತರದಿಂದ ಅವನ ಆನಂದಕ್ಕೆ ಪಾರವೇ ಇಲ್ಲದಂತಾಯಿತು. ಆದರೆ ಅವನ ಮನಸ್ಸಿನಲ್ಲೊಂದು ವಿಚಿತ್ರ ಭಾವ ಕಾಡಲಾರಂಭಿಸಿತು. ಹೀಗಾಗಿ ಆತನಿಗೆ ಆ ವಜ್ರವನ್ನು ಮಾರಲು ಮನಸ್ಸಾಗಲಿಲ್ಲ. ಸನ್ಯಾಸಿಯನ್ನು ಭೇಟಿಯಾಗಬೇಕೆಂಬ ಉತ್ಕಟ ಆಸೆ ಕಾಡಲಾರಂಭಿಸಿತು. ಅವನನ್ನು ಅರಸಿಕೊಂಡು ಹೊರಟ.

ಆ ಸನ್ಯಾಸಿ ಮರದ ಕೆಳಗೆ ಕುಳಿತು ಬುತ್ತಿ ಬಿಚ್ಚುತ್ತಿದ್ದ. ಈ ದಾರಿಹೋಕ ಅವನ ಮುಂದೆ ನಿಂತು ಹೇಳಿದ-‘ ನಾನು ಕೆಲವು ತಿಂಗಳುಗಳ ಹಿಂದೆ ನಿಮ್ಮನ್ನು ಭೇಟಿ ಮಾಡಿದ್ದೆ ನೆನಪಿದೆಯಾ?’ ಸನ್ಯಾಸಿ ಹೌದೆಂಬಂತೆ ತಲೆ ಅಲ್ಲಾಡಿಸಿದ.

ದಾರಿಹೋಕ ಹೇಳಿದ- ‘ಅಂದು ನಾನು ಈ ಬೆಲೆಬಾಳುವ ವಜ್ರದ ಹರಳನ್ನು ಕೇಳಿದ ತಕ್ಷಣ ಹಿಂದೆ ಮುಂದೆ ನೋಡದೇ ನನಗೆ ಕೊಟ್ಟಿರಿ. ಆದರೆ ನನಗೆ ಈ ವಜ್ರದ ಹರಳು ಬೇಡ. ನೀವೇ ಇಟ್ಟುಕೊಳ್ಳಿ. ನನಗೇನು ಬೇಕು ಅಂದ್ರೆ ಈ ವಜ್ರದ ಹರಳನ್ನು ಹಿಂದೆ ಮುಂದೆ ನೋಡದೇ ಕೊಡುವ ನಿಮ್ಮ ಧಾರಾಳ ಮನಸ್ಸು. ಅದನ್ನು ನನಗೆ ಕೊಡುತ್ತೀರಾ? ಪ್ಲೀಸ್.

ನಾಲ್ವರು ಸೈನಿಕರನ್ನು ಪರೀಕ್ಷಿಸಬೇಕಿತ್ತು. ಜನರಲ್ ಅವರನ್ನು ಕರೆದು ಹೇಳಿದ- ನೀವೆಲ್ಲರೂ ಇಲ್ಲಿಂದ ಓಡುತ್ತಾ ಆ ಪರ್ವತವನ್ನು ಏರಿ ವಾಪಸ್ ಬರಬೇಕು.’ ಮೊದಲನೆಯವ ಓಡಲಾರಂಭಿಸಿದ. ಪರ್ವತದ ತುದಿ ಮುಟ್ಟುವವರೆಗೆ ಸುಸ್ತಾದ. ಮರದ ಕೊಂಬೆಯನ್ನು ಮುರಿದುಕೊಂಡು ವಾಪಸ್ ಬಂದು ಜನರಲ್‌ಗೆ ವರದಿ ಒಪ್ಪಿಸಿದ. ಎರಡನೆಯವ ಓಡಲಾರಂಭಿಸಿದ. ಆತ ಅರ್ಧಪರ್ವತವೇರಿ ಮರದ ರೆಂಬೆಯನ್ನು ಮುರಿದು ವಾಪಸ್ ಬಂದ. ಆತನೂ ಜನರಲ್‌ಗೆ ವರದಿ ಒಪ್ಪಿಸಿದ. ಮೂರನೆಯವನೂ ಮುಕ್ಕಾಲು ಪರ್ವತ ಏರಿ ಅಲ್ಲಿ ಸಿಕ್ಕ ಕೆಲವು ವಸ್ತುಗಳೊಂದಿಗೆ ವಾಪಸ್ ಬಂದ.

ನಾಲ್ಕನೆಯವ ಪೂರ್ತಿ ಪರ್ವತ ಏರಿ ವಾಪಸ್ ಬಂದು ಹೇಳಿದ- ‘ನಾನೇರಿದ ಪರ್ವತದ ತುದಿಯಲ್ಲಿ ಏನೂ ಇಲ್ಲವಾದ್ದರಿಂದ ಏನನ್ನೂ ತರಲಿಲ್ಲ. ಆದರೆ ನಾನು ನಕ್ಷತ್ರವನ್ನು ನಿಮ್ಮೆಲ್ಲರಿಗಿಂತ ಹತ್ತಿರದಿಂದ ನೋಡಿದೆ.’

ಒಮ್ಮೆ ರಷ್ಯನ್ ಲೇಖಕ ಟರ್ಗನೆವ್‌ನ ಮುಂದೆ ಭಿಕ್ಷುಕನೊಬ್ಬ ಕೈಯೊಡ್ಡಿದ. ‘ತುಂಬಾ ಹಸಿದಿದ್ದೇನೆ. ಏನಾದರೂ ಭಿಕ್ಷೆ ಹಾಕಿ’ ಎಂದು ದೈನ್ಯದಿಂದ ಬೇಡಿಕೊಂಡ. ಟರ್ಗನೆವ್ ಪ್ಯಾಂಟಿನ ಜೇಬಿಗೆ ಕೈಹಾಕಿದ. ಸಿಗಲಿಲ್ಲ. ಪ್ಯಾಂಟಿನ ಒಳ ಜೇಬಿಗೆ ಕೈ ಹಾಕಿದ. ಏನೂ ಸಿಗಲಿಲ್ಲ. ಅಂಗಿ ಜೇಬಿನಲ್ಲೂ ಇಲ್ಲ. ಪರ್ಸ್ ಸಹ ಖಾಲಿ ಖಾಲಿ.

‘ಬ್ರದರ್ ತಪ್ಪು ಭಾವಿಸಬೇಡ. ನನ್ನ ಬಳಿ ನಿನಗೆ ಕೊಡಲು ನಯಾಪೈಸೆಯೂ ಇಲ್ಲವಲ್ಲ’ ಎಂದು ಟರ್ಗನೆವ್ ಭಿಕ್ಷುಕನ ಮುಂದೆ ಅಲವತ್ತುಕೊಂಡ.

ಅದಕ್ಕೆ ಭಿಕ್ಷುಕ ಹೇಳಿದ-‘ನೀವು ನನಗೆ ಬ್ರದರ್ ಎಂದು ಹೇಳಿದಿ ರಲ್ಲಾ, ಸಾಕು ಬಿಡಿ. ಅದಕ್ಕಿಂತ ದೊಡ್ಡ ಭಿಕ್ಷೆ (ಗಿಫ್ಟ್) ಇನ್ನೇನಿದೆ?’

ಒಂದು ಬೆಳ್ಳಂ ಬೆಳಗ್ಗೆ. ಎಂಬತ್ತರ ಪ್ರಾಯದ ಆತ ವೈದ್ಯನೆದುರು ಕುಳಿತಿದ್ದ. ಕೈಗೆ ಎಂಥದೋ ಗಾಯ ಮಾಡಿಕೊಂಡಿದ್ದ. ಅದಕ್ಕೆ ಬ್ಯಾಂಡ್ ಏಡ್ ಸಹ ಬಿದ್ದಿತ್ತು. ಅದರ ಹೊಲಿಗೆ ಬಿಚ್ಚಿ ಮತ್ತೆ ಪಟ್ಟಿ ಕಟ್ಟಬೇಕಿತ್ತು. ಅದನ್ನು ಪೂರೈಸಿಕೊಳ್ಳಲಿಕ್ಕೆಂದೇ ಡಾಕ್ಟರ್ ಎದುರಿಗೆ ಕುಳಿತವನಿಗೆ ಅಗ್ದೀ ಅರ್ಜೆಂಟು. ಹೇಳಲಾಗದ ಅವಸರ ಅವನ ಹಾವಭಾವಗಳಲ್ಲೇ ಗೊತ್ತಾಗುತ್ತಿತ್ತು. ‘ಡಾಕ್ಟ್ರೇ.. ಇದು ತುಂಬ ಹೊತ್ತೇನೂ ತೆಗೆದುಕೊಳ್ಳೋಲ್ಲ ತಾನೆ? ನಾನು ಒಂಬತ್ತು ಗಂಟೆಗೆ ಬೇರೆಡೆ ಹೋಗಬೇಕು’ ಎನ್ನುತ್ತಾ ವಾಚು ನೋಡಿಕೊಂಡ ಆ ವೃದ್ಧ. ಇದೊಳ್ಳೆ ಕತೆ, ಈ ಮುದುಕನಿಗೆ ಇದೆಂಥಾ ಅವಸರ ಎಂದು ಮನಸ್ಸಿ ನಲ್ಲೇ ಅಂದುಕೊಂಡ ಡಾಕ್ಟರ್. ಮುಂಜಾನೆ ಸಮಯವಾದ್ದರಿಂದ ದವಾಖಾನೆಯಲ್ಲಿ ಅಂಥ ರಷ್ ಏನು ಇರಲಿಲ್ಲ. ವೈದ್ಯನೂ ಉಲ್ಲಸಿತ ನಾಗಿಯೇ ಇದ್ದ. ಹಾಗಾಗಿಯೇ ನಗುಮುಖದಿಂದ ವಿಚಾರಿಸಿದ, ‘ಏನು ರಾಯರೇ, ಬಹಳ ತುರ್ತಿನಲ್ಲಿದ್ದೀರಿ. ಮತ್ತೊಂದು ವೈದ್ಯರನ್ನು ಕಾಣುವ ಕೆಲಸವಿದೆಯೋ?’.

‘ಇಲ್ಲ.. ಇಲ್ಲ.. ನನ್ನ ಹೆಂಡತಿ ಜತೆ ತಿಂಡಿ ತಿನ್ನಬೇಕು. ಅದಕ್ಕೆ ಅವ ಸರ..’ ಆ ವೃದ್ಧನಿಂದ ಉತ್ತರ ಬಂತು. ನಕ್ಕ ವೈದ್ಯ, ‘ಒಹೋ, ಅದಕ್ಕೆ ಆವಾಗಿನಿಂದ ವಾಚು ನೋಡಿಕೊಳ್ಳುತ್ತಿದ್ದೀರಾ? ಇವತ್ತು ಒಂದೈದು ನಿಮಿಷ ಆಚೀಚೆ ಆಗಬಹುದು. ನಿಮ್ಮ ಹೆಂಡತಿ ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳುವ ಛಾನ್ಸೂ ಇದೆ’ ಎಂದು ಕಿಚಾಯಿಸಿದರು.

ಅದಕ್ಕೆ ಆ ವೃದ್ಧ ಹೇಳಿದ, ‘ಹಂಗೇನೂ ಇಲ್ಲ. ಐದು ವರ್ಷಗಳಿಂದ ಪ್ರತಿ ಬೆಳಗ್ಗೆ ತಪ್ಪದೇ ಅವಳ ಜತೆ ಕಾಲ ಕಳೆಯುತ್ತಿದ್ದೇನೆ. ಇಷ್ಟು ಅವಧಿಯಲ್ಲಿ ಒಮ್ಮೆಯೂ ಅವಳು ನನ್ನನ್ನು ಗುರುತಿಸಿಲ್ಲ. ಆಕೆಗೆ ಭಯಂಕರ ವಿಸ್ಮೃತಿಯ ಅಲ್ಜಮೀರ್ ಕಾಯಿಲೆ ಇದೆ..’ ಉತ್ತರ ಕೇಳಿ ಅಚ್ಚರಿಗೆ ಬಿದ್ದ ಡಾಕ್ಟರ್ ಕೇಳಿದ, ‘ಆಕೆ ನಿಮ್ಮನ್ನು ಯಾವತ್ತೂ ಗುರುತಿಸದಿದ್ದರೂ, ನೀವ್ಯಾರು ಎಂಬುದೇ ಆಕೆಗೆ ತಿಳಿಯದಿದ್ದರೂ ಪ್ರತಿ ಮುಂಜಾನೆ ಅವಳ ಜತೆ ತಪ್ಪದೇ ಉಪಾಹಾರ ಮಾಡುತ್ತೀರಾ?’. ಅಷ್ಟೊತ್ತಿಗೆ ಬ್ಯಾಂಡ್ ಏಡ್ ಪಟ್ಟಿ ಕಟ್ಟಿ ಮುಗಿದಿದ್ದರಿಂದ ಆ ವೃದ್ಧ ಎದ್ದು ಹೋಗುತ್ತ ಹೇಳಿದ, ‘ಅವಳಿಗೆ ನಾನ್ಯಾರೆಂದು ತಿಳಿಯದೇ ಇರಬಹುದು, ಆದರೆ ನನಗೆ ಆಕೆ ಯಾರೆಂದು ಗೊತ್ತಿದೆ ಅಲ್ವಾ?’.

ವೃದ್ಧ ಹೋದ ದಾರಿಯನ್ನೇ ನೋಡುತ್ತ ನಿಂತ ಡಾಕ್ಟರಿಗೆ, ‘ಪ್ರೀತಿ ಬರೀ ದೈಹಿಕವಾದುದಲ್ಲ’ ಎಂಬ ಮಾತಿನ ಅರ್ಥ ಏನು ಎಂಬುದು ನಿಚ್ಚಳವಾಗಿ ಕಣ್ಣು ಹನಿಗೂಡಿತ್ತು.

5 Comments

  1. Awesome blog.. Pls continue writing more…

    Thanks & regards,
    NSP

  2. mana muttuva prasangagalu.

  3. chennagide….

  4. Thumbs chensgidey sir

  5. sir
    nanage enu helabeku anthane thochtha illa sir , thumba thumba thumba chennagide sir thanku very much sir

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.