ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ನಿಮ್ಮಷ್ಟು ಸುಖಿ ಯಾರಿಲ್ಲ, ನಿಮಗೇಕೆ ಅದು ಗೊತ್ತಿಲ್ಲ?

ನೂರೆಂಟು ನೋಟ
ವಿಶ್ವೇಶ್ವರ ಭಟ್

13-Edi1‘ಯೋಗಿ ದುರ್ಲಭಜೀ, ನಿಮ್ಮ ಜನ್ಮದಿನದಂದು ನಿಮಗೆ ಏನನ್ನು ಕಳಿಸಲಿ?’ ಎಂದು ಸಹಜವಾಗಿ ಕೇಳಿದೆ. ‘ಮೊದಲನೆಯದಾಗಿ ನನಗೆ ಜನ್ಮದಿನ ಆಚರಣೆಯಲ್ಲಿ ನಂಬಿಕೆಯಿಲ್ಲ. ನನಗೆ ಏನಾದರೂ ಮತ್ತೊಂದು ಒಳ್ಳೆಯ ಕೆಲಸವನ್ನು ಮಾಡಲು ಇದೊಂದು ನೆಪ ಅಷ್ಟೆ. ನಾನು ಯಾರ ಜನ್ಮದಿನವನ್ನೂ ಆಚರಿಸುವುದಿಲ್ಲ. ಆದರೆ ಆಯಾ ದಿನದಂದು ಅವರವರು ಮಾಡಿದ ಉತ್ತಮ ಕಾರ್ಯವನ್ನು ನೆನಪಿಸಿಕೊಂಡು ಪ್ರೇರಣೆ ಪಡೆಯುತ್ತೇನೆ. ಜನ್ಮದಿನಾಚರಣೆಯ ಉದ್ದೇಶ ಅದೇ ತಾನೆ?’ ಎಂದರು.

ಅಷ್ಟಕ್ಕೆ ಸುಮ್ಮನಾಗದೇ, ‘ಯೋಗಿಜೀ, ನಾನು ನಿಮಗೆ ಹೂಗುಚ್ಛ ಕಳಿಸಲಾರೆ. ಅದು ಬಾಡಿ ಹೋಗಬಹುದು. ಆದರೆ ಕೆಲವು ಪುಸ್ತಕಗಳನ್ನು ಕಳಿಸಿಕೊಡಬೇಕೆಂದಿದ್ದೇನೆ. ನಿಮಗೆ ಯಾವ ಪುಸ್ತಕಗಳನ್ನು ಕಳಿಸಲಿ?’ ಎಂದು ಕೇಳಿದೆ. ಒಂದು ಕ್ಷಣದ ಮೌನದ ನಂತರ ದುರ್ಲಭಜೀ ಹೇಳಿದರು-‘ಹಾಗಾದರೆ ಒಂದು ಕೆಲಸ ಮಾಡಿ. ನನಗೆ ಪುಸ್ತಕ ಕಳಿಸುವುದು ಬೇಡ. ಅದರ ಬದಲು ನನ್ನ ಜನ್ಮದ ನೆನಪಿನಲ್ಲಿ ಜನರಿಗೆ ಉಪಯುಕ್ತವಾಗುವಂಥ ಒಂದು ಪುಸ್ತಕ ಬರೆದು ಸಂಕ್ರಾಂತಿಯ ದಿನದಂದು ಪ್ರಕಟಿಸಿ. ನನಗೆ ಬಹಳ ಸಂತಸವಾಗುತ್ತದೆ. ಅದು ನಿಮಗೆ ಕಷ್ಟವೂ ಆಗಲಿಕ್ಕಿಲ್ಲ.”

ದುರ್ಲಭಜೀ ಇಂಥದ್ದೊಂದು ಬೇಡಿಕೆಯಿಡಬಹುದೆಂದು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ಸಂಕ್ರಾಂತಿಗೆ ಇನ್ನು ಇಪ್ಪತ್ತೊಂದು ದಿನ ಬಾಕಿ ಉಳಿದಿತ್ತು. ಅಷ್ಟರೊಳಗೆ ಪುಸ್ತಕ ಬರೆದು, ಕಂಪೋಸ್ ಮಾಡಿಸಿ, ಮುಖಪುಟ ರೂಪುಗೊಳಿಸಿ, ಎರಡು ಬಾರಿ ಕರಡು ತಿದ್ದಿ, ಮುದ್ರಿಸಿ ಸಂಕ್ರಾಂತಿಯ ದಿನದಂದು ಬಿಡುಗಡೆ ಮಾಡುವುದು ಸಣ್ಣಪುಟ್ಟ ಕೆಲಸವಾಗಿರಲಿಲ್ಲ. ಅದೊಂದೇ ಕೆಲಸವಾದರೆ ಮಾಡಬಹುದು. ಆದರೆ ಆಫೀಸಿನ ಕೆಲಸ, ದೈನಂದಿನ ಬರವಣಿಗೆ, ವಾರದ ಅಂಕಣ, ಕ್ಷಣಕ್ಷಣಕ್ಕೂ ಕಿರುಚುವ ಮೊಬೈಲು, ನೆಟ್ಟಿಗೆ ಮುರಿಯುವ ಎಸ್ಸೆಮ್ಮೆಸ್ಸು, ಇನ್‌ಬಾಕ್ಸ್‌ನಿಂದ ಇಣುಕುವ ಇಮೇಲ್, ಗಳಿಗೆಗೊಮ್ಮೆ ನೆನಪಿಸುವ ಟ್ವಿಟ್ಟರ್, ಫೇಸ್‌ಬುಕ್, ವಾಟ್ಸಪ್, ಅತಿಥಿಗಳು, ಮೀಟಿಂಗ್, ಅತಿಥಿಗಳ ಭೇಟಿ, ಮಾಮೂಲಿ ದಿನಚರಿಯ ನಡುವೆ ಈ ಕೆಲಸವನ್ನೂ ಮಾಡಲು ಸಾಧ್ಯವಾ? ಯೋಗಿಜೀ ಅವರಿಗೆ ಏನು ಹೇಳಲಿ? ಒಂದು ವೇಳೆ ‘ಹೂಂ’ ಎಂದು ಹೇಳಿ ಕೆಲಸ ‘ಉಹುಂ’ ಆದರೆ ಚೆನ್ನಾಗಿರೋಲ್ಲ. ಹಾಗಂತ ಅವರಿಗೆ ‘ಉಹುಂ’ ಅಂತ ಹೇಳೋದು ಹೇಗೆ?

ಈ ಚಡಪಡಿಕೆಯಲ್ಲಿದ್ದಾಗ ಅವರೇ ಹೇಳಿದರು- ‘ನಿಮ್ಮ ‘ಬತ್ತದ ತೆನೆ’ ಪುಸ್ತಕವನ್ನು ನಾನು ಓದಿಸಿಕೊಂಡಿದ್ದೇನೆ. ಅದರ ಮುಂದಿನ ಭಾಗವನ್ನು ಬರೆಯಿರಿ. ಜನರಿಗೆ ಉಪದೇಶ ಕೊಡುವುದು ಬೇಡ. ಸಲಹೆ, ಸೂಚನೆ, ಟಿಪ್ಸ್‌ಗಳ ಮೂಲಕ ಬದುಕಿನ ಕೆಲವು ಸಣ್ಣಪುಟ್ಟ ಆದರೆ ಪ್ರಮುಖ ಸಂಗತಿಗಳ ಬಗ್ಗೆ ಹೇಳಿ. ಆ ಟಿಪ್ಸ್‌ಗಳು ನಿಮಗೂ ಅನ್ವಯವಾಗಲಿ. ಆಗ ಕೃತಿ ಶುಷ್ಕವೆನಿಸುವುದಿಲ್ಲ, ಬೋಧೆಯಾಗುವುದಿಲ್ಲ. ಹಾಗೆ ಮಾಡಿ, ಹೀಗೆ ಮಾಡಿ ಎಂದು ಹೇಳುವ ಮೊದಲು ಹಾಗೆ ಮಾಡೋಣ, ಹೀಗೆ ಮಾಡೋಣ ಎಂಬ approach ಒಳ್ಳೆಯದು. ತೀರಾ ದೊಡ್ಡ ಪುಸ್ತಕ ಬೇಡ. ನೂರು-ನೂರಾಹತ್ತು ಪುಟಗಳಿರಲಿ.’

ಆಯಿತು ಎಂದು ಒಪ್ಪಿಕೊಂಡೆ.

ಅಂದಿನಿಂದಲೇ ಬರೆಯಲಾರಂಭಿಸಿದೆ. ಸಂಕ್ರಾಂತಿಯ ದಿನದಂದು ಪುಸ್ತಕ ಸಿದ್ಧವಾಗಿತ್ತು. ‘ನಿಮ್ಮಷ್ಟು ಸುಖಿ ಯಾರಿಲ್ಲ, ನಿಮಗೇಕೆ ಅದು ಗೊತ್ತಿಲ್ಲ?’ ಎಂಬ ಶೀರ್ಷಿಕೆಯಿಟ್ಟು ದುರ್ಲಭಜೀ ಅವರಿಗೆ ಹೇಳಿದೆ. ಅವರಿಗೆ ಶೀರ್ಷಿಕೆ ಇಷ್ಟವಾಯಿತು. ‘ತುಸು ದೀರ್ಘವಾಯಿತಾ’ ಎಂದು ಕೇಳಿದೆ. ‘ಪುಸ್ತಕ ಪುಟ್ಟದಾಗಿದೆಯಲ್ಲ’ ಎಂದು ಹೇಳಿ ನಕ್ಕರು. ಈ ಶೀರ್ಷಿಕೆ ಇಷ್ಟು ಉದ್ದವಾಗಿದ್ದು ಸಾಲದೆಂಬಂತೆ ಅದಕ್ಕೊಂದು -‘ಚಿಂತೆಗಳನ್ನೆಲ್ಲ ಸುಟ್ಟು, ಹಾಯಾಗಿರೋ ಗುಟ್ಟು’ ಎಂಬ ಟ್ಯಾಗ್‌ಲೈನ್ ನೀಡಿದೆ. ‘ಈ ಪುಸ್ತಕವನ್ನು ಒಂದು ಸಾಲಿನಲ್ಲಿ ಹೇಗೆ ಹೇಳುತ್ತೀರಿ?’ ಎಂದು ದುರ್ಲಭಜೀ ಕೇಳಿದ್ದಕ್ಕೆ ಹೇಳಿದೆ-‘ಈ ಕೃತಿ ನಾವು ನಮ್ಮೊಳಗೆ ಮಾಡಿಕೊಳ್ಳುವ ಗಣಿಗಾರಿಕೆ!’

ಅಂದ ಹಾಗೆ ಕಳೆದ ಎರಡು ವಾರಗಳಿಂದ ಅಂಕಿತ ಪುಸ್ತಕ ಪ್ರಕಾಶನದ ಟಾಪ್‌ಟೆನ್ ಪುಸ್ತಕಗಳ ಪಟ್ಟಿಯಲ್ಲಿ ಈ ಕೃತಿ ಮೊದಲ ಸ್ಥಾನದಲ್ಲಿದೆ. ನಿಮಗಾಗಿ ಈ ಕೃತಿಯ ಮೂರು ಪುಟ್ಟ ಅಧ್ಯಾಯಗಳನ್ನು ಎತ್ತಿಕೊಡುತ್ತಿದ್ದೇನೆ.

***

ಬೇರೆಯವರ ಜೀವನದಲ್ಲೂ ನಾವು ನೆಲೆಸಬೇಕು

ಬಹುತೇಕ ಮಂದಿ ತಮ್ಮ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ತಾವಾಯಿತು, ತಮ್ಮ ಹೆಂಡತಿ, ಮಕ್ಕಳಾಯಿತು. ಒಂದು ರೀತಿಯಲ್ಲಿ ಅವರದು ಅಪಾರ್ಟ್‌ಮೆಂಟ್ ಜೀವನ. ತಮ್ಮ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಯಾರಿರುತ್ತಾರೆ, ಅವರು ಯಾರು, ಏನು ಮಾಡ್ತಾರೆ. ಹೀಗೆ ಯಾವ ಸಂಗತಿಗಳೂ ಗೊತ್ತಿರುವುದಿಲ್ಲ. ಯಾಕೆಂದರೆ ನಮಗೆ ಅವರ ಬಗ್ಗೆ ತಿಳಿದುಕೊಳ್ಳಲು ಇಷ್ಟವಿಲ್ಲ ಎಂಬುದಕ್ಕಿಂತ ನಮ್ಮ ಪ್ರಪಂಚದಲ್ಲಿಯೇ ಮುಳುಗಿರುತ್ತೇವೆ. ನಮ್ಮ ಸುತ್ತ ಗೋಡೆ ಕಟ್ಟಿಕೊಳ್ಳುತ್ತೇವೆ. ಹೀಗಾಗಿ ನಮಗೆ ಬೇರೆಯವರ ಜೀವನದಲ್ಲಿ ನೆಲೆಸಲು ಸಾಧ್ಯವಾಗುವುದೇ ಇಲ್ಲ. ಅವರೂ ಸಹ ನಮ್ಮನ್ನು ದೂರವೇ ಇಟ್ಟಿರುತ್ತಾರೆ.

ಬೇರೆಯವರ ಜೀವನದಲ್ಲಿ ನೆಲೆಸುವುದು ಅಂದ್ರೆ ಏನು?

ಬೇರೆಯವರಿಗೆ ಸಹಾಯ ಮಾಡುವುದು, ಪ್ರಭಾವ ಬೀರುವಂಥದ್ದು. ಕಷ್ಟ-ಸುಖ ಹಂಚಿಕೊಳ್ಳುವಂಥದ್ದು. ಅವರೂ ಉತ್ತಮ ಬದುಕು ಸಾಗಿಸಲು ನೆರವಾಗುವಂಥದ್ದು. ಉತ್ತಮ ಜೀವನದ ಮಾರ್ಗ ಹೇಳುವಂಥದ್ದು. ಅವರ ವ್ಯಕ್ತಿತ್ವ ಸುಧಾರಣೆಗೆ ಸಹಕರಿಸುವಂಥದ್ದು. ಅಂದರೆ ಬೇರೆಯವರ ಜೀವನದಲ್ಲೂ ನಿಮ್ಮ ಹೆಜ್ಜೆ ಗುರುತುಗಳು ಇರುವಂತಾಗಬೇಕು. ಬೆಳೆಯುವುದೆಂದರೆ ನಾವೊಬ್ಬರೇ ಬೆಳೆಯುವುದಲ್ಲ. ಮುಂದುವರಿಯುವುದೆಂದರೆ ನಾವೊಬ್ಬರೇ ಮುಂದುವರಿಯುವುದಲ್ಲ.

ನಮ್ಮೊಂದಿಗೆ ಇರುವವರನ್ನು ನಮ್ಮ ಸ್ನೇಹಿತರು ಹಾಗೂ ನಮ್ಮ ನಿಕಟ ಸಂಪರ್ಕದಲ್ಲಿ ಇರುವವರನ್ನು ಸಹ ಮುಂದೆ ತರಲು ಸಹಾಯಕವಾಗಬೇಕು. ಸುತ್ತಮುತ್ತ ಇರುವವರು ಬಡತನದಲ್ಲಿ ಇದ್ದರೆ, ನೆಂಟರು ಹಾಗೂ ಸ್ನೇಹಿತರು ಪಡಬಾರದ ಕಷ್ಟ ಅನುಭವಿಸುತ್ತಿದ್ದರೆ ನೀವು ಸಮಾಧಾನ, ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಬೇರೆಯವರು ನಿಮ್ಮಿಂದಾಗಿ ಉತ್ತಮ ಸ್ಥಿತಿಗೆ ಬಂದರೆ ಅದರಿಂದ ಸಿಗುವ ಸಂತಸ, ಸಂತೃಪ್ತಿಗೆ ಪಾರವೇ ಇರುವುದಿಲ್ಲ.

ಅನುಭವಿಗಳು ಹೇಳುವುದುಂಟು- Carve your name on hearts and not on marble. ಬೇರೆಯವರ ಹೃದಯದಲ್ಲಿ ನಿಮ್ಮ ಹೆಸರನ್ನು ಕೆತ್ತಬೇಕೇ ಹೊರತು ಅಮೃತಶಿಲೆಯ ಮೇಲಲ್ಲ.

ಬೇರೆಯವರ ಸಾಮರ್ಥ್ಯವೇನೆಂಬುದನ್ನು ಗುರುತಿಸಿ, ಅವರ ಜೀವನ ಮಟ್ಟವನ್ನು ಸುಧಾರಿಸಲು ಸಹಕರಿಸಿದರೆ ಅವರು ಜೀವನ ಪರ್ಯಂತ ನಿಮಗೆ ಋಣಿಗಳಾಗಿರುತ್ತಾರೆ. ನೀವು ಕಷ್ಟದಲ್ಲಿದ್ದಾಗ ಸಹಕರಿಸುತ್ತಾರೆ. ಇದರಿಂದ ಒಂದು ಸಮುದಾಯ ಉತ್ತಮವಾಗುವ ಅವಕಾಶಕ್ಕೆ ತೆರೆದುಕೊಳ್ಳುತ್ತದೆ. ಬೇರೆಯವರ ಜೀವನದಲ್ಲಿ ನೆಲೆಸುವುದು ಅಂದ್ರೆ ನಮ್ಮ ಜೀವನವನ್ನು ಇನ್ನಷ್ಟು ಸುಧಾರಿಸಿಕೊಳ್ಳುವುದು ಎಂದೂ ಅರ್ಥ. ಹೀಗಾದಾಗ ನಾವು ಸ್ವಾರ್ಥಿಗಳೆಂದು ಕರೆಯಿಸಿಕೊಳ್ಳುವುದಿಲ್ಲ.

***
ಆಫೀಸನ್ನು ಮನೆಯೆಂದೇ ಭಾವಿಸಿ

ಅನೇಕರು ಆಫೀಸಿಗೆ ಕಾಟಾಚಾರಕ್ಕೆ ಹೋಗುತ್ತಿರುವುದಾಗಿ ಭಾವಿಸುತ್ತಾರೆ. ಆಫೀಸಿನ ಕೆಲಸ ಅಂದ್ರೆ ತಮ್ಮ ಕೆಲಸ ಅಲ್ಲ, ಅದು ಯಾರಿಗಾಗಿಯೋ ಮಾಡುವ ಕೆಲಸ ಎಂದು ಭಾವಿಸುತ್ತಾರೆ. ಹೀಗಾಗಿ ಆಫೀಸಿನ ಕೆಲಸದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ತೊಡಗಿಸಿಕೊಂಡರೂ ಅಲ್ಲಿನ ರಾಜಕೀಯದಲ್ಲೋ, ಕಾಡು ಹರಟೆಯಲ್ಲೋ, ಕೆಲಸಕ್ಕೆ ಬಾರದ ವ್ಯವಹಾರದಲ್ಲೋ ತೊಡಗಿಸಿಕೊಳ್ಳುತ್ತಾರೆ.

ಅದರಿಂದ ಅವರ ವೃತ್ತಿಗೆ ಹೊಡೆತ ಬೀಳುತ್ತದೆಂಬುದು ಸಹ ಗೊತ್ತಾಗುವುದಿಲ್ಲ. ಹೊಡೆತ ಬಿದ್ದ ಬಳಿಕ ತಮ್ಮ ವೃತ್ತಿ ಹಾಗೂ ಆಫೀಸನ್ನು ಮತ್ತಷ್ಟು ದ್ವೇಷಿಸಲಾರಂಭಿಸುತ್ತಾರೆ. ಇದರಿಂದ ಮತ್ತಷ್ಟು ಕಷ್ಟಕ್ಕೆ ಸಿಲುಕಿಹಾಕಿಕೊಳ್ಳುತ್ತಾರೆ.

ಆಫೀಸು ಅಂದ್ರೆ ಮನೆ ಇದ್ದ ಹಾಗೆ. ಮನೆಯಲ್ಲಿ ಎಷ್ಟು ಹೊತ್ತು ಕಳೆಯುತ್ತೇವೆಯೋ, ಹೆಚ್ಚು ಕಮ್ಮಿ ಅಷ್ಟೇ ಸಮಯವನ್ನು ಆಫೀಸಿನಲ್ಲಿ ಕಳೆಯುತ್ತೇವೆ. ಅಂದರೆ ಆಫೀಸು ನಮ್ಮ ಎರಡನೆಯ ಮನೆ ಇದ್ದಂತೆ. ನಮ್ಮ ಮನೆ ಎಂದ ಮೇಲೆ ನಾವು ಅದನ್ನು ಅಂದವಾಗಿ, ಸ್ವಚ್ಛವಾಗಿ, ನೀಟಾಗಿ ಇಟ್ಟುಕೊಳ್ಳುತ್ತೇವೆ ತಾನೆ? ಯಾರೋ ಬಂದು ನಮ್ಮ ಮನೆಯನ್ನು ಸ್ವಚ್ಛವಾಗಿ, ಒಪ್ಪ ಓರಣವಾಗಿ ಇಡಬೇಕೆಂದು ನಾವು ಬಯಸುವುದಿಲ್ಲವಲ್ಲ? ನಮ್ಮ ಮನೆಯನ್ನು ನಾವೇ ವ್ಯವಸ್ಥಿತವಾಗಿಡುತ್ತೇವೆ.

ಆದರೆ ಈ ಮನೋಭಾವವನ್ನು ಉದ್ದೇಶಪೂರ್ವಕವಾಗಿ ಆಫೀಸಿಗೆ ಬಂದಾಗ ಮರೆಯುತ್ತೇವೆ. ಎಷ್ಟೆಂದರೂ ನಾವು ಇಲ್ಲಿಗೆ ಬರೋದು ಚಾಕರಿ ಮಾಡಲಿಕ್ಕೆ ತಾನೆ, ನಮಗೂ ಆಫೀಸಿಗೂ ಸಂಬಂಧ ಇರುವುದಾದರೆ ಅದು ಸಂಬಳಕ್ಕೆ ಮಾತ್ರ ಎಂದು ತಿಳಿಯುತ್ತೇವೆ. ಹೀಗಾಗಿ ನಮ್ಮ ಕೆಲಸದಲ್ಲಿ, ನಡತೆಯಲ್ಲಿ ಹಾಗೂ ವೃತ್ತಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ.

ಅನೇಕರಿಗೆ ಇನ್ನೊಂದು ಸಂಗತಿ ಗೊತ್ತಿರುವುದಿಲ್ಲ. ಆಫೀಸಿನಲ್ಲಿ ಸಹೋದ್ಯೋಗಿಗಳೊಂದಿಗೆ ಆಗಾಗ ಜಗಳವಾಡುತ್ತಾರೆ, ಅವರ ಬಗ್ಗೆ ಕೀಳಾಗಿ ಮಾತಾಡುತ್ತಾರೆ, ರಾಜಕೀಯ ಮಾಡುತ್ತಾರೆ. ಹೀಗೆ ಮಾಡುವುದರಿಂದ ಆಫೀಸಿನ ವಾತಾವರಣ ಹಾಗೂ ವೈಯಕ್ತಿಕ ಇಮೇಜು ಹಾಳಾಗುತ್ತದೆ. ಸಹೋದ್ಯೋಗಿಗಳೊಂದಿಗೆ ಜಗಳವಾಡಿದರೆ ಮರುದಿನ ಅವರ ಪಕ್ಕದಲ್ಲಿಯೇ ಕುಳಿತುಕೊಳ್ಳಬೇಕು, ಅವರೊಂದಿಗೇ ವ್ಯವಹರಿಸಬೇಕು. ಇದರಿಂದ ಸಹೋದ್ಯೋಗಿಗೆ ನಷ್ಟವಾಗುವುದೋ ಇಲ್ಲವೋ, ನಿಮಗಂತೂ ದೊಡ್ಡ ನಷ್ಟವೇ.

ಆಫೀಸಿನಲ್ಲಿ ಒಬ್ಬನ ಜತೆ ಜಗಳವಾಡಿದರೆ, ಇಡೀ ಆಫೀಸು ನಿಮ್ಮ ವಿರುದ್ಧವಾಗುತ್ತದೆ. ನಿಮಗೆ “ಜಗಳಗಂಟ” ಎಂಬ ಹಣೆಪಟ್ಟಿ ಅಂಟಿಸುತ್ತಾರೆ. ಎಲ್ಲರೂ ನಿಮ್ಮನ್ನು ದೂರವಿಡಲು ಅಥವಾ ಅಂತರ ಕಾಪಾಡಿಕೊಳ್ಳಲು ಬಯಸುತ್ತಾರೆ. ಬಾಸ್‌ನ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ನಮ್ಮ ಮನೆಯಲ್ಲಿ ಜಗಳವಾದರೆ, ಮರುದಿನ ಪುನಃ ಒಂದಾಗುತ್ತೇವಲ್ಲ, ಹಾಗೆಯೇ ಆಫೀಸಿನಲ್ಲೂ ಅಂಥ ಪ್ರಸಂಗ ನಡೆದರೆ ರಾಜಿ ಆಗಿ ತಪ್ಪೇನಿಲ್ಲ.

ಆಫೀಸನ್ನು ನಿಮ್ಮ ಮನೆಯೆಂದು ಭಾವಿಸಿ. ಆಗ ನಿಮ್ಮ ನಡತೆ, ಹಾವಭಾವ, ವರ್ತನೆ, ಮನೋಭಾವ ಎಲ್ಲವೂ ಬದಲಾಗುತ್ತದೆ. ನಿಮ್ಮ ಸಾಧನೆಗೆ ಹಾಗೂ Career buildingಗೆ ಇದು ಸಹಾಯಕ, ಪ್ರಯತ್ನಿಸಿ.

***
ನಿಮ್ಮ ಹತ್ಯಾರವನ್ನು ಸದಾ ಹರಿತಗೊಳಿಸುತ್ತಿರಿ

ಬಡಗಿಯಿರಬಹುದು, ಚಮ್ಮಾರನಿರಬಹುದು, ಕಲಾಕಾರನಿರಬಹುದು, ಶಿಲ್ಪಿಯಿರಬಹುದು. ಪ್ರತಿದಿನ ತನ್ನ ಕೆಲಸವನ್ನು ಆರಂಭಿಸುವ ಮೊದಲು ತನ್ನ ಸಾಧನ, ಉಪಕರಣಗಳನ್ನು ಚೆನ್ನಾಗಿ ಹರಿತಗೊಳಿಸಿಡುತ್ತಾನೆ. ಕಾಯಕಕ್ಕೆ ತೊಡಗುವ ಮುನ್ನ ಪೂರ್ವ ತಯಾರಿ ಮಾಡಿಕೊಳ್ಳುತ್ತಾನೆ.

ಕ್ರಿಕೆಟ್ ಅಥವಾ ಟೆನಿಸ್ ಆಟಗಾರರಿರಬಹುದು, ಅವರು ತಮ್ಮ ಬ್ಯಾಟ್ ಆಯ್ದುಕೊಳ್ಳುವ ರೀತಿಯನ್ನೂ ಗಮನಿಸಬೇಕು. ಆರಿಸಿಕೊಂಡ ಬ್ಯಾಟನ್ನು ಮೈದಾನಕ್ಕಿಳಿಯುವ ಮುನ್ನ ಪರೀಕ್ಷಿಸುವುದನ್ನು ನೋಡಬೇಕು. ಅವರಿಗೆ ಸಂಪೂರ್ಣ ಮನವರಿಕೆಯಾದಾಗಲೇ ಆ ಬ್ಯಾಟಿನೊಂದಿಗೆ ಮೈದಾನಕ್ಕಿಳಿಯುವುದು. ಅವರ ಕಿಟ್‌ನಲ್ಲಿ ಏನಿಲ್ಲವೆಂದರೂ ಹತ್ತಾರು ಬ್ಯಾಟ್‌ಗಳಿರುತ್ತವೆ.

ಕೊಳಲು ವಾದಕರಿಗೂ ಈ ಮಾತು ಅನ್ವಯ. ತಮ್ಮ ಸಾಧನ, ಸಲಕರಣೆಗಳಿಗೆ ಅವರು ನೀಡುವ ಮಹತ್ವ ಅಂಥದ್ದು.

ನಾವು ಯಾವುದೇ ವೃತ್ತಿಯಲ್ಲಿರಬಹುದು, ಪ್ರತಿದಿನ Update ಆಗಬೇಕು. ವೃತ್ತಿಯ ಕುರಿತು ಹೊಸ ಹೊಸ ಆಯಾಮಗಳ ಬಗ್ಗೆ ಯೋಚಿಸಬೇಕು. ನಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ, ಸ್ಥಿತ್ಯಂತರಗಳ ಬಗ್ಗೆ ಅಧ್ಯಯನ ಮಾಡಬೇಕು. ವಿಷಯ ಪರಿಣತರೊಂದಿಗೆ ಕಾಲಕಾಲಕ್ಕೆ ಸಂವಾದ-ಚರ್ಚೆ ಮಾಡಬೇಕು. ಆಗಲೇ ನಾವು ಪ್ರಸ್ತುತವಾಗಿರಲು ಸಾಧ್ಯ.

ಇಲ್ಲದಿದ್ದರೆ ಯಾರೋ ನಮ್ಮನ್ನು ಹಠಾತ್ ಆಗಿ ಹಿಂದಕ್ಕೆ ಹಾಕಿ ಮುನ್ನಡೆದುಬಿಡುತ್ತಾರೆ. Overtake ಮಾಡಿಕೊಂಡು ಹೋಗುತ್ತಾರೆ. ಆಗ ನಾವು ಅವರ ಮೇಲೆ ಗೂಬೆ ಕೂರಿಸುತ್ತೇವೆ. ನಾವು ಮಾಡುವ ಕೆಲಸ ಅಥವಾ ವೃತ್ತಿಯಲ್ಲಿ ಸದಾ ಪ್ರಸ್ತುತವಾಗಿರಬೇಕೆಂದರೆ, ನಿತ್ಯವೂ ನಾವು Update ಆಗಲೇಬೇಕು. ಕೆಲವರು ತಮ್ಮ ಕ್ಷೇತ್ರದಲ್ಲಿ ಉತ್ತುಂಗಕ್ಕೇರುತ್ತಾರೆ. ಆದರೆ ಬಹಳ ಬೇಗ ಜನಮಾನಸದಿಂದ ದೂರಸರಿದುಬಿಡುತ್ತಾರೆ. ತಮ್ಮ ಯಶಸ್ಸನ್ನು ಬಹಳ ದಿನಗಳ ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ಯಾರೋ ಅವರನ್ನು ಓವರ್‌ಟೇಕ್ ಮಾಡಿರುತ್ತಾರೆ.

ಅವರು ಉತ್ತುಂಗಕ್ಕೇರಿದ್ದು ನಿಜ. ಆದರೆ ಅಲ್ಲಿಂದ ದೂರ ಸರಿದದ್ದೂ ನಿಜ. ಯಾಕೆ ಗೊತ್ತಾ, ಅವರಿಗಿಂತ ಶಾಣ್ಯಾನಾದವನು ಅವನನ್ನು ಪಕ್ಕಕ್ಕೆ ಸರಿಸಿ ಬಂದು ಕುಳಿತಿರುತ್ತಾನೆ. ಆ ಹೊಸಬನ ಜತೆ ಸೆಣಸಾಡಲು ಇವರು Update ಆಗಿರುವುದಿಲ್ಲ. ಇದು ಸ್ಪರ್ಧಾತ್ಮಕ ಯುಗ. ಪೈಪೋಟಿ ಜಗತ್ತು. ಬುದ್ಧಿವಂತಿಕೆಗೆ ಬರವಿಲ್ಲ. ಸಮರ್ಥನಾದವನು ಉಳಿದುಕೊಳ್ಳುತ್ತಾನೆ. ಇಲ್ಲದಿದ್ದರೆ ಆತ ಬೇರೆಯವರಿಗೆ ದಾರಿ ಮಾಡಿಕೊಡಲು ತಾನು ಪಕ್ಕಕ್ಕೆ ಸರಿಯಬೇಕಾಗುತ್ತದೆ.

ನೀವು ಇಂದು ಯಶಸ್ವಿ ವ್ಯಕ್ತಿಯಾಗಿರಬಹುದು. ಅದು ಇಂದಿನ ಸತ್ಯ, ಸಾಧನೆ. ಇದನ್ನೇ ಯಾವತ್ತೂ ಮುಂದುವರಿಸಬೇಕೆಂದರೆ ಸದಾ ನಿಮ್ಮ ಪರಿಣತಿಯನ್ನು ಹರಿತಗೊಳಿಸುತ್ತಲೇ ಇರಬೇಕು. ಸದಾ ಹೊಸ ಹುಡುಕಾಟದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಯಾರೋ ಬಂದು ನಿಮ್ಮನ್ನು ಹಿಂದಕ್ಕೆ ಹಾಕಬಹುದು. ನಿತ್ಯ ಸಿದ್ಧರಾಗುವುದರಲ್ಲಿ ಲವಲವಿಕೆ, ಉಲ್ಲಾಸ, ಚೇತನ ಹಾಗೂ ನಾವೀನ್ಯ ಅಡಗಿದೆ.

– ವಿಶ್ವೇಶ್ವರ ಭಟ್
vbhat@me.com

1 Comment

  1. Hello Sir,
    Looks the quoted stories are truly inspirational to everyone.
    If this book is available in sapanaonlie/total kannada/other online stores, please mention it.
    Readers will be happy to order it and read further.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.