ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ದೇವರಿಲ್ಲದಿರಬಹುದು, ಆದರೆ ರಾಜಕಾರಣಿಗಳಂತೂ ಇದ್ದಾರೆ!

noorentu-notaಸುಮಾರು ಎಂಬತ್ತೈದು ವರ್ಷಗಳ ಹಿಂದೆಯೇ ಅಮೆರಿಕದ ಖ್ಯಾತ ನಟ ಹಾಗೂ ಕಾಮಿಡಿಯನ್, ರಾಜಕಾರಣಿಗಳ ಬಗ್ಗೆ ಹೇಳಿದ ಮಾತು ಇಂದಿಗೂ ಪ್ರಸ್ತುತ. Eve‌r​yt‌h‌in‌g ‌is ‌c‌han‌g‌in‌g.​ Pe‌o​p​le a‌re ta‌k‌in‌g t‌he‌i‌r ‌c‌omed‌i​ans se‌r‌i‌o‌u​s​ly and t‌he P‌ol‌i​t‌i‌c‌i​ans as a j‌o‌ke. (ಪ್ರತಿಯೊಂದು ಬದಲಾಗುತ್ತಿದೆ. ಜನರು ತಮ್ಮ ಕಾಮಿಡಿಯನ್‌ಗಳನ್ನು ಗಂಭೀರವಾಗಿಯೂ, ರಾಜಕಾರಣಿಗಳನ್ನು ಜೋಕ್ ಆಗಿಯೂ ಪರಿಗಣಿಸುತ್ತಿದ್ದಾರೆ.) ಇತ್ತೀಚಿನ ವಿದ್ಯಮಾನ ಕಂಡು ರಾಜಕಾರಣ ಹಾಳಾಗಿಹೋಯಿತು, ರಾಜಕಾರಣಿಗಳು ಕೆಟ್ಟು ಹೋದರು ಎಂದು ನಾವು ಅಂದುಕೊಂಡಿದ್ದರೆ ಅದು ಶುದ್ಧ ತಪ್ಪು. ಇಂದಿನ ರಾಜಕಾರಣಿಗಳನ್ನು ನೋಡಿ ಇವರೆಲ್ಲ ಮಹಾಮೋಸಗಾರರು, ಮನೆಹಾಳರು, ಜನರನ್ನು ಶೋಷಿಸುವವರು, ಭ್ರಷ್ಟರು, ಮಹಾಸುಳ್ಳರು ಎಂದೆಲ್ಲ ಜರೆಯಬೇಕಿಲ್ಲ. ರಾಜಕಾರಣ ಇರುವುದೇ ಹೀಗೆ. ರಾಜಕಾರಣಿಗಳು ಇರುವುದೇ ಹೀಗೆ. ಈ ವಿಷಯದಲ್ಲಿ ಅವರನ್ನು ಮೆಚ್ಚಲೇಬೇಕು. ಯಾವುದೇ ಕಾಲವಿರಬಹುದು, ಯಾವುದೇ ಶತಮಾನವಿರಬಹುದು ಅವರು ಇರುವುದೇ ಹೀಗೆ. ನಡೆದುಕೊಳ್ಳುವುದೂ ಹೀಗೆ. ಇದಕ್ಕೆ ಯಾವ ದೇಶವೂ ಹೊರತಲ್ಲ. ಈ ಕಾರಣದಿಂದ ನಮ್ಮ ದೇಶದ, ನಮ್ಮ ಊರಿನ ರಾಜಕಾರಣಿಗಳನ್ನು ಮಾತ್ರ ದೂರಬೇಕಿಲ್ಲ. ರಾಜಕಾರಣಿ ಅಂದ್ರೆ ಸಾಕು, ಅವರು ಇರುವುದೇ ಹೀಗೆ ಎಂಬ ತೀರ್ಮಾನಕ್ಕೆ ಬಂದು ಬಿಡಬಹುದು.

ಅಮೆರಿಕದ ಡಾಲರ್‌ಗಿಂತ ದೊಡ್ಡ ಕರೆನ್ಸಿ ಯಾವುದೂ ಇಲ್ಲವಂತೆ. ಕಾರಣ ಅದು ವಿಶ್ವದ ಎಲ್ಲೆಡೆಯೂ ಚಲಾವಣೆಯಲ್ಲಿದೆ. ಡಾಲರ್‌ಗಿಂತ ಹೆಚ್ಚು ಚಲಾವಣೆಯಲ್ಲಿರುವವರೆಂದರೆ ಪಾಲಿಟಿಶಿಯನ್‌ಗಳು. ಡಾಲರ್‌ಗೆ ಒಂದೊಂದು ದೇಶದಲ್ಲಿ ಒಂದೊಂದು ಮೌಲ್ಯವಿದೆ. ಆದರೆ ಪಾಲಿಟಿಶಿಯನ್‌ಗಳಿಗೆ ಹಾಗಲ್ಲ. ಎಲ್ಲ ದೇಶಗಳಲ್ಲೂ ಒಂದೇ ಮೌಲ್ಯ ಹಾಗೂ ಆ ಮೌಲ್ಯ ಎಲ್ಲೆಡೆ ಅಧಃಪತನ ಹೊಂದಿರುತ್ತದೆ. ಜಗತ್ತಿನ ಒಂದೊಂದು ದೇಶದ ಜನ ಒಂದೊಂದು ರೀತಿಯವರಾಗಿರುತ್ತಾರೆ. ಆದರೆ ರಾಜಕಾರಣಿಗಳು ಮಾತ್ರ ಒಂದೇ. ಅಮೆರಿಕ ಮುಂದುವರಿದ ದೇಶ, ಆದ್ದರಿಂದ ಆ ದೇಶದ ರಾಜಕಾರಣಿಗಳು ಸತ್ಯವಂತರು ಎಂದು ಭಾವಿಸಬೇಕಿಲ್ಲ. ಅವರೂ ಸಹ ನಮ್ಮ ಊರಿನ, ನಮ್ಮ ದೇಶದ ರಾಜಕಾರಣಿಗಳಂತೆ, ಅನುಮಾನ ಬೇಡ. ಆದರೆ ಅವರು ರಸ್ತೆ, ಸೇತುವೆಗಾಗಿ ಮೀಸಲಿಟ್ಟ ಹಣದಲ್ಲಿ ಪುಡಿಗಾಸು ತಿನ್ನಬಹುದು, ನಮ್ಮ ರಾಜಕಾರಣಿಗಳ ಹಾಗೆ ರಸ್ತೆಗೆ ರಸ್ತೆಯನ್ನೇ ತಿನ್ನಲಿಕ್ಕಿಲ್ಲ, ಸೇತುವೆಯನ್ನೇ ಕಬಳಿಸಲಿಕ್ಕಿಲ್ಲ. ಅಷ್ಟರಮಟ್ಟಿಗಿನ ವ್ಯತ್ಯಾಸವನ್ನು ಕಾಣಬಹುದು. ಅಷ್ಟರಮಟ್ಟಿಗಿನ ಹೋಲಿಕೆ, ಸಾಮ್ಯತೆಯನ್ನು ಗುರುತಿಸಬಹುದು.

ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ರಾಜಕಾರಣಿಗಳನ್ನು ಡಕಾಯಿತರು ಎಂದು ಕರೆಯುವುದುಂಟು. 1996ರಲ್ಲಿ ಡಕಾಯಿತರ ರಾಣಿ (Band‌it ‌Q‌ueen)​ ಎಂದೇ ಹೆಸರಾದ ಫೂಲನ್ ದೇವಿಗೆ ಉತ್ತರಪ್ರದೇಶದ ಮಿರ್ಜಾಪುರದಿಂದ ಸ್ಪರ್ಧಿಸಲು ಸಮಾಜವಾದಿ ಪಕ್ಷ ಟಿಕೆಟ್ ನೀಡಿತು. ಆ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರನ್ನು ಪತ್ರಕರ್ತರು ತರಾಟೆಗೆ ತೆಗೆದುಕೊಂಡರು. ‘ಡಕಾಯಿತರಿಗೆಲ್ಲ ಟಿಕೆಟ್ ನೀಡುತ್ತೀರಲ್ಲ? ನಿಮಗೆ ಮಾನ-ಮರ್ಯಾದೆ ಇದೆಯಾ? ಅವಳಿಗೆ ಟಿಕೆಟ್ ನೀಡುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?’ ಎಂದು ಯಾದವ್ ಅವರನ್ನು ಕೇಳಿದರು. ಆಗ ಅವರು ಹೇಳಿದ್ದೇನು ಗೊತ್ತಾ? ‘ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ನಮ್ಮ ರಾಜಕೀಯ ವೈರಿಗಳನ್ನು ಎದುರಿಸಲು ಫೂಲನ್ ದೇವಿಯೇ ಯೋಗ್ಯ ಅಭ್ಯರ್ಥಿ’ ಎಂದರು. ಅಂದರೆ ತಮ್ಮ ರಾಜಕೀಯ ವೈರಿಗಳೂ ‘ಡಕಾಯಿತರು’ ಎಂದು ಪರೋಕ್ಷವಾಗಿ ಹೇಳಿದರು.

ಚುನಾವಣಾ ಫಲಿತಾಂಶ ಬಂತು.

ಫೂಲನ್ ದೇವಿ ಗೆದ್ದಳು! ಮೊದಲ ಪಾರ್ಲಿಮೆಂಟ್ ಅಧಿವೇಶನ ಮುಗಿಸಿದ ಬಳಿಕ ‘ಇಂಡಿಯಾ ಟುಡೇ’ (ಪತ್ರಿಕೆ) ‘ಡಕಾಯಿತರಾಣಿ’ಯ ಸಂದರ್ಶನವನ್ನು ಪ್ರಕಟಿಸಿತು. ಅದರಲ್ಲಿ ಆಕೆ ಹೇಳಿದ್ದಳು- ‘ನೀವೆಲ್ಲ ನನ್ನನ್ನು (ನೀವು ಪತ್ರಿಕೆಯವರೂ ಸೇರಿ) ಡಕಾಯಿತ ರಾಣಿ ಎಂದು ಕರೆಯುತ್ತೀರಿ. ನಾನು ಪರಿಸ್ಥಿತಿ ಒತ್ತಡದಿಂದ, ನನ್ನ ಶೀಲ ಕಾಪಾಡಿಕೊಳ್ಳಲು, ಜಮೀನ್ದಾರರ ಕಾಮ ಪೈಶಾಚಿಕತೆಯಿಂದ ಬಚಾವ್ ಆಗಲು ಡಕಾಯಿತಳಾದೆ. ಆದರೆ ಪಾರ್ಲಿಮೆಂಟ್ ಅಧಿವೇಶನದಲ್ಲಿ ಪಾಲ್ಗೊಂಡ ನಂತರ ನನಗನಿಸುತ್ತಿದೆ, ಅಲ್ಲಿ ನನಗಿಂತ ದೊಡ್ಡ ದೊಡ್ಡ ಡಕಾಯಿತರು ಇದ್ದಾರೆ. ಅವರು ಡಕಾಯಿತರಾಗಲು ನನಗಿದ್ದಂಥ ಅನಿವಾರ್ಯತೆ ಇದ್ದಿರಲಾರದು. ಅದೇನೇ ಇರಲಿ, ನನ್ನ ಒಳಮನಸ್ಸು ಹೇಳುತ್ತಿದೆ, ಈ ಡಕಾಯಿತರ ಮುಂದೆ ನಾನು ಯಶಸ್ವಿಯಾಗುವುದಿಲ್ಲ ಎಂದು.’ ಅದಾಗಿ ಎರಡು ವರ್ಷಗಳ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ (1998) ಫೂಲನ್‌ದೇವಿ ಸೋತು ಹೋದಳು.

ಚುನಾವಣೆಯಲ್ಲಿ ಸೋತಾಗ ಪತ್ರಕರ್ತರು ಆಕೆಯನ್ನು ಮಾತಾಡಿಸಿದರು. ಆಗ ಆಕೆ ಹೇಳಿದ್ದು-‘ನಾನು ಚುನಾವಣೆಯಲ್ಲಿ ಗೆದ್ದ ಬಳಿಕ ಉತ್ತಮ ಜನಪ್ರತಿನಿಧಿಯಾಗಲು ನಿರ್ಧರಿಸಿದೆ. ಡಕಾಯಿತ ರಾಣಿ ಎಂಬ ಹಣೆಪಟ್ಟಿ ಹೊಡೆದು ಹಾಕಿ ಉತ್ತಮ ಮಹಿಳೆಯಾಗಲು, ರಾಜಕಾರಣಿಯಾಗಲು ಹಂಬಲಿಸಿದೆ. ಅದೇ ನಾನು ಮಾಡಿದ ತಪ್ಪು.’ ತಾನು ಡಕಾಯಿತ ರಾಣಿಯಂತೆ ವರ್ತಿಸಬೇಕಿತ್ತು ಎಂಬುದು ಅವಳ ಮಾತಿನ ಒಳಮರ್ಮವಾಗಿತ್ತು. 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಫೂಲನ್ ದೇವಿ ಎರಡನೆ ಬಾರಿಗೆ ಆಯ್ಕೆಯಾದಳು! ಅದಕ್ಕೆ ರಾಜಕಾರಣದ ಬಗ್ಗೆ ಅವಳ ಮನಸ್ಸಿನಲ್ಲಾದ ಪರಿವರ್ತನೆಯೇ ಕಾರಣವಾಯಿತಾ, ಗೊತ್ತಿಲ್ಲ.

ರಷ್ಯಾದ ಖ್ಯಾತ ನಾಯಕ ನಿಕಿತಾ ಕ್ರುಶ್ಚೇವ್ ರಾಜಕಾರಣಿಗಳ ಬಗ್ಗೆ ಹೇಳಿದ ಮಾತು ಮನನೀಯ. ‘ನಾನು ಜಗತ್ತಿನ ಬಹುತೇಕ ಎಲ್ಲ ದೇಶಗಳಿಗೆ ಹೋಗಿದ್ದೇನೆ. ಎಲ್ಲ ದೇಶಗಳ ನಾಯಕ (ರಾಜಕಾರಣಿಗಳು)ರೊಂದಿಗೆ ಸಮಾಲೋಚನೆ ಮಾಡಿದ್ದೇನೆ. ನನಗೆ ಅವರ ಗುಣ, ಸ್ವಭಾವ, ಮಾತಿನಲ್ಲಿ ಹೆಚ್ಚಿನ ವ್ಯತ್ಯಾಸ ಕಂಡಿಲ್ಲ. ಸುಳ್ಳು ಹೇಳುವುದರಲ್ಲಿ, ಜನರನ್ನು ಹಾದಿ ತಪ್ಪಿಸುವುದರಲ್ಲಿ ಎಲ್ಲ ದೇಶಗಳ ರಾಜಕಾರಣಿಗಳು ಸಮಾನ ಮನಸ್ಕರು ಎಂಬುದು ನನಗೆ ಪ್ರತಿ ದೇಶಕ್ಕೆ ಹೋದಾಗಲೂ ಮನವರಿಕೆಯಾಗಿದೆ. ಆದರೂ ನಾನು ನೋಡಿಲ್ಲದ ದೇಶಕ್ಕೆ ಹೊರಟಾಗ ಅಲ್ಲಿನ ನಾಯಕರು ಭಿನ್ನವಾಗಿದ್ದಿರಬಹುದಾ ಎಂಬ ಪ್ರಶ್ನೆ ಮೂಡಿದರೂ, ವಾಪಸ್ ಬರುವ ಹೊತ್ತಿಗೆ ನನ್ನ ಅಭಿಪ್ರಾಯ ಸಂಪೂರ್ಣ ಬದಲಾಗಿರುತ್ತಿತ್ತು. ನದಿಯೇ ಇಲ್ಲದ ಕಡೆ ಸೇತುವೆ ಕಟ್ಟುತ್ತೇವೆ ಎಂದು ಹೇಳಿ ನಂಬಿಸುವವರೆಂದರೆ ಅವರು ರಾಜಕಾರಣಿಗಳು. ಇತ್ತೀಚಿನ ನನ್ನ ವರ್ತನೆಯನ್ನು ನೋಡಿದರೆ, ನಾನು ರಾಜಕಾರಣಕ್ಕೆ ಒಗ್ಗಿಕೊಳ್ಳುತ್ತಿದ್ದೇನೆ ಎಂದೆನಿಸುತ್ತದೆ’ ಎಂದು ಹೇಳುವ ಮೂಲಕ ತಾವೂ ಸುಳ್ಳು ಹೇಳುತ್ತಿರುವುದನ್ನು ಕ್ರುಶ್ಚೇವ್ ಒಪ್ಪಿಕೊಂಡಿದ್ದರು.

ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳು ಮೈಕ್ ಕಿತ್ತು ಬಿಸಾಡುವುದು, ಹೈಕೈ ಬಡಿದಾಡುವುದನ್ನು ನಾವು ನೋಡಿದ್ದೇವೆ. ಆದರೆ ಇದೇ ಕ್ರುಶ್ಚೇವ್ 1960ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವಾಗ, ಫಿಲಿಫೈನ್ ಪ್ರತಿನಿಧಿಗಳು ಯುರೋಪಿನ ಪೂರ್ವಭಾಗದ ಕೆಲವು ಪ್ರದೇಶಗಳನ್ನು ರಷ್ಯಾ ಕಬಳಿಸುತ್ತಿದೆ ಎಂದು ಆರೋಪಿಸಿದಾಗ, ಕ್ರುಶ್ಚೇವ್ ತಾವು ಧರಿಸಿದ್ದ ಬೂಟನ್ನು ಕೈಗೆ ತೆಗೆದುಕೊಂಡು ಮೇಜಿಗೆ ಕುಟ್ಟಿದ್ದು ತೀವ್ರ ವಿವಾದಕ್ಕೆ ಗುರಿಯಾಗಿತ್ತು. ಅದಾದ ಬಳಿಕ ತಮ್ಮ ನಡೆಗೆ ಅವರು ವಿಷಾದ ವ್ಯಕ್ತಪಡಿಸಿದ್ದು ಬೇರೆ ಮಾತು. ಹಾಗೆ ವಿಷಾದ ವ್ಯಕ್ತಪಡಿಸುವುದಕ್ಕಿಂತ ಮೊದಲು ‘ಬೆಲ್ಜಿಯಂ ಪ್ರಧಾನಿ ನನಗಿಂತ ಎಂಟು ವರ್ಷಗಳಷ್ಟು ಮುನ್ನ ವಿಶ್ವಸಂಸ್ಥೆಯಲ್ಲಿ ಬೂಟನ್ನು ಎಸೆದಿದ್ದರೆಂಬುದು ಗೊತ್ತಿರಲಿ’ ಎಂದು ಹೇಳಿ ಇಂಥ ವರ್ತನೆ ಎಸೆಗಿದವರಲ್ಲಿ ತಾವೇ ಮೊದಲಿಗರಲ್ಲ ಎಂದು ಅಷ್ಟರಮಟ್ಟಿಗೆ ಕ್ರುಶ್ಚೇವ್ ಸಮಾಧಾನಪಟ್ಟುಕೊಂಡಿದ್ದರು.

ತಮ್ಮ ಮಕ್ಕಳು ರಾಜಕಾರಣಿಯಾಗಬೇಕೆಂದು ಯಾವ ತಂದೆ-ತಾಯಿಯೂ ಬಯಸುವುದಿಲ್ಲ ಎಂದು ಅಮೆರಿಕದ ಅಧ್ಯಕ್ಷ ಜಾನ್ ಎಫ್ ಕೆನಡಿ ಹೇಳಿದ್ದರು. ಭಾರತದಲ್ಲಿ ರಾಜಕಾರಣಿಗಳು ಮಾತ್ರ ತಮ್ಮ ಮಕ್ಕಳು ರಾಜಕಾರಣಿಯಾಗಲಿ ಎಂದು ಬಯಸುತ್ತಿರುವುದು ಬೇರೆ ಮಾತು. ‘ರಾಜಕಾರಣವೇಕೆ ಅಷ್ಟು ಕಲುಷಿತವಾಗಿದೆ? ರಾಜಕಾರಣಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಏಕಿದೆ?’ ಎಂದು ಕೆನಡಿ ಅವರನ್ನು ಪ್ರಶ್ನಿಸಿದಾಗ, “Ame‌r‌i‌can m‌ot‌h​e‌rs all want t‌he‌i‌r s‌ons t‌o ‌g‌r‌ow ‌up t‌o be P‌re​s‌id​ent,​​ b‌ut t‌hey d‌ont want t‌hem t‌o be‌c‌o​me p‌ol‌i​t‌i‌c‌i​ans ‌in t‌he p‌r‌o‌ce​ss.(ಅಮೆರಿಕದ ತಾಯಂದಿರು ತಮ್ಮ ಮಕ್ಕಳು ರಾಷ್ಟ್ರಾಧ್ಯಕ್ಷರಾಗಬೇಕೆಂದು ಬಯಸುತ್ತಾರೆ. ಆದರೆ ಅವರಿಗೆ ತಮ್ಮ ಮಕ್ಕಳು ರಾಜಕಾರಣಿಗಳಾಗುವುದು ಬೇಕಿಲ್ಲ.) ರಾಜಕಾರಣಿಯಾಗದೇ ಅಧ್ಯಕ್ಷರಾಗುವುದು ಸಾಧ್ಯವಿಲ್ಲ. ಮೊದಲು ನಿಮ್ಮ ಮಗನೋ, ಮಗಳೋ ರಾಜಕಾರಣಿಯಾಗಲಿ, ಆನಂತರ ಅಧ್ಯಕ್ಷರಾಗಬಹುದು ಎಂದು ಹೇಳಿದರೆ, ನಮಗೆ ಅವರು ರಾಜಕಾರಣಿಯಾಗುವುದು ಬೇಕಿಲ್ಲ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ರಾಜಕಾರಣ ಹಾಳಾಗಿ ಹೋಗಿದೆ. ಒಂದು ವೇಳೆ ನಾನು ರಾಷ್ಟ್ರಾಧ್ಯಕ್ಷನಾಗುವ ಬದಲು, ಬರೀ ರಾಜಕಾರಣಿಯಷ್ಟೇ ಆಗಿದ್ದಿದ್ದರೆ ನನ್ನನ್ನೂ ಯಾರೂ ಹೆಚ್ಚು ಗೌರವಿಸುತ್ತಿರಲಿಲ್ಲವೇನೋ?’ ಎಂದು ಹೇಳಿದ್ದರು.

ಬ್ರಿಟನ್‌ನ ಪ್ರಧಾನಿಗಳ ಪೈಕಿ ವಿನ್‌ಸ್ಟನ್ ಚರ್ಚಿಲ್ ಅವರದ್ದು ಮೇರು ವ್ಯಕ್ತಿತ್ವ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಸಾಧಾರಣ ನಾಯಕತ್ವ, ದಿಟ್ಟತನ ಪ್ರದರ್ಶಿಸಿದವರು ಚರ್ಚಿಲ್. ರಾಜಕಾರಣಕ್ಕೊಂದು ವಿಶೇಷ ಮೆರುಗು ತಂದವರು. ಬುದ್ಧಿಜೀವಿಗಳು ಸಹ ರಾಜಕಾರಣ ಪ್ರವೇಶಿಸಬಹುದೆಂದು ಆ ದಿನಗಳಲ್ಲಿ ಸಾಬೀತುಪಡಿಸಿದವರು. ಆದರೆ ರಾಜಕಾರಣದ ಒಳಸುಳಿ, ಒತ್ತಡ, ಕರಾಮತ್ತುಗಳಿಂದ ಚರ್ಚಿಲ್ ಅದೆಷ್ಟು ಘಾಸಿಗೊಂಡಿದ್ದರೆಂದರೆ, ರಾಜಕೀಯದಿಂದ ದೂರ ಸರಿಯಲು, ನಿವೃತ್ತರಾಗಲು ಬಯಸಿದ್ದರು. ಈ ಬಗ್ಗೆ ಅವರು ಹೇಳಿದ್ದು-​’Iam neve‌r ‌g‌o‌in‌g t‌o ‌have anyt‌h‌in‌g m‌o‌re t‌o d‌o w‌it‌h p‌ol‌i​t‌i‌cs and p‌ol‌i​t‌i‌c‌i​ans.​ W‌hen t‌h‌is wa‌r ‌is ‌ove‌r I s‌ha​ll ‌c‌onf‌ine my​s​e​lf ent‌i‌r​e​ly t‌o w‌r‌it‌in‌g and pa‌int‌in‌g.’​

ಹಾಗೆ ಆಯಿತು. ಎರಡನೇ ಮಹಾಯುದ್ಧದಲ್ಲಿ ಬ್ರಿಟನ್‌ಗೆ ಜಯ ತಂದುಕೊಟ್ಟರೂ, ಆನಂತರ ನಡೆದ ಮಹಾಚುನಾವಣೆಯಲ್ಲಿ ಚರ್ಚಿಲ್ ದಯನೀಯವಾಗಿ ಸೋತು ಹೋದರು. ಅದಕ್ಕೆ ಅವರು ಬೇಸರಿಸಿಕೊಳ್ಳಲಿಲ್ಲ. ಹಾಗೆ ನೋಡಿದರೆ, ಅದನ್ನೇ ಅವರು ಬಯಸಿದ್ದರು. ಒಂದು ವೇಳೆ ಗೆದ್ದಿದ್ದರೂ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಸೋಲಿನ ಬಳಿಕ ಚರ್ಚಿಲ್ ಗಂಭೀರವಾಗಿ ಬರವಣಿಗೆಯಲ್ಲಿ, ಅಧ್ಯಯನದಲ್ಲಿ ತೊಡಗಿಸಿಕೊಂಡರು. ಬರವಣಿಗೆಯ ಮಧ್ಯೆ ಪೇಟಿಂಗ್ ಹುಚ್ಚನ್ನು ಹತ್ತಿಸಿಕೊಂಡರು. ಚರ್ಚಿಲ್ ಸಾಹಿತ್ಯ ರಚನೆಯಲ್ಲಿ ಎಂಥಾ ತಾದ್ಯಾತ್ಮ ಹಾಗೂ ತಲ್ಲೀನತೆ ಸಾಧಿಸಿದರೆಂದರೆ ಅವರು ರಾಜಕಾರಣಿಗಳನ್ನು ಭೇಟಿಯಾಗಲು ಸಹ ಬಯಸುತ್ತಿರಲಿಲ್ಲ. ಚರ್ಚಿಲ್‌ಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೊಬೆಲ್ ಪ್ರಶಸ್ತಿಯೂ ಬಂತು. ‘ನಾನು ರಾಜಕಾರಣಕ್ಕೆ ಆಕಸ್ಮಿಕವಾಗಿ ಪ್ರವೇಶಿಸಿದೆ. ಅಲ್ಲಿಂದ ಹೊರಹಾಕಿಸಿಕೊಂಡು ಬಚಾವ್ ಆದೆ.’ ಎಂದು ಚರ್ಚಿಲ್ ಹೇಳಿದ್ದಾರೆ.

ಒಮ್ಮೆ ರಾಜಕಾರಣಿಯಾದವರು ರಾಜಕಾರಣಿಯಾಗಿಯೇ ಸಾಯುವುದು ಭಾರತದಲ್ಲಿ ಮಾತ್ರ. ಬೇಡವೆಂದು ಪದೇಪದೆ ಸೋಲಿಸಿದರೂ ಜನ ರಾಜಕೀಯದಿಂದ ನಿವೃತ್ತರಾಗುವುದಿಲ್ಲ. ಶಾಸಕರಾಗಿ, ಮಂತ್ರಿಯಾಗಿ, ಹಲವು ವರ್ಷ ‘ಜನ ಸೇವೆ’ ಮಾಡಿ, ರಾಜಕಾರಣ ಸಾಕು ಎಂದು ಸ್ವಯಂ ನಿವೃತ್ತಿ ಬಯಸಿದವರು ಕೈ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಉಳಿದವರೆಲ್ಲ ಕೊನೆಯ ಉಸಿರು ಇರುವ ತನಕವೂ ‘ದೇಶ ಸೇವೆ’ಗೆ ತಮ್ಮನ್ನು ಸಮರ್ಪಿಸಿಕೊಂಡವರೇ. ತೊಂಬತ್ತಾದರೂ ನವಚೈತನ್ಯ. ಅಮೆರಿಕದಲ್ಲಿ ಹೆಚ್ಚೆಂದರೆ ಎಂಟು ವರ್ಷಗಳ ಕಾಲ ಅಧ್ಯಕ್ಷರಾಗಿ ಅಧಿಕಾರದಲ್ಲಿರಬಹುದು. ಆನಂತರ ಸಕ್ರಿಯ ರಾಜಕಾರಣದಿಂದ ನಿವೃತ್ತರಾಗಲೇಬೇಕು. ಆದರೆ ನಮ್ಮ ದೇಶದಲ್ಲಿ ನಿವೃತ್ತಿ ಇಲ್ಲದ ಕ್ಷೇತ್ರವೆಂದರೆ ರಾಜಕೀಯವೊಂದೇ.

ಅದಿರಲಿ, ರಾಜಕಾರಣಿಗಳಾಗುವುದು ಸಾಮಾನ್ಯದ ವಿಷಯವಲ್ಲ. ಜನರನ್ನು ಯಾವಜ್ಜೀವ ನಂಬಿಸುವುದು, ಅವರು ಸದಾ ತಮ್ಮನ್ನು ಮೆಚ್ಚುವಂತೆ ಖುಷಿಯಲ್ಲಿಟ್ಟಿರುವುದು ಸಾಮಾನ್ಯ ಸಂಗತಿಯೇ? ಏಳೆಂಟು ಸಲ ಆರಿಸಿಬರುವುದು, ನಲವತ್ತು -ಐವತ್ತು ವರ್ಷಗಳಿಂದ ಒಂದೇ ಕ್ಷೇತ್ರದಿಂದ ಪದೇ ಪದೆ ಆರಿಸಿ ಬರುವುದು, ಸೋಲಿಲ್ಲದ ಸರದಾರನಂತೆ ಬೀಗುವುದು ಸಣ್ಣ ಮಾತೇನು? ಜನರಿಗೆ ಯಾವ ರೀತಿಯಲ್ಲಿ ಮಂಕುಬೂದಿ ಎರಚುತ್ತಾ ಬಂದಿರಬಹುದು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಒಬ್ಬ ರಾಜಕಾರಣಿಗೆ ಮಾತ್ರ ಇದು ಸಾಧ್ಯ.

‘ರಾಜಕಾರಣಿಗೆ ಒಂದು ವಿಶೇಷ ಶಕ್ತಿಯಿದೆಯೆಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಅದೇನೆಂದರೆ ತಮ್ಮ ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಅಧಃಪತನಕ್ಕೆ ತೆಗೆದುಕೊಂಡು ಹೋಗುವುದು. ಈ ವಿಷಯದಲ್ಲಿ ಎಲ್ಲ ದೇಶಗಳ, ಎಲ್ಲ ಪಕ್ಷಗಳ ರಾಜಕಾರಣಿಗಳೂ ಸಮರ್ಥರು’ ಎಂಬುದನ್ನು ನಿಸ್ಸಂದೇಹವಾಗಿ ಒಪ್ಪಿಕೊಳ್ಳಬಹುದು. ಇದು ಅವರ ಬಗ್ಗೆ ಇರುವ ಆರೋಪ ಎಂದು ಹೇಳಿದರೆ ಅಪಚಾರವಾದೀತು. ಇದು ರಾಜಕಾರಣಿಗಳ ತಾಕತ್ತು!

ಈಗಿನ ರಾಜಕಾರಣಿಗಳು ಮಾತ್ರ ಹೀಗೆ, ಹಿಂದಿನವರೆಲ್ಲ ಬಹಳ ಉತ್ತಮರಾಗಿದ್ದರು ಎಂದು ಭಾವಿಸುವಂತಿಲ್ಲ. ‘ಕಾಲ ಕೆಟ್ಟು ಹೋಯಿತು, ನಮ್ಮ ಕಾಲದಲ್ಲಿ ಎಲ್ಲವೂ ಚೆನ್ನಾಗಿದ್ದವು’ ಎಂಬ ಮಾತು ರಾಜಕಾರಣ ಹಾಗೂ ರಾಜಕಾರಣಿಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಅವರು ಎಲ್ಲಿಯೇ ಇರಲಿ ಯಾವುದೇ ಕಾಲದಲ್ಲಿರಲಿ ಹೀಗೆಯೇ ಇರುತ್ತಾರೆ. ಇಲ್ಲದಿದ್ದರೆ ಕ್ರಿಪೂ 342ರಲ್ಲಿ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಹೀಗೆ ಹೇಳುತ್ತಿರಲಿಲ್ಲ. ‘ಸದಾ ಒಂದು ಸಮೂಹ ಹಾಗೂ ಸಮಾಜದ ಜನರನ್ನು ಒಂದು ಸಿದ್ಧಾಂತ ಹಾಗೂ ನಂಬಿಕೆಗೆ ಅವರ ನಿಷ್ಠೆಯನ್ನು ಕೇಂದ್ರೀಕರಿಸಲು ರಾಜಕಾರಣಿಗಳು ಹೆಣಗುತ್ತಾರೆ. ಎಷ್ಟು ದಿನಗಳು ಒಂದು ನಂಬಿಕೆಯನ್ನು ಜೀವಂತವಾಗಿಡಲು ಸಾಧ್ಯವೋ ಅದು ಆ ರಾಜಕಾರಣಿಯ ಯಶಸ್ಸು. ಇಲ್ಲಿ ಯಶಸ್ವಿಯಾದವನು ಜನರಿಗೆ ಒಳ್ಳೆಯದನ್ನು ಮಾಡುತ್ತಾನೆ ಎಂದಲ್ಲ. ತನಗಂತೂ ಖಂಡಿತವಾಗಿಯೂ ಒಳ್ಳೆಯದನ್ನು ಮಾಡಿಕೊಳ್ಳುತ್ತಾನೆ. ರಾಜಕಾರಣಿಗಳಿಂದ ಜನರಿಗೆ ಹಿತವಾಗುತ್ತದೆಂಬುದು ಭ್ರಮೆ’ ಎಂದು ಅರಿಸ್ಟಾಟಲ್ ಅಂದೇ ಹೇಳಿದ್ದ.

ನಮಗೆ ಪದೇ ಪದೆ ಮನವರಿಕೆಯಾಗುವುದೆಂದರೆ, ಅರಿಸ್ಟಾಟಲ್ ಹೇಳಿದ ಮಾತು ಶತಶತಮಾನ ಕಳೆದರೂ ನಿಜವಾಗುತ್ತಿರುವುದು ಹಾಗೂ ಇಂದಿಗೂ ಪ್ರಸ್ತುತವಾಗಿರುವುದು. ವಿಪರ್ಯಾಸವೇನೆಂದರೆ, ರಾಜಕಾರಣಿಗಳಿಲ್ಲದೇ ಯಾವ ದೇಶವೂ ಇಲ್ಲ. ಎಲ್ಲರೂ ಅವರವರ ದೇಶವನ್ನು ಈ ರಾಜಕಾರಣಿಗಳಿಗಾಗಿಯೇ ಒಪ್ಪಿಸಿದ್ದಾರೆ. ಬೇರೆ ದಾರಿಯೇ ಇಲ್ಲ. ದೇವರು ಇದ್ದಾನೋ ಇಲ್ಲವೋ. ಆದರೆ ರಾಜಕಾರಣಿಗಳಂತೂ ಇದ್ದೇ ಇದ್ದಾರೆ. ಅವರ ಜತೆ ನಿತ್ಯ ಏಗಲೇಬೇಕು. ಈ ಸಲವಾದರೂ ಕಡಿಮೆ ಸುಳ್ಳರು, ಕಡಿಮೆ ಭ್ರಷ್ಟರು, ಕಡಿಮೆ ಸಮಯಸಾಧಕರನ್ನು ಆರಿಸಬೇಕಾಗಿದೆ.

ಏನಂತೀರಾ!?

-ವಿಶ್ವೇಶ್ವರ ಭಟ್
vbhat@me.com

1 Comment

  1. Vastavada vastu sariyagisuva nimma kaalajiya baravanige ge pranaamagalu

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.