ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಎಲ್ಲ ಸಹಿಸಿಕೊಂಡು ನಗುವುದು ರಾಜಕಾರಣಿಗೆ ಮಾತ್ರ ಸಾಧ್ಯ!

indian-politicsಈ ಝಳ, ಬೇಸಿಗೆಯಿಂದಾದರೂ ತಪ್ಪಿಸಿಕೊಳ್ಳಬಹುದು. ಆದರೆ ಚುನಾವಣೆಯ ಕಾವಿನಿಂದ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಎಲ್ಲಿ ಹೋದರೂ ಇದೇ ಮಾತು, ಚರ್ಚೆ. ಯಾರು ಗೆಲ್ತಾರೆ, ಯಾರು ಸೋಲ್ತಾರೆ ಎಂಬ ಲೆಕ್ಕಾಚಾರ. ಮೋದಿ ಪ್ರಧಾನಿ ಆಗ್ತಾರಾ, ಇಲ್ಲವಾ ಎಂಬ ಬಗ್ಗೆ ಬೆಟ್ಸ್. ಪ್ರತಿ ಸಲವೂ ಚುನಾವಣೆ ಇಂಥದೇ ಕೌತುಕ, ನಿರೀಕ್ಷೆ, ಲೆಕ್ಕಾಚಾರವನ್ನು ಹೊತ್ತು ತರುತ್ತದೆ. ಆದರೆ ಈ ಸಲದ ಕಾವು, ಕೌತುಕ ತುಸು ಭಿನ್ನ ಎಂದೇ ಹೇಳಬೇಕು. ಹಾಗಂತ ಪ್ರತಿಸಲ ಚುನಾವಣೆ ಬಂದಾಗಲೂ ಹೀಗೆ ಅನಿಸುತ್ತದೆ. ಕಾರಣ ಪ್ರತಿ ಸಲವೂ ಚುನಾವಣೆಯ ಪಟ್ಟುಗಳು ಬೇರೆ ಬೇರೆಯಾಗಿರುತ್ತವೆ. ಕಣದಲ್ಲಿ ಅಭ್ಯರ್ಥಿಗಳು ಬೇರೆ ಬೇರೆ ಆಗಿರುತ್ತಾರೆ. ವಿಷಯಗಳು ಭಿನ್ನವಾಗಿರುತ್ತವೆ. ಆದರೆ ರಾಜಕಾರಣಿಗಳು ಮಾತ್ರ ಅವರೇ ಆಗಿರುತ್ತಾರೆ. ಹಿಂದಿನ ಚುನಾವಣೆಯಲ್ಲಿ ಒಂದು ಪಕ್ಷದಲ್ಲಿದ್ದವರು, ಈ ಸಲ ಮತ್ತೊಂದು ಪಕ್ಷದಲ್ಲಿದ್ದಾರೆ. ಪಕ್ಷಗಳು ಅದಲು ಬದಲಾದರೂ ಮುಖಗಳು ಅವೇ ಇವೆ. ಇದನ್ನು ಗಮನಿಸಿ ಫೇಸ್‌ಬುಕ್‌ನಲ್ಲೊಬ್ಬರು ಬರೆದಿದ್ದರು-​’V‌ote BJP t‌o el​e‌ct E‌x C‌on‌g‌ress ‌MPs.’ (ಕಾಂಗ್ರೆಸ್ಸಿನ ಮಾಜಿ ಸಂಸದರನ್ನು ಆಯ್ಕೆ ಮಾಡಲು ಬಿಜೆಪಿಗೆ ಮತ ನೀಡಿ) ಈ ಸಲದ ಚುನಾವಣೆಯಲ್ಲಿ ಗಾಳಿಯೇ ಇಲ್ಲ, ಕಾರಣ ಮತದಾರರು ಯಾರಿಗೆ ಮತ ನೀಡಬೇಕೆಂಬುದನ್ನು ಈಗಾಗಲೇ ನಿರ್ಧರಿಸಿಯಾಗಿದೆ ಎಂದು ಕೆಲವರು ವಾದ ಮಾಡುತ್ತಾರೆ. ಇನ್ನು ಕೆಲವರು ಮತದಾರ ಎಂದಿನಂತೆ ಗೊಂದಲದಲ್ಲಿದ್ದಾನೆಂದು ತಮ್ಮದೇ ಆದ ತರ್ಕವನ್ನು ಮುಂದಿಡುತ್ತಾರೆ. ಹಾಗೆ ನೋಡಿದರೆ ಎಲ್ಲ ಚುನಾವಣೆಗಳಲ್ಲೂ ಈ ಎಲ್ಲ ಕಸರತ್ತುಗಳು ನಡೆದೇ ನಡೆಯುತ್ತವೆ. ಸ್ವರೂಪ, ಶೈಲಿ ಬದಲಾಗಬಹುದು. ಆದರೆ ಆಶಯಗಳು ಮಾತ್ರ ಅವೇ ಆಗಿವೆ. ನಾವೂ ಪ್ರತಿದಿನ ಈ ‘ಮಹಾಯುದ್ಧ’ದ ವರದಿಗಳನ್ನು ನಿಮಗೆ ಹೊತ್ತು ತರುತ್ತಿದ್ದೇವೆ. ಚುನಾವಣೆಯ ಎಲ್ಲ ಮುಖಗಳನ್ನು ನಿಮ್ಮ ಮುಂದೆ ಹರವಿಡುತ್ತಿದ್ದೇವೆ. ಮತ್ತೆ ವಿಶ್ಲೇಷಣೆಗೆ ಇಳಿಯದೇ, ಓಶೋ ರಜನೀಶ್ ರಾಜಕಾರಣಿಗಳ ಬಗ್ಗೆ ಏನಾದರೂ ಹೇಳಿರಬಹುದಾ ಎಂದು ಕಳೆದ ಒಂದು ವಾರದಿಂದ ನನ್ನ ಸಂಗ್ರಹದಲ್ಲಿನ ಪುಸ್ತಕಗಳನ್ನು ತಡಕಾಡುತ್ತಿದ್ದೆ. ಓಶೋ ರಾಜಕಾರಣಿಗಳ ಬಗ್ಗೆ ಮಾಡಿದ ಭಾಷಣವನ್ನು ಕೇಳಿದ್ದೆ. ಓಶೋ ಬರೆದ T‌he P‌r‌ie​st & P‌ol‌i​t‌i‌c‌ian ಎಂಬ ಪುಸ್ತಕ ಸಿಕ್ಕಿತು. ಅದರಲ್ಲೊಂದು ಅಧ್ಯಾಯದ ಶೀರ್ಷಿಕೆ (P‌ol‌i​t‌i‌c‌i​ans a‌re G‌reat C‌r‌im‌ina​ls)ಯೇ ಆ ಕೃತಿ ಪ್ರವೇಶವನ್ನು ರೋಚಕಗೊಳಿಸಿತು.

ಓಶೋ ಅವರ ಈ ಕೃತಿ ಪ್ರಕಟವಾಗಿದ್ದು ಸುಮಾರು ಮೂವತ್ಮೂರು ವರ್ಷಗಳ ಹಿಂದೆ. ಆಗಲೇ ಅವರು ರಾಜಕಾರಣಿಗಳೆಂದರೆ ಮಹಾ ಕ್ರಿಮಿನಲ್‌ಗಳು ಎಂಬ ನಿರ್ಧಾರಕ್ಕೆ ಬಂದಿದ್ದರು. ಅವರೇನಾದರೂ ಈಗಿನ ರಾಜಕಾರಣಿಗಳನ್ನು ನೋಡಿದ್ದರೆ ಏನಂತ ಕರೆಯುತ್ತಿದ್ದರೋ ಏನೋ? ರಾಜಕಾರಣಿಗಳಿಂದ ಓಶೋ ಅವರಿಗೆ ವೈಯಕ್ತಿಕವಾಗಿ ಏನು ತೊಂದರೆಯಾಗಿತ್ತೋ ಗೊತ್ತಿಲ್ಲ, ಆದರೆ ಅವರ ಕೆಲವು ಮಾತುಗಳನ್ನು ಕೇಳಿದರೆ, ಅವರ ಹೊಟ್ಟೆಯಲ್ಲಿದ್ದ ಸಂಕಟಗಳೇನು ಎಂಬುದು ಗೊತ್ತಾಗುತ್ತದೆ. ರಾಜಕಾರಣಿಗಳು ಮತ್ತು ಕ್ರಿಮಿನಲ್‌ಗಳ ಮಧ್ಯೆ ನೀವು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆ ಎದುರಾದರೆ ನೀವೇನು ಮಾಡುತ್ತೀರಿ ಎಂದು ಓಶೋ ಅವರನ್ನು ಕೇಳಿದಾಗ ಅವರು ಹೇಳಿದ್ದು-‘ಅನುಮಾನವೇ ಬೇಡ. ನಾನು ಆಯ್ಕೆ ಮಾಡುವುದು ಕ್ರಿಮಿನಲ್‌ನನ್ನು. ಯಾಕೆಂದರೆ ರಾಜಕಾರಣಿಗಳಿಗೆ ಹೋಲಿಸಿದರೆ ಆತನೇ ವಾಸಿ. ಕಾರಣ ಆತ ರಾಜಕಾರಣಿಯಷ್ಟು ಬುದ್ಧಿವಂತನಲ್ಲ, ದುಷ್ಟನಲ್ಲ, ದುರುಳನಲ್ಲ. ತಾನು ಮಾಡಿದ ಅಪರಾಧವನ್ನು ಮುಚ್ಚಿಟ್ಟುಕೊಳ್ಳದಷ್ಟು ಪೆದ್ದ ಆತ. ರಾಜಕಾರಣಿ ಮೂಲತಃ ಮಹಾ ಕ್ರಿಮಿನಲ್. ಆದರೆ ಆತ ಸಿಕ್ಕಿಬಿದ್ದಿಲ್ಲ ಹಾಗೂ ಸಿಕ್ಕಿ ಬೀಳುವುದಿಲ್ಲ. ಸಿಕ್ಕಿ ಬಿದ್ದರೂ ಬಚಾವ್ ಆಗುವುದು ಹೇಗೆ ಎಂಬುದು ಗೊತ್ತು. ಅದೇ ಕ್ರಿಮಿನಲ್ ಹಾಗಲ್ಲ. ಆತ ತನ್ನನ್ನು ಬಚಾವ್ ಮಾಡುವಂತೆ ರಾಜಕಾರಣಿಯ ಕಾಲು ಹಿಡಿಯುತ್ತಾನೆ.
ಅಷ್ಟರಮಟ್ಟಿಗೆ ಆತ ಪರಾವಲಂಬಿ. ಪರಾರಿಯಾಗುವ ಮಾರ್ಗ ಗೊತ್ತಿದ್ದೇ ಅಪರಾಧಕ್ಕಿಳಿಯುವುದು ರಾಜಕಾರಣಿಗೆ ಗೊತ್ತು. ಕ್ರಿಮಿನಲ್ ಯಡವಟ್ಟು ಮಾಡಿಕೊಳ್ಳುವುದು ಇಲ್ಲಿಯೇ.’

‘ರಾಜಕಾರಣಿ ಹಾಗೂ ಕ್ರಿಮಿನಲ್ ಇಬ್ಬರೂ ಅಪಾಯಕಾರಿಗಳೇ. ಆದರೆ ಇಬ್ಬರ ಪೈಕಿ ಕ್ರಿಮಿನಲ್ಲೇ ವಾಸಿ. ಯಾಕಂದ್ರೆ ರಾಜಕಾರಣಿ ಮುಂದೆ ಆತ ಮಾಡುವ ಅಪರಾಧ ಪುಟಗೋಸಿ. ಕ್ರಿಮಿನಲ್ ಆದವನು ಹೆಚ್ಚೆಂದರೆ ಒಂದಿಬ್ಬರನ್ನು ಕೊಲ್ಲಬಹುದು. ಅದೇ ರಾಜಕಾರಣಿ ಇದ್ದಾನಲ್ಲ ಆತ ಕನಿಷ್ಠ ನೂರು ಕ್ರಿಮಿನಲ್‌ಗಳನ್ನು ತನ್ನ ಜತೆ ಇಟ್ಟುಕೊಂಡಿರುತ್ತಾನೆ. ಅಪರಾಧವೆಸಗುವಂತೆ ಕ್ರಿಮಿನಲ್‌ಗಳಿಗೆ ಕುಮ್ಮಕ್ಕು ನೀಡುತ್ತಿರುತ್ತಾನೆ. ನಿನ್ನನ್ನು ರಕ್ಷಿಸುತ್ತೇನೆ ಎಂಬ ಭ್ರಮೆ ಮೂಡಿಸುತ್ತಾನೆ. ಸದಾ ತನ್ನಡಿಯಲ್ಲಿಟ್ಟುಕೊಂಡು ಕ್ರಿಮಿನಲ್ ಚಟುವಟಿಕೆ ಮುಂದುವರಿಯುವಂತೆ ನೋಡಿಕೊಳ್ಳುತ್ತಾನೆ.’

‘ಕ್ರಿಮಿನಲ್‌ಗಳು ಎಷ್ಟೋ ವಾಸಿ ಎಂದು ನಾನು ಯಾಕೆ ಹೇಳುತ್ತೇನೆಂದರೆ ಅವರು ಕಡಿಮೆ ಡೇಂಜರಸ್. ಚರಿತ್ರೆಯ ಪುಟಗಳನ್ನು ತೆರೆದರೆ ಕ್ರಿಮಿನಲ್‌ಗಳ ಬಗ್ಗೆ ಅಯ್ಯೋ ಪಾಪ ಎನಿಸುತ್ತದೆ. ಕಾರಣ ಅವರು ಮಾಡಿದ ಅಪರಾಧಗಳಿವೆಯಲ್ಲ, ಅವು ಬರೀ ಚಿಲ್ಲರೆ! ನಾಯಕರು ಮಾಡಿದ ಕ್ರಿಮಿನಲ್ ಚಟುವಟಿಕೆಯೇ ಅಗಾಧ. ಉದಾಹರಣೆಗೆ ಚೆಂಗಿಸ್‌ಖಾನ್ ನಾಲ್ಕು ಕೋಟಿ ಜನರನ್ನು ಸಾಯಿಸಿದ. ನಾದಿರ್ ಷಾ ಏನಿಲ್ಲವೆಂದರೂ ಮೂರು ಕೋಟಿ ಜನರನ್ನು ಹತ್ಯೆಗೈದಿರಬಹುದು. ಅಲೆಗ್ಸಾಂಡರ್, ನೆಪೋಲಿಯನ್ ಗೈದ ಕಗ್ಗೊಲೆಗಳಿಗಂತೂ ಲೆಕ್ಕವೇ ಇಲ್ಲ. ಜೋಸೆಫ್ ಸ್ಟಾಲಿನ್ ಕನಿಷ್ಠ ಹತ್ತು ಲಕ್ಷ ಮಂದಿ ಹತ್ಯೆಗೆ ಕಾರಣನಾದ. ಅಡಾಲ್ಫ್ ಹಿಟ್ಲರ್ ಅರವತ್ತು ಲಕ್ಷ ಯಹೂದಿಗಳನ್ನು ಸಾಯಿಸಿದ. ಎರಡನೆ ಮಹಾಯುದ್ಧದಲ್ಲಿ ಕನಿಷ್ಠ ಮೂರು ಕೋಟಿ ಜನ ಪ್ರಾಣ ತೆತ್ತರು. ಯಾರೋ ಕ್ರಿಮಿನಲ್‌ಗಳ ಕೃತ್ಯ ಇದಾಗಿರಲಿಲ್ಲ. ಖುದ್ದಾಗಿ ಆಯಾ ದೇಶಗಳ ನಾಯಕರೇ ಎಸಗಿದ ಕ್ರಿಮಿನಲ್ ಕೃತ್ಯಗಳಿವು. ಹೀಗಾಗಿ ನನಗೆ ಮನವರಿಕೆಯಾಗಿದೆ, ಕ್ರಿಮಿನಲ್‌ಗಳೇ ರಾಜಕಾರಣಿಗಳಿಗಿಂತ ಕಡಿಮೆ ಕ್ರಿಮಿನಲ್. ರಾಜಕಾರಣಿಗಳೇ ಮಹಾ ಕ್ರಿಮಿನಲ್‌ಗಳು.’

“ನಾನು ವಿಶ್ವದಲ್ಲಿನ ಅನೇಕ ದೇಶಗಳ ನಾಯಕರನ್ನು ಭೇಟಿ ಮಾಡಿದ್ದೇನೆ. ಅಂತೆಯೇ ಕ್ರಿಮಿನಲ್‌ಗಳನ್ನೂ ಭೇಟಿ ಮಾಡಿದ್ದೇನೆ. ಬಹುತೇಕ ಸಂದರ್ಭಗಳಲ್ಲಿ ಕ್ರಿಮಿನಲ್‌ಗಳು ತಿಳಿಯದೆಯೋ, ಪರಿಸ್ಥಿತಿ ಒತ್ತಡಕ್ಕೆ ಸಿಲುಕಿಯೋ ಅಪರಾಧವೆಸಗಿದ್ದನ್ನು ನೋಡಬಹುದು. ಕಾನೂನಿನ ಬಗ್ಗೆ ತಿಳಿವಳಿಕೆಯ ಕೊರತೆಯಿಂದಲೂ ಹೀಗೆ ಮಾಡಿರುವ ಸಾಧ್ಯತೆಯಿರುತ್ತದೆ. ಆದರೆ ರಾಜಕಾರಣಿಗಳು ಹಾಗಲ್ಲ. ಅವರಲ್ಲಿ ಅಧಿಕಾರ, ಸೇನೆ, ಆಡಳಿತಶಾಹಿ, ಹಣಬಲ, ಜನಬಲ… ಹೀಗೆ ಎಲ್ಲವೂ ಇರುತ್ತವೆ. ಅವರಿಗೆ ಕಾನೂನು ಸಲಹೆಗಾರರಿರುತ್ತಾರೆ. ಹೆಜ್ಜೆ ಹೆಜ್ಜೆಗೆ ಸಹಾಯಕರು, ಪರಿಣತರು ಇರುತ್ತಾರೆ. ಇವರು ಏನೇ ತಪ್ಪು ಮಾಡಿದರೂ ಸಾಕಷ್ಟು ಯೋಚಿಸಿಯೇ ಮಾಡುತ್ತಾರೆ. ತಿಳಿಯದೇ ತಪ್ಪು ಮಾಡಿದರು ಎಂದು ಯಾವ ದೇಶದ ರಾಜಕಾರಣಿ ಅಥವಾ ನಾಯಕರ ಬಗ್ಗೆ ಹೇಳಲಾಗುವುದಿಲ್ಲ. ತಪ್ಪು ಮಾಡುವ ಪ್ರಸಂಗ ಬಂದಾಗಲೂ ರಾಜಕಾರಣಿಗಳು ಬೇರೆಯವರಿಂದ ಅದನ್ನು ಮಾಡಿಸುತ್ತಾರೆಯೇ ಹೊರತು ತಾವು ಮಾಡುವುದಿಲ್ಲ. ಜಗತ್ತಿನಲ್ಲಿರುವ ಎಲ್ಲ ರಾಜಕಾರಣಿಗಳ ತಂದೆ-ತಾಯಂದಿರು ಬೇರೆ ಬೇರೆಯಾಗಿರಬಹುದು. ಆದರೆ ಅವರ ಮೈಯಲ್ಲಿ ಹರಿಯುವುದು ಮಾತ್ರ ಒಂದೇ ರಕ್ತ!’

ಓಶೋ ಹೇಳಿದ ಒಂದು ಪ್ರಸಂಗವನ್ನು ಇಲ್ಲಿ ಪ್ರಸ್ತಾಪಿಸಬಹುದು.

ಅದೊಮ್ಮೆ ಇಂದಿರಾಗಾಂಧಿಯವರು ನನಗೆ ಹೇಳಿದ್ದರು- ನಮ್ಮ ಪಕ್ಷದ ಇತರೆ ನಾಯಕರಿಂದ ಯಾವುದಾದರೂ ಕೆಲಸ ತೆಗೆಯಬೇಕು ಅಂದುಕೊಂಡಾಗ, ಯಾವುದೇ ಕಾರಣಕ್ಕೂ ಈ ಸಂಬಂಧವಾಗಿ ನಾನು ಪತ್ರ ಬರೆಯುವುದಿಲ್ಲ. ಬದಲಿಗೆ, ಒಂದು ಫೋನ್ ಮಾಡುತ್ತೇನೆ. ಏಕೆಂದರೆ, ಆದೇಶದ ರೂಪದಲ್ಲಿ ನಾನು ಬರೆದ ಪತ್ರ ಇವತ್ತಲ್ಲ ನಾಳೆ ನನ್ನ ವಿರುದ್ಧದ ಪ್ರಬಲ ಸಾಕ್ಷಿ ಆಗಿಬಿಡಬಹುದು. ಅಂಥದೊಂದು ಸಂದರ್ಭ ಎದುರಾಗಲು ನಾನು ಯಾವತ್ತೂ ಅವಕಾಶ ಕೊಡಲಾರೆ…’ ನಿಜ ಹೇಳಬೇಕೆಂದರೆ, ಇಂದಿರಾಗಾಂಧಿಯವರು ‘ತಮ್ಮ ಪಕ್ಷದ ನಾಯಕರಿಂದ ಕೆಲಸ ಮಾಡಿಸುತ್ತಿದ್ದ ರೀತಿಯೇ ಹಾಗಿತ್ತು. ಯಾವುದೋ ಒಂದು ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಅಥವಾ ಬೇರೊಂದು ಪಕ್ಷದ ಪ್ರಮುಖ ನಾಯಕನನ್ನು ‘ಆಟ’ ಆಡಿಸಬೇಕು ಅನ್ನಿಸಿದರೆ, ಆಕೆ ತಕ್ಷಣವೇ ಆ ರಾಜ್ಯದ ರಾಜ್ಯಪಾಲರನ್ನು ಕರೆಸುತ್ತಿದ್ದರು. ತನ್ನೆದುರು, ಕೈ ಕಟ್ಟಿಕೊಂಡು ನಿಂತವನಿಗೆ -‘ಈ ಕೆಲಸ ಮಾಡಿ. ಹೀಗೇ ಮಾಡಿ’ ಎಂದು ಬಾಯಿಮಾತಿನಲ್ಲಿ ಹೇಳುತ್ತಿದ್ದರು ಅಥವಾ ಅದೇ ಮಾತುಗಳನ್ನು ಫೋನ್ ಮೂಲಕ ಹೇಳಿಬಿಡುತ್ತಿದ್ದರು. ಆಕೆ, ಉಭಯಕುಶಲೋಪರಿ ಮಾತಾಡುವ ಸಂದರ್ಭದಲ್ಲಿಯೇ ಇಂಥದೊಂದು ‘ಹುಕುಂ’ ಜಾರಿ ಮಾಡುತ್ತಿದ್ದರಿಂದ, ಈ ಫೋನ್ ಸಂಭಾಷಣೆ, ರೆಕಾರ್ಡ್ ಆಗುತ್ತಲೂ ಇರಲಿಲ್ಲ. ಇದಿಷ್ಟನ್ನೂ ವಿವರವಾಗಿಯೇ ಹೇಳಿದ ಇಂದಿರಾಗಾಂಧಿ, ನಂತರ ಗಂಭೀರವಾಗಿ ಹೀಗೆಂದರು: ‘ಕೆಲವು ಮೂರ್ಖ ರಾಜಕಾರಣಿಗಳಿದ್ದಾರೆ. ಅವರು, ಅಧಿಕಾರದ ಗದ್ದುಗೆ ಏರಿದರೆ ಸಾಕು, ಆ ಕ್ಷಣದಿಂದಲೇ ಪ್ರತಿಯೊಂದು ಆದೇಶವನ್ನೂ ಬರಹದ ಮೂಲಕವೇ ಕೊಡುತ್ತಾ ಹೋಗುತ್ತಾರೆ. ಫೂಲ್ಸ್…’

ಮಾತು ಮುಗಿದಾಕ್ಷಣ, ತಮ್ಮಲ್ಲಿದ್ದ ಒಂದು ಭಾರಿ ಗಾತ್ರದ ಫೈಲ್ ತೋರಿಸಿದರು ಇಂದಿರಾಗಾಂಧಿ. ಎಲ್ಲ ಅರ್ಥದಲ್ಲೂ ಆ ಫೈಲ್ ಆಕೆಯ ಪಾಲಿನ ಬ್ರಹ್ಮಾಸ್ತ್ರದಂತಿತ್ತು. ಆ ಫೈಲ್, ಇಂದಿರಾಗಾಂಧಿಯವರಿಗೆ ಪಿತ್ರಾರ್ಜಿತವಾಗಿ ಸಿಕ್ಕಿದ ಕಾಣಿಕೆ. ಭಾರತದ ಮೊದಲ ಪ್ರಧಾನಿಯಾದ ನೆಹರೂ ಅವರು, ನಂತರ, ಆ ಫೈಲನ್ನು ತಮ್ಮ ಪುತ್ರಿಗೆ ಕೊಡುಗೆಯಾಗಿ ನೀಡಿದ್ದರು. ತನ್ನ ಪಕ್ಷದಲ್ಲಿದ್ದ ಎಲ್ಲ ಪ್ರಮುಖ ನಾಯಕರ ವಿರುದ್ಧವೂ ನೆಹರೂ ಅವರು ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದರು. ಎಲ್ಲ ನಾಯಕರ ವಿರುದ್ಧವೂ ಯಾವ ಸಂದರ್ಭದಲ್ಲಿ ಬೇಕಾದರೂ ಮೊಕದ್ದಮೆ ದಾಖಲಿಸಬಹುದಾದಂಥ ಆರೋಪ ಪಟ್ಟಿಯ ಸಂಗ್ರಹವೇ ಅವರಲ್ಲಿತ್ತು. ಯಾರಾದರೂ ಪಕ್ಷದ ವಿರುದ್ಧ ಅಥವಾ ಕಾಂಗ್ರೆಸ್‌ನ ನಾಯಕತ್ವದ ವಿರುದ್ಧ ಮಾತಾಡುತ್ತಾರೆಂಬ ಸುಳಿವು ಸಿಕ್ಕರೂ ಸಾಕು; ನಿಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ. ಆ ಕುರಿತಂತೆ ಹಲವು ದಾಖಲೆಗಳು ನನ್ನಲ್ಲಿವೆ. ಒಂದು ವೇಳೆ ಪಕ್ಷದ ವಿರುದ್ಧ ನೀವೇನಾದರೂ ಮಾತಾಡಿದರೆ, ಮರುಕ್ಷಣವೇ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದರು. ಪಕ್ಷದ ವಿರುದ್ಧ ಮಾತಾಡಬೇಕು ಅಂದುಕೊಂಡಿದ್ದವರು ತಕ್ಷಣವೇ ಬಾಯಿಗೆ ಬೀಗ ಹಾಕಿಕೊಂಡು ಕೂತು ಬಿಡುತ್ತಿದ್ದರು.

ನೆಹರೂ ಅವರ ಬಳಿ ದಾಖಲೆ ಸಂಗ್ರಹದ ಫೈಲ್ ಇದೆ ಎಂಬ ಕಾರಣಕ್ಕೆ ಗಡಗಡ ನಡುಗಿದ್ದವರ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕರು ಮಾತ್ರವಲ್ಲ, ಇತರೆ ಪಕ್ಷಗಳ ಹಲವು ಪ್ರಮುಖರೂ ಇದ್ದರು. ತಮಾಷೆಯೆಂದರೆ, ನೆಹರೂ ಬಳಿ ಇರುವ ಫೈಲ್‌ನಲ್ಲಿ ಯಾವ ದಾಖಲೆಗಳಿರಬಹುದು ಎಂದು ಯಾರೊಬ್ಬರಿಗೂ ಗೊತ್ತಿರಲಿಲ್ಲ. ಆದರೂ ಆ ಫೈಲ್‌ನ ಹೆಸರೆತ್ತಿದರೆ ಸಾಕು, ಹಲವು ಘಟಾನುಘಟಿ ನಾಯಕರ ಮುಖ ಕಪ್ಪಾಗುತ್ತಿತ್ತು. ಅದರರ್ಥವಿಷ್ಟೆ, ಹಲವು ನಾಯಕರು ‘ಗುರುತರ’ ಎನ್ನಬಹುದಾದ ತಪ್ಪುಗಳನ್ನು ಮಾಡಿದ್ದರು. ‘ಅಪರಾಧ ಆಗಬಹುದಾದ’ ತಮ್ಮ ಸಾಹಸಗಳನ್ನು ಬರಹದ ರೂಪದಲ್ಲಿ ನೀಡಿ ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದರು!

ಇಂದಿರಾಗಾಂಧಿಯವರ ಮಗ ರಾಜೀವ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರಪತಿಯಾಗಿದ್ದವರು ಗ್ಯಾನಿ ಜೈಲ್‌ಸಿಂಗ್. ಪ್ರಧಾನ ಮಂತ್ರಿಯವರ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಮಹತ್ವದ ನಿರ್ಣಯ ಕೈಗೊಂಡರೂ, ಅದು ಅನುಷ್ಠಾನಕ್ಕೆ ಬರಬೇಕೆಂದರೆ, ಆ ನಿರ್ಣಯದ ಪ್ರತಿಗೆ ರಾಷ್ಟ್ರಪತಿಗಳ ಒಪ್ಪಿಗೆಯ ಸಹಿ ಬೀಳಲೇಬೇಕು. ನಮ್ಮ ಸಂವಿಧಾನ ಹೇಳುವುದೂ ಇದನ್ನೇ. ಆದರೆ, ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯದೆ, ಪ್ರಧಾನಿ ರಾಜೀವಗಾಂಧಿಯವರು ಅದೆಷ್ಟೋ ನಿರ್ಣಯಗಳನ್ನು ಜಾರಿಗೆ ತಂದೇ ಬಿಟ್ಟರು. ಪ್ರಧಾನಿಯವರು ತಮ್ಮ ಅಧಿಕಾರ ವ್ಯಾಪ್ತಿಯನ್ನೂ ಮೀರಿ ವರ್ತಿಸುತ್ತಿದ್ದಾರೆ ಎಂದು ಹೇಳುವ, ಅವರ ವಿರುದ್ಧ ಕ್ರಮಕೈಗೊಳ್ಳುವ ಎಲ್ಲ ಅವಕಾಶವೂ ಜೈಲ್‌ಸಿಂಗ್ ಅವರಿಗಿತ್ತು. ಆದರೆ ರಾಷ್ಟ್ರಪತಿ ಜೈಲ್‌ಸಿಂಗ್ ಒಂದೇ ಒಂದು ಮಾತನ್ನೂ ಆಡದೆ ಉಳಿದು ಬಿಟ್ಟರು.

ಏಕೆ ಗೊತ್ತೆ?

ರಾಷ್ಟ್ರಪತಿ ಆಗುವುದಕ್ಕೂ ಮೊದಲು ಜೈಲ್‌ಸಿಂಗ್ ಅವರು ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆ ಸಂದರ್ಭದಲ್ಲಿ, ಯಾವುದೋ ಕೆಲಸ ಮಾಡಿಕೊಡಲು ಲಂಚ ಪಡೆದು ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಈ ವಿಷಯ ಪಂಜಾಬ್‌ನ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಅಲ್ಲೋಲಕಲ್ಲೋಲ ಉಂಟಾಗಿತ್ತು. ನಂತರ ಈ ಸಂಬಂಧವಾಗಿ ತನಿಖೆ ನಡೆಯಿತು. ಆ ತನಿಖೆಯೂ ಕೂಡ ಮುಖ್ಯಮಂತ್ರಿ ಜೈಲ್‌ಸಿಂಗ್ ಅವರು ಪ್ರಮುಖ ಆರೋಪಿ ಎಂದು ತಿಳಿಸಿತ್ತು. ನಂತರ ಈ ಫೈಲ್, ಪ್ರಧಾನಿಯಾಗಿದ್ದ ರಾಜೀವಗಾಂಧಿಯವರ ಕೈ ಸೇರಿತು. ರಾಜಕಾರಣದ ಪಟ್ಟುಗಳನ್ನು ತಾತ ಹಾಗೂ ತಾಯಿಯಿಂದ ‘ವಂಶಾವಳಿ’ಯ ರೂಪದಲ್ಲಿ ಕಲಿತಿದ್ದ ರಾಜೀವಗಾಂಧಿ, ಯಾವುದೇ ಕಾರಣಕ್ಕೂ ಆ ಫೈಲ್‌ನ ವಿವರವನ್ನು ಬಹಿರಂಗಪಡಿಸಲಿಲ್ಲ. ಆದರೆ, ತನ್ನ ಕಾರ್ಯವಿಧಾನದ ಬಗ್ಗೆ ರಾಷ್ಟ್ರಪತಿ ಜೈಲ್‌ಸಿಂಗ್ ಅವರು ವಿರೋಧ ವ್ಯಕ್ತಪಡಿಸಿದಾಗ ರಾಜೀವಗಾಂಧಿ ಮುಲಾಜಿಲ್ಲದೆ ಒಂದು ಮಾತು ಹೇಳಿಬಿಟ್ಟರು: ಮಿಸ್ಟರ್ ಪ್ರೆಸಿಡೆಂಟ್, ನನ್ನ ಆಡಳಿತಕ್ಕೆ ಸಂಬಂಧಿಸಿದಂತೆ ಅನಿಸಿದ್ದನ್ನು ಹೇಳುವ ಸ್ವಾತಂತ್ರ್ಯ ನಿಮಗಿದೆ. ಆದರೆ ಒಂದು ವಿಷಯ ನೆನಪಿರಲಿ, ನಿಮ್ಮ ಮೇಲಿರುವ ಆರೋಪಗಳಿಗೆ ಸಂಬಂಧಿಸಿದ ಫೈಲ್ ನನ್ನಲ್ಲಿದೆ. ಒಂದು ವೇಳೆ ಅದರಲ್ಲಿರುವ ಮಾಹಿತಿಗಳನ್ನು ನಾನು ಬಹಿರಂಗಪಡಿಸಿದರೆ, ನಂತರದ ಅರ್ಧ ಗಂಟೆಯಲ್ಲಿ ನೀವು ಅರೆಸ್ಟ್ ಆಗಿಬಿಡುತ್ತೀರಿ!

ರಾಜೀವಗಾಂಧಿಯವರ ಈ ಮಾತು ಗ್ಯಾನಿ ಜೈಲ್‌ಸಿಂಗ್ ಅವರನ್ನು ಎಷ್ಟೊಂದು ಹೆದರಿಸಿತು ಅಂದರೆ, ರಾಷ್ಟ್ರಪತಿಯಾಗಿದ್ದಷ್ಟು ದಿನ ಅವರು ರಾಜೀವಗಾಂಧಿ ಸರ್ಕಾರದ ವಿರುದ್ಧ ಒಂದೇ ಒಂದು ಮಾತಾಡಲಿಲ್ಲ. ರಾಷ್ಟ್ರಪತಿ ಹುದ್ದೆಯಿಂದ ಇಳಿದ ನಂತರವೂ ಅವರು ಹೆದರಿಕೆಯ ನಡುವೆಯೇ ಬದುಕಿದರು. ಕಾರಣ, ರಾಷ್ಟ್ರಪತಿ ಆಗಿದ್ದಾಗಲೇ ಇಲ್ಲದ ರಕ್ಷಣೆ, ಸಾಮಾನ್ಯ ನಾಗರಿಕನಾಗಿ ಬದುಕುವಾಗ ಸಿಗುವುದಾದರೂ ಹೇಗೆ ಎಂಬುದು ಅವರ ಆತಂಕವಾಗಿತ್ತು.

***
ಓಶೋ ಮಾತುಗಳನ್ನು ಕೇಳಿದರೆ ರಾಜಕಾರಣಿಗಳೆಲ್ಲ ಹೀಗೇ ಎಂಬ ಅಭಿಪ್ರಾಯ ಬರುವ ಅಪಾಯವಿದೆ. ಆದರೆ ಅವರು ಹಾಗೆ ಹೇಳಿರಲಿಕ್ಕಿಲ್ಲ. ಅದೇನೇ ಇರಲಿ, ನಾವಂತೂ ಹಾಗೆ ಭಾವಿಸುವುದು ಬೇಡ. ರಾಜಕಾರಣಿಗಳಲ್ಲಿ ಅನೇಕರು ಒಳ್ಳೆಯವರಿದ್ದಾರೆ. ರಾಜಕಾರಣದಲ್ಲಿದ್ದೂ ಒಳ್ಳೆತನ ಕಾಪಾಡಿಕೊಂಡವರಿದ್ದಾರೆ. ಕೈ, ಬಾಯಿ ಸ್ವಚ್ಛವಾಗಿಟ್ಟುಕೊಂಡವರಿದ್ದಾರೆ. ರಾಜಕೀಯ ರಂಗಕ್ಕೇ ಒಂದು ಕಲಶಪ್ರಾಯರಾಗಿ ನಡೆದುಕೊಂಡವರೂ ಇದ್ದಾರೆ. ಆದರೆ ರಾಜಕಾರಣಿಗಳಿಗೆ ಮಾತ್ರ ಎಲ್ಲರಿಗಿಂತ ಹೆಚ್ಚು ಟೀಕೆ, ಆರೋಪಗಳಿರುವುದು ಮಾತ್ರ ಅಷ್ಟೇ ಸತ್ಯ. ಇವೆಲ್ಲವನ್ನೂ ಸಹಿಸಿಕೊಂಡು, ನುಂಗಿಕೊಂಡು, ಜನರ ಮಧ್ಯೆಯೇ ನಗುತ್ತಾ ಬಾಳುವುದಿದೆಯಲ್ಲ, ಅದು ರಾಜಕಾರಣಿಗಳಿಗೆ ಮಾತ್ರ ಸಾಧ್ಯ!

– ವಿಶ್ವೇಶ್ವರ ಭಟ್
vbhat@me.com

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.