ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ನಾನು ಹಿಂದೆಂದೂ ಈ ಪರಿ ಸುತ್ತಿರಲಿಲ್ಲ.
ಏನಿಲ್ಲವೆಂದರೂ ಒಂದು ವರ್ಷದಲ್ಲಿ ಸುತ್ತಬಹುದಾದ ದೂರ, ಊರು ಹಾಗೂ ದೇಶಗಳನ್ನು ಕೇವಲ ಒಂದು ವಾರದಲ್ಲಿ ಸುತ್ತಿ ಬಂದೆ. ಹೇಗಾಗಿರಬೇಡ? ವಾಪಸ್ ಬಂದು ಮನೆಯ ಸೋಫಾದ ಮೇಲೆ ಮೈಯನ್ನು ಚೆಲ್ಲಿಕೊಂಡಾಗ ಗಿರ್ರನೆ ತಲೆಸುತ್ತು ಬಂದ ಹಾಗಾಯಿತು. ಆ ರೀತಿ ಸುತ್ತಿ ಬಂದಿದ್ದೆ. ಅಲೆಮಾರಿಯಂತೆ ತಿರುಗುವುದು, ಒಂದೇ ಸೂಟ್್ಕೇಸಿನಲ್ಲಿ ದೇಶದಿಂದ ದೇಶಕ್ಕೆ ಜಿಗಿಯುವುದು ನನಗೆ ಹೊಸತೇನಲ್ಲ.
ಡಾ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದಾಗ ಸತತ ಹದಿನಾಲ್ಕು ದಿನಗಳ ಕಾಲ ರಷ್ಯಾ, ಸ್ವಿಜರ್್ಲ್ಯಾಂಡ್, ಐಸ್್ಲ್ಯಾಂಡ್ ಹಾಗೂ ಯುಕ್ರೇನ್್ಗೆ ಹೋಗಿದ್ದೆ. ಹೋಗುವ ಮುನ್ನದ ಈಚೆ, ಬಂದ ನಂತರದ ಆಚೆಯ ದಿನಗಳನ್ನು ಲೆಕ್ಕ ಹಾಕಿದರೆ ಹದಿನಾರು ದಿನಗಳ ಪ್ರವಾಸ. ಮನೆಗೆ ಮರಳಿ ಬಂದ ಬಳಿಕವೂ ತಲೆ ಧಿಮ್ಮೆನ್ನುತ್ತಿತ್ತು. ಮನಸ್ಸಿನಲ್ಲೆಲ್ಲ ವಿಮಾನದ್ದೇ ಸದ್ದು. ಮೋಡದೊಳಗೆ ಈಜುತ್ತಿರುವ ಅನುಭವ. ಮನೆ ಊಟ, ತಿಂಡಿ ಸಿಕ್ಕರೆ ಬರಗಾಲ ದೇಶದಿಂದ ಬಂದವರಂತೆ ತಿನ್ನುವ ಚಪಲ. ಸರಿಯಾಗಿ ಸುಧಾರಿಸಿಕೊಂಡು ಸಹಜ ಸ್ಥಿತಿಗೆ ಬರಲು ಕನಿಷ್ಠ ಮೂರು ದಿನಗಳಾದರೂ ಬೇಕು. ವಿದೇಶ ಪ್ರವಾಸದಿಂದ ಬಂದ ನಲವತ್ತೆಂಟು ಗಂಟೆಗಳ ಅವಧಿಯನ್ನು ‘ಗ್ರೌಂಡಿಂಗ್ ಪೀರಿಯಡ್್’ ಅಂತಾರೆ. ಹಾರುತ್ತಿರುವ ಮನಸ್ಸು ನೆಲಕ್ಕೆ ಕಚ್ಚಿಕೊಳ್ಳಲು ಬೇಕಾಗುವ ಸಮಯವಿದು.
ಹಿಂದಿನ ವಾರ ಪ್ರಧಾನಿ ಡಾ. ಮನಮೋಹನಸಿಂಗ್ ಅವರ ಜತೆ ನಾಲ್ಕು ದೇಶಗಳಲ್ಲಿ ಸುತ್ತಾಡಿ ಬಂದ ಬಳಿಕ ‘ಗ್ರೌಂಡ್್’ ಆಗಲು ನನಗೆ ನಾಲ್ಕು ದಿನಗಳೇ ಬೇಕಾದವು!
ಡಾ. ಕಲಾಂ ಅವರ ಜತೆಗಿನ ಪ್ರವಾಸ ಎರಡು ವಾರಗಳದ್ದಾಗಿದ್ದರೂ, ಈ ಪರಿ hectic ಆಗಿರಲಿಲ್ಲ. ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಮೂರ್ನಾಲ್ಕು ದಿನ ಉಳಿದುಕೊಳ್ಳಲು, ತಿರುಗಾಡಲು ಕಾಲಾವಕಾಶ ಸಿಗುತ್ತಿತ್ತು. ಸಮಾಧಾನದಿಂದ ಆಯಾ ದೇಶಗಳ ಪ್ರಮುಖ ತಾಣಗಳನ್ನು ನೋಡಲು ಸಮಯ ಸಿಗುತ್ತಿತ್ತು. ಊಟ ಮಾಡಲು, ಕೈ ತೊಳೆಯಲು, ಐದು ನಿಮಿಷ ವಿಶ್ರಾಂತಿ ತೆಗೆದುಕೊಳ್ಳಲು ಪುರುಸೊತ್ತು ಸಿಗುತ್ತಿತ್ತು. ಮೊನ್ನೆ ಪ್ರಧಾನಿ ಅವರ ಜತೆಗೆ ಹೋಗಿದ್ದೆವಲ್ಲ, ಅಲ್ಲಿ ಇದ್ಯಾವುದಕ್ಕೂ ಸಮಯವಿರಲಿಲ್ಲ. ಕಂಬಳಕ್ಕೆ ಕಟ್ಟಿದ ಎತ್ತಿನ ಹಾಗೆ ಹುಚ್ಚೆದ್ದು ಓಡುತ್ತಿದ್ದೆವು, ಒಂದು ಕಾರ್ಯಕ್ರಮದಿಂದ ಮತ್ತೊಂದು ಕಾರ್ಯಕ್ರಮಕ್ಕೆ ಹಾಗೂ ಒಂದು ದೇಶದಿಂದ ಮತ್ತೊಂದು ದೇಶಕ್ಕೆ. ಬೆಂಗಳೂರು-ಮೈಸೂರಿಗೆ ಹೋದ ರೀತಿಯಲ್ಲಿ ದೇಶದಿಂದ ದೇಶಕ್ಕೆ, ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಹಾರುತ್ತಿದ್ದೆವು. ಈ ವೈರುಧ್ಯ ಹೇಗಿತ್ತೆಂದರೆ ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಹೋಗುವಾಗ ಹಗಲು-ರಾತ್ರಿ-ಹಗಲನ್ನು ವಿಮಾನದಿಂದ ನೋಡುವ ವಿಲಕ್ಷಣ, ಅಪರೂಪದ ದೃಶ್ಯ ಸಿಗುತ್ತಿತ್ತು. ಬಿಟ್ಟೆನೆಂದರೂ ಬಿಡದ ಜೆಟ್್ಲ್ಯಾಗ್ ನಖಶಿಖಾಂತದಿಂದ ಮಾಜಿ ಪ್ರೇಯಸಿಯಂತೆ ಕಾಡುತ್ತಿತ್ತು. ಆದರೂ ಅದರಲ್ಲೇ ಒಂಥರಾ ಥ್ರಿಲ್ಲು! ಈ ದೇಶದಲ್ಲಾದ ಸುಸ್ತಿನ ಮುಯ್ಯಿಯನ್ನು ಮುಂದಿನ ದೇಶದಲ್ಲಿ ತೀರಿಸಿಕೊಳ್ಳುವ ಕಾತರವೇ ಅಂದಿನ ಆಯಾಸವನ್ನು ಮರೆಯುವಂತೆ ಮಾಡುತ್ತಿತ್ತು. ಅಕ್ಷರಶಃ ರೆಕ್ಕೆ ಕಟ್ಟಿಕೊಂಡೇ ತಿರುಗುತ್ತಾರೆ ಅಂತಾರಲ್ಲ, ನಮ್ಮ ಅನುಭವವೂ ಅದೇ ಆಗಿತ್ತು.
ಪ್ರಧಾನಮಂತ್ರಿ ಜತೆಗಿನ ವಿದೇಶ ಪ್ರವಾಸ ಪತ್ರಕರ್ತನಾದವನಿಗೆ ಅಭೂತಪೂರ್ವ ಅನುಭವ ತಂದುಕೊಡುವ ಅವಕಾಶವಷ್ಟೇ ಅಲ್ಲ, ವೃತ್ತಿ ಬದುಕಿನಲ್ಲಿ ಸಿಗುವ ದೊಡ್ಡ ಗೌರವವೂ ಹೌದು. ಅಷ್ಟೇ ಇದು ಸವಾಲಿನ assignment ಕೂಡ ಹೌದು. ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಅರಿವು ಇರುವವರಿಗೆ, ಶಿಷ್ಟಾಚಾರ, ವಿಧಿ-ವಿಧಾನಗಳ ಬಗ್ಗೆ ಸಾಕಷ್ಟು ತಿಳಿವಳಿಕೆ ಇದ್ದವರಿಗೆ ತುಸು ಸುಲಭವಾದೀತು. ಪ್ರತಿದಿನ ಪ್ರಧಾನಿಯವರು ಕನಿಷ್ಠ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ, ದಿನದ ಕೊನೆಯಲ್ಲಿ ವರದಿ ಸಿದ್ಧಪಡಿಸುವುದು, ಅಂತಾರಾಷ್ಟ್ರೀಯ ಸಮಯ ವ್ಯತ್ಯಯವನ್ನು ಗಮನಿಸಿ ಸುದ್ದಿ ಫೈಲ್ ಮಾಡುವುದಿದೆಯಲ್ಲ, ಅದು ಎಂಥ ಪತ್ರಕರ್ತನಿಗಾದರೂ ಸವಾಲೇ ಸರಿ. ಪ್ರಧಾನಿಯವರ ಜತೆಗೆ ವಿದೇಶ ಪ್ರಯಾಣದ ಆಕರ್ಷಣೆ ಜತೆ ಈ ಕಠಿಣ ಪರೀಕ್ಷೆಗಳನ್ನು ಪ್ರತಿದಿನವೂ ಎದುರಿಸಲೇಬೇಕು. ಮೊದಲಾಗಿದ್ದರೆ ಸುದ್ದಿ ಕಳಿಸುವುದೇ ದೊಡ್ಡ ತಲೆನೋವಾಗಿತ್ತು. ಈಗ ತಂತ್ರಜ್ಞಾನದ ಫಲದಿಂದ ಅದು ಸಮಸ್ಯೆಯೇ ಅಲ್ಲ ಬಿಡಿ.
ಪ್ರಧಾನಿಯವರು ನಾಳೆ ವಿದೇಶಕ್ಕೆ ತೆರಳುತ್ತಾರೆ ಅಂದ್ರೆ, ಅವರೊಂದಿಗೆ ತೆರಳುವ ಪತ್ರಕರ್ತರಿಗೆ ಇಂದು ಹೊಸದಿಲ್ಲಿಯಲ್ಲಿ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಗಳು ಬ್ರೀಫಿಂಗ್ ಮಾಡುತ್ತಾರೆ. ಭದ್ರತೆ, ವ್ಯವಸ್ಥೆ, ಏನನ್ನು ಮಾಡಬೇಕು, ಏನನ್ನು ಮಾಡಬಾರದು ಎಂಬ ಬಗ್ಗೆ ಸುದೀರ್ಘವಾಗಿ ವಿವರಿಸುತ್ತಾರೆ. ಸ್ಪೆಶಲ್ ಪ್ರೊಟೆಕ್ಷನ್ ಗ್ರೂಪ್ (ಎಸ್್ಪಿಜಿ)ನ ಹಿರಿಯ ಅಧಿಕಾರಿಗಳು ವಿಮಾನದಲ್ಲಿ, ಪ್ರಧಾನಿಯವರ ಕಾರ್ಯಕ್ರಮಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಸೂಚನೆ ಕೊಡುತ್ತಾರೆ. ಈ ಬ್ರೀಫಿಂಗ್ ಅನ್ನು ಎಷ್ಟು ಅಚ್ಚುಕಟ್ಟಾಗಿ ಆಯೋಜಿಸಿರುತ್ತಾರೆಂದರೆ ಅಲ್ಲಿ ಯಾವುದೇ ಸಂದೇಹ, ಗೊಂದಲಗಳಿಗೆ ಅವಕಾಶವಿರುವುದಿಲ್ಲ.
ಗಾಯವಾದರೆ ಏನು ಮಾಡಬೇಕು, ಬ್ಯಾಗ್ ಕಳೆದು ಹೋದರೆ ಯಾರನ್ನು ಸಂಪರ್ಕಿಸಬೇಕು, ವಿಮಾನವಿಳಿದ ಬಳಿಕ ಯಾವ ಕಾರಿನಲ್ಲಿ ಕುಳಿತುಕೊಳ್ಳಬೇಕು, ಆ ಕಾರಿನ ನಂಬರ್ ಏನು, ಅದು ಪ್ರಧಾನಿ ಕಾರಿನ ಹಿಂಬದಿಯಲ್ಲಿ ನಿಂತಿರುವ ಎಷ್ಟನೇ ಕಾರು, ನೀವು ಆಯಾ ದೇಶಗಳಲ್ಲಿ ಉಳಿದುಕೊಳ್ಳುವ ಹೋಟೆಲ್ ಯಾವುದು, ಆ ಹೋಟೆಲ್್ನಲ್ಲಿ ನಿಮ್ಮ ರೂಮ್ ನಂಬರ್ ಏನು, ವಿಮಾನದಲ್ಲಿ ನಿಮ್ಮ ಸೀಟ್ ನಂಬರ್ ಏನು, ಭಾರತೀಯ ದೂತವಾಸ ಕಚೇರಿಯ ವಿಳಾಸ, ಸಂಪರ್ಕ ಅಧಿಕಾರಿ, ಫೋನ್ ನಂಬರ್ ವಿವರಗಳೇನು, ಲಗೇಜ್ ಕಳಿಸುವ ವಿಧಾನ, ಆಯಾ ದೇಶಗಳಲ್ಲಿನ ಹವಾಮಾನ, ಮೊಬೈಲ್ ಛಾರ್ಜ್ ಮಾಡುವಾಗ ಎಷ್ಟು ವೋಲ್ಟಿನ ಪ್ಲಗ್ ಬಳಸಬೇಕು, ಸ್ಥಳೀಯ ಕರೆನ್ಸಿ ವಿವರ, ಮೀಡಿಯಾ ಕಂಟ್ರೋಲ್ ರೂಮ್ ವಿವರ, ಪ್ರಧಾನಿ ಸೆಕ್ಯುರಿಟಿ ಅಧಿಕಾರಿಗಳೆಲ್ಲರ ಹೆಸರು, ಫೋನ್ ನಂಬರ್… ಹೀಗೆ ಪ್ರತಿಯೊಂದು ಸಣ್ಣ ಪುಟ್ಟ, ಎಲ್ಲ ವಿವರಗಳೂ ಇರುವ ಹೊತ್ತಗೆಯನ್ನೇ ಕೊಡುತ್ತಾರೆ.
ಇದನ್ನು ರೂಪಿಸಲು ಅವರಿಗೆ ಏನಿಲ್ಲವೆಂದರೂ ಕನಿಷ್ಠ ಎರಡು ತಿಂಗಳಾದರೂ ಹಿಡಿಯಬಹುದು. ಈ ಮಾಹಿತಿ ಕೋಶದಲ್ಲಿ ಪ್ರಧಾನಿ ಜತೆ ಬರುವ ಎಲ್ಲರ ವಿವರಗಳೂ ಇರುತ್ತವೆ. ಪ್ರಧಾನಿಯವರ ಅಡುಗೆಭಟ್ಟ, ಬ್ಯಾಗ್್ಗಳನ್ನು ನೋಡಿಕೊಳ್ಳುವವರು, ಪ್ರಧಾನಿ ಕುಟುಂಬ ಸದಸ್ಯರ ಸಹಾಯಕರು.. ಹೀಗೆ ಎಲ್ಲರ ಮಾಹಿತಿಯೂ ಇರುತ್ತವೆ. ವಿಶೇಷ ಅಂದ್ರೆ ಈ ಹೊತ್ತಗೆಯಲ್ಲಿ ವಿಮಾನದ ಆಗಮನ-ನಿರ್ಗಮನ ವೇಳೆ ನೀಡುತ್ತಾರಲ್ಲ, ಅದರಲ್ಲಿ ಸ್ವಲ್ಪವೂ ಏರು-ಪೇರು ಆಗುವುದಿಲ್ಲ. ಎಲ್ಲವೂ ನಿಖರ, ಕರಾರುವಾಕ್ಕು.
ಪ್ರಧಾನಿಯವರ ಉನ್ನತ ನಿಯೋಗದಲ್ಲಿರುವ ಪ್ರತಿಯೊಬ್ಬರ ಪಾತ್ರವೇನು, ಅವರ ಸಂಪರ್ಕ, ಆಯಾ ದೇಶಗಳಿಗೆ ಹೋದಾಗ ಅವರ ವಾಸ್ತವ್ಯ ವಿವರಗಳೆಲ್ಲವೂ ಆ ಪುಸ್ತಕದಲ್ಲಿ ಲಭ್ಯ. ಇದನ್ನು ನೋಡಿದಾಗಲೇ ಗೊತ್ತಾಗಿದ್ದು ನಾವು ಹೊರಟ ವಿಮಾನದಲ್ಲಿ ಇನ್ನೂರಕ್ಕೂ ಜಾಸ್ತಿ ಜನರಿದ್ದಾರೆ ಎಂಬುದು. ಪ್ರಧಾನಿಯವರು ಯಾವುದೇ ದೇಶಕ್ಕೆ ಹೋಗಲಿ, ಇಷ್ಟು ವ್ಯವಸ್ಥೆ, ಪೂರ್ವತಯಾರಿ ಆಗಲೇಬೇಕು. ಇದರಲ್ಲಿ ಸ್ವಲ್ಪವೂ ಕೊರತೆಯಾಗುವಂತಿಲ್ಲ, ರಾಜಿಯೂ ಆಗುವಂತಿಲ್ಲ.
ಹಾಗೆ ನೋಡಿದರೆ, ಪ್ರಧಾನಿಯವರ ವಿದೇಶ ಪ್ರಯಾಣದ ತಯಾರಿ ತೊಂಬತ್ತು ದಿನಗಳ ಹಿಂದಿನಿಂದ ಆರಂಭವಾಗುತ್ತದೆ. ಮೂರು ವಾರಗಳಿರುವಾಗ ಅವರು ಪ್ರಯಾಣ ಮಾಡಲಿರುವ ವಿಮಾನವನ್ನು ಅವರ ಭದ್ರತೆಯ ಜವಾಬ್ದಾರಿ ಹೊತ್ತ ಎಸ್್ಪಿಜಿಯವರು ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತಾರೆ. ವಿಮಾನದಲ್ಲಿನ ಆಸನ ವ್ಯವಸ್ಥೆಯನ್ನು ತಮಗೆ ಬೇಕಾದಂತೆ ರೂಪಿಸುತ್ತಾರೆ. ಪ್ರಧಾನಿಯವರ ಕಾರ್ಯಕ್ಷೇತ್ರವನ್ನು ನಿಗದಿಪಡಿಸಿ ಅದನ್ನು Restricted ಪ್ರದೇಶ ಎಂದು ಘೋಷಿಸುತ್ತಾರೆ. ಪ್ರಧಾನಿಯವರು ತಮ್ಮ ಕಚೇರಿಯಲ್ಲಿದ್ದಾಗ ಹೇಗೆ ಕೆಲಸ-ಕಾರ್ಯ ನಿರ್ವಹಿಸುತ್ತಾರೋ ಅದೇ ರೀತಿಯಲ್ಲಿ ವಿಮಾನದಲ್ಲೂ ತಮ್ಮ ದೈನಂದಿನ ಕಚೇರಿ ಕೆಲಸ ನಿರ್ವಹಿಸುವ ಅನುಕೂಲಕ್ಕೆ ಅವರ ಕಾರ್ಯಾಲಯವೂ ಸಿದ್ಧಗೊಳ್ಳುತ್ತದೆ. ಸಿಬ್ಬಂದಿ ವರ್ಗವೆಲ್ಲ ಅವರ ಜತೆಯೇ ನಿಯೋಗದಲ್ಲಿರುತ್ತದೆ. ಎಂಟು ದಿನ ದೇಶದಿಂದ ಹೊರಗಿದ್ದರೂ ಪ್ರಧಾನಿ ಕಾರ್ಯಾಲಯ (ಪಿಎಂಒ) ಮಾತ್ರ ಎಂದಿನಂತೆ ಕೆಲಸ ಮಾಡುತ್ತದೆ, ವಿಮಾನದಲ್ಲಿ. ಪ್ರಧಾನಿಯವರು ತಮ್ಮ ಕಾರ್ಯದರ್ಶಿ, ಸಹಾಯಕರು, ಸಲಹೆಗಾರರ ಜತೆ ಕಾಲಕಾಲಕ್ಕೆ ವಿಮಾನದಲ್ಲಿ ಸಮಾಲೋಚನೆ ನಡೆಸುತ್ತಿರುತ್ತಾರೆ. ಒಂದು ರೀತಿಯಲ್ಲಿ ಅವರ ವಿಮಾನ ಅಂದ್ರೆ ಹಾರಾಡುವ ಪ್ರಧಾನಿ ಕಾರ್ಯಾಲಯವೇ!
ವಿಮಾನದಲ್ಲಿ ವ್ಯವಸ್ಥೆ, ಆತಿಥ್ಯಕ್ಕೆ ಕೊರತೆಯಿರುವುದಿಲ್ಲ. ಊಟ- ತಿಂಡಿ, ಪೇಯ… ಇವ್ಯಾವುದಕ್ಕೂ ದಾಕ್ಷಿಣ್ಯ ಮಾಡಿಕೊಳ್ಳಬೇಕಿಲ್ಲ. ಈ ಪ್ರವಾಸಕ್ಕೆಂದೇ ಆಯ್ದ ಗಗನಸಖಿಯರು ನಿಯೋಗದ ಪ್ರತಿ ಸದಸ್ಯರ ಆತಿಥ್ಯಕ್ಕೆ ವಿಶೇಷ ಗಮನ ಹರಿಸುತ್ತಾರೆ. ಊಟ, ತಿಂಡಿ ವಿಚಾರದಲ್ಲಿ ನಿಮ್ಮ ಮನೆಯಲ್ಲೂ ಅಷ್ಟು ಬಿಂದಾಸ್ ಆಗಿರಲಿಕ್ಕಿಲ್ಲ. ಅಂಥ ವೈವಿಧ್ಯಮಯ ಆಹಾರ ಪದಾರ್ಥ, ಖಾದ್ಯ, ತಿಂಡಿ-ತಿನಿಸು, ಹಣ್ಣುಹಂಪಲು, ಐಸ್್ಕ್ರೀಮ್್ಗಳಿರುತ್ತವೆ. ಓದಲು ನೂರಾರು ಮ್ಯಾಗಜಿನ್, ಪತ್ರಿಕೆಗಳು, ಪುಸ್ತಕಗಳಿರುತ್ತವೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗುವಾಗ ಅಧಿಕಾರಿಗಳು ವಿಮಾನದಲ್ಲೇ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಪೂರಕ ಮಾಹಿತಿ ಒದಗಿಸುತ್ತಾರೆ. ನಿಶ್ಚಿತ ಪ್ರಶ್ನೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ಚರ್ಚೆಗೆ ಸಿಗುತ್ತಾರೆ.
ಡಾ. ಕಲಾಂ ಪ್ರತಿಸಲ ವಿಮಾನ ಟೇಕ್ ಆಫ್ ಆದ ಅರ್ಧ ಗಂಟೆ ಬಳಿಕ ಪತ್ರಕರ್ತರು ಕುಳಿತಲ್ಲಿಯೇ ಬಂದು ಮಾತಾಡಿಸುತ್ತಿದ್ದರು. ಆಯಾ ದೇಶದಲ್ಲಿ ಏನೇನು ನೋಡಿದಿರಿ, ಯಾವುದು ಇಷ್ಟವಾಯಿತು, ಹೊಸಸಂಗತಿಗಳೇನನ್ನು ಕಂಡಿರಿ ಎಂದು ಪ್ರಶ್ನಿಸಿ ಮಾತಿಗೆ ಕುಳಿತುಕೊಳ್ಳುತ್ತಿದ್ದರು. ಆದರೆ ಡಾ. ಮನಮೋಹನಸಿಂಗ್ ಹಾಗಲ್ಲ. ಪತ್ರಕರ್ತರಿಂದ ಬಹಳ ದೂರ. ದಿಲ್ಲಿಯಲ್ಲಿ ವಿಮಾನ ಟೇಕಾಫ್ ಆಗುತ್ತಿದ್ದಂತೆ ವಿದೇಶಾಂಗ ಖಾತೆ ವಕ್ತಾರರು ಬಂದು, ನಾಲ್ಕು ದೇಶಗಳ ಪ್ರವಾಸ ಮುಗಿಸಿ ದಿಲ್ಲಿಗೆ ವಾಪಸಾಗುವ ಮಾರ್ಗದಲ್ಲಿ ಪ್ರಧಾನಿಯವರು ನಿಮ್ಮ ಜತೆ ಮಾತಾಡುತ್ತಾರೆ ಎಂದು ಹೇಳಿ ನಮ್ಮೆಲ್ಲರ ಉತ್ಸಾಹಕ್ಕೆ ತಣ್ಣೀರೆರಚಿದರು. ಕೊನೆಯ ದಿನ ಮಾಧ್ಯಮದವರೊಂದಿಗೆ ಮಾತಾಡುವಾಗಲೂ ಡಾ. ಮನಮೋಹನಸಿಂಗ್ ಅವರಿಗೆ ಏನೋ ಸಂಕೋಚ, ಏನೋ ಮೈಲಿಗೆ. ಎಲ್ಲ ಪ್ರಶ್ನೆಗಳಿಗೂ ಬಾಲಂಗೋಚಿ ಉತ್ತರ. ಎಲ್ಲೂ ಸಿಕ್ಕಿಬೀಳಬಾರದೆಂದು ಚುಟುಕು ಉತ್ತರ. ಇಡೀ ಪತ್ರಿಕಾಗೋಷ್ಠಿ 30 ನಿಮಿಷಗಳಲ್ಲಿ ಮುಗಿದು ಹೋಯಿತು. ಆನಂತರ ಎಲ್ಲ ಪತ್ರಕರ್ತರ ಹತ್ತಿರ ಬಂದು ಕೈ ಕುಲುಕಿದರೂ, ಏನೋ ವಿಚಿತ್ರ ಸಂಕೋಚ, ಬಿಗುಮಾನ. ಈ ಎಲ್ಲ ಕೈಂಕರ್ಯ ಮುಗಿಸಿ ಟಣ್ಣನೆ ಹೋಗಿ ಗೂಡು ಸೇರಿಕೊಂಡು ಬಿಟ್ಟರು! ಆದರೆ ಆ ಎಂಟು ದಿನಗಳ ಕಾಲ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗ ಅವರು ಮೆರೆದ ಲವಲವಿಕೆ, ಉತ್ಸಾಹ, ತಾದ್ಯಾತ್ಮತನ, ಆಸಕ್ತಿಯನ್ನು ಮೆಚ್ಚಲೇಬೇಕು.
ವಿದೇಶ ಪ್ರಯಾಣದ ಸಂಕಷ್ಟ, ತೊಂದರೆಗಳನ್ನು ಅನುಭವಿಸಿದವರಿಗೆ ಗೊತ್ತಾಗುತ್ತದೆ. ಉಳಿದವರಿಗೆ ಇವನೇನು ಛೋಡ್ತಾನಪ್ಪ ಎಂದು ಅನಿಸಬಹುದು. ಏನಪ್ಪಾ ಅಂದ್ರೆ, ಮೊದಲು ಹೊಸದಿಲ್ಲಿಯಿಂದ ಜರ್ಮನಿಯ ಫ್ರಾಂಕ್್ಫರ್ಟ್್ಗೆ ಹೋದೆವು. ಸುಮಾರು ಎಂಟೂವರೆ ಗಂಟೆ ವಿಮಾನ ಪಯಣ. ನಮಗೂ ಅವರಿಗೂ ನಾಲ್ಕು ಗಂಟೆ ಟೈಮ್ ಡಿಫರನ್ಸ್. ಒಂದು ರಾತ್ರಿ ಅಲ್ಲಿ ತಂಗಿ ಮರುದಿನ ಅಲ್ಲಿಂದ ಮೆಕ್ಸಿಕೋದ ಲಾಸ್್ಕಾಬೋಸ್್ಗೆ ಹೊರಟೆವು. ಹದಿಮೂರು ತಾಸುಗಳ ಪ್ರಯಾಣ. ಭಾರತಕ್ಕೂ ಅಲ್ಲಿಗೂ ಹತ್ತೂವರೆ ಗಂಟೆಗಳ ಸಮಯ ವ್ಯತ್ಯಾಸ. ಈ ಹದಿಮೂರು ತಾಸುಗಳಲ್ಲಿ ಎರಡು ಸಲ ಊಟ, ಒಂದು ಉಪಾಹಾರ, ಒಂದು ಲಘು ಉಪಾಹಾರ. ಹದಿಮೂರು ತಾಸು ಒಂದೆಡೆ ಕುಳಿತುಕೊಳ್ಳುವುದಿದೆಯಲ್ಲ ಅದು ದೊಡ್ಡ ಶಿಕ್ಷೆ. ವಿಮಾನ ಹಾರುತ್ತಿದೆಯೋ, ನಿಂತಿದೆಯೋ ಎಂಬುದೂ ಗೊತ್ತಾಗುವುದಿಲ್ಲ. ಲಾಸ್್ಕಾಬೋಸ್್ನಿಂದ ಬ್ರೆಜಿಲ್್ನ ರಿಯೋ ಡಿ ಜನೈರೋಕ್ಕೆ ಸುಮಾರು ಹತ್ತೂವರೆ ಗಂಟೆಗಳ ಪ್ರಯಾಣ. ಟೈಮ್ ಡಿಫರೆನ್ಸ್ ಎಂಟೂವರೆ ಗಂಟೆ. ಅಲ್ಲಿ ಎರಡು ದಿನ ಉಳಿದು, ಮುಂದಿನ ಪಯಣ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾಕ್ಕೆ. ರಿಯೋದಿಂದ ಪ್ರಿಟೋರಿಯಾಕ್ಕೆ ಸುಮಾರು ಹತ್ತು ಗಂಟೆಗಳ ವಿಮಾನ ಹಾರಾಟ. ಅಲ್ಲಿ ಒಂದು ದಿನ ಉಳಿದು, ಮಾರನೇ ದಿನ ಅಲ್ಲಿಂದ ಹೊಸದಿಲ್ಲಿಗೆ ಹತ್ತು ತಾಸು ಪ್ರಯಾಣ.
ಅಂದರೆ ಆ ಎಂಟು ದಿನಗಳಲ್ಲಿ ನಾನು 52 ಗಂಟೆ ವಿಮಾನದಲ್ಲಿಯೇ ಕಳೆದಿದ್ದೆ. ಈ ಅವಧಿಯಲ್ಲಿ ನಾಲ್ಕು ದೇಶ ಹಾಗೂ ಮೂರು ಖಂಡ (ಯೂರೋಪ್, ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾ) ಗಳಿಗೆ ಭೇಟಿ ನೀಡಿದ್ದೆ. ಸುಮಾರು 54 ಸಾವಿರ ಕಿಲೋಮೀಟರ್ ದೂರ ಕ್ರಮಿಸಿದ್ದೆ! ರಾತ್ರಿ ಯಾವುದು, ಹಗಲು ಯಾವುದು ಎಂಬುದು ಗೊತ್ತಾಗುತ್ತಿರಲಿಲ್ಲ. ಗಗನಸಖಿ ಊಟದ ತಳ್ಳುಗಾಡಿಯನ್ನು ತಂದಾಗ ಇದು ಬ್ರೇಕ್್ಫಾಸ್ಟಾ? ಲಂಚಾ? ಡಿನ್ನರಾ? ಎಂದು ಕೇಳುತ್ತಿದ್ದೆ. ಅದೂ ಗೊತ್ತಾಗುತ್ತಿರಲಿಲ್ಲ.
ವಿಮಾನದಲ್ಲಿ ಎಷ್ಟೂಂತ ಸ್ನೇಹಿತರು, ಅಧಿಕಾರಿಗಳ ಜತೆ ಮಾತಾಡುವುದು? ಎಷ್ಟೂಂತ ಊಟ ಮಾಡೋದು? ಎಷ್ಟೂಂತ ನಿದ್ದೆ ಮಾಡೋದು? ಸಮಯದ ವ್ಯತ್ಯಾಸದಿಂದ ತಕ್ಷಣ ನಿದ್ದೆ ಬರುತ್ತಿರಲಿಲ್ಲ. ಬಂದರೂ ತುಂಡು, ತುಂಡು ಗುಬ್ಬಿ ನಿದ್ದೆ. ವಿಮಾನದಲ್ಲಿದ್ದ ಐವತ್ತೆರಡು ಗಂಟೆಗಳಲ್ಲಿ ಒಂಭತ್ತು ಸಿನಿಮಾಗಳನ್ನು ನೋಡಿದೆ. ಎರಡು ಪುಸ್ತಕಗಳನ್ನು ಓದಿದೆ. ಅಜಮಾಸು ಐವತ್ತು ಹೊಸ ವ್ಯಕ್ತಿಗಳನ್ನು ಪರಿಚಯಿಸಿಕೊಂಡೆ. ಪ್ರಧಾನಿಯವರು ವಿದೇಶ ಪ್ರಯಾಣಕ್ಕೆ ಹೋದಾಗಲೆಲ್ಲ ಅವರ ಜತೆಯಲ್ಲೇ ಹೋಗುವ, ಅನೇಕ ವರ್ಷಗಳಿಂದ ಹಲವಾರು ಪ್ರಧಾನಿಗಳ ಜತೆ ಹೋಗಿ ಬಂದ ಐದಾರು ಅಧಿಕಾರಿಗಳು ಹೇಳುವ ಸ್ವಾರಸ್ಯಕರ ಕತೆ, ಹರಟೆಗಳನ್ನು ಕೇಳಿದೆ.
ಆ ಎಂಟು ದಿನಗಳಲ್ಲಿ ಸುಮಾರು 75ಕ್ಕೂ ಹೆಚ್ಚು ದೇಶಗಳ ಪ್ರಧಾನಿ, ರಾಷ್ಟ್ರಾಧ್ಯಕ್ಷರನ್ನು ಖುದ್ದಾಗಿ ನೋಡಿದೆ. ಜಿ-20, ಭೂ ಶೃಂಗ ಹಾಗೂ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ) ಈ ಮೂರು ಮಹತ್ವದ ಜಾಗತಿಕ ಶೃಂಗ ಸಭೆಗಳಿಗೆ ಪ್ರತ್ಯಕ್ಷದರ್ಶಿಯಾದೆ.
ದಿಲ್ಲಿಯಲ್ಲಿಳಿದು ಮರುದಿನ ಪುನಃ ವಿಮಾನವೇರಿ ಬೆಂಗಳೂರಿಗೆ ಬಂದು ತಲುಪಿದಾಗ, ಧಿಮ್ಮೆಂದು ತಿರುಗುತ್ತಿದ್ದ ತಲೆ ಸಹಜ ಸ್ಥಿತಿಗೆ ಬರಲು ಎರಡು ದಿನಗಳೇ ಬೇಕಾದವು.
ಹಿಂತಿರುಗಿ ನೋಡಿದರೆ ಅಷ್ಟೆಲ್ಲ ತಿರುಗಾಡಿ ಬಂದಿದ್ದು ನಾನೇನಾ ಅನ್ನಿಸುತ್ತಿದೆ. ಮುಂದಿನ ದೇಶಕ್ಕೆ ಹೋಗುವ ಮುನ್ನ ಖಾಲಿಯಾದ ನನ್ನ ಪಾಸ್್ಪೋರ್ಟಿಗೆ ಮೂರನೇ ಪುಸ್ತಕವನ್ನು ಸೇರಿಸಬೇಕಿದೆ.
- ವಿಶ್ವೇಶ್ವರ ಭಟ್
sir
sir is super
`nimma videshi prayana varnisutta `kambalakke kattida ettina hage’ endu pada prayoga madiddiri. nanna anaubhavada prakara `kambalakke kattuvudu `ettalla’ badalagi `kona’ allave?
Sir,
Please write ‘column’ or book about your experiences of travelling with President of PM so that common people should realize that
how much responsibility these people carry on their shoulders, so that they should vote at least right person.
it’s super
ಈ ಲೇಖನ ಅಷ್ಟಾಗ ಹಿಡಿಸಿಲಿಲ್ಲ. ಇದರಲ್ಲಿ ತಮ್ಮ ಕತೆಯೇ ಹೆಚ್ಚು ಎಂಬಂತೆ ಕಾಣಿಸಿತು.
sir nimma baraha andare nanage bahalla esta sir
Sir,
Nimma pravaasada anubhavavannu nammondinge hanchikonDaddake tamage vandanegaLu.. mundina dinagaLalli innu hecchina pravaasada avakaashagaLu tamage sigali embude aashaya.. tamage mathu tamma prayatnagaLige shubhavaagali
Hi,
Nothing seems special of whole your article. Simply trying to pull about yourself.
in this article we knew about difference betweet Dr .A P J and manmohan
EE lekhana odovaga nivu kalam sir jote hodaga bareda lekhana ne nenapige barutittu
lekhana chennagide sir… nimma videsha prayana da anubhavagalu nijakku romanchana.
ದೇಶ ಸುತ್ತಬೇಕು , ಕೋಶ ಓದಬೇಕು ಅನ್ನೋದನ್ನ ನೀವು ಜೀವನ ಪೂರ್ತಿ ಮಾಡ್ತಾನೆ ಇರಿ ಸರ್ ! ಇಂಥ ಯೋಗ ಎಷ್ಟು ಜನರಿಗೆ ತಾನೇ ಸಿಗುತ್ತೆ ಹೇಳಿ ?
U ARE GREAT AND I DO NOT SAY LUCKY…..
YOU ARE A MODEL JOURNALIST