ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಗಾಂಧೀಜಿ ಇಂಟರನೆಟ್ ಯುಗದ ಪ್ರವರ್ತಕರಾ?

ಸುಮಾರು ಆರು ತಿಂಗಳ ಹಿಂದೆ, ಹಿರಿಯ ಆಪ್ತ ಸ್ನೇಹಿತರಾದ ಸುಧೀಂದ್ರ ಕುಲಕರ್ಣಿಯವರು ತಾವು ಬರೆದ ಪುಸ್ತಕದ ಹಸ್ತಪ್ರತಿಯನ್ನು ಓದಲು ಕೊಟ್ಟಿದ್ದರು. ಬೇರೆ ಓದಿನ ತೆಕ್ಕೆಯಲ್ಲಿದ್ದುದರಿಂದ ಅದನ್ನು ಓದಲು ಆಗಿರಲಿಲ್ಲ. ಅದಾಗಿ ಎರಡು ತಿಂಗಳ ನಂತರ ಅವರು ಬೆಂಗಳೂರಿಗೆ ಬಂದಾಗ ತಮ್ಮ ಪುಸ್ತಕದ ಸಾರ, ಸರಕಿನ ಸಾರಾಂಶವನ್ನು ಹೇಳಿದಾಗ ಅದನ್ನು ಓದಬೇಕೆಂಬ ತವಕ ಜಾಸ್ತಿಯಾಯಿತು. ಸುಮಾರು 725 ಪುಟಗಳ ಈ ಕೃತಿಯನ್ನು ಓದಿಮುಗಿಸುವುದಕ್ಕೆ ನನಗೆ ಎರಡು ತಿಂಗಳುಗಳೇ ಹಿಡಿದವು. ಅಂದಹಾಗೆ ಈ ಕೃತಿಯ ಹೆಸರು Music of the Spinning Wheel : Mahatma Gandhi’s Manifesto for the Internet Age. ಒಂದು ರೀತಿಯಲ್ಲಿ ಇದೊಂದು ಸಂಶೋಧನಾತ್ಮಕ ಕೃತಿ. highly intellectual ಕೃತಿ.

ನಿಮಗೆ ಮೊದಲು ಸುಧೀಂದ್ರ ಕುಲಕರ್ಣಿಯವರ ಬಗ್ಗೆ ಹೇಳಬೇಕು. ಅವರು ಅಪ್ಪಟ ಕನ್ನಡಿಗರು. ಅನೇಕ ವರ್ಷಗಳಿಂದ ಅಧ್ಯಯನ, ಉದ್ಯೋಗಕ್ಕಾಗಿ ರಾಜ್ಯದಿಂದ ಹೊರಗಿದ್ದರೂ, ಸಂವಹನಕ್ಕಾಗಿ ಇಂಗ್ಲಿಷನ್ನು ಬಳಸುತ್ತಿದ್ದರೂ, ಕನ್ನಡವನ್ನು ಅಷ್ಟೇ ಪ್ರೀತಿ, ಕಾಳಜಿಯಿಂದ ಉಳಿಸಿಕೊಂಡಿದ್ದಾರೆ. ಮೂರು ದಶಕಗಳ ಕಾಲ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿದ್ದರೂ ಅವರ ಕನ್ನಡ ಎಷ್ಟೋ ಬೆಂಗಳೂರಿಗರ ಕನ್ನಡಕ್ಕಿಂತ ಸ್ವಚ್ಛ ಹಾಗೂ ಪರಿಶುದ್ಧವಾಗಿದೆ. ಒಂದೇ ಒಂದು ಇಂಗ್ಲಿಷ್ ಪದ ಬೆರಕೆ ಮಾಡದೇ ಕನ್ನಡದಲ್ಲಿ ಅವರು ಮಾತಾಡಬಲ್ಲರು, ಬರೆಯಬಲ್ಲರು. ಮೂಲತಃ ಅಥಣಿಯವರು.ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ಇಬ್ಬರು ಕನ್ನಡಿಗರು ತಮಗೆ ಹಾಗೂ ತಾಯ್ನಾಡಿಗೆ ಹೆಸರು, ಅಭಿಮಾನ ಮೂಡುವಂತೆ ಕೆಲಸ ಮಾಡಿದ್ದಾರೆ. ಆ ಪೈಕಿ ಮೊದಲನೆಯವರು ಎಚ್.ವೈ. ಶಾರದಾಪ್ರಸಾದ್ ಹಾಗೂ ಎರಡನೆಯವರು ಸುಧೀಂದ್ರ ಕುಲಕರ್ಣಿ.

ಅಂದ ಹಾಗೆ ಕುಲಕರ್ಣಿಯವರು ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ (1998-2004) ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದರು. ವಾಜಪೇಯಿಯವರು ಜಾರಿಗೊಳಿಸಿದ, ರೂಪಿಸಿದ ಹಲವಾರು ಯೋಜನೆ, ನೀತಿಗಳ ಹಿಂದೆ ಸುಧೀಂದ್ರ ಕುಲಕರ್ಣಿಯವರ ಶ್ರಮ, ಯೋಚನೆಗಳು ಮೇಳೈಸಿವೆ. ಆ ಪೈಕಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಹೊಸ ಟೆಲಿಕಾಂ ನೀತಿ, ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನಾ, ಪ್ರಧಾನಮಂತ್ರಿಗಳ ಮಾಹಿತಿ ತಂತ್ರಜ್ಞಾನ ಕಾರ್ಯಪಡೆಯ ರಚನೆಯನ್ನು ಉದಹರಿಸಬಹುದು. ವಾಜಪೇಯಿಯವರಿಗೆ ಪರಮಾಪ್ತರಾಗಿದ್ದ ಕುಲಕರ್ಣಿಯವರು ಪ್ರಧಾನಿಗಳ ಪ್ರಮುಖ ಭಾಷಣಗಳನ್ನು ಸಹ ಸಿದ್ಧಪಡಿಸುತ್ತಿದ್ದರು. ವಾಜಪೇಯಿ ಅಂತರಂಗ ವಲಯದ ಪ್ರಮುಖ ಸದಸ್ಯರಲ್ಲೊಬ್ಬರಾಗಿದ್ದ ಕುಲಕರ್ಣಿಯವರು ಅಧಿಕಾರ ಮೂಡಿಸುವ ಕೋಡುಗಳನ್ನು ಪಕ್ಕಕ್ಕಿಟ್ಟು ಕೆಲಸ ಮಾಡಿದವರು. ವಾಜಪೇಯಿಯವರ ಅನೇಕ ಹೊಸ ಯೋಚನೆ, ಯೋಜನೆಗಳ ಹಿಂದೆ ಕುಲಕರ್ಣಿಯವರಿದ್ದರು. ಅಷ್ಟರಮಟ್ಟಿಗೆ ವಾಜಪೇಯಿ ಇವರ ಮೇಲೆ ಅವಲಂಬಿತರಾಗಿದ್ದರು. ಅಧಿಕಾರದಲ್ಲಿರುವಷ್ಟು ದಿನ ಒಂದೂ ಕಪ್ಪುಚುಕ್ಕೆಯನ್ನು ಅಂಟಿಸಿಕೊಳ್ಳದೇ ಸ್ವಚ್ಛವಾಗಿಯೇ ಇಳಿದುಬಂದವರು.

ಅದಾದ ಬಳಿಕ ಎಲ್.ಕೆ. ಆಡ್ವಾಣಿಯವರಿಗೆ ಕಾರ್ಯದರ್ಶಿಯಾಗಿದ್ದರು. ಜಿನ್ನಾ ವಿವಾದ ಉದ್ಭವಿಸಿದಾಗ ಅನಗತ್ಯವಾಗಿ ಕುಲಕರ್ಣಿಯವರ ಹೆಸರನ್ನೂ ಎಳೆದುತಂದಾಗ ಅತ್ಯಂತ ಬೇಸರದಿಂದ ಪಕ್ಷದ ಜವಾಬ್ದಾರಿ ತೊರೆದು, ಈ ಪುಸ್ತಕದ ಕೆಲಸದಲ್ಲಿ ತೊಡಗಿಸಿಕೊಂಡರು. ಕ್ರಿಯಾಶೀಲ, ಸೃಜಲಶೀಲ ಮನಸ್ಸು ಎಲ್ಲಿದ್ದರೂ ಸೃಷ್ಟಿಕಾರ್ಯದಲ್ಲಿ ತೊಡಗಿರುತ್ತದೆ ಎಂಬುದಕ್ಕೆ ಸುಧೀಂದ್ರ ಕುಲಕರ್ಣಿಯವರೇ ಸಾಕ್ಷಿ.

ಮುಂಬೈ ಐಐಟಿ ಪದವೀಧರರಾದ ಕುಲಕರ್ಣಿಯವರು ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸಿಸ್ಟ್)ದ ಸದಸ್ಯರಾಗಿದ್ದರು. ಕಟ್ಟರ್ ಕಮ್ಯುನಿಷ್ಟ್ ಕುಲಕರ್ಣಿಯವರು 1996ರಲ್ಲಿ ಬಿಜೆಪಿ ಸೇರಿದ್ದು ಅವರ ಜೀವನದ ಮಹತ್ವದ ತಿರುವು. ಐಐಟಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಪ್ರವೇಶಿಸಿದ ಕುಲಕರ್ಣಿ, ರುಸ್ಸಿ ಕರಂಜಿಯಾ ಸಂಪಾದಕತ್ವದ”ಬ್ಲಿಟ್ಜ್್’ ಪತ್ರಿಕೆ ಸೇರಿದರು. ಆನಂತರ ಅವರು ಅದೇ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗುವಷ್ಟು ಎತ್ತರಕ್ಕೆ ಬೆಳೆದರು.
ಕುಲಕರ್ಣಿಯವರು ಪ್ರಧಾನಿ ಕಾರ್ಯಾಲಯದಲ್ಲಿ ಇದ್ದಾಗಿನಿಂದಲೂ ನನಗೆ ಪರಿಚಿತರು. ಮಂತ್ರಿಗಳು, ಗಣ್ಯರಿಂದ ಸದಾ ಅವರ ಕೋಣೆ ತುಂಬಿರುತ್ತಿದ್ದರೂ, ಒಂದು ಕಾಫಿ, ತುಸು ಹೊತ್ತು ಹರಟೆ, ಉಭಯಕುಶಲೋಪರಿಗೆ ಯಾವತ್ತೂ ಕೊರತೆಯಿರಲಿಲ್ಲ. ಕುಲಕರ್ಣಿಯವರು ತೀರಾ ಆಪ್ತರಾಗಿದ್ದು ನಾನು ಆಡ್ವಾಣಿಯವರ My Country My Life (ನನ್ನ ದೇಶ ನನ್ನ ಜೀವನ) ಆತ್ಮಕತೆಯನ್ನು ಕನ್ನಡದಲ್ಲಿ ಅನುವಾದಿಸಲು ತೊಡಗಿದಾಗ. ಸುಮಾರು ಇಪ್ಪತ್ತು ದಿನ ಇಡೀ ಪುಸ್ತಕದ ಕರಡು ತಿದ್ದುವ ಕೆಲಸದಲ್ಲಿ ಅವರು ಮಗ್ನರಾಗಿದ್ದರು. ಆಗಲೇ ನನಗೆ ಅವರ ಅಂತರಂಗದೊಳಗಿನ ಗೆಳೆಯನ ಪರಿಚಯವಾಗಿದ್ದು. ಅವರ ಕೆಲಸ, ವಿಚಾರ ಹಾಗೂ ಆಪ್ತತೆಯಿಂದಲೇ ಆತ್ಮೀಯರಾಗಿದ್ದು.

ಮಹಾತ್ಮ ಗಾಂಧೀಜಿಯವರ ಕುರಿತು ಅಸಂಖ್ಯ ಕೃತಿಗಳಿವೆ. ದೇಶ-ವಿದೇಶಗಳ ಸಾವಿರಾರು ಲೇಖಕರು, ಚಿಂತಕರು, ಬುದ್ಧಿಜೀವಿಗಳು, ಸಂಶೋಧಕರು ಗಾಂಧೀಜಿಯನ್ನು ವಿಶ್ಲೇಷಿಸಿದ್ದಾರೆ, ವಿಮರ್ಶಿಸಿದ್ದಾರೆ. ಗಾಂಧೀಜಿ ವಿಚಾರಧಾರೆಯನ್ನು ನಾನಾ ರೀತಿಯಲ್ಲಿ ಅವಲೋಕಿಸಿದ್ದಾರೆ. ಗಾಂಧೀಜಿಯನ್ನು ಇಂಥ ಬೌದ್ಧಿಕ ಒರೆಗಲ್ಲಿಗೆ ಹಚ್ಚಿದಾಗ ಅವರು ಇನ್ನಷ್ಟು ಸ್ಪಷ್ಟವಾಗುತ್ತಾ, ತಿಳಿಯಾಗುತ್ತಾ, ಹೆಚ್ಚು ಹೆಚ್ಚು ಅರ್ಥವಾಗುತ್ತಾ ಕೊನೆಗೆ ನಿಗೂಢವಾಗುತ್ತಾ ಹೋಗುತ್ತಾರೆ. ಅದಕ್ಕಾಗಿಯೇ ಅವರ ವಿಚಾರ, ಸಿದ್ಧಾಂತ, ಪ್ರತಿಪಾದನೆ ಕಾಲಕಾಲಕ್ಕೆ ವಿಮರ್ಶೆಗೊಳಗಾಗುತ್ತಾ ತನ್ನ ಪ್ರಸ್ತುತತೆಯನ್ನು ಸಾರಿ ಹೇಳುತ್ತಿದೆ. ಈ ಕಾರಣದಿಂದ ಗಾಂಧೀಜಿ ಎಲ್ಲ ಕಾಲಘಟ್ಟಗಳಲ್ಲೂ ತಮ್ಮ ಸಮಕಾಲೀನತೆಯ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಾರೆ. ಆದರೆ ಗಾಂಧೀಜಿಯವರ ಸಿದ್ಧಾಂತ ಪ್ರಣಾಳಿಕೆ ಇಂಟರ್್ನೆಟ್ ಯುಗಕ್ಕೆ ಮುನ್ನುಡಿಯಾಗಿದೆ ಎಂಬ ಯೋಚನೆ ಸುಧೀಂದ್ರ ಕುಲಕರ್ಣಿಯವರ ಪುಸ್ತಕವನ್ನು ಓದುವತನಕ ಮನಸ್ಸಿನಲ್ಲಿ ಹಾದುಹೋಗಿರಲಿಲ್ಲ. ಎಲ್ಲಿಯ ಗಾಂಧೀಜಿ, ಎಲ್ಲಿಯ ಚರಕ, ಎಲ್ಲಿಯ ಇಂಟರ್್ನೆಟ್? ಒಂದಕ್ಕೊಂದು ಸಂಬಂಧವೂ ಇಲ್ಲ, ಸಂಪರ್ಕವೂ ಇಲ್ಲ. ಅನೇಕರಿಗೆ ಗಾಂಧೀಜಿ ಹಾಗೂ ಇಂಟರ್್ನೆಟ್್ಗೆ ಏನಾದರೂ ಸಂಬಂಧವಿದೆಯೆಂದು ಹೇಳಿದರೆ ನಂಬುವುದು ಕಷ್ಟ. ಇನ್ನು ಅರಗಿಸಿಕೊಳ್ಳುವುದಂತೂ ಇನ್ನೂ ಕಷ್ಟ. ಅಂಥವರ ಪಾಲಿಗೆ ಗಾಂಧೀಜಿ ಹಾಗೂ ಇಂಟರ್್ನೆಟ್ ಪರಸ್ಪರ ವಿರುದ್ಧಾರ್ಥಕ ಪದಗಳು.

ಹೀಗಿರುವಾಗ ಗಾಂಧೀಜಿಗೂ ಇಂಟರ್್ನೆಟ್ ಯುಗಕ್ಕೂ ಸಂಬಂಧ ಕಲ್ಪಿಸುವುದು ಊಹೆಗೂ ನಿಲುಕದ್ದು. ಈ ಸಾಮಾನ್ಯ ಗ್ರಹಿಕೆಯನ್ನು ಸುಳ್ಳಾಗಿಸಿ ಗಾಂಧೀಜಿ ಪ್ರಣೀತ ಸಿದ್ಧಾಂತ ಇಂಟರ್್ನೆಟ್್ನಂಥ ಆಧುನಿಕ ಹಾಗೂ ಡೆಮಾಕ್ರೆಟಿಕ್ ಯುಗಕ್ಕೆ ನಾಂದಿ ಹಾಕಿದೆಯೆಂಬ ಸಂಗತಿಯನ್ನು ಹಲವು ನಿದರ್ಶನಗಳ ಮೂಲಕ ಸಾಬೀತುಪಡಿಸಿರುವುದು ಅತ್ಯಂತ ಕುತೂಹಲ ಹುಟ್ಟಿಸುವ ಅಂಶವಷ್ಟೇ ಅಲ್ಲ, ಗಾಂಧೀಜಿ ವಿಚಾರಧಾರೆಯ ಪ್ರಸ್ತುತತೆಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿರುವುದು ಈ ಕೃತಿಯ ಹೆಚ್ಚುಗಾರಿಕೆ. ಈ ಮೂಲಕ ಗಾಂಧೀಜಿ ಮತ್ತಷ್ಟು elevent ಆಗಿದ್ದಾರೆ. ಇದು ಗಾಂಧೀಜಿ ವ್ಯಕ್ತಿತ್ವದ ಅಗಾಧತೆಯ ಅನಾವರಣವೂ ಹೌದು.

ತಮ್ಮ ರಾಜಕೀಯ, ಸಾಮಾಜಿಕ ಸಂದೇಶಗಳನ್ನು ಜನಮಾನಸಕ್ಕೆ ತಲುಪಿಸಿದ ಗಾಂಧೀಜಿ ಇಡೀ ಜಗತ್ತಿನ ಕಣ್ಣಿಗೆ ಮಹಾತ್ಮರಾದ ಚಮತ್ಕಾರ ಸಾಮಾನ್ಯರ ಅನುಭವಕ್ಕೂ ವೇದ್ಯವಾಗಿದೆ. ಅವರು ಅತ್ಯಂತ ಜಾಣ್ಮೆಯಿಂದ ತಮ್ಮ ಬದುಕು ಹಾಗೂ ಸಿದ್ಧಾಂತವನ್ನು ನೂಲನ್ನು ನೇಯುವ ಚರಕಕ್ಕೆ ಸಮೀಕರಿಸಿದರು. ಅದನ್ನು ಸಂಕೇತವನ್ನಾಗಷ್ಟೇ ಅಲ್ಲ, ಅಂತರ್ಗತವಾಗಿಯೂ ಬಳಸಿಕೊಂಡರು. ಈ ಸಾಮಾನ್ಯ ಯಂತ್ರದ ಮೂಲಕ ಅದೆಂಥ ಮ್ಯಾಜಿಕ್ ಮಾಡಿದರೆಂದರೆ, ಅದನ್ನು ದೇಶದ ಸ್ವಾತಂತ್ರ್ಯ ಚಳವಳಿಯ ಅಸ್ತ್ರವನ್ನಾಗಿ ದುಡಿಸಿಕೊಂಡು, ದೇಶವಾಸಿಗಳ ಬದುಕಿನ ಮೌಲ್ಯಗಳನ್ನು ಸಾರುವ ಬಿಂಬದಂತೆ ಸಾದರಪಡಿಸಿದರು. ಅಷ್ಟೇ ಅಲ್ಲ, ಸತ್ಯ, ಅಹಿಂಸೆ, ನೈತಿಕತೆ ಆಧರಿತ ಸ್ವಯಂ ಆಡಳಿತ, ನ್ಯಾಯ, ವಿಶ್ವಭ್ರಾತೃತ್ವ ಹಾಗೂ ಸುಸ್ಥಿರ ಅಭಿವೃದ್ಧಿಪ್ರೇರಿತ ವಿಚಾರವನ್ನು ಹೊಸ ಜಾಗತಿಕ ವ್ಯವಸ್ಥೆ ಮೂಡಲು ಬೇಕಾದ ಅಗತ್ಯ ಕ್ರಮದಂತೆ ಅವರು ಬಳಸಿಕೊಂಡರು. ಆದರೆ ವಿಪರ್ಯಾಸವೇನೆಂದರೆ, ಚರಕ ಈಗ ಮೂಲೆಗುಂಪಾಗಿದೆ. ಅದು ಸಾರುವ ಸಂದೇಶ ಎಂದಿಗಿಂತ ಪ್ರಸ್ತುತವಾಗಿರಬಹುದು. ಚರಕವನ್ನು ನೋಡಲು ಸಹ ಆಗದಂಥ ಅಧುನಿಕ ಜಗತ್ತಿನಲ್ಲಿದ್ದೇವೆ. ಹಾಗಾದರೆ ಒಂದು ಕಾಲದಲ್ಲಿ ಚರಕ ಮಾಡಿದಂಥ ಮ್ಯಾಜಿಕ್ಕನ್ನು ಬೇರೆ ಯಾವುದಾದರೂ ಹೊಸ ತಂತ್ರಜ್ಞಾನ ವಾಹಕವೇನಾದರೂ ಮಾಡುತ್ತಿದೆಯಾ?

ಹೌದು ಅಂತಾರೆ ಸುಧೀಂದ್ರ ಕುಲಕರ್ಣಿ.

ಅದುವೇ ಇಂಟರ್್ನೆಟ್! ಇಂದು ಇಂಟರ್್ನೆಟ್ ಹಾಗೂ ಹಲವು ಡಿಜಿಟಲ್ ತಂತ್ರಜ್ಞಾನ ಮಹಾತ್ಮಗಾಂಧಿ ಪ್ರತಿಪಾದಿಸಿದ ವಿಚಾರಗಳನ್ನು ಸಾಕ್ಷಾತ್ಕಾರಗೊಳಿಸುತ್ತಿವೆ ಎಂದು ಕುಲಕರ್ಣಿ ಪ್ರತಿಪಾದಿಸುತ್ತಾರೆ. ಹೀಗೆ ಹೇಳುತ್ತಾ ಗಾಂಧೀಜಿ ಅಧುನಿಕತೆ, ಆಧುನಿಕ ವಿಜ್ಞಾನ, ತಂತ್ರಜ್ಞಾನದ ವಿರೋಧಿಯಾಗಿದ್ದರು ಎಂಬ ತಪ್ಪು ಗ್ರಹಿಕೆಯನ್ನು ಹೊಡೆದುಹಾಕುತ್ತಾರೆ. ಸ್ವರಾಜ್ ಹಾಗೂ ಸತ್ಯಾಗ್ರಹವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮದುವೆ ಮಾಡಿದ್ದೇ ಆದರೆ, ಗಾಂಧೀಜಿ ಕಂಡ ಕನಸೇನಿದೆಯಲ್ಲ, ಸತ್ಯ ಮತ್ತು ಅಹಿಂಸೆಯ ಜಗತ್ತಿನ ಕಲ್ಪನೆಯನ್ನು ಸಾಕಾರಗೊಳಿಸುವುದು ಸಾಧ್ಯ ಎಂಬ ಅಂಶವನ್ನು ಪ್ರತಿಪಾದಿಸುತ್ತಾರೆ. ಡಿಜಿಟಲ್ ಜಗತ್ತಿನಲ್ಲಿರುವವರಿಗೆ”ಇಂಟರ್್ನೆಟ್ ಸತ್ಯಾಗ್ರಹಿ’ಗಳಾಗಿ ಎಂಬ ಕರೆಯನ್ನೂ ಕೊಡುತ್ತಾರೆ.

ಗಾಂಧೀಜಿ ಕುರಿತು ಪ್ರಕಟವಾದ ಅಸಂಖ್ಯ ಕೃತಿಗಳ ಪೈಕಿ ಕುಲಕರ್ಣಿಯವರ ಕೃತಿ ಎದ್ದುನಿಲ್ಲುವಂಥದ್ದು. ಗಾಂಧೀಜಿಯವರ ವಿಚಾರಗಳನ್ನು ಸಾರ್ವಕಾಲಿಕಗೊಳಿಸುವ ಸದಾಶಯ ಈ ಪುಸ್ತಕಕ್ಕಿದೆ. ಆಧುನಿಕ ಜಗತ್ತು ಗಾಂಧೀಜಿಯತ್ತ ಮತ್ತಷ್ಟು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ.

ಸುಧೀಂದ್ರ ಕುಲಕರ್ಣಿಯವರು ಈ ಕೃತಿಯಲ್ಲಿ ಒಂದೆಡೆ ಹೀಗೆ ಹೇಳುತ್ತಾರೆ ಃ

ಸತ್ಯ ಮತ್ತು ಅಹಿಂಸೆಯ ಅನ್ವೇಷಣೆಗೆ ಹೊರಟ ಗಾಂಧೀಜಿ ಅದೇ ಸಂದರ್ಭದಲ್ಲಿ ಸಾಮರಸ್ಯವೆಂಬ ಸ್ವರಮೇಳದ ಹಿಂದೆಯೂ ಹೊರಟರು ಅನ್ನಬಹುದು. ಸ್ವರಮೇಳ ಎಂಬ ಪದವನ್ನು ಇಲ್ಲಿ ಉದ್ದೇಶಪೂರ್ವಕವಾಗಿಯೇ ಬಳಸಲಾಗಿದೆ. ಬಹುಜನರ ಭಾಷೆಯಲ್ಲಿ ಸ್ವರಮೇಳ ಎಂಬುದಕ್ಕೆ ಸಂಗೀತ ಎಂದೇ ಅರ್ಥವಿದೆ. ಖಾದಿ ಮತ್ತು ಚರಕದ ಪ್ರಸ್ತಾಪ ಬಂದಾಗಲೆಲ್ಲ ತಮ್ಮ ಬರಹಗಳಲ್ಲಿ”ಮ್ಯೂಸಿಕ್ ಆಫ್್ದ ಸ್ಪಿನ್ನಿಂಗ್ ವೀಲ್್’ ಎಂಬ ಪದಗಳನ್ನು ಗಾಂಧೀಜಿಯವರು ಪದೇ ಪದೆ ಬಳಸಿದ್ದಾರೆ. ಗಾಂಧೀಜಿಯವರ ಬರಹಗಳನ್ನು ಓದಲು ಆರಂಭಿಸಿದ ಮೇಲೆ ಮ್ಯೂಸಿಕ್ ಆಫ್್ದ ಸ್ಪಿನ್ನಿಂಗ್ ವೀಲ್ ಎಂಬ ಪದ ಪ್ರಯೋಗವನ್ನು ಕಂಡು ನಾನು ಬೆರಗಾಗಿದ್ದೆ. ಈ ಮಾತುಗಳನ್ನು ಗಾಂಧೀಜಿಯವರು ಯಾವ ಅರ್ಥದಲ್ಲಿ ಬಳಸಿರಬಹುದು ಎಂದು ತಿಳಿಯುವ ಕುತೂಹಲ ಹೊಂದಿದ್ದೆ. ಗಾಂಧೀಜಿಯನ್ನು ಓದುತ್ತಾ, ಅರ್ಥಮಾಡಿಕೊಳ್ಳುತ್ತಾ ಹೋದಂತೆಲ್ಲ, ಶಾಂತಿಯ, ಮೌನದ ಸಂಕೇತವಾಗಿ ಚರಕವನ್ನು ಬಳಸಲು ಗಾಂಧೀಜಿ ಉದ್ದೇಶಿಸಿದ್ದಾರೆ ಎಂಬುದು ಅರಿವಿಗೆ ಬಂತು.

ನಿಜಕ್ಕಾದರೆ ನೂಲಲು ಆರಂಭಿಸಿದೊಡನೆ ಚರಕ ಸದ್ದು ಮಾಡಲು ಆರಂಭಿಸುತ್ತದೆ. ಹಾಗಿರುವಾಗ ಚರಕದಲ್ಲಿಯೂ ಮೌನವನ್ನು ಕಾಣಬಯಸಿದ ಗಾಂಧಿ ಅವಧೂತನಂತೆ ಕಾಣಿಸಿದ್ದು ಹೌದು. ಅದೇ ವೇಳೆಗೆ ಹೀಗೊಂದು ಯೋಚನೆ ಬಂತು. ಶಬ್ದದೊಳಗೂ ನಿಶ್ಯಬ್ದ ಬಯಸುವುದು ಯೋಗಿಗಳ ಲಕ್ಷಣ. ಹಾಗಾದರೆ ಗಾಂಧೀಜಿ ಒಬ್ಬರು ಯೋಗಿ ಇರಬಹುದೆ? ಇರಬಾರದೇಕೆ? ಜಪಾನ್್ನ ಝೆನ್ ಗುರುಗಳೂ ಹೀಗೆಯೇ ಸದ್ದು ಮಾಡುವ ವಸ್ತು ಹಾಗೂ ಸಂಗತಿಗಳನ್ನೇ ಮೌನಕ್ಕೂ ಸಂಕೇತವಾಗಿ ಬಳಸುತ್ತಿದ್ದರಂತೆ. ಗಾಂಧೀಜಿಯವರದೂ ಅದೇ ಹಾದಿಯಾಗಿತ್ತು. ಈ ಮಹಾತ್ಮನನ್ನು ಯೋಗಿ ಅನ್ನದಿರುವುದು ಹೇಗೆ? ಯೋಗಿ ಎಂದರೆ ಯಾರು ಎಂಬ ಪ್ರಶ್ನೆಗೆ, ಅಮೆರಿಕದ ಹೆಸರಾಂತ ಭೌತವಿಜ್ಞಾನಿ ಹಾಗೂ ಲೇಖಕ ಸಾಪ್ರಾ ಉತ್ತರಿಸುವುದು ಹೀಗೆ: ತನ್ನೊಳಗಿನ ಅಪೂರ್ವ ಶಕ್ತಿಯ ಬಗ್ಗೆ ಅರಿವು ಹೊಂದಿರುತ್ತಾನಲ್ಲಾ; ಅವನೇ ಯೋಗಿ. ಆತ ಯಾವಾಗಲೂ ದೇವರ ಅನುಗ್ರಹ ಹಾಗೂ ಪ್ರೀತಿಯನ್ನು ಬಯಸುತ್ತಾನೆ. ಉಳಿದೆಲ್ಲ ಸಂಗತಿಗಳಿಗಿಂತ ಆತನಿಗೆ, ಜೊತೆಗಿರುವವರ ಒಳಿತೇ ಮುಖ್ಯವಾಗಿರುತ್ತದೆ. ಇಂಥ ವ್ಯಕ್ತಿಗಳು ದೈವಶಕ್ತಿಯೊಂದಿಗೆ ಪ್ರಬಲ ಹಾಗೂ ಮಹತ್ತರ ಸಂಪರ್ಕವನ್ನು ಹೊಂದಿರುತ್ತಾರೆ… ಪ್ರಕೃತಿ ಹಾಗೂ ಜೀವವಿರುವ ಎಲ್ಲ ವಸ್ತುಗಳಲ್ಲಿಯೂ ಅವರು ದೇವರ ಇರುವಿಕೆಯನ್ನು ಕಾಣುತ್ತಾರೆ.

ಹೌದು. ಕಾಪ್ರಾ ವಿವರಿಸಿದ್ದಾನಲ್ಲ, ಅಂತೆಯೇ ಬದುಕಿದ್ದವರು ಗಾಂಧೀಜಿ. ಅವರು ಸದಾ ದೇವರಿಗೆ ಹತ್ತಿರದವರಾಗಿಯೇ ಇದ್ದವರು. ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಂಡರಲ್ಲ, ಆನಂತರದಲ್ಲಿ ಗಾಂಧೀಜಿ ವಾರದಲ್ಲಿ ಒಂದು ದಿನ ಮೌನವ್ರತ ಆಚರಿಸುವ ನಿರ್ಧಾರಕ್ಕೆ ಬಂದರು. ಅದಕ್ಕೆಂದೇ ಪ್ರತಿ ಸೋಮವಾರವನ್ನು ಮೀಸಲಿಟ್ಟರು. ಬಾಕಿ ದಿನಗಳಲ್ಲಿ ನೂಲಲು ಅವರಿಗೆ ಸಾಕಷ್ಟು ವೇಳೆ ಸಿಗುತ್ತಿರಲಿಲ್ಲ. ಆದರೆ ಸೋಮವಾರಗಳಂದು ಬಾಕಿ ಆರು ದಿನಗಳಲ್ಲಿ ನೂಲುತ್ತಿದ್ದರಲ್ಲ, ಅದಕ್ಕಿಂತ ಹೆಚ್ಚು ನೂಲುತ್ತಿದ್ದರು. ಇಡೀ ದಿನ ಮೌನವಾಗಿ ಕೂತಿರಬೇಕಲ್ಲ, ನಿಮಗೆ ಬೋರ್ ಆಗುವುದಿಲ್ಲವೆ ಎಂದು ಯಾರಾದರೂ ಪ್ರಶ್ನಿಸದರೆ, ನಾನು ಮೌನವಾಗಿರುತ್ತೇನೆ ನಿಜ. ಆದರೆ ನನ್ನ ಅಂತರಾತ್ಮ ಚರಕದ ಸದ್ದನ್ನು ತನ್ಮಯತೆಯಿಂದ ಆಲಿಸುತ್ತಿರುತ್ತದೆ. ಅದೇ ಸಂದರ್ಭದಲ್ಲಿ ಅದು ಮಧುರ ಸಂಗೀತವನ್ನು ಗುನುಗುತ್ತಲೇ ಇರುತ್ತದೆ ಅನ್ನುತ್ತಿದ್ದರು.

ನನ್ನ ಅಧ್ಯಯನದ ಅವಧಿಯಲ್ಲಿ ನಿಜಕ್ಕೂ ನನ್ನನ್ನು ಬೆರಗಾಗಿಸಿದ ಸಂಗತಿ ಏನೆಂದರೆ, ಡಿಜಿಟಲ್ ತಂತ್ರಜ್ಞಾನದಿಂದಲೇ ರೂಪುಗೊಂಡಿರುವ ಭವಿಷ್ಯಕ್ಕೆ ನೂಲುವ ಚರಕದ ಮೂಲಭೂತ ಸಿದ್ಧಾಂತದಲ್ಲಿಯೂ ಯಥಾರ್ಥತೆಯನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂಬುದು. ಇಂಥದೊಂದು ಸಾಧ್ಯತೆ ಹೇಗೆ ಉಂಟಾಯಿತು ಎಂಬುದೂ ಇಲ್ಲಿ ಮುಖ್ಯವಾಗುತ್ತದೆ. ಇಂಟರ್್ನೆಟ್ ಬರುವುದಕ್ಕೂ ಮುಂಚಿನ ಕಾಲಮಾನದಲ್ಲಿಯ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಗತಿಗಳು ವಿಜ್ಞಾನ ಹಾಗೂ ತಂತ್ರಜ್ಞಾನ ಬಳಕೆಗೆ ಹಾಗೂ ಅದರ ಪ್ರವರ್ಧಮಾನಕ್ಕೆ ಅನುವು ಮಾಡಿಕೊಟ್ಟವು. ಇದು ಇಂಟರ್್ನೆಟ್ ಯುಗದಲ್ಲಿ ಹೊಸದೊಂದು ಬದಲಾವಣೆಗೆ ನಾಂದಿಯಾಯಿತು.

ಈಗ ಪರಿಸ್ಥಿತಿ ಏನಾಗಿದೆಯೋ ನೋಡಿ; ಇಂಟರ್್ನೆಟ್ ಹಾಗೂ ಡಿಜಿಟಲ್ ತಂತ್ರಜ್ಞಾನವನ್ನು ಗುಡ್ಡೆ ಹಾಕಿಕೊಂಡಿರುವ ಹೊಸ ಜಾಗತಿಕ ಸಮುದಾಯ, ಜನಸಾಮಾನ್ಯರಿಗೆ ಜ್ಞಾನವೃದ್ಧಿಯ ಮತ್ತು ಪ್ರಾಯೋಗಿಕವಾದ ಬೌದ್ಧಿಕ ಸಾಧನಗಳನ್ನು ಒದಗಿಸುತ್ತವೆ. ಈ ಮೂಲಕ ಹೊಸ ಸಮುದಾಯದ ಜನರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವರೂಪದ ಬದಲಾವಣೆಗೆ ಮುನ್ನುಡಿ ಬರೆಯುತ್ತಿದ್ದಾರೆ. ನವಯುಗ ತಂತ್ರಜ್ಞಾನದ ಚಮತ್ಕಾರ ಶಕ್ತಿಯ ವಿಷಯವಾಗಿ ಹೇಳುವುದಾದರೆ, ಮನುಕುಲ ಈವರೆಗೆ ಕಂಡಿರುವುದು ಇದರ ಅಣುವಿನಷ್ಟು ಪ್ರಭಾವ ಮಾತ್ರ. ಅದರ ಅಗಾಧತೆ ಕೈಗೆ ಎಟುಕದಲ್ಲಿಷ್ಟಿದೆ. ಈ 21ನೇ ಶತಮಾನ ಸಮಾಜದ ಎಲ್ಲ ಸ್ತರಗಳಲ್ಲಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾವಣೆಯ ಸುನಾಮಿ ಎಬ್ಬಿಸಲಿದೆ. ಪರಿಣಾಮವಾಗಿ, ಊಹೆಗೂ ನಿಲುಕದ ಮಟ್ಟಿಗೆ ಜಗತ್ತು ಬದಲಾಗಲಿದೆ.

ಈ ಪುಸ್ತಕಕ್ಕಾಗಿ ನಾನು ಸಂದರ್ಶಿಸಿದ ಖ್ಯಾತ ತಂತ್ರಜ್ಞ ಭವಿಷ್ಯವಾದಿ ರೇಕರ್ಜ್್ವೀಲ್ ಪ್ರಕಾರ, ಶತಮಾನದ ಮಧ್ಯ ಭಾಗದ ವೇಳೆಗೆ ಬದಲಾವಣೆಯ ಮನ್ವಂತರ ತೆರೆದುಕೊಳ್ಳಲಿದೆ. ಜನ ಜೀವನದ ಮೇಲೆ ಇದು ಬೀರುವ ಪರಿಣಾಮ ಮತ್ತು ಪ್ರಭಾವ ಎಲ್ಲರ ಅನುಭವಕ್ಕೂ ಬರಲಿದೆ. The Singularity is Near, When Human’s Transcend Biology ಎಂಬ ಪುಸ್ತಕದಲ್ಲಿ ರೇಕರ್ಜ್್ವೀಲ್ ಇದನ್ನು ವಿವರಿಸಿದ್ದಾನೆ. ಆತ ಹೇಳುವಂತೆ, ಮಾನವನ ಸಾಮರ್ಥ್ಯದ ಅಸೀಮ ಸಾಧ್ಯತೆಗಳ ಹೊಸ ಪ್ರಪಂಚದ ಅನಾವರಣ 2045ರ ವೇಳೆಗೆ ಆಗಬಹುದು. ಆಗ ಹೊರಹೊಮ್ಮುವ ತಾಂತ್ರಿಕ ಬುದ್ಧಿಶಕ್ತಿ ಈಗಿನ ಮಾನವ ಬುದ್ಧಿಶಕ್ತಿಗೆ ಹೋಲಿಸಿದರೆ ಬಿಲಿಯ ಪಟ್ಟು (ಅಂದರೆ ಈಗಿನದಕ್ಕಿಂತ ಲಕ್ಷ ಪಟ್ಟು) ಹೆಚ್ಚಿರುತ್ತದೆ. ಅದರರ್ಥ, ಈ ತಂತ್ರಜ್ಞಾನ ಕ್ರಾಂತಿಯ ಬದಲಾವಣೆಯಿಂದಾಗಿ, ಬೌದ್ಧಿಕ ತಿಳಿವಳಿಕೆ ಕೂಡ ಹಂಚಿಹೋಗುತ್ತದೆ. ಹಲವರಿಗೆ ಬದುಕು ನೀಡುತ್ತದೆ. ಹೌದು. ಗಾಂಧೀಜಿ ಬಯಸಿದ್ದು, ಕನಸು ಕಂಡಿದ್ದುದೂ ಇಂಥದೊಂದು ಬದಲಾವಣೆಗಾಗಿಯೇ. ಸಂಪತ್ತು (ಅಥವಾ ಜ್ಞಾನ) ಕೆಲವರಿಗಷ್ಟೇ ಸೀಮಿತವಾಗಿರಬಾರದು. ಅದು ಎಲ್ಲರಲ್ಲೂ ಹಂಚಿಕೆಯಾಗಬೇಕು ಎಂದು ಗಾಂಧೀಜಿ ಬಯಸಿದ್ದರು. ಅಂಥದೊಂದು ಬದಲಾವಣೆ ಈಗಿನ ತಂತ್ರಜ್ಞಾನ ಯುಗದಿಂದ ಸಾಧ್ಯವಾಗಿದೆ, ಸಾಧ್ಯವಾಗುತ್ತಿದೆ. ಬಹಳಷ್ಟು ಸಂದರ್ಭಗಳಲ್ಲಿ ಹಳೆಯ ತಾಂತ್ರಿಕ ಕೌಶಲ್ಯವೆಂಬುದು ಹೊಸದೊಂದು ಸಂಶೋಧನೆಗೆ, ಯಶಸ್ಸಿಗೆ ಕಾರಣವಾಗಿದೆ. ಅದೇ ಸಂದರ್ಭದಲ್ಲಿ, ನವೀನ ತಂತ್ರಜ್ಞಾನವೆಂಬುದು ಒಂದು ಸಾಮಾಜಿಕ – ಆರ್ಥಿಕ ಬದಲಾವಣೆಗೂ ಶ್ರೀಕಾರ ಹಾಕಿದೆ. ಗಾಂಧೀಜಿಯ ಕಾಲದಲ್ಲಿ ಖಾದಿ ಮತ್ತು ಚರಕದಿಂದಲೂ ಇಂಥದೇ ಒಂದು ಬದಲಾವಣೆ ನಡೆದಿರಲಿಲ್ಲವೆ?

ಈಗಿನ ತಾಂತ್ರಿಕ ಯುಗದಲ್ಲಿ ಗಾಂಧೀಜಿ ಪ್ರತಿಪಾದಿಸಿದ ಸಿದ್ಧಾಂತಗಳಿಗೆ ಎಂಥ ಬೆಲೆಯಿದೆ ಎಂಬುದನ್ನು ಎರಡೇ ಮಾತಿನಲ್ಲಿ ಹೇಳಿ ಬಿಡುತ್ತೇನೆ. ತಂತ್ರಜ್ಞಾನ ರಂಗದ ದಿಗ್ಗಜರು ಎಂದೇ ಹೆಸರಾದ ಸ್ಟೀವ್ ಜಾಬ್ಸ್, ನಾರ್ಬರ್ಟ್ ವೈನರ್, ಅಲೆನ್ ಟ್ಯೂರಿಂಗ್, ವೆನ್ನೀರ್ ಬಶ್, ರಿಚರ್ಡ್ ಸ್ಟಾಲ್್ಮನ್, ಎರಿಕ್ ಡೆಕ್ಸ್್ಲರ್, ಲಾರೆನ್ಸ್ ಲೆಸ್ಸಿಗ್, ಬಿಲ್ ಜಾಯ್, ಮಹಿಕೊ ಕುಕು, ಜರೂನ್ ಲೆನಿಯರ್ ಮುಂತಾದವರೆಲ್ಲ ಗಾಂಧೀಜಿಯ ತತ್ವಗಳಿಂದ, ಮಾತುಗಳಿಂದ ಸ್ಫೂರ್ತಿ ಪಡೆದವರೇ.

ವಸ್ತುಸ್ಥಿತಿ ಹೀಗಿರುವಾಗ ಗಾಂಧೀಜಿ ಪ್ರಣೀತ ಸಿದ್ಧಾಂತ ಇಂಟರ್್ನೆಟ್್ನಂಥ ಆಧುನಿಕ ಹಾಗೂ ಪ್ರಜಾತಾಂತ್ರಿಕ ಯುಗಕ್ಕೆ ಕೊಂಡಿಯಾಗಿ ನಿಂತಿದೆ ಎಂದು ಒಪ್ಪಿಕೊಳ್ಳದಿರುವುದಾದರೂ ಹೇಗೆ?

ಸುಧೀಂದ್ರ ಕುಲಕರ್ಣಿಯವರ ಈ ಮಹತ್ವದ ಕೃತಿ ಈಗಾಗಲೇ ದಿಲ್ಲಿ, ಮುಂಬೈಯಲ್ಲಿ ಬಿಡುಗಡೆಯಾಗಿದೆ. ಇದೇ ಶನಿವಾರ (27ರಂದು) ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ(ಸೆಂಟ್ರಲ್ ಕಾಲೇಜ್ ಬಳಿ) ಬಿಡುಗಡೆಯಾಗುತ್ತಿರುವುದು ಸಂತಸದ ಸಂಗತಿ. ಇಂಟರ್್ನೆಟ್ ಯುಗದ ದಟ್ಟಕಾಲದಲ್ಲಿ ಜೀವಿಸುತ್ತಿರುವ ನಮಗೆ ಗಾಂಧೀಜಿಯ ಕುರಿತು ಮರುಚಿಂತನೆ ಮಾಡಲು ಈ ಕೃತಿ ಸಂದರ್ಭವನ್ನು ಒದಗಿಸಿದೆ. ಈ ಸಂಶೋಧನಾತ್ಮಕ, ಪಾಂಡಿತ್ಯಪೂರ್ಣ ಕೃತಿ ರಚಿಸಿದ ಸುಧೀಂದ್ರ ಕುಲಕರ್ಣಿ ಅಭಿನಂದನಾರ್ಹರು. ಅಂದು ಸವಡು ಮಾಡಿಕೊಂಡು ಬನ್ನಿ.

– ವಿಶ್ವೇಶ್ವರ ಭಟ್

6 Comments

 1. absolutely noooooooooooooooo

 2. Thought provoking. Had a glance of the book while Dattatreya Hosabale was going thru it last week. This reading brings us the memory of THIRD WAVE (Alvin Tofler) in which he discusses a phenomena – Gandhi with satellite . Grate work by Sudhindra Kulakarni.

 3. My native is also Athani……good thinking congratulated to sudhidra sir

 4. ನನ್ನ face book friend ಗೌತಮ್ ರವರು , October 27 , 2012 ರಂದು Jnanajyothi Auditorium, Bangalore ನಲ್ಲಿ ಜರುಗಿದ , Shri. Sudheendra Kulkarni ಯವರ ಪುಸ್ತಕ ,
  ” Music of the spinning wheel – ಅಂತರ್ಜಾಲ ಯುಗಕ್ಕೆ ಗಾಂಧೀ ಸೂತ್ರ ” ಬಿಡುಗಡೆ ಸಮಾರಂಭಕ್ಕೆ ಪ್ರೀತಿಯಿಂದ ಆ
  ಮಂತ್ರಿಸಿದ್ದರು.

  ಸಮಾರಂಭದಲ್ಲಿ ಶ್ರೀ ಜಗದೀಶ್ ಶೆಟ್ಟರ್, ಕರ್ನಾಟಕ ಗವೆರ್ನ್ಮೆಂಟ್, ಸಿ ಎಂ , ಶ್ರೀ ನಂದನ್ ನಿಲೇಕಣಿ , ಆಧಾರ್ ಕಾರ್ಡ್ innovator , ಡಾ. ಚಂದ್ರಶೇಕರ್ ಕಂಬಾರ್ , ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತರು , ಶ್ರೀ ವಿಶ್ವೇಶ್ವರ್ ಭಟ್, ಕನ್ನಡ ಪ್ರಭ ಪ್ರಧಾನ ಸಂಪಾದಕರು , ಶ್ರೀ ಶ್ರೀವತ್ಸ ಕೃಷ್ಣ IAS, ಮತ್ತು Book Publisher Ms. Neerajaa ವೇದಿಕೆಯಲ್ಲಿದ್ದರು. ಶಂಕರ್ ಭಟ್ ರವರ ಸುಂದರ ಶೈಲಿಯ ನಿರೂಪಣೆ, ಕು.ಶ್ರುತಿ ಭಟ್ ರವರ ಸಂಗೀತ ಸಭೆಗೆ ವಿಶೇಷ ಆಹ್ಲಾದ ನೀಡಿತ್ತು.

  ಆರಂಭದಲ್ಲಿ ಪ್ರಾಸ್ತಾವಿಕವಾಗಿ ಶ್ರೀ ಸುಧೀಂದ್ರ ಕುಲಕರ್ಣಿಯವರು ತಾನು ಮತ್ತು ನಂದನ್ ನಿಲೇಕಣಿ IIT ಯಲ್ಲಿ ಜೊತೆಯಾಗಿ ಇಂಜಿನಿಯರಿಂಗ್ ಓದಿದ್ದಾಗಿಯೂ, ತಾನು ಮೊದಲು ಮಾರ್ಕ್ಷಿಸಮ್ ನತ್ತ ಆಕರ್ಷಿತನಾಗಿ ಉತ್ಸಾಹಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದಾಗಿಯೂ , ತದನಂತರ right wing BJP ಯತ್ತ ಆಕರ್ಷಿತನಾಗಿ ಶ್ರೀ ಅಟಲ್ ಬಿಹಾರಿ ವಾಜಪಯೀ, ಶ್ರೀ ಲಾಲ್ ಕೃಷ್ಣ ಆಡ್ವಾಣಿ ಮುಂತಾದವರ ಜೊತೆ ಕೆಲಸ ಮಾಡಿದ್ದಾಗಿಯೂ ತಿಳಿಸುತ್ತ ಗಾಂಧೀಜಿ ಹೇಗೆ ವಿಶ್ವದೆಲ್ಲೆಡೆ ಪ್ರಸ್ತುತರು ಮತ್ತು ಅವರ ಸತ್ಯಾಗ್ರಹ concept ಇಂದಿನ internet ಯುಗದಲ್ಲಿ ಪ್ರಸ್ತುತ ಹೇಗೆ ? internet ನಿಂದ ಗಾಂಧೀಜಿಯವರ ಕನಸುಗಳು ನನಸಾಗಬಹುದು ಎಂಬ ಸಿದ್ಧಾಂತವನ್ನು ತನ್ನ ಪುಸ್ತಕದಲ್ಲಿ ವಿವರಿಸಿರುವದಾಗಿ ತಿಳಿಸಿದರು.

  ಶ್ರೀ ನಂದನ್ ನಿಲೇಕಣಿ ಯವರು ಆಧಾರ್ ಕಾರ್ಡ್ ಬಗ್ಗೆ ವಿಶದವಾದ ವಿವರಣೆ ನೀಡಿ , internet ಹೇಗೆ ಜನಸಾಮಾನ್ಯರಿಗೆ ಅನುಕೂಲಗಳನ್ನು ಕಲ್ಪಿಸಬಹುದು ಎಂಬುದನ್ನು ತಿಳಿಸಿದರು.

  ಶ್ರೀ ಚಂದ್ರಶೇಕರ್ ಕಂಬಾರರವರು ತನ್ನೂರಿನಲ್ಲಿ ಬೆಳಿಗ್ಗೆ ಕುರಿ ಕಾಯುವವನು ” ಕುರಿ ಎಲ್ಲ ಸರಿಯಾಗಿ ಬಂದಾವ್ರಿ ” ಎಂದೂ , ಹೆಂಡತಿಗೆ ” ಊಟಾ ಇನ್ನೂ ತಂದಿಲ್ಲ ಯಾಕವ್ವಾ ” ಎಂದು mobile ನಲ್ಲಿ ಮಾತಾಡುವ ಮಟ್ಟಿಗೆ technology develop ಆಗಿದೆ ಇಂದು, ಎಂದರು. ಹಾಗೇನೆ ಕನ್ನಡ ಭಾಷೆ ಬೆಳೆಯುವಂತಾಗಲು unicode ಅನ್ವಯಿಸಿಕೊಳ್ಳಲು ಯಡ್ಯುರಪ್ಪ ನವರು ಎರಡು ಕೋಟಿ ರುಪಾಯಿ ಬಿಡುಗಡೆ ಮಾಡಿದರೂ, ಸರಕಾರದಿಂದ ಈ ಕುರಿತು one line decision ಆಗದಿದ್ದುದರಿಂದ , ಆ ಎರಡು ಕೋಟಿ ರೂಪಾಯಿ ಬಳಕೆಯಾಗದೆ ಹಾಗೆ ನಿಂತಿದೆ ಎಂದು ಸಿ. ಎಂ ಗಮನಕ್ಕೆ ತಂದರು. ಅಲ್ಲದೆ ಒಂದರಿಂದ ಹತ್ತನೇ ತರಗತಿಯ ವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವನ್ತೆಯೂ ಮತ್ತು ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚದನ್ತೆಯೂ ಆಗ್ರಹಿಸಿದರು.

  ಶ್ರೀ ವಿಶ್ವೇಶ್ವರ್ ಭಟ್ ಮತ್ತು ಪುಸ್ತಕ ಪಬ್ಲಿಶರ್ ನೀರಜಾ ಸಂದರ್ಭಕ್ಕನುಗುಣವಾಗಿ ಮಾತನಾಡಿದರು.

  ಸಿ. ಎಂ ಶ್ರೀ ಜಗದೀಶ್ ಶೆಟ್ಟರ್ ರವರು ಮಾತನಾಡುತ್ತ ತನ್ನ ಅಧಿಕಾರಾವಧಿಯಲ್ಲಿ ಕನ್ನಡದ ಯಾವುದೇ ಕೆಲಸಕ್ಕೆ ಧಕ್ಕೆ ಬರದಂತೆ ಕಾರ್ಯ ನಿರ್ವಹಿಸುವದಾಗಿಯೂ , ಯಾವುದೇ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವದಿಲ್ಲವಾಗಿಯೂ , ಶ್ರೀ ಕಂಬಾರರು ಹೇಳಿದ unicode ಕೆಲಸವನ್ನು ಮಾಡುವಾದಾಗಿಯೂ ಆಶ್ವಾಸನೆ ನೀಡಿದರು. ಅಲ್ಲದೆ ಶ್ರೀ ಸುಧೀಂದ್ರ ಕುಲಕರ್ಣಿ ಯವರು ಬರೆದ ಪುಸ್ತಕ ಪ್ರತಿಯೊಬ್ಬರೂ ಓದಬೇಕಾಗಿರುವದರಿಂದ ಎಲ್ಲ ವಾಚನಾಲಯಗಳೂ ಪ್ರತಿಯೊಂದನ್ನು ಖರೀದಿಸುವಂತೆ ವ್ಯವಸ್ತೆಮಾಡುವದಾಗಿ ತಿಳಿಸಿದರು. ತಾವು ಜನಸಂಘದ ಕಾಲದಿಂದಲೂ ಹೇಗೆ ಶ್ರೀ ಅಟಲ್ ಬಿಹಾರಿ ವಾಜಪಯೀ , ಶ್ರೀ ಲಾಲ್ ಕೃಷ್ಣ ಆಡ್ವಾಣಿ ಅವರ ಒಡನಾಟದಲ್ಲಿ ಬೆಳೆದುಬಂದಿದ್ದೇನೆ ಎಂದು ಸ್ಮರಿಸಿಕೊಂಡರು .

  ನನಗೆ city ಯಲ್ಲಿ ಬೇರೆ ಬೇರೆ ಕೆಲಸಗಳಿದ್ದುದರಿಂದ ನಾನು ಬೆಳಿಗ್ಗೆ ಒಂಭತ್ತ ಕ್ಕೆಲ್ಲಾ ಮನೆ ಬಿಟ್ಟಿದ್ದೆ. ಎಲ್ಲ ಕೆಲಸಗಳೂ ಮದ್ಯಾಹ್ನ ಒಂದು ಗಂಟೆ ವೇಳೆಗೆಲ್ಲ ಮುಗಿದುದ್ದರಿಂದ ಇನ್ನೇನು ಮಾಡುವದು , ಎಲ್ಲಾದರೂ ಊಟ ಮಾಡಿ library ಯೊಂದರಲ್ಲಿ ಕಾಲ ಕಳೆಯೋಣ ಎಂದು , ಯೂನಿವರ್ಸಿಟಿ ಕ್ಯಾಂಪಸ್ ಕಡೆ ಹೆಜ್ಜೆ ಹಾಕಿದೆ.

  ಅಲ್ಲೇ ಒಮ್ಮೆ ಕಾರ್ಯಕ್ರಮದ ಸಭಾಂಗಣವನ್ನೊಮ್ಮೆ ನೋಡಿ ಹೋಗೋಣ ಎಂದು ಒಳನಡೆದೆ. ಎಂಟು ಹತ್ತು ಕೂಲಿ ಕೆಲಸದವರು , ನಾಲ್ಕಾರು ಯೂನಿವರ್ಸಿಟಿ ನೌಕರ – ಕಾರ್ಯಕರ್ತರು ಕೆಲಸದಲ್ಲಿ ಮಗ್ನರಾಗಿದ್ದರು. ನಾನು ಒಂದೆಡೆ ಸುಮ್ಮನೆ ನಿಂತು ಆಚೆ ಈಚೆ ವೀಕ್ಷಿಸುತ್ತಿದ್ದೆ. ಆ ಕಾರ್ಯಕರ್ತರು ಯಾರದೋ ಒಬ್ಬರ ಹೆಸರು ಹೇಳುತ್ತಾ – ಅವರಿಗೆ ಹೇಳಿದ್ದೀನಿ ಆ boys hostel ನಿಂದ ಎಲ್ಲ ಮಕ್ಕಳನ್ನು ಕರೆತರಲು ಆದರೆ ಈಗ ಹಬ್ಬದ ಸಮಯ ಹೆಚ್ಚಿನ ಮಕ್ಕಳೆಲ್ಲ ಊರಿಗೆ ಹೋಗ್ಬಿಟ್ಟಿದ್ದಾರೆ , ಆ girls hostel warden ಗೆ ಹೇಳಿದ್ದೀನಿ , ಆದರೆ ಅಲ್ಲೂ ಎಲ್ಲ ಊರಿಗೆ ಹೋಗ್ಬಿಟ್ಟಿದ್ದಾರಂತೆ ಎಂದು ಮಾತನಾಡಿಕೊಳ್ಳುತ್ತಿದ್ದರು. ನಾನು ಮನಸ್ಸಿನಲ್ಲೇ ಅಂದುಕೊಂಡೆ ” ಒಹೋ ಎಲ್ಲ ಕಾರ್ಯಕ್ರಮಗಳಂತೆ ವೇದಿಕೆಯ ಮೇಲೆ ಹತ್ತಾರು ಜನ, ವೇದಿಕೆಯ ಕೆಳಗೆ ಮೂವತ್ತು – ನಲವತ್ತು ಜನ, video – photo ಜೋರು , ಹಲವಾರು ಪತ್ರಿಕೆಗಳಲ್ಲಿ ಮರುದಿನ ಉದ್ದುದ್ದ ವರದಿ, paid or not paid report but certainly it is a report for records , ಅಂದುಕೊಂಡೆ.

  ಹೀಗೆ ಹತ್ತು ನಿಮಿಷ ಕಳೆದಿರಬಹುದು. ಒಮ್ಮೆಲೇ ಶ್ರೀ ವಿಶ್ವೇಶ್ವರ ಭಟ್ ರು ಮತ್ತು ಅವರ ಸಹೋದ್ಯೋಗಿಗಳ ತಂಡ ಪ್ರವೇಶವಾಯಿತು. ಒಹೋ ಭಾರೀ ಮಾಡಿದ್ದಿರಲ್ಲೋ ಎನ್ನುತ್ತಾ , ಭಟ್ ರು ತಮ್ಮ ಸಹೋದ್ಯೋಗಿಗಳ ಜೊತೆ ವಿಚಾರ ವಿನಿಮಯ ಮಾಡಿಕೊಂಡರು. ನನಗೆ ವೈಯಕ್ತಿಕವಾಗಿ ಯಾರೊಬ್ಬರ ಪರಿಚಯವಿಲ್ಲದಿರುವದರಿಂದ , ಯಾರನ್ನೂ ಪರಿಚಯಿಸಿಕೊಳ್ಳುವ ಸಾಹಸಕ್ಕೆ ಇಳಿಯಲಿಲ್ಲ.
  ಸುಮ್ಮನೆ ಒಂದೆಡೆ ನಿಂತು ಎಲ್ಲವನ್ನೂ ಗಮನಿಸುತ್ತಿದ್ದೆ.

  ಅರ್ಧ ಗಂಟೆ ಕಳೆದಿರಬಹುದು. ಒಂದು ಕಾರಿನಲ್ಲಿ ಶ್ರೀ ಸುಧೀಂದ್ರ ಕುಲಕರ್ಣಿ ಯವರು ಹಾಗು ಇನ್ನೊಬ್ಬರು ಬಂದಿಳಿದರು. ಆ ಇನ್ನೊಬ್ಬರು ನನ್ನ face book ಮಿತ್ರ ಗೌತಮ್ ರವರಾಗಿದ್ದರು. ನಾನು ಗೌತಮ್ ಮಾತನಾಡುತ್ತ ಸುಧೀಂದ್ರ ಕುಲಕರ್ಣಿ ಯವರ ಜೊತೆ ಸಭಾಂಗಣ ವನ್ನೆಲ್ಲ ಸ್ತುತ್ತಿದೆವು. ಜೊತೆಯಲ್ಲಿ ವಿ ಭಟ್ ರು ಮತ್ತವರ ತಂಡ. ಅವರೆಲ್ಲ ಕಾರ್ಯಕ್ರಮದ ಪೂರ್ವಭಾವಿ ತಯಾರಿಯ ಚರ್ಚೆಯಲ್ಲಿದ್ದರು. ನಾನು ಗೌತಮ್ ಉಭಯ ಕುಶಲೋಪರಿ ಯಲ್ಲಿದ್ದೆವು. ನನ್ನ ಮಿತ್ರ ಗೌತಮ್ ರವರ ಮಿತ್ರರೊಬ್ಬರು ಮುಬೈನಿಂದ ಫೋನ್ ಮಾಡಿ ಸುಧೀಂದ್ರ ಕುಲಕರ್ಣಿಯವರು ಇವರ ಜೊತೆ ಇರಲು ಕಳಿಸಿದ್ದರು, ಎಂಬ ವಿಷಯ ತಿಳಿದುಬಂತು.

  ಎಲ್ಲ ಪೂರ್ವ ತಯ್ಯಾರಿಯನ್ನು ವೀಕ್ಷಿಸಿದ ಸುಧೀಂದ್ರ ಕುಲಕರ್ಣಿಯವರಿಗೆ , ಗೌತಮ್ ರವರು ನನ್ನ ಪರಿಚಯಿಸಿದರು. ನನ್ನ shake hand ಮಾಡಿದ ಸುಧೀಂದ್ರ ರವರ hand shake ಹೇಗಿತ್ತೆಂದರೆ instant ಆಗಿ ನನ್ನ ಕೈ ಅವರ ಕಾಲನ್ನು ಸ್ಪರ್ಶಿಸಿ , ಆ ಹಿರಿಯರಿಗೆ ನನ್ನ ಗೌರವವನ್ನು ಸಮರ್ಪಿಸಿತು. ಅದೇ ವೇಗದಲ್ಲಿ ,ಅನಿರೀಕ್ಷಿತ ಒಲ್ಮೆಯ ಅಪ್ಪುಗೆ ( lovely and never forgetting hug from shri.Sudheendra Kulkarni ) ನನ್ನ ಪಾಲಿಗೆ ದೊರಕಿತ್ತು. ಅವಿಸ್ಮರಣೀಯ ಸಿಹಿ ಅನುಭವ ನನ್ನ ಪಾಲಿಗೆ ಬಂದೊದಗಿತ್ತು.

  ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಗುರುತಿಸಲ್ಪಟ್ಟನ್ತಹ ಗಣ್ಯಾತಿಗಣ್ಯರೆಲ್ಲ ಹಾಜರಿದ್ದರು. ನೆನಪಿಗೆ ಬಂದಷ್ಟು ಹೆಸರಿಸುವದಾದರೆ ಮಂತ್ರಿಗಳಾದ ಸುರೇಶ್ಕುಮಾರ್ , ಅರವಿಂದ ಲಿಂಬಾವಳಿ , ಫ್ರೀಡಂ ಫೈಟರ್ ಎಹ್ ಎಸ್ ದೊರೆಸ್ವಾಮಿ , ಡಾ. ಹೊ ಶ್ರೀನಿವಾಸಯ್ಯ , ಕನ್ನಡದ ನಾರಾಯಣ ಗೌಡ್ರು, ಶಂಕರ್ ಬಿದರಿ, ವಾಮನ ಆಚಾರ್ಯ , ಶಿಕ್ಷಣ ತಜ್ಞ ರಾಧಾಕೃಷ್ಣ , ಬಸಂತ್ಕುಮಾರ್ ಪಾಟೀಲ್ , ಸುರೇಶ ಹೆಬ್ಳಿಕರ್ , ಜಯಮಾಲಾ ,ಕಮ್ಯುನಿಸ್ಟ್ ಮುಖಂಡ ನೈಯರ್, ಇನ್ನೂ ಎಸ್ಟೆಸ್ಟೋ ಮಹನೀಯರು ಬಂದಿದ್ದರು. ಅಲ್ಲದೆ ಶ್ರೀ ಸುಧೀಂದ್ರ ಕುಲಕರ್ಣಿಯವರ ಅಪಾರ ಬಂಧುಗಳು , ಮಿತ್ರರು, ಹಿತೈಷಿಗಳು ಆಗಮಿಸಿದ್ದರು. ಡಾ. ಮೈಲಾರಪ್ಪನವರು , ಅವರ ಜೊತೆ ಅವರ ಶಿಷ್ಯ ಸಮೂಹ ಆಗಮಿಸಿತ್ತು. ಸಹಜವಾಗಿ ರಾಜಕಾರಣಿಗಳ , ಅವರ ಸಹಚರರ ಸಂಕ್ಯೇಯೂ ಸಾಕಸ್ಟಿತು.

  ಕಾರ್ಯಕ್ರಮದಲ್ಲಿ ಕನ್ನಡದ ಡಿಂಡಿಮ ಕೇಳಿದಾಗ, ಮೈಲಾರಪ್ಪನವರ ಹೆಸರು ಹೇಳಿದಾಗ, ಅಟಲ್ ಬಿಹಾರಿ ಬಾಜಪೇಯಿ ಯವರ ಹೆಸರು ಬಂದಾಗ ಸಹಜವಾಗಿ ಚಪ್ಪಾಳೆ , ಸಿಳ್ಳೆ ಗಳು ಜೋರಾಗಿ ಬರುತ್ತಿದ್ದವು. ಸಭಾಂಗಣದಲ್ಲಿ ಎಲ್ಲ ಸೀಟು ಗಳು ಭರ್ತಿಯಾಗಿ ಜನಗಳು ನಿಂತೂ ಇದ್ದರು. ಸಭಾಂಗಣ ರಂಗು ರಂಗಾಗಿ ಕಂಗೊಳಿಸುತ್ತಿತ್ತು. ಬಹು ದಿನಗಳಿಗೊಮ್ಮೆ ಬರುವ ಅಪರೂಪದ , ಬಹು ದಿನಗಳ ಕಾಲ ನೆನಪಿನಲ್ಲುಳಿಯುವ ಕಾರ್ಯಕ್ರಮ ಇದಾಗಿತ್ತು .

  ಹರಿಹರ ಭಟ್, ಬೆಂಗಳೂರು.
  October 28 , 2012.

  ಈ ಪುಸ್ತಕದ ಮುಖ ಬೆಲೆ Rs . 595 . ಇದೇ ಪುಸ್ತಕ http://www.flipkart.com ನಲ್ಲಿ Rs. 476 ಕ್ಕೆ ಸಿಗುತ್ತದೆ . Free home delivery and payment on delivery ಸೌಲಬ್ಯ ಇದೆ.

 5. ನಾನು ಬರೆದ ಮೊದಲ ಪುಸ್ತಕ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆ. ಚೊಚ್ಚಲ ಕೃತಿಯಾದ್ದರಿಂದ ಅದರ ಶೀರ್ಷಿಕೆ ಕನ್ನಡ ವರ್ಣಮಾಲೆಯ ಮೊದಲ ಅಕ್ಷರ”ಅ’ ದಿಂದಲೇ ಆರಂಭವಾಗಲಿ ಎಂಬುದು ನನ್ನ ಆಸೆಯಾಗಿತ್ತು. ಬಹಳ ಯೋಚಿಸಿ ಪುಸ್ತಕಕ್ಕೆ”ಅಜಾತಶತ್ರು’ ಎಂದು ಹೆಸರಿಟ್ಟೆ. ಯಾರ ಕುರಿತು ಬರೆದಿದ್ದೆನೋ ಅವರ ಹೆಸರಿನ ಮೊದಲ ಅಕ್ಷರವೂ”ಅ’ ದಿಂದಲೇ ಆರಂಭವಾಗಿದ್ದು ಯೋಗಾಯೋಗ. ಶೀರ್ಷಿಕೆ ಬಗ್ಗೆ ಹಿರಿಯ ಪತ್ರಕರ್ತರೂ,”ಕನ್ನಡ ಪ್ರಭ’ದ ಅಂದಿನ ಸಂಪಾದಕರೂ ಆಗಿದ್ದ ವೈಯೆನ್ಕೆಯವರಿಗೆ ತಿಳಿಸಿದಾಗ,”ಪ್ರಸ್ತುತ ರಾಜಕಾರಣದಲ್ಲಿ”ಅಜಾತಶತ್ರು’ ಪದವನ್ನು ವಾಜಪೇಯಿಗೆ ಮಾತ್ರ ಬಳಸಬಹುದು ಹಾಗೂ ಉಳಿದ ಯಾರಿಗೇ ಆ ಪದ ಪ್ರಯೋಗಿಸಿದರೂ ನನ್ನ ತಕರಾರಿದೆ’ ಎಂದು ಹೇಳಿದ್ದರು. ಪುಸ್ತಕ ಪ್ರಕಟವಾಗಿ ಬಹಳ ವರ್ಷಗಳಾದರೂ, ಅದನ್ನು ವಾಜಪೇಯಿ ಅವರಿಗೆ ಅರ್ಪಿಸಲು ಸಾಧ್ಯವಾಗಿರಲಿಲ್ಲ. ಅನಂತರ ವಾಜಪೇಯಿ ಮಾಧ್ಯಮ ಸಲಹೆಗಾರರಾಗಿದ್ದ ಸನ್ಮಿತ್ರರಾದ ಸುಧೀಂದ್ರ ಕುಲಕರ್ಣಿಯವರ ಸಹಕಾರದಿಂದ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ಕೈಗಿತ್ತಾಗ,”524ಪುಟಗಳ ಪುಸ್ತಕ ಬರೆದಿದ್ದೀರಲ್ಲಾ ಇಷ್ಟೊಂದು ಬರೆಯಲು ಕನಿಷ್ಠ ಒಂದೆರಡು ವರ್ಷಗಳಾದರೂ ಹಿಡಿದಿರಬಹುದು. ನಿಮ್ಮ ಜೀವನದ ಆ ಅಮೂಲ್ಯ ಸಮಯವನ್ನು ಬೇರೊಂದು ಕೆಲಸಕ್ಕೆ ವಿನಿಯೋಗಿಸಿದ್ದರೆ ಸಮಾಜಕ್ಕಾದರೂ ಉಪಯೋಗವಾಗುತ್ತಿತ್ತೇನೋ? ಹಾಳು ಮಾಡಿಬಿಟ್ಟಿರಿ’ ಎಂದು ಜೋರಾಗಿ ನಕ್ಕರು. ಪುಸ್ತಕವನೊಮ್ಮೆ ಆರಂಭದಿಂದ ಕೊನೆತನಕ ಸರ್ರನೆ ತಿರುವಿ ಹಾಕಿದರು.”ನನ್ನ ಬಗ್ಗೆ 524 ಪುಟ ಬರೆದಿದ್ದೀರಲ್ಲಾ, ನನಗೇ ನನ್ನ ಬಗ್ಗೆ ಇಷ್ಟೊಂದು ಗೊತ್ತಿಲ್ಲ’ ಎಂದು ಚಟಾಕಿ ಹಾರಿಸಿದರು. “ಹಾಗೆಂದು ನಾನೇನೂ ಕೈಯಿಂದ ಸೇರಿಸಿಲ್ಲ’ ಎಂದೆ ವಿನೀತನಾಗಿ. ಆಗ ವಾಜಪೇಯಿ ಹೇಳಿದರು-”ಯಾರದ್ದಾದರೂ ಬಗ್ಗೆ ಹೇಳಬಹುದಾದದ್ದು ಹೆಚ್ಚಿರುವುದಿಲ್ಲ. ಒಬ್ಬ ವ್ಯಕ್ತಿ ಅದೆಷ್ಟೇ ಸಾಧನೆ ಮಾಡಿದರೂ ಐನೂರು, ಸಾವಿರ ಪುಟಗಳಲ್ಲಿ ಬರೆಯುವಷ್ಟು ಸಾಧನೆ ಮಾಡಿರಲಂತೂ ಸಾಧ್ಯವಿಲ್ಲ. ಅದೇನೇ ಇರಲಿ, ನಿಮ್ಮ ಪರಿಶ್ರಮ, ಪ್ರೀತಿಗೆ ನಾನು ಋಣಿ. ಕನ್ನಡವನ್ನು ನಾನು ಓದಲಾರೆ. ನೀವೇನು ಬರೆದಿದ್ದೀರೋ ಎಂಬುದು ತಿಳಿಯದು. ನನಗೆ ಅರ್ಥವಾಗುವುದೇನಿದ್ದರೂ ಫೋಟೋಗಳು. ಫೋಟೋಗಳಲ್ಲಂತೂ ನಾನು ಸುಂದರವಾಗಿ ಕಾಣುತ್ತೇನೆ. ಹೀಗಾಗಿ ಪುಸ್ತಕವೂ ಸುಂದರವಾಗಿಯೇ ಇರಬಹುದೆಂದು ಭಾವಿಸುತ್ತೇನೆ’. ಈಗ ನಗುವ ಸರದಿ ನನ್ನದಾಗಿತ್ತು. ಆ ನಗುವಿನ ಅಲೆಯಲ್ಲಿ ವಾಜಪೇಯಿ ಕೂಡ ಜತೆಯಾಗಿ ಜೀಕಿದ್ದರು. ವಾಜಪೇಯಿ ಸಂಪರ್ಕಕ್ಕೆ ಯಾರೇ ಬರಲಿ, ಅವರು ಹೋಗುವಾಗ ಅಪರಿಮಿತ ನಗು, ಸಂತೋಷ ಹಾಗೂ ಅಪಾರ ಗೌರವವನ್ನು ಮೊಗೆದುಕೊಂಡು ಹೋಗುತ್ತಿದ್ದುದು ದಿಟ. ಅವರ ವ್ಯಕ್ತಿತ್ವವೇ ಹಾಗಿತ್ತು.

  • ವಿ . ಭಟ್ ರವರೆ ತಾವು ಈ ಮೊದಲು ಇದನ್ನು ಬರೆದಿದ್ದನ್ನ್ನು ಓದಿದ್ದೇನೆ. ಚೆನ್ನಾಗಿದೆ. ಮತ್ತೆ ನೆನಪಾಯ್ತು. ಧನ್ಯವಾದಗಳು. ಒಹೋ ಏನಿದು gold account. ?

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.