ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಮೆರಿಕಕ್ಕೆ ಹೊರಟು ನಿಂತವಳ ಬಳಿ ಅರವತ್ತು ರುಪಾಯಿ ಕೂಡ ಇರಲಿಲ್ಲ

6-Edi1ಮೇರಿ ಕೋಮ್!

ಭಾರತದ ಪ್ರಪ್ರಥಮ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಮೇರಿಕೋಮ್ ಅವಳ ಆತ್ಮಕತೆ (unbreakable)ಯನ್ನು ಅನುವಾದಿಸಿ ಒಂದು ಅಧ್ಯಾಯವನ್ನು ಎರಡು ವಾರಗಳ ಹಿಂದೆ ನೀಡಿದ್ದೆ. ಅವಳ ಜೀವನಗಾಥೆಯ ರುಚಿ ಅನುಭವಿಸಿದ ಅಸಂಖ್ಯ ಓದುಗರು ಅ ವಳ ಪುಸ್ತಕವನ್ನು ಬಹಳ ಬೇಗ ಹೊರತನ್ನಿ ಎಂದು ಆಗ್ರಹಿಸಿದ್ದಾರೆ. ಮೇರಿ ಕೋಮ್‌ಳದ್ದು ನಿಜಕ್ಕೂ ಅಮೋಘ ಸಾಧನೆ. ಅವಳ ಕತೆಯನ್ನು ಓದುತ್ತಿದ್ದರೆ ಎಂಥವನಲ್ಲಾದರೂ ಸ್ಫೂರ್ತಿ ಉಕ್ಕುತ್ತದೆ. ಸಾಮಾನ್ಯ ಮಹಿಳೆಯಾಗಿ ಹಂತ ಹಂತವಾಗಿ ಅವಳು ಏರಿದ ಎತ್ತರ ಅದ್ಭುತವಾದುದು. ನಾನು ಈ ಕೃತಿಯನ್ನು ಅನುವಾದಿಸಿದಾಗ ಅನುಭವಿಸಿದ ರೋಚಕತೆ ನನ್ನಲ್ಲಿ ಸದಾ ಜಾಗೃತ. ಜೀವನದಲ್ಲಿ ತೀರಾ low ಆದಾಗ ಅವಳ ಬದುಕಿನ ಕೆಲವು ಪ್ರಸಂಗಗಳನ್ನು ನೆನಪಿಸಿಕೊಂಡರೆ, ಒಂದಷ್ಟು ಸಾಂತ್ವನ, ಹುರುಪು ಸಿಗುತ್ತದೆ. ನಾನು ಅನುಭವಿಸಿದ್ದನ್ನೇ ನನ್ನ ಓದುಗರೂ ಅನುಭವಿಸಲಿ ಎಂಬ ಸ್ವಾರ್ಥದಿಂದ ಈ ಕೃತಿಯನ್ನು ಅನುವಾದಿಸಲು ನಿರ್ಧರಿಸಿದೆ. ಈ ಅಧ್ಯಾಯ ಓದಿದ ಬಳಿಕ ನನ್ನ ನಿರ್ಧಾರ ಎಷ್ಟು ಸಮರ್ಪಕವಾಗಿದೆ ಎಂಬುದನ್ನು ನೀವೂ ಒಪ್ಪುತ್ತೀರಿ. ಈಗ ನಿಮ್ಮ ಮುಂದೆ ಮೇರಿ ಕೋಮ್.

***
ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ 2001ರ ನವೆಂಬರ್-ಡಿಸೆಂಬರ್‌ನಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆಯಲಿದ್ದ ವಿಶ್ವಮಟ್ಟದ ಚಾಂಪಿಯನ್‌ಶಿಪ್‌ಗೆ ನಾನು ಆಯ್ಕೆಯಾದೆ. 48 ಕೆ.ಜಿ. ವಿಭಾಗವನ್ನು ನಾನು ಪ್ರತಿನಿಧಿಸುತ್ತಿದ್ದೆ.

ಹೌದು, ಇದು ಸತ್ಯ. ಇದೇ ವಾಸ್ತವ. ಭಾರತವನ್ನು ಪ್ರತಿನಿಧಿಸಿ ಅಮೆರಿಕಕ್ಕೆ ಹೊರಟು ನಿಂತಿದ್ದ ನನ್ನಲ್ಲಿ ಅವತ್ತಿಗೆ 60 ರುಪಾಯಿ ಕೂಡ ಇರಲಿಲ್ಲ. ನನ್ನ ಕಥೆ ಹಾಗಿರಲಿ; ಅವತ್ತಿನ ಸಂದರ್ಭದಲ್ಲಿ ನಮ್ಮ ತಂದೆಯ ಬಳಿ ಕೇವಲ 100 ರುಪಾಯಿ ಕೂಡ ಇರಲಿಲ್ಲ. ಅಂಥಾ ಬಡತನದ ದಿನಗಳವು. ಹಾಗಂತ, ಸ್ಪರ್ಧೆಯಲ್ಲಿ ಭಾಗವಹಿಸಲಾರೆ ಅನ್ನಲೂ ಸಾಧ್ಯವಿರಲಿಲ್ಲ. ಈ ಸಂದರ್ಭದಲ್ಲಿ ತಂದೆಯವರು ತಮ್ಮ ಪರಿಚಯದವರ ಬಳಿ ಹಣಕ್ಕಾಗಿ ಯಾಚಿಸಿದರು. ಹೀಗೆ ಸಂಗ್ರಹವಾದ ಮೊತ್ತ ಕೇವಲ 2000 ರುಪಾಯಿ. ವಿಷಯ ತಿಳಿಯುತ್ತಿದ್ದಂತೆಯೇ ನನಗೆ ಸಂಕಟವಾಯಿತು. ಅಮೆರಿಕದಲ್ಲಿ ಎಲ್ಲ ವಸ್ತುವಿನ ಬೆಲೆಯೂ ಜಾಸ್ತಿ, ಅಲ್ಲಿನ ಜೀವನ ವಿಧಾನ ತುಂಬಾ ದುಬಾರಿ ಎಂದು ಅವರಿವರು ಹೇಳುವುದನ್ನು ಕೇಳಿದ್ದೆ. ಅಂಥದೊಂದು ಹಿನ್ನೆಲೆಯ ರಾಷ್ಟ್ರಕ್ಕೆ ಕ್ರೀಡಾಪಟುವಾಗಿ ಹೊರಟು ನಿಂತವಳ ಬಳಿ ಕೇವಲ ಚಿಲ್ಲರೆ ಎನ್ನಬಹುದಾದ 2000 ರು. ಹಣ ಮಾತ್ರ ಇತ್ತು. ಈ ಸಂದರ್ಭದಲ್ಲಿ ಬೇರೇನೂ ತೋಚದೆ ನನ್ನ ಗೆಳೆಯ ಮತ್ತು ಕೋಚ್ ಅನ್‌ಲೇರ್‌ನನ್ನು ಸಂಪರ್ಕಿಸಿ ನನ್ನ ಸಂಕಟ ಹೇಳಿಕೊಂಡೆ. ಇಷ್ಟೊಂದು ಕಡಿಮೆ ಹಣದೊಂದಿಗೆ ಅಮೆರಿಕಕ್ಕೆ ಹೋಗುವುದಾದರೂ ಹೇಗೆ ಎಂದು ಪ್ರಶ್ನೆ ಹಾಕಿದೆ.

ಆಗ, ನಮ್ಮ ಸಮುದಾಯದ ಹಿರಿಯರು ಹಾಗೂ ಕೋಮ್ ಸಮುದಾಯದ ಹಳೆಯ ವಿದ್ಯಾರ್ಥಿಗಳನ್ನು ಕರೆತಂದ ಅನ್‌ಲೇರ್, ಅವರಿಗೆ ಸಮಸ್ಯೆಯ ಬಗ್ಗೆ ವಿವರಿಸಿದ. ಹೇಗಾದರೂ ಮಾಡಿ ಅಮೆರಿಕ ಪ್ರವಾಸಕ್ಕೆ ನೆರವಾಗುವಂತೆ ಹಣ ಸಂಗ್ರಹಿಸುವ ದಾರಿ ಕುರಿತು ವಿವರಿಸುವಂತೆ ವಿನಂತಿಸಿದ. ಆಗ ಕೋಮ್ ಸಮುದಾಯದ ಪ್ರಮುಖರಾಗಿದ್ದ ಲಖೊಮಂಗ್ ಅವರು, ಮಣಿಪುರವನ್ನು ಪ್ರತಿನಿಧಿಸುವ ಸಂಸದರನ್ನು ಭೇಟಿ ಮಾಡಿ ಅವರಿಂದ ಹಣಕಾಸಿನ ನೆರವು ಪಡೆಯುವಂತೆ ಸಲಹೆ ಮಾಡಿದರಂತೆ. ಅನ್‌ಲೇರ್ ಮತ್ತು ಅವರೊಂದಿಗಿದ್ದ ವಿದ್ಯಾರ್ಥಿಗಳು ಹಾಗೆಯೇ ಮಾಡಿದರು. ಪರಿಣಾಮವಾಗಿ ಸಂಸದರಾದ ಹೋಲ್ಕೊಮಾಂಗ್ ಹೋಪಿಕ್ ಹಾಗೂ ಚೇಚಾ ಸಿಂಗ್ ಅವರು ಕ್ರಮವಾಗಿ 5000 ಹಾಗೂ 3000 ರು.ಗಳ ಸಹಾಯ ಮಾಡಿದರು. ಈ ನೆರವಿನಿಂದಾಗಿ ನನ್ನಲ್ಲಿ ಜಮೆಯಾದ ಒಟ್ಟು ಮೊತ್ತ 10,000 ರು. ಆಯಿತು. ಇದಕ್ಕಿಂತ ಹೆಚ್ಚಿನ ಹಣ ಸಂಗ್ರಹಿಸುವುದು ಸಾಧ್ಯವೇ ಇಲ್ಲ ಎಂದು ನನಗೂ ಚೆನ್ನಾಗಿ ಅರ್ಥವಾಗಿತ್ತು. ಹಾಗಾಗಿ, 10 ಸಾವಿರ ರುಪಾಯಿಗಳ ಗಂಟಿನೊಂದಿಗೆ ಅಮೆರಿಕಕ್ಕೆ ಹೋದೆ. ನನ್ನ ಯಶಸ್ಸಿಗಾಗಿ, ಒಬ್ಬರಲ್ಲ, ಇಬ್ಬರಲ್ಲ ನೂರಾರು ಮಂದಿ ಪ್ರಾರ್ಥಿಸಿದ್ದಾರೆ. ಶುಭ ಹಾರೈಸಿದ್ದಾರೆ. ಅವರೆಲ್ಲರ ನಿರೀಕ್ಷೆಯನ್ನು ನಿಜ ಮಾಡುವುದಕ್ಕಾದರೂ ನಾನು ಗೆಲ್ಲಬೇಕು ಅಂದುಕೊಂಡೆ.

ಅದು ನನ್ನ ಮೊಟ್ಟಮೊದಲ ವಿದೇಶ ಪ್ರವಾಸ. ನಾನು ಹೋದಾಗ ಪೆನ್ಸಿಲ್ವೇನಿಯಾದಲ್ಲಿ ಚಳಿಗಾಲ. ಅಂದಮೇಲೆ ಕೇಳಬೇಕೆ? ವಿಪರೀತ ಚಳಿಯಿತ್ತು. ಹಾದಿಯುದ್ದಕ್ಕೂ ಮಂಜು ಬಿದ್ದಿರುತ್ತಿತ್ತು. ಅಮೆರಿಕದಲ್ಲಿ ವಿಮಾನ ಇಳಿದ ತಕ್ಷಣವೇ ನಮ್ಮನ್ನು ಸ್ಪರ್ಧೆ ನಡೆಯಲಿದ್ದ ಪ್ರದೇಶಕ್ಕೆ ಕರೆದೊಯ್ಯಲಾಯಿತು. ನಾವು ಕ್ರೀಡಾಗ್ರಾಮವನ್ನು ತಲುಪುವ ವೇಳೆಗೆ ಉಳಿದ ರಾಷ್ಟ್ರಗಳ ಸ್ಪರ್ಧಾಳುಗಳು ಆಗಲೇ ಪೂರ್ವಭಾವಿ ಪರೀಕ್ಷೆಗಳನ್ನು ಮುಗಿಸಿಕೊಂಡಿದ್ದರು. ಸುದೀರ್ಘ ಅವಧಿಯ ವಿಮಾನ ಪ್ರಯಾಣದಿಂದ ವಿಪರೀತ ಸುಸ್ತಾಗಿತ್ತು. ಒಂದು ತಮಾಷೆಯೆಂದರೆ, ನಾವು ಭಾರತದಿಂದ ಪ್ರಯಾಣ ಆರಂಭಿಸಿದ್ದು ಬೆಳಗಿನ ಜಾವದಲ್ಲಿ. ಅಮೆರಿಕ ತಲುಪಿದ್ದೂ ಬೆಳಗಿನ ಜಾವದಲ್ಲಿ. ಬೆಳಗ್ಗೆ ಅಂದಮೇಲೆ ಭರ್ಜರಿ ನಿದ್ರೆ ಬರುವುದಾದರೂ ಹೇಗೆ? ನನ್ನ ಅದೃಷ್ಟಕ್ಕೆ, ಪೆನ್ಸಿಲ್ವೇನಿಯಾ ತಲುಪಿದ ನಂತರದ 24 ಗಂಟೆಗಳ ಕಾಲ ನನಗೆ ಯಾವುದೇ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕಾದ ಒತ್ತಡವಿರಲಿಲ್ಲ. ಆದರೆ, ನನ್ನೊಂದಿಗಿದ್ದ ಎಲ್ಲರಿಗೂ ಇಂಥ ಅದೃಷ್ಟವಿರಲಿಲ್ಲ. ಕ್ರೀಡಾ ಗ್ರಾಮಕ್ಕೆ ಬಂದ ಕೆಲವೇ ಗಂಟೆಗಳ ಅವಧಿಯಲ್ಲಿ ಕೆಲವರು ಸ್ಪರ್ಧೆಗಳಲ್ಲಿ ಭಾಗವಹಿಸಬೇಕಾಗಿ ಬಂತು. ಆಯಾಸವಾಗಿದ್ದ ಕಾರಣ ಅವರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲೇ ಇಲ್ಲ.

ನನ್ನ ವಿಷಯದಲ್ಲಿ ಹಾಗಾಗಲಿಲ್ಲ. ಸಾಕಷ್ಟು ಸಮಯವಿದ್ದ ಕಾರಣ, ನಾನು ಸಂಪೂರ್ಣವಾಗಿ ವಿಶ್ರಾಂತಿ ಪಡೆದ ನಂತರ ತುಂಬ ಆತ್ಮವಿಶ್ವಾಸದಿಂದಲೇ ಬಾಕ್ಸಿಂಗ್ ಅಂಗಳ ಪ್ರವೇಶಿಸಿದೆ. ಉಳಿದವರೆಲ್ಲ ಒಂದೊಂದೇ ಪಂದ್ಯಗಳನ್ನು ಸೋಲುತ್ತಿದ್ದರು. ಆದರೆ, ನಾನು ಒಂದರ ಹಿಂದೊಂದು ಗೆಲುವು ದಾಖಲಿಸುತ್ತ, ಫೈನಲ್ ತಲುಪಿಯೇ ಬಿಟ್ಟೆ. ಈ ಬಾರಿ ಖಂಡಿತ ಚಿನ್ನದ ಪದಕ ಗೆಲ್ಲುವೆನೆಂಬ ಅದಮ್ಯ ಆತ್ಮವಿಶ್ವಾಸ ನನಗಿತ್ತು.

ಈ ಕ್ರೀಡಾಕೂಟ ಮುಗಿಯುತ್ತಿದ್ದಂತೆಯೇ ನನ್ನ ಬದುಕಿನ ದಿಕ್ಕು ಖಂಡಿತ ಬದಲಾಗುತ್ತದೆ ಎಂದು ಒಳಮನಸ್ಸು ಸದಾ ಪಿಸುಗುಡುತ್ತಲೇ ಇತ್ತು. ಎದುರಾಳಿ ಯಾರೇ ಆಗಿದ್ರೂ ಸರಿ, ಈ ಕ್ರೀಡಾ ಕೂಟದಲ್ಲಿ ಗೆಲ್ಲುವವಳು ನಾನೇ ಎಂದು ಮತ್ತೆ ಮತ್ತೆ ಹೇಳಿಕೊಂಡೆ. ಕ್ವಾರ್ಟರ್ ಫೈನಲ್‌ನಲ್ಲಿ ಎದುರಾದ ಹಾಲೆಂಡ್‌ನ ನಾಡಿಯಾ ಹಕೊಮಿಯಾಗಲಿ, ಸೆಮಿಫೈನಲ್‌ನಲ್ಲಿ ಎದುರಾದ ಜಾಮಿ ಬೆಹ್ನಾ ಅವರಾಗಲಿ ನನ್ನಲ್ಲಿ ಲವಲೇಶದ ಭಯವನ್ನೂ ಉಂಟು ಮಾಡಲಿಲ್ಲ. ಇವರಿಬ್ಬರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಅಲ್ಲಿ ನನಗೆ ಎದುರಾದಾಕೆ ಟರ್ಕಿಯ ಹೌಲಾ ಸಾಹಿನ್. ಈಕೆಯ ವಿರುದ್ಧ ಖಂಡಿತ ಜಯಗಳಿಸಬಲ್ಲೆ ಎಂಬ ವಿಶ್ವಾಸ ನನಗಿತ್ತು.

ಉಹುಂ, ಹಾಗಾಗಲಿಲ್ಲ. ಹೌಲಾ ಸಾಹಿನ್‌ಗೆ 13-5ರಲ್ಲಿ ಸೋತು ಹೋದೆ. ಈ ಸೋಲಿಗೆ ಕಾರಣವೆಂದರೆ, ಕ್ರೀಡಾಕೂಟದ ಸಂದರ್ಭದಲ್ಲಿ ನಮಗೆ ಸಿಕ್ಕಿದ ಊಟ. ಆ ಆಹಾರ ನಮ್ಮ ದೇಹ ಪ್ರಕೃತಿಗೆ ಒಗ್ಗಲೇ ಇಲ್ಲ. ಪರಿಣಾಮವಾಗಿ, 48 ಕೆ.ಜಿ ವಿಭಾಗದಲ್ಲಿ ಬಾಕ್ಸಿಂಗ್ ಅಖಾಡಕ್ಕೆ ಇಳಿದಿದ್ದ ನಾನು ಫೈನಲ್ ಸ್ಪರ್ಧೆ ನಡೆದ ದಿನ 46 ಕೆ.ಜಿ. ಗೆ ಇಳಿದು ಹೋಗಿದ್ದೆ. ತೀರಾ ನಿಶ್ಶಕ್ತಿಯ ಕಾರಣದಿಂದ ಸಮಬಲದ ಸ್ಪರ್ಧೆ ನೀಡಲು ಸಾಧ್ಯವಾಗಲೇ ಇಲ್ಲ. ಪರಿಣಾಮವಾಗಿ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಈ ಸೋಲು ನನ್ನನ್ನು ಹತಾಶೆಗೆ ಈಡು ಮಾಡಿತು. ಸ್ಪರ್ಧೆ ಮುಗಿಯುತ್ತಿದ್ದಂತೆಯೇ ರೂಮ್‌ಗೆ ಹೋಗಿ ಸಮಾಧಾನವಾಗುವವರೆಗೂ ಅತ್ತೆ. ಅಮೆರಿಕಕ್ಕೆ ಹೊರಡುವ ಮೊದಲು ಕ್ಷುಲ್ಲಕ ಕಾರಣಕ್ಕಾಗಿ ಅಪ್ಪನೊಂದಿಗೆ ಜಗಳಮಾಡಿಕೊಂಡು ಬಂದಿದ್ದೆ. ಈ ನನ್ನ ಅವಿಧೇಯತೆಗೆ ಪಾಠ ಕಲಿಸಲೆಂದೇ ದೇವರು ಶಿಕ್ಷೆಯ ರೂಪದಲ್ಲಿ ನನಗೆ ಸೋಲನ್ನು ಕರುಣಿಸಿದ್ದಾನೆ ಎಂದುಕೊಂಡೆ. ಆದರೆ, ನಮ್ಮ ಜೊತೆಗೆ ಬಂದಿದ್ದ ಕ್ರೀಡಾ ಇಲಾಖೆಯ ಅಧಿಕಾರಿಗಳು – ‘ಹಾಗೆಲ್ಲ ಯೋಚಿಸುವುದರಲ್ಲಿ ಅರ್ಥವಿಲ್ಲ. ಬೆಳ್ಳಿ ಪದಕ ಗಳಿಸಿರುವುದು ಸಾಮಾನ್ಯ ಸಂಗತಿಯಲ್ಲ. ಭಾರತದಿಂದ ಈ ಕ್ರೀಡಾಕೂಟಕ್ಕೆ ಬಂದಿರುವ ಸ್ಪರ್ಧಿಗಳ ಪೈಕಿ ಪದಕ ದಕ್ಕಿರುವುದು ನಿಮಗೆ ಮಾತ್ರ. ಅದಕ್ಕಾಗಿ ಖುಷಿಪಡಿ’ ಎಂದರು.

ನಂತರದಲ್ಲಿ ಪದಕ ಗೆದ್ದ ಖುಷಿಯೇನೋ ಜೊತೆಯಾಯ್ತು. ಆದರೆ, ಅಮೆರಿಕದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ದುಬಾರಿಯಾಗಿದ್ದುದರಿಂದ ಕುಟುಂಬದ ಜನರಿಗೆ ಯಾವುದೇ ರೀತಿಯ ನೆನಪಿನ ಕಾಣಿಕೆಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಕಡೆಗೆ ಒಂದಷ್ಟು ಚಾಕೆಲೇಟ್‌ಗಳನ್ನು ಖರೀದಿಸಿದೆ. ಅಪ್ಪ ನೀಡಿದ್ದ 2000 ರೂಪಾಯಿಗಳಲ್ಲಿ ಒಂದು ಪೈಸೆಯನ್ನೂ ಖರ್ಚು ಮಾಡದೆ ಹಾಗೆಯೇ ವಾಪಸ್ ತಂದು ಅವರಿಗೇ ಹಿಂದಿರುಗಿಸಿದೆ.

ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಆದ ಕೆಲವು ಅನುಭವಗಳನ್ನು ಇಲ್ಲಿ ಹೇಳಲೇ ಬೇಕು. ಪ್ರಾಕ್ಟೀಸ್‌ನ ಸಂದರ್ಭದಲ್ಲಿ ವಿಪರೀತ ಬೆವೆತುಹೋಗುತ್ತಿದ್ದೆ. ಹಾಗಾಗಿ, ಪ್ರಾಕ್ಟೀಸ್ ಮುಗಿದ ನಂತರ ಸ್ನಾನ ಮಾಡಲೇ ಬೇಕಾಗುತ್ತಿತ್ತು. ಅವತ್ತಿಗೆ, ಅಮೆರಿಕನ್ ಮಾದರಿಯ ಸ್ನಾನ ಗೃಹವನ್ನು ಹೇಗೆ ಬಳಸಬೇಕು ಎಂದೇ ನನಗೆ ಗೊತ್ತಿರಲಿಲ್ಲ. ಹಾಗಾಗಿ ಬಹಳ ಫಜೀತಿಯಾಯಿತು. ಸ್ನಾನದ ಮನೆಯಲ್ಲಿ ಎರಡು ನಲ್ಲಿಗಳಿದ್ದವು. ಒಂದರ ಮೇಲೆ H ಎಂದೂ, ಇನ್ನೊಂದರ ಮೇಲೆ ಈ ಎಂದೂ ಬರೆಯಲಾಗಿತ್ತು. (H ಅಂದರೆ Hot ಎಂದೂ, c ಅಂದರೆ Cold ಎಂದೂ ಅರ್ಥ. ಆದರೆ, ಆ ಸಂದರ್ಭದಲ್ಲಿ ನನಗಿದು ಗೊತ್ತೇ ಇರಲಿಲ್ಲ.) ನೀರು ಬಿಸಿಯಾಗಲು 10-20 ನಿಮಿಷ ಕಾಯಬೇಕು ಎಂದೂ ಆಗ ನನಗೆ ಗೊತ್ತಿರಲಿಲ್ಲ. ಹಾಗಾಗಿ, ಸ್ನಾನ ಮಾಡಬೇಕು ಅನ್ನಿಸಿದ ತಕ್ಷಣ H ಅಕ್ಷರವಿದ್ದ ನಲ್ಲಿ ತಿರುಗಿಸುತ್ತಿದ್ದೆ. ಆ ಕ್ಷಣಕ್ಕೆ ಉಗುರುಬೆಚ್ಚಗಿನ ನೀರು ಬರುತ್ತಿತ್ತು. ಯಾರನ್ನಾದರೂ ಈ ಬಗ್ಗೆ ಕೇಳೋಣ ಅಂದುಕೊಂಡೆ. ಆದರೆ, ಹೀಗೆಲ್ಲ ಕೇಳುವವರನ್ನೂ ‘ಪೆದ್ದರು’ ಅಂದುಕೊಂಡರೆ ಕಷ್ಟ ಅನಿಸಿದ್ದರಿಂದ ಆ ಕೊರೆಯುವ ಚಳಿಯಲ್ಲಿ ಉಗುರುಬೆಚ್ಚಗಿನ ನೀರಿನಲ್ಲಿಯೇ ಸ್ನಾನ ಮುಗಿಸುತ್ತಿದ್ದೆ.

ಅಮೆರಿಕ ಮಾತ್ರವಲ್ಲ, ವಿದೇಶಗಳಿಗೆ ಹೋದಾಗಲೆಲ್ಲ ಅಲ್ಲಿನ ಸ್ನಾನದ ಮನೆಗಳನ್ನು ಹೇಗೆ ಉಪಯೋಗಿಸಬೇಕೋ ತಿಳಿಯದೆ ಸಮಸ್ಯೆಯಾಗಿದೆ. ಒಂದು ಸಂದರ್ಭದಲ್ಲಿ ನಲ್ಲಿ ತಿರುಗಿಸಿದಾಗ ಅದರಿಂದ ಕುದಿಯುವಷ್ಟು ಬಿಸಿಯಾಗಿದ್ದ ನೀರು ಹೊರಬಂದು ಕೈಮೇಲೆ ಬಿದ್ದಿದ್ದರಿಂದ ಚರ್ಮವೇ ಕಿತ್ತುಹೋಗಿತ್ತು. ಕೆಲವು ದೇಶದಲ್ಲಿರುವ ಹೋಟೆಲುಗಳಲ್ಲಿ ಮಲಗಿದ್ದ ಸಂದರ್ಭದಲ್ಲಿ ಜೀರೊ ಕ್ಯಾಂಡಲ್ ಬಲ್ಬ್ ಸ್ವಿಚ್ ಯಾವುದು ಎಂದೇ ಗೊತ್ತಾಗುತ್ತಿರಲಿಲ್ಲ. ಆಗೆಲ್ಲ ಮೈನ್ ಲೈಟ್‌ಗಳನ್ನು ಉರಿಸುತ್ತಲೇ ನಾನು ನಿದ್ರೆ ಮಾಡುತ್ತಿದ್ದೆ. ಈ ವಿಷಯವಾಗಿ ಯಾರನ್ನಾದರೂ ಕೇಳಬೇಕು ಅಂದುಕೊಳ್ಳುತ್ತಿದ್ದೆ. ಆದರೆ, ಹೀಗೆ ಕೇಳಿದರೆ ಹಲವರ ಮುಂದೆ ಗೇಲಿಗೆ ಒಳಗಾಗುತ್ತೇನೆ ಎಂಬ ಸಂಕಟದಿಂದ ಯಾರಲ್ಲೂ ಏನನ್ನೂ ವಿಚಾರಿಸುತ್ತಲೇ ಇರಲಿಲ್ಲ. ವಿದೇಶಕ್ಕೆ ಹೋದಾಗ ನನಗೆ ಮಾತ್ರವಲ್ಲ, ಬಹುಪಾಲು ಎಲ್ಲ ಸ್ಪರ್ಧೆಗಳಿಗೂ ಇಂಥ ಫಜೀತಿಗಳು ಜೊತೆಯಾಗುತ್ತಿದ್ದವು. ನಾವು ಎಲ್ಲರೂ ಒಟ್ಟಾಗಿ ಸೇರಿದಾಗ ಎಲ್ಲವನ್ನೂ ಹೇಳಿಕೊಂಡು ಗೊಳ್ಳನೆ ನಗುತ್ತಿದ್ದೆವು.

ಮತ್ತೊಂದು ಕ್ರೀಡಾಕೂಟದ ಕಾರಣಕ್ಕೆಂದು ಚೀನಾಕ್ಕೆ ಹೋಗಿದ್ದಾಗ ಹೀಗಾಯಿತು. ಎಲ್ಲರಿಗೂ ಗೊತ್ತಿರುವಂತೆ ಚೀನಾದಲ್ಲಿ ಮಾರುದ್ದದ ಕಡ್ಡಿಗಳ ನೆರವಿನಿಂದ ತಿಂಡಿ ತಿನ್ನುತ್ತಾರೆ. ಊಟ ಮಾಡುವ ಸಂದರ್ಭದಲ್ಲೂ ಅಲ್ಲಿನ ಜನ ಮಾರುದ್ದದ ಕಡ್ಡಿಗಳನ್ನೇ ಬಳಸಿಕೊಂಡು ಆಹಾರ ತಿನ್ನುತ್ತಾರೆ. ನಮಗೂ ತಿಂಡಿಯ ಸಂದರ್ಭದಲ್ಲಿ ಆ ಕಡ್ಡಿಗಳನ್ನೇ ಕೊಡಲಾಯಿತು. ಅವುಗಳ ಮಧ್ಯೆ ತಿಂಡಿ ಸಿಕ್ಕಿಸಿಕೊಂಡು ಅವನ್ನು ಬಾಯಿಗೆ ಒಯ್ಯುವುದೇ ಪ್ರಯಾಸವಾಗಿತ್ತು. ಈ ಸಂದರ್ಭದಲ್ಲಿ ನನ್ನ ಜೊತೆಗಾರರೆಲ್ಲ ಸ್ಪೂನ್‌ಗಳನ್ನು ನೀಡುವಂತೆ ಹೋಟೆಲಿನವರಿಗೆ ಮನವಿ ಮಾಡಿದರು. ಆದರೆ, ನಾನು ಮಾತ್ರ ಅಷ್ಟುದ್ದದ ಕಡ್ಡಿಗಳ ಮೂಲಕವೇ ತಿಂದು ಮುಗಿಸಿದೆ.

ಕ್ರೀಡೆಯಲ್ಲಿ ಮಹಿಳಾ ಬಾಕ್ಸಿಂಗ್‌ನ ಅಧ್ಯಾಯ ಆಗ ತಾನೆ ಆರಂಭವಾಗಿತ್ತು. ಹಾಗಾಗಿ, ವಿಶ್ವ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ನಾನು ದೇಶಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟರೂ ಮಾಧ್ಯಮಗಳಲ್ಲಿ ಅದು ಸುದ್ದಿಯಾಗಲೇ ಇಲ್ಲ. ಆದರೆ, ದೆಹಲಿಯಲ್ಲಿದ್ದ ಕೋಮ್ ಸಮುದಾಯದ ಪ್ರಮುಖರು ಹಾಗೂ ಅಮೆರಿಕಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಹಣಕಾಸಿನ ನೆರವು ನೀಡಿದ್ದ ಕೋಮ್ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದು ಅಭಿನಂದಿಸಿದರು. ಅಲ್ಲಿಂದ ಇಂಫಾಲಕ್ಕೆ ಹೋದಾಗ ಕಂಡ ದೃಶ್ಯವನ್ನಂತೂ ನಾನು ಎಂದೆಂದೂ ಮರೆಯಲಾರೆ. ನನ್ನ ರಾಜ್ಯದ ನನ್ನನ್ನು ಜನ ತೆರೆದ ಜೀಪಿನಲ್ಲಿ ಕೂರಿಸಿ ಮೆರವಣಿಗೆ ಮಾಡಿದರು. ವಾದ್ಯಗೋಷ್ಠಿ, ಡ್ಯಾನ್ಸ್, ಜಯಘೋಷ ಎಲ್ಲವೂ ಆ ಮೆರವಣಿಗೆಯ ಭಾಗವಾಗಿತ್ತು. ಜನ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಲಾಂಗೊಲ್‌ನಲ್ಲಿ, ಸರ್ಕಾರಿ ವಸತಿ ಗೃಹಗಳು ಇದ್ದ ಜಾಗದಲ್ಲೇ ಒಂದು ದೊಡ್ಡ ಪೆಂಡಾಲ್ ಹಾಕಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಂದು ವೇದಿಕೆಯ ಮೇಲಿದ್ದವರೆಲ್ಲ ನನ್ನ ಸಾಧನೆಯನ್ನು ಹಾಡಿ ಹೊಗಳಿದರು. ಅಂದು, ಸಾಂಪ್ರದಾಯಿಕ ರೀತಿಯಲ್ಲಿ ಅಂದರೆ, ಫಲ ತಾಂಬೂಲ ನೀಡಿ ಶಾಲು ಹೊದಿಸುವ ಮೂಲಕ ನನ್ನನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನನ್ನ ಕೋಚ್ ಓಜಾ ಇಬೋಮ್ಚಾ ಅವರನ್ನೂ ಸನ್ಮಾನಿಸಲಾಯಿತು.

ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್‌ನಲ್ಲಿ ನಾನು ಪದಕ ಗೆದ್ದದ್ದು, ಉಳಿದೆಲ್ಲರಿಗಿಂತ ನನ್ನ ಕೋಮ್ ಸಮುದಾಯದ ಜನರಿಗೆ ವಿಪರೀತ ಹೆಮ್ಮೆಯನ್ನು ಉಂಟು ಮಾಡಿತ್ತು. ನಿಜ ಹೇಳಬೇಕೆಂದರೆ ಇಡೀ ದೇಶದಲ್ಲಿ ನಮ್ಮ ಸಮುದಾಯದ ಒಟ್ಟು ಜನಸಂಖ್ಯೆ ಕೆಲವೇ ಸಾವಿರದಷ್ಟಿದೆ. ಈ ದೇಶದ ಎಷ್ಟೋ ಮಂದಿಗೆ, ಕೋಮ್ ಎಂಬ ಸಮುದಾಯವಿದೆ ಎಂಬುದೇ ಗೊತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ನಾನು ಪದಕ ಗೆದ್ದಿದ್ದು ನಮ್ಮ ಸಮುದಾಯವನ್ನು ಗುರುತಿಸಲು ಖಂಡಿತ ಸಹಾಯವಾಗಿತ್ತು. ಅವತ್ತು, ಇಂಫಾಲದಲ್ಲಿ ಅಭಿನಂದನೆ ಸ್ವೀಕರಿಸಿದ ನಂತರ ನಾನು ಇದನ್ನೇ ಹೇಳಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪದಕ ಗೆಲ್ಲುವ ಮೂಲಕ ಕೋಮ್ ಸಮುದಾಯದ ಹೆಸರು ಜಗತ್ತಿನ ಎಲ್ಲರಿಗೂ ಗೊತ್ತಾಗುವಂತೆ ಮಾಡುತ್ತೇನೆ ಎನ್ನುತ್ತಲೇ ನನ್ನ ಭಾಷಣ ಮುಗಿಸಿದೆ.

ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದ ಬೆಳ್ಳಿ ಪದಕ, ನಮ್ಮ ಕುಟುಂಬದ ಆರ್ಥಿಕ ಸಮಸ್ಯೆ ಪರಿಹಾರವಾಗಲು ಕಾರಣವಾಯಿತು ಎಂಬುದು ಸುಳ್ಳಲ್ಲ. ಹೇಗೆಂದರೆ ಕೇಂದ್ರದ ಕ್ರೀಡಾ ಸಚಿವಾಲಯವು 9 ಲಕ್ಷ ರು.ಗಳ ಬಹುಮಾನ ಘೋಷಿಸಿತು. ಈ ಹಣ ನನಗೆ ಅಂದಿನಾ ಕ್ರೀಡಾ ಸಚಿವೆ ಉಮಾ ಭಾರತಿ ಅವರ ಮೂಲಕ ತಲುಪಲು ಒಂದು ವರ್ಷ ಬೇಕಾಯಿತು. ಆ ಮಾತು ಬೇರೆ. ಈ ದೊಡ್ಡ ಮೊತ್ತದ ಹಣ ಬಂದಾಗ ನಾನು ಮಾಡಿದ ಮೊದಲ ಕೆಲಸವೆಂದರೆ ನನ್ನ ತಂದೆಗೆ ಬೇಸಾಯಕ್ಕೆ ಸ್ವಲ್ಪ ಜಮೀನು ತೆಗೆದುಕೊಟ್ಟಿದ್ದು. ತುಂಡು ಭೂಮಿಯೂ ಇಲ್ಲದ ವ್ಯಕ್ತಿ ಎಂದು ಅವರಿವರು ನನ್ನ ಅಪ್ಪನನ್ನು ಕರೆದಾಗಲೆಲ್ಲ ನನಗೆ ವಿಪರೀತ ಸಂಕಟವಾಗುತ್ತಿತ್ತು. ಸ್ವಲ್ಪ ಹಣವನ್ನು ತಮ್ಮ ಹಾಗೂ ತಂಗಿಯ ಶಿಕ್ಷಣಕ್ಕೆಂದು ಎತ್ತಿಟ್ಟೆ. ‘ಅಕ್ಕಾ ಈ ಬಹುಮಾನದ ಹಣ ಬಂದಿರೋದು ನಿನಗೆ. ಮುಂದೆ ನಿನ್ನ ಖರ್ಚುಗಳು ಹೇಗಿರುತ್ತದೋ ಗೊತ್ತಿಲ್ಲ. ನಮಗೆ ಹಣ ಬೇಡ, ನೀನೇ ಇಟ್ಕೋ’ ಎಂದು ತಮ್ಮ, ತಂಗಿ ಹೇಳುತ್ತಲೇ ಇದ್ದರು. ಆದರೆ, ಮನೆಯ ಹಿರಿಯ ಮಗಳಾಗಿ ಇದೆಲ್ಲ ನಾನು ನಿರ್ವಹಿಸಲೇಬೇಕಾದ ಜವಾಬ್ದಾರಿಯಾಗಿತ್ತು.
ಈ ಸಂದರ್ಭದಲ್ಲಿ ನನ್ನನ್ನು ಬಾಕ್ಸರ್ ಆಗಿ ತಯಾರು ಮಾಡಿದ ಮಣಿಪುರದ ಬಾಕ್ಸಿಂಗ್ ಅಕಾಡೆಮಿಯನ್ನು, ಕೋಚ್‌ಗಳಾದ ಓಜಾ ಇಬೋಮ್ಚಾ, ಓಜಾ ನರ್ಜಿತ್, ಕಿಶನ್ ಹಾಗೂ ಖೊಬಿ ಸಲಾಂ ಅವರನ್ನೂ ಮರೆಯುವುದುಂಟೆ? ಎಲ್ಲರಿಗೂ ಪುಟ್ಟ ಪುಟ್ಟ ನೆನಪಿನ ಕಾಣಿಕೆ ನೀಡಿ ನನ್ನ ಖುಷಿ ಹಂಚಿಕೊಂಡೆ. ಜೊತೆಗೆ, ಮಣಿಪುರದ ಬಾಕ್ಸಿಂಗ್ ಅಕಾಡೆಮಿಗೆ ಪುಟ್ಟ ಮೊತ್ತದ ಧನವನ್ನೂ ಕಾಣಿಕೆಯ ರೂಪದಲ್ಲಿ ಕೊಟ್ಟೆ.

ಓಹ್, ಹೀಗೆ ಬಹುಮಾನವಾಗಿ ಬಂದ ಹಣದಲ್ಲಿ ನಾನು ದ್ವಿಚಕ್ರ ವಾಹನವನ್ನೂ ಖರೀದಿಸಿದೆ. ಮಣಿಪುರದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಿ ಬರಲು ಹೆಚ್ಚಿನ ಮಹಿಳೆಯರು ದ್ವಿಚಕ್ರವಾಹನಗಳನ್ನು ಬಳಸುತ್ತಾರೆ. ಒಂದು ದ್ವಿಚಕ್ರವಾಹನ ಖರೀದಿಸಿ ಅದರಲ್ಲಿ ಸವಾರಿ ಹೋಗಬೇಕು ಎಂಬ ಆಸೆ ನನಗೂ ಬಹಳ ದಿನಗಳಿಂದ ಇತ್ತು. ಆದರೆ, ಹಣಕಾಸಿನ ಕೊರತೆಯಿಂದ ಅದು ಕನಸಾಗಿಯೇ ಉಳಿದುಹೋಗಿತ್ತು. ಈಗ 9 ಲಕ್ಷ ರು.ನ ಬಹುಮಾನವಿತ್ತಲ್ಲ; ಅದರಲ್ಲಿ ಸ್ವಲ್ಪ ಹಣದಿಂದ ಕಡೆಗೂ ದ್ವಿಚಕ್ರ ವಾಹನ ಖರೀದಿಸಿದೆ.

ಉಳಿದ ಹಣವನ್ನು ನನ್ನ ಪ್ರವಾಸ ಹಾಗೂ ತರಬೇತಿಯ ಖರ್ಚುಗಳಿಗೆಂದು ಎತ್ತಿಟ್ಟುಕೊಂಡೆ. ನನ್ನ ಕ್ರೀಡಾ ಬದುಕು ಆಗ ತಾನೆ ಆರಂಭವಾಗಿತ್ತು. ಹಾಗಾಗಿ ನಾನು ತುಂಬ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿತ್ತು. ಮುಂದಿನ ದಿನಗಳಲ್ಲಿ ಅಕಸ್ಮಾತ್ ಮತ್ತಷ್ಟು ಹಣ ಬೇಕಾದರೆ ಅದನ್ನೂ ಹೊಂದಿಸುವ ಶಕ್ತಿ ಖಂಡಿತ ನನ್ನ ಪೋಷಕರಿಗೆ ಇರಲಿಲ್ಲ. ಅಥವಾ ಈಗ ಬಹುಮಾನದ ರೂಪದಲ್ಲಿ ದೊರೆತ 9 ಲಕ್ಷದಿಂದ ಬದುಕಿನ ಎಲ್ಲ ಅಗತ್ಯಗಳನ್ನೂ ಪೂರೈಸಿಕೊಳ್ಳಲೂ ಸಾಧ್ಯವಿರಲಿಲ್ಲ.

ಆದರೂ, ಮೊದಲ ಬಾರಿ ನನ್ನ ಕೊರಳಿಗೆ ಬಿದ್ದ ಅಂತಾರಾಷ್ಟ್ರೀಯ ಮಟ್ಟದ್ದಾದ ಬೆಳ್ಳಿ ಪದಕ ನನ್ನ ಪಾಲಿಗೆ ದೊಡ್ಡ ನಿಧಿಯೇ ಹೌದು. ಈ ಪದಕ ಕಂಡಾಗಲೆಲ್ಲ ಅದನ್ನು ಪಡೆಯಲು ನಾನು ನಡೆಸಿದ ಹೋರಾಟ ಕಣ್ಮುಂದೆ ಸುಳಿಯುತ್ತಲೇ ಇರುತ್ತದೆ.

– ವಿಶ್ವೇಶ್ವರ ಭಟ್
vbhat@me.com

4 Comments

  1. Wonderful and inspirational story to all of us 🙂

  2. Unbreakable in the real sense…. Inspiring….:-)

  3. its amaizing. not only amaizing its inspirational also. a currage to all those who want to do something unbelivable in the life

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.