ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಓದುಗರ ಮುಂದೆ ಮುಕ್ತನಾಗುತ್ತಾ ಮಾನವಂತನಾದ ಖುಷವಂತ!

ನೂರೆಂಟು ನೋಟ

indian-author-and-journalist-khushwant-singh-dies-at-99-pg-12005ರ ಅಕ್ಟೋಬರ್ ತಿಂಗಳ ಒಂದು ಸಾಯಂಕಾಲ. ನಾನು ಹಾಗೂ ‘ವಿಜಯ ಕರ್ನಾಟಕ’ ಪತ್ರಿಕೆಯ ಅಂದಿನ ಮಾಲೀಕರಾಗಿದ್ದ ವಿಜಯ ಸಂಕೇಶ್ವರ ಅವರು ದಿಲ್ಲಿಯ ಸುಜನ ಸಿಂಗ್ ಪಾರ್ಕಿನಲ್ಲಿರುವ ಖುಷವಂತ ಸಿಂಗ್ ಅವರ ಮನೆಯ ಮುಂದೆ ನಿಂತಿದ್ದೆವು. ಸಂಕೇಶ್ವರರಿಗೆ ಖುಷವಂತ ಬಗ್ಗೆ ಬೆರಗು, ಅಚ್ಚರಿಯಿತ್ತು. ಅವರ ಬಗ್ಗೆ ಸಾಕಷ್ಟು ಕೇಳಿದ್ದರು. ಅವರ ಬರಹಗಳನ್ನಾಗಲಿ, ಅಂಕಣಗಳನ್ನಾಗಲಿ ಓದಿಕೊಂಡವರಲ್ಲ. ಮೊದಲ ಬಾರಿಗೆ ಅವರಿಬ್ಬರ ಪರಸ್ಪರ ಮುಲಾಖಾತ್ ಆಯಿತು. ಖುಷವಂತ ಸಿಂಗ್ ಅವರು ಸ್ಕಾಚ್ ಬಾಟಲಿ ತೆಗೆದರು. ಪತ್ರಿಕೋದ್ಯಮ, ಟ್ರಾನ್ಸ್‌ಪೋರ್ಟ್ ವ್ಯವಹಾರ, ರಾಜಕಾರಣ, ವಿಜಯ ಕರ್ನಾಟಕ, ಕರ್ನಾಟಕ… ಹೀಗೆ ಅನೇಕ ವಿಷಯಗಳು ಸಿಪ್‌ನಿಂದ ಸಿಪ್‌ಗೆ ಹಾದುಹೋದವು.

ಖುಷವಂತಸಿಂಗ್ ಮಗ ರಾಹುಲ್‌ಸಿಂಗ್ ಸಹ ಇದ್ದರು. ಮಗನನ್ನು ಸಂಕೇಶ್ವರರಿಗೆ ಪರಿಚಯಿಸಿದರು. ಸಂಕೇಶ್ವರರು ರಾಹುಲ್ ಜತೆ ಮಾತಾಡುತ್ತಾ, ‘ನಿಮಗೆ ಎಷ್ಟು ಜನ ಮಕ್ಕಳು? ನೀವೇನು ಮಾಡುತ್ತಿದ್ದೀರಿ? ಹೆಂಡತೀನೂ ಪತ್ರಕರ್ತೆನಾ?’ ಎಂದು ಕೇಳಿದರು. ಅದಕ್ಕೆ ರಾಹುಲ್ ಬದಲು ಖುಷವಂತಸಿಂಗ್ ಅವರೇ ಹೇಳಿದರು-‘ಆತ ಬರಹಗಾರ ಹಾಗೂ ಪತ್ರಕರ್ತ ಎಂಬ ಆಪಾದನೆಗಳಿವೆ. ನನ್ನ ಮಗ ಎಂಬ ಅನುಮಾನಗಳೂ ಇವೆ. ಅವನ ಜತೆ ಯಾರು ಇರ್ತಾರೆ ಅಂತ ಹೆಂಡತಿ ಬಗ್ಗೆ ಕೇಳ್ತೀರಾ? ಗರ್ಲ್‌ಫ್ರೆಂಡ್ಸ್ ಎಷ್ಟಿರಬಹುದು ಅಂತ ಕೇಳಿ. ಅದನ್ನೂ ಸರಿಯಾಗಿ ಹೇಳಲಿಕ್ಕಿಲ್ಲ, ಕಾರಣ ಅವನಿಗೇ ಲೆಕ್ಕ ಸಿಗಲಿಕ್ಕಿಲ್ಲ. ಈ ವಿಷಯದಲ್ಲಿ ಆತ ನನ್ನ ಮಗ ಎಂದು ಆಗಾಗ ಸಾಬೀತು ಮಾಡುತ್ತಾನೆ.’

ಖುಷವಂತಸಿಂಗ್ ಮಾತಿಗೆ ಅಲ್ಲಿದ್ದ ನಾವು ಮೂರ್ನಾಲ್ಕು ಮಂದಿ ಜೋರಾಗಿ ನಕ್ಕೆವು. ಸಂಕೇಶ್ವರರು ನಗಲಿಲ್ಲ. ಮಗನ ಬಗ್ಗೆ ಸಾಕ್ಷಾತ್ ತಂದೆ ಬಾಯಿಂದ ಇಂಥ ಮಾತುಗಳನ್ನು ಕೇಳಿ ಅವರು ಸಣ್ಣ ‘ಕಲ್ಚರ್ ಶಾಕ್‌’ಗೆ ಒಳಗಾದಂತಿದ್ದರು. ಖುಷವಂತ ಮಾತುಗಳನ್ನು ಕೇಳಿ ಸಂಕೇಶ್ವರರು ರಾಹುಲ್‌ಸಿಂಗ್ ಕಡೆ ನೋಡಿದರು. ತಂದೆ ಹೇಳಿದ್ದು ನಿಜ ಎಂಬಂತೆ ಅವರು ಕೈಯಲ್ಲಿ ಹಿಡಿದ ಸ್ಕಾಚನ್ನು ನೇವರಿಸುತ್ತಾ ತಲೆಯಲ್ಲಾಡಿಸಿದರು. ಅಷ್ಟೊತ್ತಿಗೆ ರಾಹುಲ್‌ಗೆ ಫೋನ್ ಬಂತು. ‘ನೀವು ಇಲ್ಲಿ ಅರ್ಧಗಂಟೆ ಕುಳಿತರೆ ಇಂಥ ಹತ್ತಾರು ಕರೆಗಳು ಬರುತ್ತವೆ. ‘He ‌is enj‌oy‌in‌g ‌h‌is s‌c‌ot‌c‌h as m‌u‌c‌h as ‌g‌i‌rlf‌r‌i​ends’ ಎಂದರು ಖುಷವಂತ. ಸಂಕೇಶ್ವರರಿಗೆ ಮಗನ ಬಗ್ಗೆ ಅಪ್ಪನ ಬಾಯಿಂದ ಬಂದ ಮಾತುಗಳನ್ನು ಕೇಳಿ ತಲೆ ಗಿರ್ರ್ ಎಂದಿರಬೇಕು.

ಖುಷವಂತಸಿಂಗ್ ಮನೆಯಿಂದ ಬರುವಾಗ ಸಂಕೇಶ್ವರರು ‘ಇದೇನ್ರಿ ಈ ಮುದುಕಾ? ಅಪ್ಪನೇ ಮಗನ ಅಫೇರ್‌ಗಳ ಬಗ್ಗೆ ಅವನ ಮುಂದೆಯೇ ಹೇಳ್ತಾನಲ್ಲ? ಇದೆಂಥ ಸಂಬಂಧಾರೀ?’ ಎಂದು ಆಘಾತಮಿಶ್ರಿತರಾಗಿ ಕೇಳಿದರು. ‘ಸಾರ್, ಇದರಲ್ಲೇನು ಬಂತು? ಸ್ವತಃ ಖುಷವಂತಸಿಂಗ್ ಇವನ್ನೆಲ್ಲ ತಮ್ಮ ಪುಸ್ತಕಗಳಲ್ಲಿ ಬರೆದಿದ್ದಾರೆ. ಮಗನ ಗರ್ಲ್ ಫ್ರೆಂಡ್ಸ್ ಪೈಕಿ ಕೆಲವರು ಅಪ್ಪನ ಗರ್ಲ್‌ಫ್ರೆಂಡ್ಸ್ ಸಹ ಹೌದು. ಈ ವಿಷಯದಲ್ಲಿ ಅಪ್ಪ-ಮಗ ಬಹಳ ಓಪನ್. ರಾಹುಲ್‌ಸಿಂಗ್ ಈ ವಿಷಯದಲ್ಲಿ ಅಪ್ಪನ ಜತೆ ಈಗಲೂ ಪೈಪೋಟಿಯಲ್ಲಿದ್ದಾರೆ ಹಾಗೂ ಪ್ರತಿ ಸಲ ಅಪ್ಪನಿಗೆ ಸೋಲುತ್ತಾರೆ’ ಅಂದೆ. ಆ ರಾತ್ರಿ ನಾವು ಹೋಟೆಲ್ ತಲುಪುವವರೆಗೆ ಈ ಸಂಬಂಧದ ಬಗ್ಗೆ ಅವರು ಗೊಂದಲದಿಂದ ಹೊರಬಂದಿರಲಿಲ್ಲ.

ಖುಷವಂತಸಿಂಗ್ ಇದ್ದಿದ್ದೇ ಹಾಗೆ. ಅವರು ಬೇರೆಯವರಿಗಾಗಿ ಬದುಕಲಿಲ್ಲ. ಬರೆಯಲಿಲ್ಲ. ಅನಿಸಿದಂತೆ ಬದುಕಿದರು, ಬರೆದರು. ಅವರ ಬದುಕು ಹಾಗೂ ಬರಹ ಬೇರೆ ಬೇರೆ ಆಗಿರಲಿಲ್ಲ. ಅವರು ತಮ್ಮನ್ನು ಬಹಳ ಸೀರಿಯಸ್ ಆಗಿ ಭಾವಿಸಿದವರೂ ಅಲ್ಲ. ಹಾಗೆ ನೋಡಿದರೆ ಅವರು ತಮ್ಮನ್ನು ಗೇಲಿ ಮಾಡಿಕೊಂಡರು. ತಮ್ಮನ್ನು ‘ದಿಲ್ಲಿಯ ಕೊಳಕು ಮನುಷ್ಯ'(D‌i‌rty​man ‌of Del‌h‌i) ಎಂದು ಕರೆದುಕೊಂಡರು. ತಮ್ಮ ಕೃತಿಯೊಂದಕ್ಕೆ N‌ot a n‌i‌ceman t‌o ‌kn‌ow ಎಂಬ ಶೀರ್ಷಿಕೆ ಕೊಟ್ಟುಕೊಂಡರು. ಮನಸ್ಸಿನಲ್ಲಿರುವುದನ್ನು ಮುಚ್ಚಿಟ್ಟುಕೊಂಡು ನಾಟಕವಾಡಲಿಲ್ಲ. ತಾನೊಬ್ಬ ಮಹಾನ್ ಲೇಖಕ ಎಂದು ಪೋಸು ಕೊಡಲಿಲ್ಲ. ಉಪದೇಶ ಕೊಡಲಿಲ್ಲ. ‘ನಮ್ಮೆಲ್ಲರ ಸಮಸ್ಯೆಗಳು ಆರಂಭವಾಗುವುದು ನಾವು ನಮ್ಮನ್ನು ಬಹಳ ಗಂಭೀರವಾಗಿ ತೆಗೆದುಕೊಂಡಾಗ. ನಾವು ನಾವಾಗಿರದ ನಮ್ಮನ್ನು ಕಲ್ಪಿಸಿಕೊಳ್ಳುತ್ತೇವೆ. ನಾಟಕ ಆಡುತ್ತೇವೆ. ಕೃತ್ರಿಮ, ಕೃತಕ ಹಾವಭಾವ ಶುರುಮಾಡುತ್ತೇವೆ. ನಮ್ಮ ನಡಿಗೆ- ಉಡುಗೆಯೆಲ್ಲ ಬದಲಾಗುತ್ತದೆ. ನಮ್ಮನ್ನು ಮತ್ತ್ಯಾರೋ ಎಂದು ಕಲ್ಪಿಸಿಕೊಂಡು ವ್ಯವಹರಿಸಲು ಆರಂಭಿಸುತ್ತೇವೆ. ನಮ್ಮ ದೇಹದೊಳಗೆ ಇನ್ಯಾರದೋ ಆತ್ಮ ತಂದಿಟ್ಟರೆ ಏನಾಗುತ್ತದೋ ಆ ರೀತಿ ಆಗುತ್ತೇವೆ. ಮುಖವಾಡ ಧರಿಸಿ ಜೀವಿಸುವುದನ್ನು ರೂಢಿಸಿಕೊಳ್ಳುತ್ತೇವೆ. ಅನಂತರ ಮುಖೇಡಿಗಳಾಗಿ ಮುಖವಾಡವನ್ನೇ ಪ್ರೀತಿಸಲಾರಂಭಿಸುತ್ತೇವೆ. ಅದು ನಮ್ಮ ಅಧಃಪತನ. ಈ ಸೋಗಲಾಡಿತನದಿಂದ ಎಷ್ಟು ಬೇಗ ಹೊರಬರುತ್ತೀರೋ ಅಷ್ಟು ಬೇಗ ನೀವು ಸಹಜವಾಗಿ, ನಿಮ್ಮಂತೆ ನೀವಾಗುತ್ತೀರಿ. ಅದಕ್ಕಾಗಿ ನೀವು ಮಾಡಬೇಕಾದ ಸುಲಭ ಉಪಾಯವೆಂದರೆ ನಿಮ್ಮಂತೆ ಇದ್ದು ಬಿಡಿ. ನಿಮಗೆ ನಿಮಗಿಂತ ಆಪ್ತರು ಯಾರೂ ಇಲ್ಲ. ಅದಕ್ಕೆ ನೀವು ನಿಮ್ಮನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಸಾರ್ವಜನಿಕವಾಗಿ ನೀವು ಎಷ್ಟು ಮುಕ್ತರಾಗುತ್ತೀರೋ ಅಷ್ಟು ಮಾನವಂತರಾಗುತ್ತೀರಿ, ಮನುಷ್ಯರಾಗುತ್ತೀರಿ. ಜನರು ಸಹ ನಿಮ್ಮನ್ನು ನೀವು ಇರುವಂತೆ, ಇಡಿಯಾಗಿ ಸ್ವೀಕರಿಸುತ್ತಾರೆ.’ ಎಂದು ಹೇಳಿದ್ದರು.

ತಮ್ಮ ಬರಹದ ಬಗೆಗೂ ಅವರಿಗೆ ಭ್ರಮೆ ಇರಲಿಲ್ಲ. ‘ನಾವು ಬರೆಯುವುದೆಲ್ಲ t‌ras‌h ಎಂಬ ಸತ್ಯಾಂಶವನ್ನು ಮನಸ್ಸಿನ ಮೂಲೆಯಲ್ಲಿಟ್ಟುಕೊಂಡೇ ಬರೆಯಬೇಕು. ಸತ್ವವಿರುವುದು ಉಳಿದುಕೊಳ್ಳುತ್ತದೆ. ಸತ್ವವಿರುವುದನ್ನು ಜನ ಸ್ವೀಕರಿಸುತ್ತಾರೆ. ಉಳಿದವು ನಾವು ಅಂದುಕೊಂಡ t‌ras‌h ಆಗಿಯೇ ಉಳಿಯುತ್ತದೆ. ನನ್ನಂತೆ ನನ್ನ ಬರಹಗಳೂ d‌i‌rty. ಓದುಗರು ಅದಕ್ಕೆ ಬೇರೆ ರೂಪ ಕೊಟ್ಟಿದ್ದಾರೆ. ನಾನು ಬರೆದಿದ್ದನ್ನೆಲ್ಲ ಪ್ರಕಟಿಸುವುದರಿಂದ ಜನ ಓದುತ್ತಿರಬಹುದು ಅಷ್ಟೆ’ ಎಂದು ತಮ್ಮ ಬರಹಗಳನ್ನೂ ಲೇವಡಿ ಮಾಡಿಕೊಂಡಿದ್ದರು. ತಮ್ಮ ಮತ್ತು ಓದುಗರ ಮಧ್ಯೆ ಗೋಡೆಯನ್ನಾಗಲಿ, ಪರದೆಯನ್ನಾಗಲಿ ಅವರು ಇಟ್ಟುಕೊಳ್ಳಲು ಬಯಸಲಿಲ್ಲ. ಪೊರೆ ಕಳಚಿಕೊಂಡೇ ಬರೆಯಲು ಕುಳಿತುಕೊಳ್ಳುತ್ತಿದ್ದರು.

ಪ್ರತಿಷ್ಠಿತ ‘ದಿ ಇಲ್ಲಸ್ಟ್ರೇಟೆಡ್ ವೀಕ್ಲಿ’ ವಾರಪತ್ರಿಕೆಗೆ ಸಂಪಾದಕರಾದಾಗ ಖುಷವಂತಸಿಂಗ್ W‌it‌h ‌Mal‌i‌ce T‌ow​a‌rds One And All ಅಂಕಣ ಬರೆಯಲು ಆರಂಭಿಸಿದಾಗ ಖ್ಯಾತ ವ್ಯಂಗ್ಯಚಿತ್ರಕಾರ ಮಾರಿಯೋ ಮಿರಾಂಡ ಹತ್ತಾರು ಚಿತ್ರಗಳನ್ನು ಬಿಡಿಸಿ ಅವರ ಮುಂದೆ ಇಟ್ಟಾಗ, ಖುಷವಂತಸಿಂಗ್ ಆಯ್ಕೆ ಮಾಡಿದ್ದು ಬಲ್ಬಿನೊಳಗೆ ಕುಳಿತು ಕೈಯಲ್ಲಿ ಸ್ಕಾಚ್ ಗ್ಲಾಸ್ ಹಿಡಿದು ನಗ್ನ ಮಹಿಳೆ ನೋಡುತ್ತಿರುವ ಖುಷವಂತಸಿಂಗ್ ಚಿತ್ರ. ಪ್ರಾಯಶಃ ಜಗತ್ತಿನ ಯಾವ ಸಂಪಾದಕನೂ ತನ್ನನ್ನು ಓದುಗರ ಮುಂದೆ ಈ ರೀತಿ ಅನಾವರಣ ಮಾಡಿಕೊಳ್ಳಲು ಧೈರ್ಯ ತೋರಲಿಕ್ಕಿಲ್ಲ. ಆದರೆ ಅವರು ತೀರಾ ಸಹಜವಾಗಿ ತಮ್ಮನ್ನು ಆ ಇಮೇಜ್‌ಗೆ ಫಿಟ್ ಮಾಡಿಕೊಂಡರು. ಆ ಬಲ್ಬಿನೊಳಗೇ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಅದನ್ನು ಮೀರಿದ ಬ್ರಹ್ಮಾಂಡವನ್ನು ಸೃಷ್ಟಿಸಿಕೊಂಡರು. ಐವತ್ತು ಸಾವಿರದಷ್ಟಿದ್ದ ಪತ್ರಿಕೆ ಪ್ರಸಾರ ನಾಲ್ಕೂವರೆ ಲಕ್ಷ ದಾಟಿತು. ಇಂದಿಗೂ ಆ ದಾಖಲೆಯನ್ನು ಯಾವ ಇಂಗ್ಲಿಷ್ ವಾರಪತ್ರಿಕೆಗೂ ಮುರಿಯಲು ಸಾಧ್ಯವಾಗಿಲ್ಲ. ತಮ್ಮನ್ನು ಓದುಗನಿಗಿಂತ ಕೆಳಗೆ ಇಟ್ಟುಕೊಂಡು ನಿರೀಕ್ಷೆಯನ್ನು ಮಾತ್ರ ಅವರಿಗಿಂತ ಎತ್ತರಕ್ಕೇರಿಸಿದರು. ತಮ್ಮನ್ನು ಬೆತ್ತಲುಗೊಳಿಸಿಕೊಳ್ಳುತ್ತಲೇ ಓದುಗರಿಗೆ ಆಪ್ತರಾದರು. ಸೆಕ್ಸ್ ಹಾಗೂ ಸ್ಕಾಚು ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಆಸಕ್ತಿಗಳೆಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ ಪತ್ರಿಕೆಯಲ್ಲಿ ಅದರ ಬಗ್ಗೆ ಬರೆದರು.

‘ಡೆಬೋನೆರ್‌’ ಪತ್ರಿಕೆ ಸಂಪಾದಕರಾಗಿದ್ದ ವಿನೋದ ಮೆಹ್ತಾ ತಮ್ಮ ಪತ್ರಿಕೆಯ ಸೆಂಟರ್ ಸ್ಪ್ರೆಡ್‌ನಲ್ಲಿ ಮಾದಕ ನಟಿ ಕೇಟಿ ಮಿರ್ಜಾಳ ತೆರೆದೆದೆಯ ಫೋಟೋವನ್ನು ಪ್ರಕಟಿಸಿದ್ದರು. ಅದನ್ನು ನೋಡಿದ ಖುಷವಂತ, ತಾವು ಅವಳ ಸ್ತನಗಳಿಗೆ ಮಾರು ಹೋಗಿರುವುದಾಗಿ ಹೇಳಿದರಷ್ಟೇ ಅಲ್ಲ, ಅವಳನ್ನು ಭೇಟಿ ಮಾಡಿಸುವಂತೆ ಮೆಹತಾಗೆ ದುಂಬಾಲು ಬಿದ್ದರಂತೆ. ಆಕೆಯನ್ನು ಭೇಟಿ ಮಾಡುವ ತನಕ ಬಿಡಲಿಲ್ಲವಂತೆ. ಈ ಎಲ್ಲ ಪ್ರಸಂಗಗಳನ್ನು ಅವರು ಓದುಗರ ಮುಂದೆ ಸ್ವಾರಸ್ಯಕರವಾಗಿ ಹಂಚಿಕೊಂಡಿದ್ದರು. ‘ನಿಜವಾದ ಅರ್ಥದಲ್ಲಿ ಹಾಗೂ ಎಲ್ಲ ಅರ್ಥಗಳಲ್ಲಿ ಅವಳು ಹೃದಯ ಶ್ರೀಮಂತೆ. ನನಗೆ ಇಷ್ಟವಾದುದೂ ಅದೇ’ ಎಂದು ಅವರು ಬರೆದುಕೊಂಡಿದ್ದರು.

ಖುಷವಂತಸಿಂಗ್ ಅವರನ್ನು ಪೋಲಿ ಅಂತೀರೋ, ಕೊಳಕ ಅಂತೀರೋ, ಚಪಲ ಚೆನ್ನಿಗರಾಯ ಅಂತೀರೋ, ನೇರಾನೇರ ವ್ಯಕ್ತಿ ಅಂತೀರೋ, ಗೊತ್ತಿಲ್ಲ. 2009ರಲ್ಲಿ ‘ಹೆಡ್‌ಲೈನ್ಸ್ ಟುಡೆ’ ಚಾನೆಲ್‌ನಲ್ಲಿ ಕೋಯಲ್ ಪುರಿ ಜತೆ ಸಂದರ್ಶನದಲ್ಲಿ ಖುಷವಂತ ಹೇಳಿದ್ದರು-‘ನಾನು ಪರಮ ಕೊಳಕ ಮನಸ್ಸಿನವನು. ನಾನು ಹೆಂಗಸರನ್ನು ನೋಡಿದ ಬಳಿಕ ಅವರು ಹಾಸಿಗೆಯಲ್ಲಿ ಹೇಗಿರಬಹುದೆಂಬುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುತ್ತೇನೆ. ನಾನು ಹೇಳುವುದನ್ನೆಲ್ಲ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಯಾಕೆಂದರೆ ಈ ರೀತಿ ಯೋಚಿಸುವವನು ನಾನೊಬ್ಬನೇ ಅಲ್ಲ. ಎಲ್ಲ ಗಂಡಸರೂ ಹೀಗೇನೇ!’

ಅನೇಕ ಮಂದಿ ಖುಷವಂತ ಸಿಂಗ್ ಬಗ್ಗೆ ಹೇಳುವುದುಂಟು, ಸೆಕ್ಸ್ ಹಾಗೂ ಸ್ಕಾಚು ಅವರ ದೌರ್ಬಲ್ಯ ಅಂತ. ಹಾಗೇನಾದರೂ ಆಗಿದ್ದರೆ ಅವರು ಲಂಪಟ ಎಂದು ಕರೆಯಿಸಿಕೊಳ್ಳುತ್ತಿದ್ದರು. ಆದರೆ ಅವರಿಗೆ ಅವೆರಡೂ ಆಸಕ್ತಿದಾಯಕ ವಿಷಯಗಳಾಗಿದ್ದವು. ವಿನೋದ ಮೆಹತಾ ಹೇಳಿದಂತೆ W‌h‌is‌k​ey and W‌omen ‌obs​e​s​sed ‌h‌im,​​ alt‌h‌o‌u‌g‌h I am n‌ot s‌u‌re ‌h‌ow ‌inten​s​e​ly ‌he ‌ind‌ul‌ged ‌in b‌ot‌h.​ He was m‌o‌re ‌of a ta​l‌ke‌r t‌han a d‌oe‌r.​

ಖುಷವಂತ ಸಿಂಗ್ ಇಷ್ಟವಾಗುತ್ತಿದ್ದುದು ಅವರ ನೇರವಂತಿಕೆಗೆ ಹಾಗೂ ಖಾಸಗಿ ವಿಷಯವನ್ನೂ, ಸಾರ್ವಜನಿಕಗೊಳಿಸುತ್ತಿದ್ದ ಪಾರದರ್ಶಕತೆಗೆ. ವ್ಯಕ್ತಿಗೆ ಖಾಸಗಿ ಹಾಗೂ ಸಾರ್ವಜನಿಕವೆಂಬ ಎರಡು ಮುಖವಾಡಗಳಿದ್ದರೆ ಅದು ತೀರಾ ಅಪಾಯಕಾರಿ ಎಂದು ಹೇಳುತ್ತಿದ್ದರು. ಖಾಸಗಿಯಾಗಿ ಮಾಡಿದ ಹಲ್ಕಾ ಕೆಲಸಗಳನ್ನು ಸಾರ್ವಜನಿಕಗೊಳಿಸಬಾರದೆಂಬ ವಾದವನ್ನು ಅವರು ಒಪ್ಪುತ್ತಿರಲಿಲ್ಲ. ಅವರು ಒಳಗೊಳಗೆ ಇಂದಿರಾಗಾಂಧಿ, ಸಂಜಯಗಾಂಧಿ ಹಾಗೂ ಮೇನಕಾ ಗಾಂಧಿಯನ್ನು ಇಷ್ಟಪಡುತ್ತಿದ್ದರು. ಆನಂತರ ತಮ್ಮ ಈ ನಿಲುವನ್ನು ಬಹಿರಂಗಪಡಿಸಿದರು. ತಾವು ಸಂಪಾದಕರಾಗಿದ್ದ ‘ಹಿಂದುಸ್ತಾನ್ ಟೈಮ್ಸ್‌’ನಲ್ಲಿ ಇಂದಿರಾ ಅವರ ಎಲ್ಲ ತಪ್ಪು ನಡೆಗಳನ್ನು ಸಮರ್ಥಿಸಿಕೊಂಡರು. ಇಂದಿರಾ ಅವರು ತುರ್ತು ಪರಿಸ್ಥಿತಿ ಹೇರಿದಾಗ, ಪತ್ರಿಕಾ ಸೆನ್ಸಾರ್ ಜಾರಿಗೊಳಿಸಿದಾಗ ಸಹ ಅದು ತಪ್ಪು ಎಂದು ಅವರಿಗೆ ಅನಿಸಲಿಲ್ಲ.

W‌hy I S‌up​p‌o‌r​ted Eme‌r‌g​en‌cy ಎಂಬ ದೀರ್ಘ ಲೇಖನವನ್ನು ಬರೆದರು. ಖುಷವಂತಸಿಂಗ್ ಅವರು ಅಕ್ಷರ ವ್ಯಭಿಚಾರ ಮಾಡುತ್ತಿದ್ದಾರೆಂಬ ಟೀಕೆಯನ್ನು ಸಹ ಲೆಕ್ಕಿಸದೇ ಅವರು ತಮ್ಮ ನಿಲುವಿಗೆ ಅಂಟುಕೊಂಡಿದ್ದರು. ಕಾಲಾನಂತರ ಗಾಂಧಿ ಕುಟುಂಬದ ಜತೆ ಅವರ ಸಂಬಂಧ ಹಳಸಿ ಹೋಗಿದ್ದು ವಿಪರ್ಯಾಸ.

ಖುಷವಂತ ಸಿಂಗ್ ಜನಸಾಮಾನ್ಯರ ಲೇಖಕರಾಗಿದ್ದರು. ಇದಕ್ಕೆ, ಅವರು ಜನಸಾಮಾನ್ಯನಿಗೂ ತಟ್ಟುತ್ತಿದ್ದ ಪತ್ರಕರ್ತರಾಗಿದ್ದುದೇ ಕಾರಣ. ಒಬ್ಬ ಸಾಮಾನ್ಯ ಓದುಗ ಏನು ಬಯಸುತ್ತಾನೆಂಬುದು ಅವರಿಗೆ ಗೊತ್ತಿತ್ತು. ಪತ್ರಿಕೆಗಳು l‌iv​e​ly ಆಗಿರಬೇಕೆಂಬುದು ಅವರ ಒಂದಂಶದ ಸೂತ್ರವಾಗಿತ್ತು. ಹೀಗಾಗಿ ಪತ್ರಿಕೆಯಲ್ಲಿ ವಿವಾದ, ಮನರಂಜನೆ, ಗಾಸಿಪ್, ಸೆಕ್ಸ್, ಕ್ರೈಮ್, ರಾಜಕೀಯ, ಸಿನಿಮಾ ಎಲ್ಲವುಗಳಿಗೆ ಆದ್ಯತೆ ನೀಡಿದರು. ‘ಪತ್ರಿಕೆ ಮಾತಾಡಬೇಕು, ವಿವಾದಕ್ಕೊಳಗಾಗಬೇಕು, ಆಸಕ್ತಿ ಕೆರಳಿಸಬೇಕು’ ಎಂಬುದು ಅವರ ಒತ್ತಾಸೆಯಾಗಿತ್ತು. ‘ಪತ್ರಕರ್ತನಾದವನು ಮಡಿವಂತಿಕೆ ಬಿಡಬೇಕು, ಆಗಲೇ ಪತ್ರಿಕೆ ಶುದ್ಧವಾಗುತ್ತದೆ’ ಎಂದು ಹೇಳುತ್ತಿದ್ದರು. ಅವರ ಬರಹ ಈ ಮೂಸೆಯಲ್ಲಿಯೇ ಅರಳಿರುವುದನ್ನು ಯಾರಾದರೂ ಗುರುತಿಸಬಹುದು. ಖುಷವಂತ ಇಂಗ್ಲಿಷನ್ನು ಓದಲು ಡಿಕ್ಷನರಿ ಅವಶ್ಯಕತೆ ಇರಲಿಲ್ಲ. ಅವರ ಭಾಷೆಯಲ್ಲಿ ಪಾಂಡಿತ್ಯ, ಪೊಗರು, ಡೌಲಿನ ಪ್ರದರ್ಶನವಿರಲಿಲ್ಲ. ಹೃದಯಕ್ಕೆ ಆಪ್ತವಾಗುವ ಭಾಷೆಯಲ್ಲಿ ಬರೆದರು. ವಿಷಯದಲ್ಲಿ ಸ್ಪಷ್ಟತೆಯಿತ್ತು, ಲಾಲಿತ್ಯವಿತ್ತು. ಓದಿಸಿಕೊಂಡು ಹೋಗುವ ಶೈಲಿ ಇತ್ತು.

ಖುಷವಂತ ಸಿಂಗ್‌ಗೆ ಸ್ಕಾಲರ್‌ನಲ್ಲಿ ಇರಬೇಕಾದ ವೈಶಿಷ್ಟ್ಯಗಳು, ಗುಣಕಥನಗಳೂ ಇದ್ದವು. ‘ಟ್ರೇನ್ ಟು ಪಾಕಿಸ್ತಾನ’, ‘ಸಿಖ್ಖರ ಇತಿಹಾಸ’ ಹಾಗೂ ‘ದಿಲ್ಲಿ’ ಕೃತಿಗಳನ್ನು ಓದಿದರೆ ನಮಗೆ ಅಲ್ಲಿ ಬೇರೆ ಖುಷವಂತಸಿಂಗ್ ಅವರ ದರ್ಶನವಾಗುತ್ತದೆ. ಗಂಭೀರ, ಸಂಶೋಧನಾತ್ಮಕ, ಅಧ್ಯಯನದ ಎರಕದಿಂದ ಹೊಯ್ದ ಕೃತಿ ರಚನೆಯೂ ಸಾಧ್ಯ ಎಂಬುದನ್ನು ಅವರು ತೋರಿಸಿಕೊಟ್ಟರು. ಆದರೆ ಅಂಕಣ ಬರಹಗಳೇ ಅವರ ಹೆಚ್ಚಿನ ಸಮಯವನ್ನು ಸತಾಯಿಸಿ ಪಡೆಯುತ್ತಿದ್ದವು. ದೇಶದ ನಲವತ್ತಕ್ಕೂ ಹೆಚ್ಚು ಪತ್ರಿಕೆಗಳಿಗೆ ವಾರಕ್ಕೆ ಎರಡರಂತೆ ಸಿಂಡಿಕೇಟೆಡ್ ಅಂಕಣಗಳನ್ನು ಮೂವತ್ತು ವರ್ಷಗಳ ಕಾಲ ಬರೆದರು. ತಮ್ಮ ತೊಂಬತ್ತೊಂಬತ್ತನೆ ವಯಸ್ಸಿನಲ್ಲಿ ನಿಧನರಾಗುವುದಕ್ಕಿಂತ ಎರಡು ತಿಂಗಳ ಮುಂಚಿನವರೆಗೂ ಬರಹದ ಸಹವಾಸ ಬಿಡಲಿಲ್ಲ. ಈ ಅವಧಿಯಲ್ಲಿ ಒಂದು ವಾರವೂ ನೆಪ ಹೇಳದೇ ಬರೆದರು. ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ ಅವರಿಂದ ಅಂಕಣ ಬರೆಸಿದೆ. ಪ್ರತಿ ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ನಮ್ಮ ದಿಲ್ಲಿ ಪ್ರತಿನಿಧಿ ಅವರ ಮನೆಗೆ ಹೋದರೆ ಅಂಕಣ ಸಿದ್ಧವಾಗಿರುತ್ತಿತ್ತು. ಬರಹ ಅವರಲ್ಲಿ ಜೀವನಪ್ರೀತಿ, ಶ್ರದ್ಧೆ, ಶಿಸ್ತನ್ನು ರೂಢಿಸಿತ್ತು. ಸಾಯಂಕಾಲ ಏಳಕ್ಕಿಂತ ಮೊದಲು ಯಮನೇ ಬಂದರೂ ಬಾಗಿಲು ತೆರೆಯುತ್ತಿರಲಿಲ್ಲ. ಏಳರ ನಂತರವೇ ಆಗಮನದ ಪೂರ್ವಾನುಮತಿ ಪಡೆದವರ ಜತೆ ಗುಂಡು ಹಾಕಲು ಕುಳಿತುಕೊಳ್ಳುತ್ತಿದ್ದರು. ಎರಡು ಪೆಗ್ ಹಾಗೂ ಎಂಟೂವರೆ ಗಂಟೆ- ಈ ಪೈಕಿ ಯಾವುದು ಬೇಗ ಮುಗಿಯುವುದೋ ಅಲ್ಲಿಗೆ ಪಾರ್ಟಿ ಖತಂ! ಅವರ ಮನೆಯಲ್ಲಿ ನಿತ್ಯವೂ ನಡೆಯುತ್ತಿದ್ದ ಈ ಅಚ್ಚುಕಟ್ಟಿನ ಪಾರ್ಟಿಯಲ್ಲಿ ತರೇಹವಾರಿ ಮಂದಿ ಪಾಲ್ಗೊಳ್ಳುತ್ತಿದ್ದರು. ಅದೊಂದು ರೀತಿಯ ಸಾಂಸ್ಕೃತಿಕ ಕೇಂದ್ರವೇ ಆಗಿತ್ತು. ಐದು ಬಾರಿ ನಾನು ಅವರ ಮನೆಯಲ್ಲಿನ ಈ ‘ಪಾನಗೋಷ್ಠಿ’ಯೆಂಬ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದೆ. ಪ್ರತಿ ಸಲ ಕಂಡ ಖುಷವಂತ ಮಾತ್ರ ಬೇರೆ ಬೇರೆ.

ಸಮಯದ ವಿಷಯದಲ್ಲಿ ಖಂಡಿತವಾದಿಯಾಗಿದ್ದ ಖುಷವಂತ ಸಿಂಗ್, ಕೊನೆಗೂ ರಾಜಿ ಮಾಡಿಕೊಳ್ಳಲಿಲ್ಲ. ಒಮ್ಮೆ ಅವರ ಜನ್ಮದಿನದಂದು ಅಂದಿನ ಪ್ರಧಾನಿ ರಾಜೀವ ಗಾಂಧಿಯವರನ್ನು ಆಹ್ವಾನಿಸಿದ್ದರು. ರಾತ್ರಿ ಒಂಬತ್ತರ ನಂತರ ಅವರು ಯಾರಿಗೂ ಕಾದವರಲ್ಲ. ಇನ್ನು ಅರ್ಧಗಂಟೆಯೊಳಗೆ ಪ್ರಧಾನಿ ಬರುತ್ತಾರೆಂಬ ಸಂದೇಶ ಬಂದಿತು. ಆದರೆ ‘ಬರ್ಥಡೇ ಬಾಯ್‌’ ಮಾತ್ರ ಕಾಯಲಿಲ್ಲ. ರಾಜೀವ್ ಬಂದರು, ಹೋದರು.

ತಮ್ಮನ್ನು ಟೀಕಿಸಲು ಅನುವಾಗುವಂತೆ ಖುಷವಂತ ಬದುಕಿದರು. ಆದರೆ ಟೀಕಿಸಿದವರೆಲ್ಲ ಪ್ರೀತಿಸುವಂತೆಯೂ ಬಾಳಿದರು. ಅಕ್ಷರಗಳಲ್ಲಿಯೇ ಬದುಕಿದರು. ನಮಗೂ ಅಕ್ಷರಗಳಿಂದಲೇ ಜೀವನದರ್ಶನ ಮಾಡಿಸಿಕೊಟ್ಟರು.
ಸಾವು ಬಂದು ಕರೆದಾಗ ಮರುಮಾತಾಡದೇ ನಡೆದುಬಿಟ್ಟರು!

– ವಿಶ್ವೇಶ್ವರ ಭಟ್
vbhat@me.com

2 Comments

  1. A great journalist who lived his way not to please others. Lots of guts are required to lead such a open life. Hats Off to you Sir. We miss you but ur writings are evergreen.

  2. Sir,
    I`m very thankful to you for your wonderful articles. Now u just created a craz to read kushwant singhji. Simply great journalist. we miss him forever. and one more thing sir, we need series of articles on him…and if possible please start a coloumn in KP about him..translate his articles… thank you.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.