ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ನಂಬಿಕೆ, ವಿಶ್ವಾಸವಿಲ್ಲದೇ ಯಾವ ಸಂಬಂಧವೂ ಅರಳುವುದಿಲ್ಲ!

ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ ಎಂದಾಗ ಒಂದಿಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಬೇಡ ಅಂತ ಹೇಳಿದವರೇ. ಹೊರಟ ಸಮಯವೇ ಹಾಗಿತ್ತು. ಅದಕ್ಕೂ ಒಂದು ವಾರದ ಮೊದಲು ನಾನು ಹಾಗೂ ನನ್ನ ಸಹೋದ್ಯೋಗಿ ಪ್ರತಾಪಸಿಂಹ ವಿಚಿತ್ರ ಕಾರಣಕ್ಕೆ ಸುದ್ದಿಯಲ್ಲಿದ್ದೆವು. ನಮ್ಮ ಹತ್ಯೆಯ ಸಂಚು ರೂಪಿಸಿದ್ದರೆನ್ನಲಾದ ‘ಉಗ್ರ’ರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಅವರ ಬಾಯಿ ಬಿಡಿಸಿದಾಗ ಪೊಲೀಸರ ಮುಂದೆ ಅವರು ನಮ್ಮಿಬ್ಬರ ಕೊಲೆ ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದರು. ಸುಮಾರು ಹದಿನೈದು ದಿನಗಳ ಕಾಲ ಅವರು ನಮ್ಮ ಮೇಲೆ ನೆರಳಾಗಿ ಬೀಳುವಷ್ಟು ಸನಿಹದಲ್ಲಿ ಹಾದು ಹೋಗಿದ್ದರು. ದೇವರು ದೊಡ್ಡವನು, ಬದುಕಿದೆವು.

ಈ ಬಂಧಿತ ಉಗ್ರರಲ್ಲಿ ಕೆಲವರು ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಕೆಲ ಕಾಲ ಉಳಿದು ಉಗ್ರಗಾಮಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡವರೆಂಬ ಸಂಗತಿ ಎಲ್ಲ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಎಲ್ಲ ಘಟನಾವಳಿಗಳು ನಡೆಯುವುದಕ್ಕೆ ನಾಲ್ಕೈದು ದಿನಗಳ ಮೊದಲು ನಮ್ಮ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಅವರಿಂದ ಪಾಕ್ ಪ್ರವಾಸಕ್ಕೆ ಆಮಂತ್ರಣ ಬಂದಿತು. ಪಾಕಿಸ್ತಾನಕ್ಕೆ ಹೋಗಬೇಕೆಂಬುದು ನನ್ನ ಬಹುದಿನಗಳ ಕನಸು. ಎರಡು ವರ್ಷಗಳ ಹಿಂದೆ ಕೃಷ್ಣ ಅವರು ಪಾಕಿಸ್ತಾನಕ್ಕೆ ಹೊರಟಾಗಲೂ ಕರೆದಿದ್ದರು. ಆದರೆ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಿರಲಿಲ್ಲ. ನನ್ನ ಸಹೋದ್ಯೋಗಿಯೊಬ್ಬರನ್ನು ಕಳಿಸಿಕೊಟ್ಟಿದ್ದೆ. ನಾನು ಈವರೆಗೆ ಮೂವತ್ತೊಂಬತ್ತು ದೇಶಗಳಿಗೆ ಹೋಗಿ ಬಂದಿದ್ದೇನೆ. ಸಂಬಂಧವೇ ಇಲ್ಲದ ದೂರದ ಅಮೆರಿಕಕ್ಕೆ ಐದಾರು ಸಲ ಹೋಗಿ ಬಂದಿದ್ದೇನೆ. ಉತ್ತರ ಧ್ರುವದ ನೆತ್ತಿಗೆ ಸನಿಹದಲ್ಲಿರುವ ಪುಟ್ಟ ದೇಶ ಐಸ್್ಲ್ಯಾಂಡ್್ನಂಥ ದೇಶಕ್ಕೂ ಹೋಗಿ ಬಂದಿದ್ದೇನೆ. ಗೋವಾಗಿಂತ ಹೆಚ್ಚು ಸಲ ದುಬೈಗೆ ಹೋಗಿದ್ದೇನೆ. ಆದರೆ ನಮ್ಮ ಪಕ್ಕದಲ್ಲೇ ಇರುವ, ನಮಗೆ ತಾಕಿಕೊಂಡಿರುವ, ನಮ್ಮ ಶರೀರದ ಭಾಗದಂತೆ ಇರುವ, ಪಾಕಿಸ್ತಾನಕ್ಕೆ ಹೋಗಿಲ್ಲವಲ್ಲ, ಹೋಗಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಸಂಕಟ, ಅಸಮಾಧಾನ ಮಾತ್ರ ಸಣ್ಣಗೆ ಕೊರೆಯುತ್ತಿತ್ತು. ಹೊಸದಿಲ್ಲಿಯಿಂದ ಲಾಹೋರ್್ಗೆ ವಿಮಾನದಲ್ಲಿ ಕುಳಿತರೆ ಬರೀ ನಲವತ್ತು ನಿಮಿಷ. ಜೆ.ಪಿ. ನಗರದಿಂದ ವಿಧಾನಸೌಧಕ್ಕೆ ಹೋಗುವ ಸಮಯದಲ್ಲಿ ಇಸ್ಲಾಮಾಬಾದ್, ರಾವಲ್ಪಿಂಡಿ, ಮುಲ್ತಾನ್್ಗೆ ಹೋಗಬಹುದು. ಅಷ್ಟು ಹತ್ತಿರದಲ್ಲಿದೆ. ಮೊದಲು ಗಡಿಯಾದರೂ ಎಲ್ಲಿತ್ತು? ಈಗ ಗಡಿಯಿದೆ ಎಂಬುದನ್ನು ಬಿಟ್ಟರೆ ನಮಗೂ ಪಾಕಿಸ್ತಾನಕ್ಕೂ ಏನು ವ್ಯತ್ಯಾಸ? ಏನೇನೂ ಇಲ್ಲ. ನಾವು ಭಾರತೀಯರು ಜಗತ್ತಿನ ಯಾವ ದೇಶಕ್ಕೆ ಬೇಕಾದರೂ ಹೋಗಬಹುದು, ಬರಬಹುದು. ಆದರೆ ಪಕ್ಕದ ಪಾಕಿಸ್ತಾನಕ್ಕೆ ಮಾತ್ರ ಹೋಗುವಂತಿಲ್ಲ. ಅವರೂ ಇಲ್ಲಿಗೆ ಬರುವಂತಿಲ್ಲ. ಇದೆಂಥ ವಿಚಿತ್ರ, ವಿಪರ್ಯಾಸ?! ಹೀಗಿರುವಾಗ ಕೃಷ್ಣ ಅವರ ಆಮಂತ್ರಣ ಬಂದಾಗ ತಕ್ಷಣ ಒಪ್ಪಿಕೊಂಡೆ. ಅದಾಗಿ ಎರಡು-ಮೂರು ದಿನಗಳಲ್ಲಿ ‘ಉಗ್ರರ ಕಿತಾಪತಿ’ ಸುದ್ದಿ ಬಂತು. ಅವರು ಬೇರೆ ಪಾಕಿಸ್ತಾನದಲ್ಲಿ ಟ್ರೇನಿಂಗ್ ಪಡೆದು ಬಂದವರು.

‘ಸಾರ್, ಕೃಷ್ಣ ಅವರ ಜತೆ ಪಾಕಿಸ್ತಾನಕ್ಕೆ ಹೋಗುತ್ತಿದ್ದೇನೆ ನಾಲ್ಕು ದಿನಗಳ ಮಟ್ಟಿಗೆ’ಎಂದು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೇಳಿದೆ. ‘ಯೋಚನೆ ಮಾಡಿ. ಯಾಕೆ ಸುಮ್ಮನೆ ರಿಸ್ಕ್ ತೆಗೆದುಕೊಳ್ತೀರಿ? ಕೃಷ್ಣ ಜತೆ ಹೋಗುವಾಗ ಸೆಕ್ಯುರಿಟಿ ಇರುತ್ತೆ. ಆದರೂ ಯಾಕೆ ರಿಸ್ಕ್? ನೀವು ಹೋಗ್ತಾ ಇರೋ ಟೈಮಿಂಗ್ ಸರಿ ಇಲ್ಲ. ಯಾವುದಕ್ಕೂ ಇನ್ನೊಮ್ಮೆ ಯೋಚಿಸಿ’ ಎಂದರು. ಅವರು ಹೇಳ್ತಾ ಇರೋದರಲ್ಲಿ ಏನೂ ತಪ್ಪು ಇರಲಿಲ್ಲ. ಇದೇ ರೀತಿಯ ಅಭಿಪ್ರಾಯವನ್ನು ಕನಿಷ್ಠ ಹತ್ತು ಜನರಾದರೂ ಕೊಟ್ಟಿರಬಹುದು. ಪತ್ನಿಯೂ ‘ಯಾಕೋ ಎಡಗಣ್ಣು ಹುಬ್ಬು ಹಾರ್ತಾ ಇದೆ. ಹೋಗಲೇಬೇಕಾ?’ ಎಂದು ಕೇಳಿದಳು.

‘ನಾನು ಪಾಕಿಸ್ತಾನಕ್ಕೆ ಹೋಗುತ್ತಿರುವುದು ಉಗ್ರಗಾಮಿಗಳ ಜತೆ ಸೆಣಸಲು ಅಲ್ಲ. ಈಗಲೂ ನನಗೆ ಅನಿಸುತ್ತಿದೆ ನನಗೆ ಅವರಿಂದ ಝ್ಠಿಜಛಡಿ ಇರುವುದು ನಿಜ ಅಲ್ಲ. ಹಣೆಯಲ್ಲಿ ಬರೆದಿದ್ದನ್ನು ತಪ್ಪಿಸಲು ಯಾರಿಂದಲೂ ಆಗೊಲ್ಲ. ಎಲ್ಲ ಅವನಿಚ್ಛೆ ! ಏನೂ ಆಗೊಲ್ಲ. ಇದು ಗಟ್ಟಿಪಿಂಡ’ ಎಂದು ಹೇಳಿ, ದಿಲ್ಲಿಗೆ ಹಾರಿ ಅಲ್ಲಿಂದ ಇಸ್ಲಾಮಾಬಾದ್್ಗೆ ನೆಗೆದೆ.
ಪಾಕಿಸ್ತಾನದಲ್ಲಿ ಮೂರು ದಿನ ಇದ್ದೆವು. ಎರಡು ದಿನ ಇಸ್ಲಾಮಾಬಾದ್್ನಲ್ಲಿ ಹಾಗೂ ಒಂದು ದಿನ ಲಾಹೋರ್್ನಲ್ಲಿ ಕಳೆದೆವು. ಯಾವ ಊರಾಗಲಿ, ವ್ಯಕ್ತಿಗಳಾಗಲಿ ಮೂರು ದಿನಗಳಲ್ಲಿ ಯಾರಿಗೂ ದಕ್ಕುವುದಿಲ್ಲ. ಹಿಡಿತಕ್ಕೂ ಸಿಗುವುದಿಲ್ಲ. ನಮಗೆ ಕಾಣುವ ರಸ್ತೆ, ಸೇತುವೆ, ನದಿ, ಕಟ್ಟಡ, ಉದ್ಯಾನ, ಜನರ ಗುಂಪುಗಳನ್ನು ನೋಡಿ ತಟ್ಟನೆ ನಿರ್ಧಾರಕ್ಕೆ ಬರುವುದು, ಜಡ್ಜ್್ಮೆಂಟ್ ಕೊಡುವುದು ಪಡಪೋಶಿತನದ ಪರಮಾವಧಿ. ಹೀಗಿರುವಾಗ ಒಂದು ದೇಶದ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳುವುದು ಸಣ್ಣ ಮಾತಲ್ಲ. ಈ ಎಚ್ಚರ ಹಾಗೂ ಎಚ್ಚರಿಕೆಯಿಂದ ಮತ್ತು ಕಣ್ಣಿಗೆ ದಕ್ಕುವ ಅನುಭವಗಳ ಹಿಡಿತದಲ್ಲಿ, ಜತೆಗೆ ಓದಿದ, ಕೇಳಿದ ಸಂಗತಿಗಳನ್ನು ಹಾಸಿ ಹರವಿ ಕೆಲವು ಅಂಶಗಳನ್ನು ಹೇಳಬಹುದೆನಿಸುತ್ತದೆ. ಅದು ಸುರಕ್ಷಿತ ಹಾಗೂ ಸಮರ್ಪಕ ಕೂಡ. Politically Correct ಸಹ.

ನಿಜ ಹೇಳಬೇಕೆಂದರೆ, ಮೊದಲನೆಯದಾಗಿ, ವಿದೇಶಕ್ಕೆ ಹೋಗಿ ಬಂದೆ ಅಂತ ಅನಿಸಲಿಲ್ಲ ಹಾಗೂ ಎರಡನೆಯದಾಗಿ, ಪಾಕಿಸ್ತಾನಕ್ಕೆ ಹೋಗಿ ಬಂದೆ ಅಂತ ಸಹ ಅನಿಸಲಿಲ್ಲ. ನಮ್ಮ ದಿಲ್ಲಿಗೋ, ಲಖನೌಕ್ಕೊ, ಕಾನ್ಪುರಕ್ಕೋ, ಮೊರಾದಾಬಾದ್್ಗೋ, ಬೆಂಗಳೂರಿನ ಕಲಾಸಿಪಾಳ್ಯಕ್ಕೋ, ಶಿವಾಜಿನಗರಕ್ಕೋ, ಗೋರಿಪಾಳ್ಯಕ್ಕೋ ಹೋಗಿ ಬಂದೆನಿಸಿತು. ನಮಗೂ ಪಾಕಿಸ್ತಾನಕ್ಕೂ, ನಮಗೂ ಅವರಿಗೂ ಏನೇನೂ ಫರಕ್ಕು ಇಲ್ಲ. ಅಷ್ಟಕ್ಕೂ ನಾವು ನಮ್ಮ ಪಕ್ಕದ ಮನೆಯವರಿಗಿಂತ ಭಿನ್ನವಾಗಿರಲು ಹೇಗೆ ಸಾಧ್ಯ? ನಮ್ಮಂತೆ ಅವರು ಅಥವಾ ಅವರಂತೆ ನಾವು.

ಇದಕ್ಕೆ ಕಾರಣ ಸರಳ. ಪಾಕಿಸ್ತಾನ ಮುಸಲ್ಮಾನ ದೇಶವಿರಬಹುದು. ಆದರೆ ತಮಾಷೆ ಹಾಗೂ ವಾಸ್ತವಿಕ ಸಂಗತಿಯೇನು ಗೊತ್ತಾ? ಪಾಕಿಸ್ತಾನದಲ್ಲಿರುವ ಮುಸಲ್ಮಾನರಿಗಿಂತ ಭಾರತದಲ್ಲಿ ಅವರ ಜನಸಂಖ್ಯೆ ಹೆಚ್ಚಿದೆ. ಭಾರತದೊಳಗೇ ಹಲವು ಚಿಕ್ಕ ಚಿಕ್ಕ ಪಾಕಿಸ್ತಾನಗಳಿವೆ. ಅಂದರೆ ಪಾಕಿಸ್ತಾನಕ್ಕಿಂತ ಭಾರತದಲ್ಲಿರುವ ಪಾಕಿಸ್ತಾನವೇ ದೊಡ್ಡದು. ಹೀಗಾಗಿ ಭಾರತದಿಂದ ಪಾಕಿಸ್ತಾನಕ್ಕೆ ಹೋದವರಿಗೆ Cultural Shock ಆಗುವುದಿಲ್ಲ. ಬೇರೆ ದೇಶಕ್ಕೆ ಬಂದಿದ್ದೇನೆಂದು ಸ್ವಲ್ಪವೂ ಅನಿಸುವುದಿಲ್ಲ. ಅಲ್ಲಿನ ಜನ, ಭಾಷೆ, ಉಡುಗೆ-ತೊಡುಗೆ, ಊಟ, ತಿಂಡಿ, ಆಚರಣೆ ಎಲ್ಲವೂ ನಮ್ಮೂರಿನ ಮುಸಲ್ಮಾನರಂತೆ. ಅಲ್ಲಿ ನೆಲ, ಮಣ್ಣು, ಗಿಡಗಂಟೆ, ಹವಾಮಾನ, ವಾತಾವರಣ ಎಲ್ಲವೂ ಇಲ್ಲಿನ ಹಾಗೆ. ಬೇರೇನೂ ವ್ಯತ್ಯಾಸವಿಲ್ಲ.
ಆದರೆ ಭಾರತಕ್ಕೂ, ಪಾಕಿಸ್ತಾನಕ್ಕೂ ಅದೆಂಥ ಅಂತರ?! ನಾವಾಗಲಿ, ಅವರಾಗಲಿ ಜಗತ್ತಿನ ಯಾವುದೇ ರಾಷ್ಟ್ರಕ್ಕಾದರೂ ಹೋಗಬಹುದು ನಿರಾತಂಕವಾಗಿ. ಆದರೆ ಭಾರತದವರಿಗೆ ಪಾಕ್್ಗೆ, ಪಾಕಿಗಳು ಭಾರತಕ್ಕೆ ಹೋಗಲಾಗುವುದಿಲ್ಲ. ಹಲವಾರು ಅಡೆ-ತಡೆಗಳು. ನೂರೆಂಟು ಪ್ರಶ್ನೆಗಳು. ಕೇಳಿದ್ದೆಲ್ಲವನ್ನೂ ಕೊಟ್ಟರೂ ವೀಸಾ ಮಾತ್ರ ಕೊಡುವುದಿಲ್ಲ. ಹೀಗಾಗಿ ಪರಸ್ಪರರಿಗೆ ನೆರಹೊರೆ ಮಾತ್ರ ಬಲುದೂರ. ದೂರವಷ್ಟೇ ಆಗಿದ್ದರೆ ಪರವಾಗಿಲ್ಲ. ಆದರೆ ಪರಸ್ಪರರನ್ನು ಕಂಡರೆ ಅದೆಂಥ ವೈರತ್ವವೋ, ಹಗೆತನವೋ ಅರ್ಥವಾಗುತ್ತಿಲ್ಲ.

ವಿಚಿತ್ರ ಅಂದ್ರೆ, ನಾನು ಪಾಕಿಸ್ತಾನದಲ್ಲಿದ್ದ ಮೂರು ದಿನಗಳ ಕಾಲ ಕನಿಷ್ಠ ಇಪ್ಪತ್ತೈದು ಪಾಕಿಸ್ತಾನಿಯರನ್ನು ಭೇಟಿಯಾಗಿರಬಹುದು. ಒಬ್ಬನೇ ಒಬ್ಬ ಭಾರತದ ಬಗ್ಗೆಯಾಗಲಿ, ಭಾರತೀಯರ ಬಗ್ಗೆಯಾಗಲಿ, ಕೆಟ್ಟದಾಗಿ, ಕೀಳಾಗಿ ಮಾತಾಡಲಿಲ್ಲ. ಒಂದೇ ಒಂದು ಅಪಸವ್ಯ ನುಡಿಯಲಿಲ್ಲ. ಇಸ್ಲಾಮಾಬಾದ್್ನಲ್ಲಿ ನಾವು ಪುಸ್ತಕದ ಅಂಗಡಿಯೊಂದಕ್ಕೆ ಹೋದಾಗ ಪಾಕಿಸ್ತಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೆಕ್ಕಿ ತೆಗೆಯುತ್ತಿದ್ದನ್ನು ಕಂಡ ಅಂಗಡಿಯಾತ ಹೇಳಿದ್ದು ಈಗಲೂ ಕಿವಿಯಲ್ಲಿ ಗುಂಯ್್ಗುಡುತ್ತಿದೆ- ‘ಭಾರತ -ಪಾಕ್ ಹೇಗಿರಬೇಕಿತ್ತು? ಎಷ್ಟೊಂದು ಅನ್ಯೋನ್ಯವಾಗಿರಬೇಕಿತ್ತು? ನಾವ್ಯಾಕೆ ಹಿಂದಿನ ಜನ್ಮದ ವೈರಿಗಳಂತೆ ಕಾದಾಡುತ್ತಿದ್ದೇವೆಂಬುದೇ ತಿಳಿಯುತ್ತಿಲ್ಲ. ಇನ್ನಾದರೂ ನಮಗೆ ಗೆಳೆತನ, ಪ್ರೀತಿ ಅಂದ್ರೆ ಏನೆಂಬುದು ಅರ್ಥವಾದರೆ ಇಷ್ಟು ವರ್ಷ ಕಳೆದುಕೊಂಡಿದ್ದು ಸಿಕ್ಕಬಹುದು’.

ಪಾಕಿಸ್ತಾನದ ವಿದೇಶಾಂಗ ಸಚಿವೆ ಹಿನಾ ರಬ್ಬಾನ್ ಖರ್ ಹೇಳೋದು ಇದೇ.’ಆದದ್ದಾಯ್ತು. ಇತಿಹಾಸದಿಂದ ಪಾಠ ಕಲಿತಿದ್ದೇವೆ. ನಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳೋಣ. ಇತಿಹಾಸದ ಒತ್ತೆಯಾಳುಗಳಾಗುವುದು ಬೇಡ. ಈ ದ್ವೇಷ, ಅಸೂಯೆ, ಕಿತ್ತಾಟ ಸಾಕು.’ ಅಂತ ಹೇಳುತ್ತಾಳೆ. ಅವಳ ಮಾತುಗಳನ್ನು ಕೇಳುತ್ತಿದ್ದರೆ ಈಯಮ್ಮ ಅಂತರಂಗದಿಂದ, ಹೃದಯದಿಂದ ಮಾತಾಡುತ್ತಿದ್ದಾಳೆ ಎಂದೆನಿಸುತ್ತದೆ. ಅವಳ ಮಾತುಗಳಿಗೆ ನಮ್ಮ ಕೃಷ್ಣ ಅವರೂ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಇಬ್ಬರೂ ಪರಸ್ಪರರ ಕೈಕುಲಕಿ, ಊಟ ಮಾಡಿ ಆತ್ಮೀಯತೆಯಿಂದಲೇ ಬರುತ್ತಾರೆ. ಕೊನೆಗೆ ಯಾವನೋ ಉಗ್ರಗಾಮಿ ಭಾರತದಲ್ಲಿ ಬಾಂಬ್ ಸ್ಫೋಟಿಸುತ್ತಾನೆ. ದುರದೃಷ್ಟವಶಾತ್ ಆತ ಮುಸಲ್ಮಾನನೇ ಆಗಿರುತ್ತಾನೆ. ಆತ ಪಾಕಿಸ್ತಾನದಲ್ಲೇ ತರಬೇತಿ ಪಡೆದಿರುತ್ತಾನೆ. ಅಲ್ಲಿಗೆ ಸಂಬಂಧ ನೆಗೆದು ಬಿದ್ದಿರುತ್ತದೆ.

ಹಾಗಾದರೆ ಕಳೆದ ಅರವತ್ತಾರು ವರ್ಷಗಳಿಂದ ಎರಡೂ ದೇಶಗಳು ಪ್ರೀತಿಯಿಂದ ಕಾಪಾಡಿಕೊಂಡಿರುವುದು ಹಗೆತನ, ದ್ವೇಷವೊಂದೇನಾ? ಪರಸ್ಪರ ಅಪನಂಬಿಕೆ, ಸಂದೇಹ, ಗುಮಾನಿಯಿಲ್ಲದೇ ಒಬ್ಬರನ್ನೊಬ್ಬರು ನೋಡಲು ಸಾಧ್ಯವೇ ಇಲ್ಲವಾ?

ಮುಂಬೈ ಮೇಲೆ 2008ರಲ್ಲಿ ಉಗ್ರರ ದಾಳಿಯಾದ ಬಳಿಕ ಭಾರತ ಪಾಕ್ ಜತೆಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿತು. ಕಳೆದ ಎರಡು ವರ್ಷಗಳಿಂದ ಪುನಃ ಮಾತುಕತೆಯ ಟೇಬಲ್ಲು ಬಾಚಿಕೊಂಡಿದೆ. ಎರಡೂ ದೇಶಗಳ ನಾಯಕರು ಸಂಬಂಧ ಸುಧಾರಣೆಯ ಮಂತ್ರ ಜಪಿಸುತ್ತಾರೆ. ಆದರೆ ಪಾಕ್ ಅಪ್ಪಿತಪ್ಪಿಯೂ ಮುಂಬೈ ದಾಳಿಯ ಸೂತ್ರಧಾರರನ್ನು ಒಪ್ಪಿಸುತ್ತೇವೆ, ಕ್ರಮಕೈಗೊಳ್ಳುತ್ತೇವೆ ಎಂದು ಭಾಷೆ ಕೊಡುವುದಿಲ್ಲ. ಉಳಿದೆಲ್ಲ ವಿಚಾರಗಳು ಅತ್ಲಾಗಿರಲಿ, ಮುಂಬೈ ದಾಳಿಯ ಪಾತಕಿಗಳನ್ನು ನಮಗೊಪ್ಪಿಸಿ ಅಂದ್ರೆ ಆ ವಿಷಯದಲ್ಲಿ ರಾಜಿ ಇಲ್ಲ ಅಂದ್ರೆ, ಸಂಜೋತಾ ಎಕ್ಸ್್ಪ್ರೆಸ್ ದುರಂತಕ್ಕೆ ಕಾರಣರಾದವರ ವಿವರ ಕೊಡಿ ಅಂತಾರೆ ಹಿನಾ ರಬ್ಬಾನಿ ಖರ್. ಕಾಶ್ಮೀರ ಜನತೆಯ ಆಶೋತ್ತರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಪಾಠ ಮಾಡುತ್ತಾರೆ. ಎರಡೂ ಕಡೆಯವರು ಎಲ್ಲಿಂದ ಹೊರಟಿರುತ್ತಾರೋ ಅಲ್ಲಿಗೇ ಬಂದು ನಿಲ್ಲುತ್ತಾರೆ.

ಭಾರತ-ಪಾಕ್ ನಡುವೆ ಕಳೆದ ಅರವತ್ತಾರು ವರ್ಷಗಳಿಂದ ಇದೇ ಹಾಡು, ಇದೇ ರಾಗ. ನಂಬಿಕೆ, ವಿಶ್ವಾಸವಿಲ್ಲದೇ ಯಾವುದೇ ಸಂಬಂಧವೂ ಕುದುರುವುದಿಲ್ಲ. ಆದರೆ ಯಡವಟ್ಟಾಗಿರುವುದೇನೆಂದರೆ ಇವೆರಡು ಇಲ್ಲದೇ ಸಂಬಂಧ ಸುಧಾರಣೆಗೆ ಎರಡೂ ದೇಶಗಳು ಹೊರಟಂತಿವೆ. ಭಾರತೀಯ ವಿದೇಶಾಂಗ ನೀತಿಗೆ ಅತಿ ದೊಡ್ಡ ಸವಾಲೆಂದರೆ ಪಾಕಿಸ್ತಾನ ಎಂಬ ಮಾತು ಹಂತ ಹಂತಕ್ಕೂ ಮನದಟ್ಟಾಗುತ್ತಿದೆ. ಆದರೆ ಏನೂ ಮಾಡುವಂತಿಲ್ಲ. ಅನುಭವಿಸಲೇಬೇಕಿದೆ.

ಹಾಗೆ ನೋಡಿದರೆ ಉಭಯ ದೇಶಗಳ ಬಹುತೇಕ ಸಮಸ್ಯೆ ವಾಜಪೇಯಿ ಲಾಹೋರ್್ಗೆ ಬಸ್ ಯಾತ್ರೆ ಹೊರಟರಲ್ಲ, ಆಗಲೇ ಬಗೆಹರಿಯಬೇಕಿತ್ತು. ಅದು ಉಭಯ ದೇಶಗಳಿಗೂ ಸಿಕ್ಕ ಅಪೂರ್ವ ಸದವಕಾಶವಾಗಿತ್ತು. ವಾಜಪೇಯಿಯವರು ಪಾಕಿಸ್ತಾನಕ್ಕೆ ಹೋದಾಗ ಚಿನ್ನದಂಥ ಮಾತನ್ನು ಹೇಳಿದ್ದರು-’ಇನ್ನು ಮುಂದೆ ಭಾರತ-ಪಾಕಿಸ್ತಾನದ ನಡುವೆ ಕಾದಾಟವಿಲ್ಲ. ಅಷ್ಟಕ್ಕೂ ಕಾದಾಟ ನಡೆಯಲೇಬೇಕಿದ್ದರೆ ಅದು ಕ್ರಿಕೆಟ್ ಮೈದಾನದಲ್ಲಿ ಮಾತ್ರ.’ ವಿಪರ್ಯಾಸವೆಂದರೆ ಈ ಮಾತನ್ನು ಹೇಳಿದ ಕೆಲವೇ ತಿಂಗಳಲ್ಲಿ ಎರಡೂ ದೇಶಗಳಲ್ಲಿ ಕ್ರಿಕೆಟ್ ಮಂಡಳಿ ಕ್ರಿಕೆಟ್ ಮೈದಾನದಲ್ಲೂ ಎದುರಾ ಬದುರಾ ಆಗಕೂಡದೆಂದು ನಿರ್ಧರಿಸಿ ಬಿಟ್ಟಿದ್ದವು!

ವಾಜಪೇಯಿ ಅಲ್ಲಿಗೆ ಹೋದ ಸಂದರ್ಭದಲ್ಲಿ ಮತ್ತೊಂದು ಮಾತನ್ನು ಹೇಳಿದ್ದರು- ‘ಸಿಯಾಚಿನ್ ಎಂಬ ಹಿಮಪರ್ವತದಲ್ಲಿ ಕಾದಾಟ, ಗುಂಡಿನ ಚಕಮಕಿಯೇನೂ ನಡೆಯುವುದಿಲ್ಲ. ಆದರೆ ಪ್ರತಿಕೂಲ ವಾತಾವರಣದಿಂದ ಪ್ರತಿವರ್ಷ ಎರಡೂ ಕಡೆಯ ಸಾವಿರಾರು ಸೈನಿಕರು ಸುಮ್ಮನೆ ಸತ್ತು ಹೋಗುತ್ತಾರೆ. ಆದ್ದರಿಂದ ಎರಡೂ ಕಡೆಯವರು ನಮ್ಮ ನಮ್ಮ ಸೇನೆಯನ್ನು ಅಲ್ಲಿಂದ ವಾಪಸ್ ಕರೆಯಿಸಿಕೊಳ್ಳೋಣ’. ವಾಜಪೇಯಿ ಮಾತಿಗೆ ಪಾಕ್ ಅಂದಿನ ಪ್ರಧಾನಿ ನವಾಜ್ ಷರೀಫ್ ಆಯಿತೆಂದು ತಲೆ ಅಲ್ಲಾಡಿಸಿದ್ದರು. ಅದಾದ ಬಳಿಕ ಮೊದಲು ಭಾರತ ಸಿಯಾಚಿನ್್ನಿಂದ ಒಂದು ತುಕಡಿ ಸೈನಿಕರನ್ನು ವಾಪಸ್ ಕರೆಯಿಸಿಕೊಂಡಿತು. ಪಾಕ್ ಸಹ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿತು. ಭಾರತ ಪುನಃ ಎರಡು ತುಕಡಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಪಾಕ್್ನ ಮೂರು ತುಕಡಿ ಹೆಚ್ಚುವರಿ ಸೇನೆಯನ್ನು ಜಮಾಯಿಸಿತು. ಭಾರತಕ್ಕೆ ವಾಸನೆ ಹೊಡೆಯಿತು. ಅಲ್ಲಿತನಕ ಕರೆಯಿಸಿಕೊಂಡವರನ್ನೆಲ್ಲ ಅಲ್ಲಿಗೆ ಪುನಃ ಕಳಿಸಿತು. ಪಾಕಿಸ್ತಾನವನ್ನು ನಂಬಿದರೆ ಮುಗೀತು ಅಂತಭಾರತ ಮೊದಲು ಇದ್ದುದಕ್ಕಿಂತ ಹೆಚ್ಚು ಸೈನಿಕರನ್ನು ಅಲ್ಲಿಗೆ ಅಟ್ಟಿತು. ಪಾಪ ನಿರುಪದ್ರವಿಗಳು, ಶೀತಗಾಳಿ, ಮಂಜುಕೊರೆತಕ್ಕೆ ಪ್ರತಿವರ್ಷ ಎರಡೂ ಕಡೆಯ ನೂರಾರು ಸೈನಿಕರು ಸಾಯುತ್ತಾರೆ! ಆ ಹಿಮಪರ್ವತದ ನೆತ್ತಿಯ ಮೇಲೆ ಉಭಯದೇಶಗಳು ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ಸುರಿದು ನಿರರ್ಥಕಗೊಳಿಸುತ್ತವೆ! ಒಂದು ಸೊಪ್ಪು ಸಹ ಅರಳದ ಆ ಸಿಯಾಚಿನ್್ನಿಂದ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳೋಣ ಅಂತ ಬಿಳಿ ಕಾಗದದ ಮೇಲೆ ಬರೆದು ಇಬ್ಬರೂ ಸಹಿ ಹಾಕಿದರೆ ಸಾವಿರಾರು ಜೀವ, ಸಾವಿರಾರು ಕೋಟಿ ರೂಪಾಯಿ ಉಳಿಯುತ್ತವೆ. ದುರಂತವೆಂದರೆ ಅವೆರಡನ್ನೂ ಉಳಿಸಿಕೊಳ್ಳಲಾಗುತ್ತಿಲ್ಲ.

ನಾನು ಉಳಿದುಕೊಂಡ ಸೆರೆನಾ ಹೋಟೆಲ್್ನಲ್ಲಿ ಡ್ಯೂಟಿ ಮ್ಯಾನೇಜರ್ ಆಗಿರುವ ಇಫ್ತಿಕರ್ ಹುಸೇನ್ ಹೇಳಿದ ಮಾತು ಅಣಕವೋ, ಅಪಹಾಸ್ಯವೋ ಇಂದಿಗೂ ಅರ್ಥವಾಗುತ್ತಿಲ್ಲ. ‘ಪ್ರತಿ ಸಲ ಭಾರತದ ನಾಯಕರು ಬಂದಾಗ ನಮ್ಮ ಹೋಟೆಲ್್ನಲ್ಲಿಯೇ ಉಳಿದುಕೊಳ್ಳುತ್ತಾರೆ. ಅವರ ಆಗಮನದ ಸುದ್ದಿ ಕೇಳುತ್ತಿದ್ದಂತೆ ಪುಳಕವಾಗುತ್ತದೆ. ಭಾರತದಲ್ಲಿ ನೆಲೆಸಿರುವ ನನ್ನ ತಾಯಿಯ ಬಂಧು ಬಳಗವನ್ನು ನಿರಾತಂಕವಾಗಿ ಭೇಟಿಯಾಗುವ ಕನಸುಗಳು ಗರಿಗೆದರುತ್ತವೆ. ನಾಯಕರು ರೂಮು ಖಾಲಿ ಮಾಡಿಕೊಂಡು ಹೋಗುತ್ತಿದ್ದಂತೆ ಮನಸ್ಸು, ನಿರೀಕ್ಷೆಗಳು ಸಹ ಕ್ರಮೇಣ ಖಾಲಿಯಾಗುತ್ತವೆ.’

ಸರಿ, ಮತ್ತೆ ಎಲ್ಲೋ, ಯಾವಾಗಲೋ ದ್ವಿಪಕ್ಷೀಯ ಮಾತುಕತೆ ಮುಂದುವರಿಯುತ್ತದೆ. ಇಲ್ಲಿ ತನಕ ಗಳಿಸಿದ್ದೇನು? ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿಂತಾಗ ಈ ಪ್ರಶ್ನೆ ಸುಳಿದಾಡುತ್ತಿದ್ದರೆ, ಕೃಷ್ಣ ಅವರು ಕೈ ಬೀಸಿ ಕಾರು ಹತ್ತುತ್ತಿದ್ದರು.

- ವಿಶ್ವೇಶ್ವರ ಭಟ್

8 Comments

  1. “ದುರದೃಷ್ಟವಶಾತ್” ಆತ ಮುಸಲ್ಮಾನನೇ ಆಗಿರುತ್ತಾನೆ. what is the meaning?

  2. Good article, Problem for India is not from Pakistan (major / feature) … its from internal Pakistan (what you explained in article). we need to sort out this issue then only we can maintain calmness in both country.

  3. sir . please write a book about your trip to pakistan

  4. Nice article…..sir…..t ll make us to think.

  5. ಸಾರ್ ಹೇಗಿದ್ದೀರಿ? ಈ ಮೊದಲೇ ಪಾಕಿಸ್ತಾನಕ್ಕೆ ಹೋಗುವ ಇಚ್ಚೆ ನಿಮ್ಮದಾಗಿತ್ತು. ಆಗಿದ್ದ ಮನಸ್ಥಿತಿಗೂ, ಅಂದರೆ ಈ ಘಟನೆ ಸಂಭವಿಸುವ ಮುನ್ನ, ಮತ್ತು ಈಗ್ಗೂ ವ್ಯತ್ಯಾಸವೇನಿದ್ದಿರಬಹುದು? :-) . ಸಾಕು. ಸಾಕಿನ್ನು ಈ ದ್ವೇಷ. ನಮ್ಮ ಸಹೋದರರು ತಮ್ಮ ಭವಿಷ್ಯವನ್ನ ಪಣಕ್ಕಿಟ್ಟು, ಒತ್ತೆಯಿಟ್ಟು , ಆಯುಷ್ಯವನ್ನೆಲ್ಲಾ ಸವೆಸಿದ್ದು ಸಾಕು. ಜೀವ ತೆತ್ತದ್ದು ಸಾಕು. ಇದಕ್ಕೆ ಕೊನೆಯೆಂದು?. ಪಾಕಿಸ್ತಾನ ಅಷ್ಟು ಚನ್ನಾಗಿದ್ಯಾ?. ಅಥವಾ ನೀವು ಅಲ್ಲಿ ನಿಂತೇ ಫೋಟೋ ತೆಗೆದಿದ್ದಾ? ಅಥವಾ ನೀವು ನಿಂತದ್ದಕ್ಕೇ ಅದು ಅಷ್ಟು ಚಂದ ಕಂಡದ್ದಾ ಸಾರ್? ನಿಮಗೆ ಮತ್ತಷ್ಟು ದೇಶಗಳ ಸುತ್ತಾಟ ಆಗಾಗ್ಗೆ ಪ್ರಾಪ್ತಿರಸ್ತು… :-)

  6. @naveen … meaning thumba simple… bomb haaakodu indiadalli.. adu yaavagalu muslim aagirthane.. aaga hindu hrudaya kadadutthade!! pakistaniyarannu bayyuttheve… sambanda haasuttthade antha!!
    article channenagide… nanna anisikeya prakara.. dooradrushti illada kela paki rajakaranigalu matthu ugrarinda namma sambanda halaside!!
    j

  7. nice article sir…..

  8. ಅಕ್ಸಿಡೆಂಟ್‌ನ ಕತೆ ಮೊದಲು ಹೇಳಿ ಮುಗಿಸುತ್ತೇನೆ. ನಿಜ ಹೇಳಿದರೇ ನೀನು ನಂಬೋದಿಲ್ಲ ಅಂತ ಗೊತ್ತು. ಆದರೆ ನಿಜ ಹೇಳದಿದ್ದರೆ ನಮ್ಮ ಸಂಬಂಧಕ್ಕಿದ್ದ ಪ್ರಾಮಾಣಿಕತೆ ಮತ್ತು ವಿಶ್ವಾಸರ್ಹತೆಯ ಲೇಪಕ್ಕೆ ಕುತ್ತು. ಏನೇ ಆಗಲಿ, ನಿಜ ಹೇಳುವೆ. ಏಕೆಂದರೆ ಇನ್ನು ನಿನ್ನನ್ನು ಕಳ ಕೊಳ್ಳುವ ಭಯ, ಪಡ ಕೊಳ್ಳವ ತವಕ ಎರಡೂ ನನಗಿಲ್ಲ. ಕಳೆದುಕೊಂಡರೆ ಒಂದು ಕಲ್ಲು, ಪಡೆದುಕೊಂಡರೂ ಒಂದು ಕಲ್ಲು ಅಷ್ಟೆ ಅನ್ನುವಷ್ಟು ನಿನ್ನ (ನಮ್ಮ ಸಂಬಂಧದ) ಬಗ್ಗೆ ನಿರಾಶನಾಗಿದ್ದೇನೆ ಅಥವಾ ವೈರಾಗ್ಯ ಪಡೆದಿದ್ದೆನೆ ಎಂದು ನೀನು ತಿಳಿದುಕೊಂಡರೂ ಅಡ್ಡಿಯಿಲ್ಲ.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.