ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಚಪಾತಿ ಪಾತ್ರ!

ನೂರೆಂಟು ನೋಟ- ವಿಶ್ವೇಶ್ವರ ಭಟ್

1857-chapati-movement--indiaಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಶುದ್ಧ ಅವಿವೇಕತನದ ಹೇಳಿಕೆ ಕೊಟ್ಟುಬಿಟ್ಟರು. ‘ಗಣರಾಜ್ಯೋತ್ಸವ ಪರೇಡ್‌ನಿಂದ ಯಾರಿಗೆ ಪ್ರಯೋಜನ? ಅಲ್ಲಿ ಬರೀ ಅತಿ ಗಣ್ಯರು ಮಾತ್ರ ಭಾಗವಹಿಸುತ್ತಾರೆ. ನಾವು ಈ ಪರೇಡ್ ನಡೆಯದಂತೆ ಅಡ್ಡಿಪಡಿಸುತ್ತೇವೆ’ ಎಂದು ತಮ್ಮ ಧರಣಿ ಮುಂದುವರಿಸುವುದಕ್ಕೆ ಬೆದರಿಕೆ ಹಾಗೂ ಸಮರ್ಥನೆಯೆಂಬಂತೆ ಹೇಳಿದಾಗ ಅವರನ್ನು ಬೆಂಬಲಿಸುವವರಿಗೆ, ಮತ ನೀಡಿದವರಿಗೆ ಪಿಚ್ಚೆನಿಸಿರಬಹುದು. ಒಬ್ಬ ಮುಖ್ಯಮಂತ್ರಿ ಬಾಯಿಂದ ಇಂಥ ಮಾತಾ ಎಂದು ಹಲವರು ಅಂದುಕೊಂಡರು. ಗಣರಾಜ್ಯೋತ್ಸವದ ಮಹತ್ವ ಗೊತ್ತಿಲ್ಲದ, ಸ್ವಾತಂತ್ರ್ಯದ ನೆತ್ತರಿನ ನೋವು ತಿಳಿಯದ ಅವಿವೇಕಿಗಳು ಮಾತ್ರ ಹೀಗೆ ಹೇಳಲು ಸಾಧ್ಯ? ಇಂಥದೇ ಅಸಡ್ಡಾಳುಗಳು ‘ಸ್ವಾತಂತ್ರ್ಯ ದಿನಾಚರಣೆಯಿಂದ ಏನು ಪ್ರಯೋಜನ? ಆಯ್ತಲ್ಲ, ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು. ಇನ್ನು ಎಷ್ಟು ವರ್ಷ ಅಂತ ಆಚರಿಸುವುದು?’ ಎಂದು ಕೇಳಿದರೂ ಅಚ್ಚರಿಯಿಲ್ಲ.

ಇರಲಿ. ಈ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ. ನಾನು ಹೇಳಲು ಹೊರಟಿರುವುದು ಈ ವಿಷಯ ಅಲ್ಲ. ನಾನು ಇತ್ತೀಚೆಗೆ ಟ್ರೌಯ್ ಡೌನ್ಸ್ ಬರೆದ ‘Host of Midian: The Chapati Circulation and the Indian Revolt of 1857’ ಎಂಬ ಕೃತಿಯನ್ನು ಓದುತ್ತಿದ್ದೆ. ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶ ಸಿದ್ಧವಾಗಿರುವ ಈ ಹೊತ್ತಿನಲ್ಲಿ, ಈ ಕೃತಿಯಲ್ಲಿ ಕಂಡ ಒಂದು ಸ್ವಾರಸ್ಯಕರ ಅಂಶವನ್ನು ನಿಮಗೆ ಹೇಳಬೇಕು ಅನಿಸುತ್ತಿದೆ. ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟ (ಅರ್ಥಾತ್ ಸಿಪಾಯಿ ದಂಗೆ)ದಲ್ಲಿ ಪ್ರತಿದಿನ ನಾವು -ನೀವೆಲ್ಲ ತಿನ್ನುವ ‘ಚಪಾತಿ’ ಎಂಥ ಮಹತ್ವದ ಪಾತ್ರವನ್ನು ವಹಿಸಿತ್ತು ಎಂಬುದನ್ನು ತಿಳಿದರೆ ಅಚ್ಚರಿಯಾದೀತು. ಸ್ವಾತಂತ್ರ್ಯ ಹೋರಾಟಕ್ಕೂ, ಚಪಾತಿಗೂ ಎಲ್ಲಿಯ ಸಂಬಂಧ, ಏನು ಕತೆ ಎಂದು ನಿಮಗೆ ಅನಿಸಬಹುದು. ಆದರೆ 1857ರ ಸಿಪಾಯಿ ದಂಗೆಯಲ್ಲಿ ಚಪಾತಿ ಅಂದಿನ ಬ್ರಿಟಿಷ್‌ರಿಗೆ ತಲೆನೋವನ್ನು ತಂದಿತ್ತು ಎಂಬುದು ಅನೇಕರಿಗೆ ಗೊತ್ತಿಲ್ಲದೇ ಇರಬಹುದು. ‘ಚಪಾತಿ ಚಳವಳಿ’ ಸ್ವಾತಂತ್ರ್ಯ ಹೋರಾಟದಲ್ಲಿ ಎಂಥ ಪ್ರಮುಖ ಪಾತ್ರ ವಹಿಸಿತ್ತು ಹಾಗೂ ಆ ಚಳವಳಿಯಿಂದ ಬ್ರಿಟಿಷರು ಎಷ್ಟೊಂದು ಕಲ್ಲವಿಲಗೊಂಡಿದ್ದರು ಎಂಬುದು ತಿಳಿದೀತು.

ಈ ‘ಚಪಾತಿ ಚಳವಳಿ’ಯ ಪರಿಣಾಮ ಬ್ರಿಟಿಷರ ಮೇಲೆ ಎಂಥ ಪ್ರಭಾವ ಬೀರಿತ್ತೆಂದರೆ, ಅವರು ಇದರ ಕೂಲಂಕಷ ವರದಿ ನೀಡುವಂತೆ ಸಮಿತಿಯನ್ನು ನೇಮಿಸಿದ್ದರು. ಆ ಸಮಿತಿಯು ಮೂರು ತಿಂಗಳು ತನಿಖೆ ನಡೆಸಿ 248 ಪುಟಗಳ ವರದಿ ನೀಡಿತ್ತು. ಈ ವರದಿಯನ್ನು ಲಂಡನ್‌ಗೆ ಕಳಿಸಲಾಯಿತು. ಇದರ ಕುರಿತು ಅಂದಿನ ಬ್ರಿಟಿಷ್ ಸರ್ಕಾರ ತಲೆಕೆಡಿಸಿಕೊಂಡು ‘ಚಪಾತಿ ಚಳವಳಿ’ ಹುಟ್ಟಿದ್ದು ಹೇಗೆ, ಯಾರು ಇದರ ಹಿಂದಿರುವ ಸೂತ್ರಧಾರರು ಎಂಬ ಬಗ್ಗೆ ಮತ್ತಷ್ಟು ವಿವರ ನೀಡುವಂತೆ ಆದೇಶಿಸಿತ್ತು. ಆನಂತರ ಕಂಗಾಲಾದ ಇಲ್ಲಿನ ಬ್ರಿಟಿಷ್ ಆಡಳಿತ ವಿವರಗಳನ್ನು ಕಲೆಹಾಕಲಾರಂಭಿಸಿತು. ಆದರೆ ಹೆಚ್ಚಿನ ವಿವರಗಳೇನೂ ಲಭ್ಯವಾಗದಿದ್ದಾಗ ಲಂಡನ್‌ನಿಂದ ವಿಶೇಷ ತನಿಖಾಧಿಕಾರಿಯನ್ನು ಕಳಿಸಿಕೊಟ್ಟಿತ್ತು. ಇದು ತನಗಾದ ಅವಮಾನವೆಂದು ಅಂದಿನ ವೈಸ್‌ರಾಯ್ ಭಾವಿಸಿದ್ದ. ತನಿಖಾಧಿಕಾರಿಗೆ ಎಲ್ಲ ಸಹಕಾರ ನೀಡುವ ಭರವಸೆಯನ್ನು ನೀಡಿದ್ದ. ಲಂಡನ್‌ನಿಂದ ಬಂದ ತನಿಖಾಧಿಕಾರಿ ನೆರವಿಗೆ ಹದಿನೆಂಟು ಜನರ ತನಿಖಾ ತಂಡ ಹಾಗೂ ವರದಿ ನೀಡಿದ ಸಮಿತಿಯ ಸದಸ್ಯರನ್ನು ನಿಯೋಜಿಸಲಾಯಿತು. ನಾಲ್ಕು ತಿಂಗಳುಗಳ ಕಾಲ ಈ ತನಿಖಾಧಿಕಾರಿ ಒಂದೂ ವಿವರ ಕೈ ತಪ್ಪದಂತೆ, ಎಲ್ಲ ಸಂಗತಿಗಳನ್ನು ಗುಡ್ಡೆ ಹಾಕಿದ. ಆದರೆ ಯಾವ ಉದ್ದೇಶಕ್ಕೆ ಇವನನ್ನು ಕಳಿಸಿದ್ದರೋ ಅದೊಂದು ಮಾತ್ರ ಈಡೇರಲಿಲ್ಲ. ಅಂದರೆ ‘ಚಪಾತಿ ಚಳವಳಿ’ಯ ‘ಲಟ್ಟಣಿಗೆ’ ಹಿಡಿದವರು ಯಾರು, ಅದು ಎಲ್ಲಿಂದ, ಯಾರು ಆರಂಭಿಸಿದರು ಎಂಬುದು ರಹಸ್ಯವಾಗಿಯೇ ಉಳಿಯಿತು. ಕೊನೆಗೂ ಅದರ ಅಂತಪಾರು ಬ್ರಿಟಿಷರಿಗೆ ಗೊತ್ತಾಗಲೇ ಇಲ್ಲ. ಸುಮಾರು ಎರಡೂವರೆ ವರ್ಷಗಳ ಕಾಲ ಈ ಚಪಾತಿ ಚಳವಳಿ ಅವರ ನಿದ್ದೆಗೆಡಿಸಿದ್ದಂತೂ ಸತ್ಯ.

23edi_chaptiಚಪಾತಿ ಕಂಡರೆ ಸಾಕು, ಬ್ರಿಟಿಷರು ಬಾಂಬ್ ಕಂಡವರಂತೆ ಹೆದರಿ ಬೆಚ್ಚಿ ಬೀಳುತ್ತಿದ್ದರು. ಊಟಕ್ಕೆ ಕುಳಿತಾಗ ತಾಟಿನಲ್ಲಿ ಚಪಾತಿ ಬಡಿಸಿದರೆ ಸಂದೇಹದಿಂದ ನೋಡುತ್ತಿದ್ದರು.

ಚಪಾತಿ ತಯಾರಿಸಿದ ಅಡುಗೆ ಭಟ್ಟನನ್ನು ಥಳಿಸಿ, ‘ಚಪಾತಿಯನ್ನೇಕೆ ಮಾಡಿದೆ? ನನಗೆ ಚಪಾತಿ ಬಡಿಸುವಂತೆ ಹೇಳಿದ್ದು ಯಾರು?’ ಎಂದು ದಬಾಯಿಸುತ್ತಿದ್ದರು. ಪಾಪ! ಅಡುಗೆ ಭಟ್ಟ ಏನೂ ಗೊತ್ತಿಲ್ಲದವನಂತೆ, ಕಕ್ಕಾಬಿಕ್ಕಿಯಾಗಿ ನಿಂತಿದ್ದರೆ ಪುನಃ ಹೊಡೆಯುತ್ತಿದ್ದರು. ಸರಿ, ಚಪಾತಿ ಬಡಿಸಿದರೆ ಹುಚ್ಚನಂತೆ ಆಡುತ್ತಾನಲ್ಲ ಎಂದು ಊಟಕ್ಕೆ ಚಪಾತಿ ತಯಾರಿಸದಿದ್ದರೆ, ಆಗಲೂ ಒದೆ! ‘ನೀನ್ಯಾಕೆ ಚಪಾತಿ ಮಾಡುತ್ತಿಲ್ಲ? ಚಪಾತಿ ಮಾಡಬಾರದೆಂದು ಯಾರಾದರೂ ಆದೇಶ ಮಾಡಿದ್ದಾರಾ? ಮಾಡಿದ ಚಪಾತಿಯನ್ನು ನನಗೆ ಬಡಿಸದೇ ಬೇರೆಡೆಗೆ ಕಳಿಸುತ್ತಿದ್ದೀಯಾ?’ ಎಂದು ದಬಾಯಿಸುತ್ತಿದ್ದರು. ಅಡುಗೆಭಟ್ಟ ಕಕ್ಕಾಬಿಕ್ಕಿ! ಇದು ಯಾವುದೋ ಒಂದು ಊರಿನಲ್ಲಿ ನಡೆಯುತ್ತಿದ್ದ ಪ್ರಸಂಗವಲ್ಲ. ದೇಶಾದ್ಯಂತ ಚಪಾತಿ ವಿಷಯದಲ್ಲಿ ಬ್ರಿಟಿಷರು ಇದೇ ರೀತಿ ನಡೆದುಕೊಳ್ಳುತ್ತಿದ್ದರು. ಚಪಾತಿ ಕಂಡರೆ ಐನಾತಿಗಳ ಥರ ಯಾಕೆ ವರ್ತಿಸುತ್ತಾರೆಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೆ ಚಪಾತಿ ಅವರ ಮೇಲೆ ಅಗೋಚರ, ಮನೋಸಮರವನ್ನು ಸಾರಿದ್ದಂತೂ ನಿಚ್ಚಳವಾಗಿತ್ತು.

ಅಷ್ಟಕ್ಕೂ ಈ ಚಪಾತಿ ಚಳವಳಿ ಅಂದ್ರೆ ಏನು? ಅದರ ಹಕೀಕತ್ತು ಏನು? ಬ್ರಿಟಿಷರೇಕೆ ಚಪಾತಿ ಕಂಡರೆ ಬೆಚ್ಚಿ ಬೀಳುತ್ತಿದ್ದರು?

1857ರ ಫೆಬ್ರವರಿ.

ಉತ್ತರ ಭಾರತದ ಹಳ್ಳಿಯೊಂದರ ಗುಡಿಸಲಲ್ಲಿ ಒಂದೇ ದಿನ ಸುಮಾರು ಎಂಟು ಮಂದಿ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಚಪಾತಿ ಹಿಟ್ಟನ್ನು ಕಲಸಲು ಆರಂಭಿಸಿದರು. ಏಳು ಮಂದಿ ಚಪಾತಿಯನ್ನು ಲಟ್ಟಣಿಸುತ್ತಿದ್ದರೆ, ಒಬ್ಬ ಕಾವಲಿಯ ಮೇಲಿಟ್ಟು ಅದನ್ನು ಸುಡುತ್ತಿದ್ದ. ಬೆಳಗಿನ ಹನ್ನೊಂದು ಗಂಟೆ ಸುಮಾರಿಗೆ ಎರಡು ಸಾವಿರ ಚಪಾತಿಗಳು ಸಿದ್ಧವಾದವು. ಈ ಚಪಾತಿಗಳನ್ನು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವವರ ಮೂಲಕ ಕಳಿಸಲಾರಂಭಿಸಿದರು. ಚೌಕಿದಾರರ (ಪೊಲೀಸರು) ಮೂಲಕವೂ ಚಪಾತಿಗಳು ಒಬ್ಬರಿಂದ ಮತ್ತೊಬ್ಬರಿಗೆ ಹಸ್ತಾಂತರವಾದವು. ಯಾರೇ ಆಗಲಿ ಈ ಚಪಾತಿಗಳನ್ನು ತಿಂದು ಸುಮ್ಮನಾಗಬಾರದು. ತಾವೂ ಸಹ ಚಪಾತಿಯನ್ನು ಸಿದ್ಧಪಡಿಸಿ ಬೇರೆಯವರಿಗೆ ಹಂಚಬೇಕು ಎಂಬುದು ಅಲಿಖಿತ ಕರಾರು. ಸಂಕ್ರಾಂತಿ ಕಾಳನ್ನು ಕೊಟ್ಟಾಗ ತಾನೊಂದೇ ತಿನ್ನುವುದಿಲ್ಲವಲ್ಲ. ಕೊಟ್ಟವರಿಗೂ ಪುನಃ ಕೊಟ್ಟು ತಾವೂ ಸೇವಿಸುತ್ತಾರಲ್ಲ ಹಾಗೆ, ಚಪಾತಿಯನ್ನು ಸ್ವೀಕರಿಸುವುದೊಂದೇ ಅಲ್ಲ. ಒಂದು ಸ್ವೀಕರಿಸಿದರೆ ಎರಡನ್ನು ಬೇರೆಯವರಿಗೆ ಹಂಚಬೇಕು ಎಂಬ ಮೌಖಿಕ ಕರಾರಿನಂತೆ ಚಪಾತಿ ವಿತರಣೆ ಶುರುವಾಯಿತು. ಚಪಾತಿ ಪಡೆದವರು ಅದಕ್ಕೆ ಪ್ರತಿಯಾಗಿ ಎರಡು ಚಪಾತಿಯನ್ನು ನೀಡುತ್ತಿದ್ದರು.

ಆರಂಭದಲ್ಲಿ ಒಂದು ಊರಿನಲ್ಲಿ ಎರಡು-ಮೂರು ಮನೆಗಳಿಗೆ ಚಪಾತಿ ಬಂದರೆ, ಮರುದಿನ ಮತ್ತಷ್ಟು ಮನೆಗಳು ಸೇರ್ಪಡೆಯಾಗುತ್ತಿದ್ದವು. ಯಾರೂ ಸಹ ಚಪಾತಿ ಪಡೆದು ಸುಮ್ಮನಾಗುತ್ತಿರಲಿಲ್ಲ. ಅದಕ್ಕೆ ಪ್ರತಿಯಾಗಿ ತಾವೂ ‘ಒಂದಕ್ಕೆ ಎರಡು’ ಚಪಾತಿಗಳನ್ನು ಕೊಡುತ್ತಿದ್ದರು. ಒಂದು ಊರಿನಿಂದ ಮತ್ತೊಂದು ಊರಿಗೆ ಯಾರೇ ಹೋಗಲಿ, ಅವರು ಚಪಾತಿಯನ್ನು ಜೊತೆಯಲ್ಲಿ ಒಯ್ಯುತ್ತಿದ್ದರು. ಇಲ್ಲವೇ ಬೇರೆಯವರು ಚಪಾತಿಯನ್ನು ತಂದು ಕೊಡುತ್ತಿದ್ದರು. ಆ ಊರಿಗೆ ಹೋದಾಗ ಅದನ್ನು ಅಲ್ಲಿನ ಕೆಲವರಿಗೆ ಹಂಚುತ್ತಿದ್ದರು.

ಹಾಗೆ ಹಂಚುವಾಗ ‘ನೀವೂ ಸಹ ಚಪಾತಿಯನ್ನು ಬೇರೆಯವರಿಗೆ ಹಂಚಬೇಕು. ಒಂದನ್ನು ಸ್ವೀಕರಿಸಿದರೆ ಎರಡನ್ನು ಹಂಚಬೇಕು’ ಎಂಬುದನ್ನು ಹೇಳಲು ಮರೆಯುತ್ತಿರಲಿಲ್ಲ.
ಇದು ಕಾಡ್ಗಿಚ್ಚಿನಂತೆ, ಸುಂಟರ ಗಾಳಿಯಂತೆ, ಕಾಲರಾ ರೋಗದಂತೆ, ಗಾಳಿ ಮಾತಿನಂತೆ ಯಾವ ಪ್ರಮಾಣದಲ್ಲಿ ಹಬ್ಬಿತೆಂದರೆ, ಎರಡು ತಿಂಗಳು ಕಳೆಯುವುದರೊಳಗೆ ಇಡೀ ದೇಶವನ್ನು ಆವರಿಸಿತು. ಆರಂಭದಲ್ಲಿ ಚೌಕಿದಾರರಿಂದ ಚೌಕಿದಾರರಿಗೆ ವಿನಿಮಯಗೊಂಡ ಚಪಾತಿಗಳು, ಸಾಮಾನ್ಯ ಜನರ ಮಧ್ಯೆ ಪರಸ್ಪರ ಹರಿದಾಡಲಾರಂಭಿಸಿದವು. ಭಾರತದ ಎಲ್ಲ ಪ್ರಾಂತ, ಪ್ರದೇಶ, ರಾಜ್ಯಗಳಲ್ಲಿ ಊಟದಲ್ಲಿ ಚಪಾತಿ ಸಾಮಾನ್ಯ. ಬಹುತೇಕ ಕಡೆ ಚಪಾತಿಯಿಲ್ಲದೇ ಯಾರೂ ಊಟ ಮಾಡುವುದಿಲ್ಲ. ಊಟಕ್ಕೆ ಚಪಾತಿ ಬಳಸದವರೂ ಇದರಿಂದ ಸೇವಿಸಲಾರಂಭಿಸಿದರು. ಒಂದು ಮನೆಯವರು ಐದು ಚಪಾತಿ ಸ್ವೀಕರಿಸಿದರೆ, ಹತ್ತನ್ನು ಕೊಡಲಾರಂಭಿಸಿದಾಗ ಚಪಾತಿ ಪೂರೈಕೆಯಲ್ಲಿ ಎಲ್ಲೂ ಕೊರತೆ ಕಂಡು ಬರುತ್ತಿರಲಿಲ್ಲ. ಅಲ್ಲದೇ ಊಟದ ವಿಷಯದಲ್ಲಿ ಚೌಕಾಶಿ ಮಾಡುವವರು ಕಡಿಮೆಯೇ. ಹೀಗಾಗಿ ಒಂದಕ್ಕೆ ಎರಡು ಕೊಡಲು ಯಾರೂ ಹಿಂದೇಟು ಹಾಕುತ್ತಿರಲಿಲ್ಲ. ಚಪಾತಿಯನ್ನು ಕೊಡುವವರಿಗಾಗಲಿ, ಅದನ್ನು ಪಡೆದವರಿಗಾಗಲಿ ತಾವು ಯಾಕೆ ಅದನ್ನು ವಿನಿಮಯ ಮಾಡುತ್ತಿದ್ದೇವೆ ಎಂಬುದು ಗೊತ್ತಿರಲಿಲ್ಲ. ಯಾರೇ ನಮಗೆ ಚಪಾತಿ ನೀಡಿದರೂ ಸುಮ್ಮನೆ ಇಸಕೊಳ್ಳಬಾರದು. ಅದಕ್ಕೆ ಪ್ರತಿಯಾಗಿ ಒಂದಕ್ಕೆ ಎರಡು ಕೊಡಬೇಕು ಎಂಬ ಭಾವನೆಯಿತ್ತೇ ಹೊರತು, ಹಂಚಿ ತಿನ್ನುವುದರಲ್ಲಿ ಹೆಚ್ಚಿನ ಸಂತಸವಿದೆಯೆಂಬ ಆಶಯವಿತ್ತೇ ಹೊರತು, ಮತ್ತೇನೂ ಇರಲಿಲ್ಲ. ಹೀಗಾಗಿ ಏಕಾಏಕಿ ಚಪಾತಿ ಈ ಪ್ರಮಾಣದಲ್ಲೇಕೆ ಹರಿದಾಡುತ್ತಿದೆಯೆಂದು ಯಾರೂ ಪ್ರಶ್ನಿಸಲು ಹೋಗಲಿಲ್ಲ.

godong-woman-making-chapati-dakshin-kali-nepal-asiaಆದರೆ ನಿಜಕ್ಕೂ ಚಿಂತಾಕ್ರಾಂತರಾದವರು ಬ್ರಿಟಿಷರು!

ಅವರಿಗೆ ಇದು ಅರ್ಥವೇ ಆಗಲಿಲ್ಲ. ಅದಾಗದಿದ್ದರೆ ಪರವಾಗಿರಲಿಲ್ಲ. ಬ್ರಿಟಿಷ್ ಆಡಳಿತ ವಿರುದ್ಧ ಕಾರಸ್ಥಾನ ನಡೆಯುತ್ತಿದೆಯೆಂದೇ ಅವರು ಭಾವಿಸಿದರು. ಚಪಾತಿಯೊಳಗೆ ಗುಪ್ತ ಸಂದೇಶ ರವಾನೆಯಾಗುತ್ತಿರಬಹುದಾ ಎಂಬ ಸಂದೇಹದ ಹುಳು ಅವರ ತಲೆಯೊಳಗೆ ಕನ್ನ ಕೊರೆಯಲಾರಂಭಿಸಿತು. ಎಂದೂ ಇಲ್ಲದ ಚಪಾತಿ ರವಾನೆ ಈಗ ಹಠಾತ್ತನೆ ಆರಂಭವಾಗಿರುವುದಾದರೂ ಏಕೆ ಎಂಬ ಯೋಚನೆಗೆ ಬಿದ್ದರು. ಚಪಾತಿಯನ್ನು ಕಂಡಲ್ಲೆಲ್ಲ ಅವುಗಳನ್ನು ವಶಪಡಿಸಿಕೊಂಡು ತಪಾಸಣೆಗೆ ಒಳಪಡಿಸುತ್ತಿದ್ದರು. ಚಪಾತಿ ಒಳಗಡೆ ಗುಪ್ತ ಸಂದೇಶಗಳನ್ನು ಅಡಗಿಸಿಟ್ಟಿರಬಹುದಾ ಎಂದು ವಶಪಡಿಸಿಕೊಂಡ ಚಪಾತಿಗಳನ್ನೆಲ್ಲ ಒಂದೊಂದಾಗಿ ಚೂರುಚೂರು ಮಾಡಿ ಪರೀಕ್ಷಿಸಲಾರಂಭಿಸಿದರು. ಚಪಾತಿ ಹಂಚುವವರನ್ನು ಹಿಡಿದೆಳೆದು ತಂದು ಅವರಿಗೆ ಥಳಿಸಿ ಬಾಯಿ ಬಿಡಿಸುವ ಪ್ರಯತ್ನವನ್ನು ಮಾಡಿದರು.

ಆದರೆ ಚಪಾತಿಯಲ್ಲಿ ಯಾವುದೇ ಗುಪ್ತ ಸಂದೇಶಗಳೂ ಕಂಡು ಬರುತ್ತಿರಲಿಲ್ಲ. ಚಪಾತಿಯನ್ನು ಹಂಚುವವರನ್ನು ಪ್ರಶ್ನಿಸಿದರೆ ಅವರು ಅಮಾಯಕರು ಎಂಬುದು ತಿಳಿದು ಬರುತ್ತಿತ್ತು. ಆದರೆ ‘ಚಪಾತಿ ಹರಿದಾಟ’ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತೇ ಹೊರತು ಕಡಿಮೆಯಾಗುತ್ತಿರಲಿಲ್ಲ. ಯಾವ ಕಾರಣಕ್ಕಾಗಿ ಚಪಾತಿಗಳನ್ನು ಹಂಚುತ್ತಿದ್ದಾರೆ? ಸುಮ್ಮಸುಮ್ಮನೆ ಚಪಾತಿ ಹಂಚಲು ತಲೆಕೆಟ್ಟಿದೆಯಾ? ಇದರ ಹಿಂದೆ ಯಾವುದೋ ಪ್ರಬಲ ಕಾರಣವಿರಲೇಬೇಕು. ಅದೇನದು? ಬ್ರಿಟಿಷ್ ಸರ್ಕಾರದ ವಿರುದ್ಧ ನಡೆಸುತ್ತಿರುವ ಚಳವಳಿ ಇದಾಗಿರಬಹುದಾ? ಇದು ಕಿಡಿಗೇಡಿಗಳ ಕೃತ್ಯವಾಗಿರಬಹುದಾ? ಅವರ ಉದ್ದೇಶವೇನಿರಬಹುದು? ಈ ಎಲ್ಲ ಪ್ರಶ್ನೆಗಳು ಬ್ರಿಟಿಷ್ ಆಡಳಿತವನ್ನು ಕಿತ್ತು ತಿನ್ನಲಾರಂಭಿಸಿದವು.

1857ರ ಮಾರ್ಚ್ 5ರ ‘ದಿ ಫ್ರೆಂಡ್ ಆಫ್ ಇಂಡಿಯಾ’ ಇಂಗ್ಲಿಷ್ ಪತ್ರಿಕೆಯ ಮುಖಪುಟದಲ್ಲಿ ‘ಚಪಾತಿ ಚಳವಳಿ’ ದೇಶವ್ಯಾಪಿ ಹರಡಿರುವ ಬಗ್ಗೆ ಬ್ರಿಟಿಷರು ಚಿಂತಿತರಾಗಿದ್ದಾರೆಂಬ ಸುದ್ದಿ ಪ್ರಕಟವಾದಾಗ, ಈ ಚಳವಳಿಯ ವಿಸ್ತಾರ ದೇಶದ ಗಮನ ಸೆಳೆಯಿತು. ಈ ವರದಿಯಿಂದ ಎಚ್ಚೆತ್ತುಕೊಂಡ ಇತರ ಪತ್ರಿಕೆಗಳೂ ಈ ಸುದ್ದಿಗೆ ಪ್ರಾಧಾನ್ಯ ನೀಡಿ ಪ್ರಕಟಿಸಿದವು. ಆಗ ಬ್ರಿಟಿಷ್ ಆಡಳಿತದ ದುಗುಡಕ್ಕೆ ಮತ್ತಷ್ಟು ರೆಕ್ಕೆಪುಕ್ಕ ಬಂದಂತಾಯಿತು.

ದೇಶದೆಲ್ಲೆಡೆ ಇರುವ ಪೊಲೀಸ್ ಠಾಣೆಗೆ ಸೂಚನೆಗಳು ಹೋದವು. ಚಪಾತಿಯೊಳಗೆ ಗುಪ್ತ ಸಂದೇಶ ರವಾನೆಯಾಗುವ ಮಾಹಿತಿ ಸಿಕ್ಕರೆ ಅದನ್ನು ಹಂಚುವವರ ವಿರುದ್ಧ ಕ್ರಮ ಜರುಗಿಸಲು ಆದೇಶಿಸಲಾಯಿತು. ಕೆಲವು ಕಡೆ ಕಿಡಿಗೇಡಿಗಳು ಚಪಾತಿಯೊಳಗೆ ಉದ್ದೇಶಪೂರ್ವಕವಾಗಿ ಬ್ರಿಟಿಷ್ ವಿರೋಧಿ ಘೋಷಣೆ, ಗುಪ್ತ ಮಾಹಿತಿ ಬರೆದು ಹಾದಿ ತಪ್ಪಿಸುವ ಪ್ರಯತ್ನವನ್ನೂ ಮಾಡಿದರು. ಇದರಿಂದ ಅವರಲ್ಲಿ ಹೆಡೆಯಾಡುತ್ತಿದ್ದ ಸಂದೇಹ ಬುಸುಗುಡಲಾರಂಭಿಸಿತು. ಒಂದು ಸಂದರ್ಭದಲ್ಲಿ ದೇಶದ ಬಹುತೇಕ ಪ್ರತಿಯೊಂದು ಪೊಲೀಸ್ ಠಾಣೆಯಿಂದ ತರಿಸಿಕೊಂಡ ವರದಿಯಲ್ಲಿ ‘ಚಪಾತಿ ಚಳವಳಿ’ ಅಲ್ಲೆಲ್ಲ ನಡೆದಿರುವುದು ದಾಖಲಾಗಿತ್ತು. ಹಳ್ಳಿಯಿಂದ ಹಿಡಿದು ದೇಶದ ಎಲ್ಲ ನಗರಗಳಿಗೂ ಹಬ್ಬಿದ ಈ ಚಳವಳಿಯ ಹಿಂದೆ ಪ್ರಬಲ ಸಂಚು ಅಡಗಿದೆ ಎಂದೇ ಬ್ರಿಟಿಷರು ಭಾವಿಸಿದರು.

48fe3511c11d86a858be672e92df-grandeಹೇಗಾದರೂ ಮಾಡಿ ಈ ಚಳವಳಿಯನ್ನು ಮುರಿಯಲು ಬ್ರಿಟಿಷರು ಒಂದು ತಂತ್ರ ರೂಪಿಸಿದರು. ಈ ಚಪಾತಿಯಲ್ಲಿ ದನದ ಹಾಗೂ ಹಂದಿ ಮಾಂಸವನ್ನು ಸೇರಿಸಲಾಗಿದೆ. ಆ ಪ್ರಾಣಿಗಳ ಮೂಳೆಗಳನ್ನು ಬೇಯಿಸಿದ ನೀರಿನಿಂದ ಕಲಸಿದ ಹಿಟ್ಟಿನಿಂದ ಈ ಚಪಾತಿಗಳನ್ನು ತಯಾರಿಸಲಾಗಿದೆ ಎಂಬ ಗಾಳಿ ಸುದ್ದಿಯನ್ನು ತೇಲಿಬಿಟ್ಟಿತು. ಆದರೆ ಇದರಿಂದ ಏನೂ ಪ್ರಯೋಜನವಾಗಲಿಲ್ಲ.

‘ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕೆ, ಮತಾಂತರಕ್ಕೆ ಚಪಾತಿಗಳನ್ನು ಹಂಚಲಾಗುತ್ತಿದೆ. ಹೀಗಾಗಿ ಚಪಾತಿಗಳನ್ನು ಯಾರೂ ತಿನ್ನಬಾರದು. ಇದು ನಮ್ಮ ಧರ್ಮದ ಮೇಲೆ ಸಾರಿದ ಸಮರ’ ಎಂಬುದಾಗಿ ಬ್ರಿಟಿಷರು ವ್ಯವಸ್ಥಿತವಾಗಿ ಪ್ರಚಾರ ಮಾಡಿದರು. ಆಗಲಾದರೂ ಚಪಾತಿ ಚಳವಳಿ ನಿಲ್ಲಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು.
ಆದರೆ ಅವೆಲ್ಲ ತಲೆಕೆಳಗಾಯಿತು. ಏನೆಲ್ಲ ಶತಪ್ರಯತ್ನಪಟ್ಟರೂ ಚಳವಳಿ ಬಿಸಿ ಆರಲಿಲ್ಲ. ಮನೆಯಿಂದ ಮನೆಗೆ, ಊರಿಂದ ಊರಿಗೆ ಚಪಾತಿಗಳೂ ಹರಿದಾಡಲಾರಂಭಿಸಿದವು. ಇದರಿಂದ ತಲೆಕೆಟ್ಟು ಹೋದವರಂತೆ ವರ್ತಿಸಲಾರಂಭಿಸಿದ ಬ್ರಿಟಿಷ್ ಅಧಿಕಾರಿಯೊಬ್ಬ, ‘ಚಪಾತಿಯೊಳಗೆ ವಿಷ ಸೇರಿಸಿ, ಅದನ್ನು ಸೇವಿಸಿದ ನೂರಾರು ಜನ ಸಾಯುವುದರ ಮೂಲಕ ಈ ಚಳವಳಿಗೆ ಕಡಿವಾಣ ಹಾಕುವುದು ಸಾಧ್ಯ’ ಎಂಬ ವರದಿ ಕೊಟ್ಟು ಜನರ ಆಕ್ರೋಶಕ್ಕೆ ತುತ್ತಾಗಿದ್ದ. ಯಾವಾಗ ‘ಚಪಾತಿ ಚಳವಳಿ’ ಬ್ರಿಟಿಷರಿಗೆ ತೀವ್ರ ಕಿರಿಕಿರಿಯನ್ನುಂಟು ಮಾಡುತ್ತಿದೆಯೆಂಬುದು ದೃಢಪಟ್ಟಿತೋ, ಇನ್ನಷ್ಟು ಕಿರಿಕಿರಿ ಮಾಡಲು ಈ ಚಳವಳಿಗೆ ಇನ್ನಷ್ಟು ಕಾವು ನೀಡಲಾರಂಭಿಸಿದರು. ಹತ್ತು ಚಪಾತಿ ಮಾಡುತ್ತಿದ್ದವರು ಇಪ್ಪತ್ತೈದು ಚಪಾತಿಗಳನ್ನು ಮಾಡಲಾರಂಭಿಸಿದರು. ಚಪಾತಿ ಹಂಚುವುದರಲ್ಲಿ ದೇಶಭಕ್ತಿ, ರಾಷ್ಟ್ರ ಪ್ರೇಮದ ಪ್ರತಿಬಿಂಬವನ್ನು ಕಾಣಲಾರಂಭಿಸಿದರು. ಸ್ವಾತಂತ್ರ್ಯ ಹೋರಾಟಕ್ಕೆ ಚಪಾತಿ ಹೊಸ ಅಸ್ತ್ರವಾಯಿತು.

ಇವೆಲ್ಲವುಗಳ ಪರಿಣಾಮ ಎಲ್ಲರ ಮನೆಯ ಅಡುಗೆ ಕೋಣೆಯಲ್ಲೂ ‘ಸ್ವಾತಂತ್ರ್ಯದ ಕಿಚ್ಚು’ ಕಾಣಿಸಿಕೊಳ್ಳಲಾರಂಭಿಸಿತು. ಚಪಾತಿ ಪ್ರತಿಭಟನೆಯ ಸಂಕೇತವಾಯಿತು. ಚಳವಳಿಯು ದಿನದಿಂದ ತೀವ್ರ ಸ್ವರೂಪವನ್ನು ಪಡೆದುಕೊಳ್ಳಲಾರಂಭಿಸಿದಾಗ ಬ್ರಿಟಿಷರು ಕೈ ಚೆಲ್ಲಿದರು. ಒಂದು ಹಂತದಲ್ಲಿ ಅವರಿಗೆ ದೇಶದಲ್ಲಿ ಏನು ನಡೆಯುತ್ತಿದೆಯೆಂಬುದೇ ತಿಳಿಯದಾಯಿತು. ನಿಮ್ಮ ಮನೆಯ ಮುಂದೆ ಪ್ರತಿ ದಿನ ಒಂದು ಕಾರು ಬಂದು ಅರ್ಧಗಂಟೆ ನಿಂತು ಹೋದರೆ, ನಿಮ್ಮಲ್ಲಿ ಸಂದೇಹದ ಹೊಗೆ ಏಳಲಾರಂಭಿಸುತ್ತದೆ. ಕಾರಿನಲ್ಲಿ ಬಂದವರು ಏನೂ ಮಾಡದೇ , ತಮ್ಮ ಪಾಡಿಗೆ ತಾವು ಕಾರಿನಲ್ಲಿ ಕುಳಿತ ಸುಮ್ಮನೆ ಹೋದರೂ ಇವರು ಕಳ್ಳರಿರಬಹುದಾ, ಕಳ್ಳತನಕ್ಕೆ ಹೊಂಚು ಹಾಕುತ್ತಿರಬಹುದಾ, ಭಯೋತ್ಪಾದಕರಿರಬಹುದಾ ಎಂಬ ಭೂತ ತಲೆಯೊಳಗೆ ಹೊಕ್ಕರೆ ಏನಾಗಬಹುದೋ, ಅಂಥದೇ ಸಂಶಯ ಪಿಶಾಚಿ ಬ್ರಿಟಿಷರ ಹೆಗಲೇರಿ ಕುಳಿತಿತ್ತು. ಈ ಬಗ್ಗೆ ಯಾರು ಏನೇ ಸಮಜಾಯಿಷಿ ಕೊಟ್ಟರೂ ಕೇಳುವ ಅಥವಾ ನಂಬುವ ಸ್ಥಿತಿಯಲ್ಲಿ ಬ್ರಿಟಿಷರಿರಲಿಲ್ಲ. ಇದರಿಂದಾಗಿ ಪೊಲೀಸರು-ಅಧಿಕಾರಿಗಳ ಮಧ್ಯೆ ಸಂಘರ್ಷ ಶುರುವಾಯಿತು. ಯಾರೂ ಯಾರನ್ನೂ ನಂಬದ ಸ್ಥಿತಿ ನಿರ್ಮಾಣವಾಯಿತು.

ಜಿ. ಡಬ್ಲ್ಯು ಶರಾರ್ ಎಂಬುವವರು Life During Indian Mutiny ಎಂಬ ಪುಸ್ತಕದ ಕೊನೆಯಲ್ಲಿ ಒಂದು ಮಾತನ್ನು ಚಪಾತಿ ಚಳವಳಿ ಕುರಿತು ಬರೆಯುತ್ತಾರೆ- ‘ಚಪಾತಿ ಚಳವಳಿ ಮೂಲಕ ಬ್ರಿಟಿಷರಲ್ಲಿ ವಿಚಿತ್ರ ಆತಂಕ, restlessness, ವಿನಾಕಾರಣ ದುಗುಡ ಹುಟ್ಟಿಸುವುದು ಉದ್ದೇಶವಾಗಿದ್ದರೆ, ಆ ಪ್ರಯೋಗ ಅತ್ಯಂತ ಪರಿಣಾಮಕಾರಿಯಾಗಿತ್ತು. ಅಲ್ಲದೇ ಯಶಸ್ವಿಯೂ ಆಯಿತು.’

ಕೊನೆಗೂ ಭಾರತದಲ್ಲಿ ಬ್ರಿಟಿಷರಿಗೆ ಅರ್ಥವಾಗದ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅಪಾರ್ಥವಾದ ಹಾಗೂ ಅಪಥ್ಯವಾದ ಸಂಗತಿಯಿದ್ದರೆ ಅದು ಚಪಾತಿ!

– ವಿಶ್ವೇಶ್ವರ ಭಟ್
vbhat@me.com

7 Comments

 1. Oh ! its awesome and strange thank you for sharing with us

 2. H V •

  ಭಟ್ರೇ, ಎಂದಿನಂತೆ ಈ ಲೇಖನ ಕೂಡ ಅದ್ಬುತವಾಗಿದೆ… ಆದರೆ ಲೇಖನದ ಪ್ರಾರಂಬದಲ್ಲಿ ಅರವಿಂದ ಕೇಜ್ರಿವಾಲ ಅವರ ಬಗ್ಗೆ ಬರೆದದ್ದು ಅಸ್ಟು ಸಮಂಜಸವೆನಿಸಲಿಲ್ಲ. ತಾವು BJP ನಾಯಕರು ಅವಿವೇಕತನದಿಂದ ವಿವಾದಾತ್ಮಕ ಹೇಳಿಕೆ ನೀಡಿದ್ದರೂ ಅದನ್ನು ತಮ್ಮ ಬುದ್ದಿವಂತಿಕಇಂದ ಸರಿಪಡಿಸಲು ಪ್ರಯತ್ನಿಸಿ ಬರೆಯುತ್ತಿರಿ, ಆದರೆ ಅರವಿಂದ ಕೇಜ್ರಿವಾಲ ಅವರನ್ನು ಅವಿವೇಕಿ ಎನ್ನುತ್ತಿರಲ್ಲ, ಸ್ವಾಮಿ ಅರವಿಂದ ಕೇಜ್ರಿವಾಲ ಅವರು IIT ಪಧವೀದರರು ಮೇಲಾಗಿ IAS ಅಧಿಕಾರಿ ಕೂಡ ಆಗಿದ್ದವರು, ಅವರ ಹೇಳಿಕೆಯಲ್ಲಿ ಕೂಡ ಸತ್ಯವಿದೆ ಅಲ್ಲವೇ, ನೀವೇ ಹೇಳಿ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಗಳಂತಹ ಹಬ್ಬಗಳಲ್ಲಿ ನಡೆಯುತ್ತಿರುವುದು ಏನು ಎಂಬುದನ್ನು, ಎಷ್ಟು ಯೋಧರಿಗೆ ನಿಜವಾಗಿಯೂ ಗೌರವ ದೊರೆಯುತ್ತಿದೆ, ಎಷ್ಟು ರಾಜ್ಯಗಳಲ್ಲಿ ಯೋಧರಿಂದ ಧ್ವಜಾರೋಹಣ ಮಾಡಿಸಲಾಗುತ್ತಿದೆ? ಈ ಎಲ್ಲ ಹಬ್ಬಗಳಲ್ಲಿ ರಾಜಕಾರಣಿಗಳಂತೂ ಸಾರ್ವಜನಿಕವಾಗಿ ಐಶಾರಾಮಿಯಾಗಿ ಕಾಣಿಸಿಕೊಳ್ಳುವುದು ಸತ್ಯ. ಅದೆಸ್ಟೋ ಕಛೇರಿಗಳಲ್ಲಿ ಈ ಅವಿವೇಕಿ ರಾಜಕಾರಣಿಗಳ ಎದುರಲ್ಲೇ ನಮ್ಮ ಧ್ವಜವನ್ನು ಉಲ್ಟಾ ಹಾರಿಸಲಾಗುತ್ತಿದೆ, ನೆಲಕ್ಕೆ ಬೀಳಿಸಲಾದ ಪ್ರಕರಣಗಳು ತಮ್ಮ ಪತ್ರಿಕೆಯಲ್ಲೂ ವರದಿಯಾಗಿವೆ. ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಇವೆಲ್ಲವುಗಳ ಪ್ರಾಮುಖ್ಯತೆ ಸಾಮನ್ಯ ಜನರಲ್ಲಿ ಮೂಡುವಂತೆ ಮಾಡಬೇಕು… ನಮ್ಮ ಪ್ರಧಾನಿ, ರಾಷ್ಟ್ರಪತಿ ಗಳು ದೇಶದ ಅಭಿವ್ರದ್ದಿಯಬಗ್ಗೆ ಮಾತನಾಡಿ ಅದೆಷ್ಟು ಕಾಲವಾಯ್ತೊ ಗೊತ್ತಿಲ್ಲ… ಪ್ರತಿದಿನ ಒಂದಿಲ್ಲ ಒಂದು ಹಗರಣಗಳು.. ತಾವು ಮಾದ್ಯಮದವರು, ಅರವಿಂದ ಕೇಜ್ರಿವಾಲರ ಬಗ್ಗೆ ಸಾಮಾನ್ಯ ಜನರಲ್ಲಿ ಇಂತಹ ಅಭಿಪ್ರಾಯ ನೀಡುತ್ತಿರುವುದು ಸರಿ ಅಲ್ಲ. ದರಿದ್ರ ರಾಜಕಾರಣಿಗಳು ಆಳಿದ ದೇಶವನ್ನು ಒಮ್ಮೆಗೆ ಬದಲಾಯಿಸಲು ಸಾಧ್ಯವಿಲ್ಲ ಸ್ವಾಮಿ.. ಕಾದು ನೋಡೋಣ, ಅದನ್ನು ಬಿಟ್ಟು ಹೀಗೆ ಏನೇನೋ ಬರೆಯುವುದು ಎಷ್ಟರಮಟ್ಟಿಗೆ ತಮಗೆ ಸರಿ ಎನಿಸುತ್ತದೆ ಎಂದು ಅರ್ಥವಾಗುತ್ತಿಲ್ಲ.

 3. Subramanya H V •

  ಮಾನ್ಯ ಹೆಚ್.ವಿ. ಯವರೇ ಸರಿಯಾಗಿ ಹೇಳಿದ್ದೀರಿ. ಯಾರನ್ನೇ ಆಗಲಿ ಅರಿಯಾಗಿ ಅಥೈ೵ಸಿ ವ್ಯಾಖ್ಯಾನಿಸಬೇಕು. ಕೆಲವೊಮ್ಮೆ ನಮ್ಮವರೂ ಎಂದು ಯಾರನ್ನಾದರೂ ಸಮಥೀ೵ಸಿಕೊಳ್ಳುವುದೂ ಅಥವಾ ನಮಗಾಗುವುದಿಲ್ಲವೆಂದು ಖಂಡಿಸುವುದೂ ಅರಿಯಲ್ಲಾ.

  ಹೌದು ಇತ್ತೀಚಿನ ದಿನಗಳಲ್ಲಿ ಈ ಆಚರಣೇಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿವೆ ಹೀನ ರಾಜಕಾರಣದಿಂದ. ಇವುಗಳಿಗೆ ಮೌಲ್ಯ ತರುವಂಥಾ ಯಾವುದೇ ಪಕ್ಷದವರಾಗಿರಲಿ ಅವರನ್ನು ಆಯ್ಕೆ ಮಾಡಿ ಕಳುಹಿಸಬೇಕು.

 4. Shiva • 3 days ago −
  Informative one .Thanks a lot VB.

 5. Satish •
  ಗಣರಾಜ್ಯೋತ್ಸವದ ಬಗ್ಗೆ ಗೊತ್ತಿಲ್ಲದ ಸ್ವಾತಂತ್ರದ ನೆತ್ತರಿನ ಅರಿವಿಲ್ಲದ ಅವಿವೇಕಿಗಳು ಮಾತ್ರ ಕೆಜ್ರಿವಲ್ ಮಾತನಾಡಿದಂತೆ ಮಾತನಾಡಬಹುದು ಮುಂದೊಂದು ದಿನ ಇವರು ಸ್ವಾತಂತ್ರ ದಿನದ ಆಚರಣೆಯ ಪ್ರಯೋಜನವೇನು ಎಂದು ಕೇಳಿದರೂ ಕೇಳಬಹುದು ಎಂದು ಹೇಳುತ್ತಿದ್ದೀರಾ, ಆದರೆ ನಾಟಕದ ಕಂಪನಿಯಲ್ಲಿ ನಡೆಯುವಂತೆ ಮೋದಿ ಕೆಂಪು ಕೋಟೆಯ ನಕಲನ್ನು ತಯಾರಿಸಿ ಸ್ವಾತಂತ್ರ ದಿನದ ಭಾಷಣ ಮಾಡಿದ್ದು ಅಸದ್ದಾಳತನ ಮತ್ತು ಸ್ವಾತಂತ್ರ ಹೋರಾಟಕ್ಕೆ ಮಾಡಿದ ಕುಚೊದ್ಯವಲ್ಲವೆ? ಸ್ವಾತಂತ್ರ ಸಂಗ್ರಾಮದ ಭವ್ಯ ಇತಿಹಾಸಕ್ಕೆ ಮತ್ತು ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಮೋದಿ ಮಾಡಿದ ಅವಮಾನ ಎಂದು ಅನ್ನಿಸಲಿಲ್ಲವೇ ಭಟ್ರೇ?

 6. Nice article..! But why normal people live in Myth like IITian’s are best.

 7. BUT THE PARED IS ALL ABOUT THE PROUDNESS OF INDIA. IT SHOWS OTHER COUNTRIES HOW IS INDIAN CULTURE, PROSPERITY AND HOW STRONG IS INDIAN DEFENSE. IT GIVES US THE KNOWLEDGE ABOUT THE DEFENSE FORCE OF INDIA, CULTURE OF INDIA.SO REPUBLIC DAY PARADE IS SOMETHING WHERE YOU GET EVERYTHING OF INDIA.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.