ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
‘ಬ್ರೇಕಿಂಗ್ ನ್ಯೂಸ್!’ ಅಂತ ಹೇಳುವುದಾ?
ದಿಲ್ಲಿಯ ನಲವತ್ತೆಂಟು ಕಾಲೇಜುಗಳ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ನ್ಯೂಸ್ ಚಾನೆಲ್್ನಲ್ಲಿ ನಿಮಗೆ ಬಹಳ ರಂಜನೀಯವಾದುದೇನು ಎಂಬ ಪ್ರಶ್ನೆಗೆ ಸುಮಾರು 2800 ಮಂದಿ ‘ಬ್ರೇಕಿಂಗ್ ನ್ಯೂಸ್್’ ಎಂದು ಹೇಳಿದ್ದರು. ‘ನ್ಯೂಸ್ ಚಾನೆಲ್್ನಲ್ಲಿ ನಿಮಗೆ ಭಲೇ ತಮಾಷೆ ಅನ್ನಿಸುವುದೇನು?’ ಎಂಬ ಪ್ರಶ್ನೆಗೆ 3100 ವಿದ್ಯಾರ್ಥಿಗಳು ಅದೇ ಉತ್ತರ ನೀಡಿದ್ದರು-’ಬ್ರೇಕಿಂಗ್ ನ್ಯೂಸ್!’ ಬ್ರೇಕಿಂಗ್ ನ್ಯೂಸ್್ನ್ನು ನೀವು ನಿಜಕ್ಕೂ ಸೀರಿಯಸ್ ಆಗಿ ಪರಿಗಣಿಸುತ್ತೀರಾ?’ ಎಂಬ ಪ್ರಶ್ನೆಗೆ, 2900 ವಿದ್ಯಾರ್ಥಿಗಳು ‘ಇಲ್ಲ’ ಎಂದಿದ್ದರು.
ನನ್ನ ಪಾಲಿಗಂತೂ ಈ ಸಮೀಕ್ಷೆಯ ಫಲಿತಾಂಶ ಮಾತ್ರ ಬ್ರೇಕಿಂಗ್ ನ್ಯೂಸ್. ಪ್ರತಿಸಲ ಅದೆಷ್ಟು ಕುತೂಹಲ, ಆಸಕ್ತಿ, ಉತ್ಸಾಹದಿಂದ ಸುದ್ದಿಮನೆಯಲ್ಲಿರುವವರು ಸುದ್ದಿಯನ್ನು ಬ್ರೇಕ್ ಮಾಡುತ್ತಾರೆ. ಆದರೆ ವೀಕ್ಷಕರು ಅದನ್ನು ತಮಾಷೆಯಾಗಿ, ಜೋಕಾಗಿ ಪರಿಗಣಿಸಿದರೆ ನಮ್ಮ ಗತಿಯೇನು? ನಮ್ಮ ಹಣೆಯನ್ನು ಎಲ್ಲಿ ಚಚ್ಚಿಕೊಳ್ಳುವುದು? ಬ್ರೇಕಿಂಗ್ ನ್ಯೂಸ್್ನ್ನು ಯಾರೂ ಸೀರಿಯಸ್ ಆಗಿ ಪರಿಗಣಿಸುವುದಿಲ್ಲ ಅಂತಾದರೆ ಇಪ್ಪತ್ನಾಲ್ಕು ಗಂಟೆ ಅದನ್ನು ಫೀಡ್ ಮಾಡುವವರಿಗೆ, ಆ ಸುದ್ದಿಯನ್ನು ಬ್ರೇಕ್ ಮಾಡುವವರಿಗೆ ಅದೆಂಥ ನಿರಾಸೆಯಾಗಬಹುದು?
ಈ ದಿನಗಳಲ್ಲಿ, ದಿನದಿಂದ ದಿನಕ್ಕೆ ಸುದ್ದಿಯ ಸ್ವರೂಪವನ್ನು ಬದಲಾಯಿಸುವ ‘ಬ್ರೇಕಿಂಗ್ ನ್ಯೂಸ್್’ ಮಾತ್ರ ಈ ರೀತಿ ಮೌಲ್ಯ ಕಳೆದುಕೊಂಡಿರುವುದು ಶುಭವೋ, ಅಶುಭವೋ, ಒಳ್ಳೆಯದೋ, ಕೆಟ್ಟದ್ದೋ ಗೊತ್ತಾಗುತ್ತಿಲ್ಲ.
ಇಪ್ಪತ್ನಾಲ್ಕು ಗಂಟೆ ಸುದ್ದಿ ಬಿತ್ತರಿಸುವ ನ್ಯೂಸ್ ಚಾನೆಲ್್ಗಳಿಗೆ ಪ್ರತಿಕ್ಷಣವೂ ಸುದ್ದಿ ಬೇಕು. ಈಗಿನ ಸುದ್ದಿ ಈಗಲೇ ಹಳಸಲು. ‘ಇಂದಿನ ಸುದ್ದಿ ನಾಳೆಗೆ ರದ್ದಿ’ ಎಂಬ ಮಾತಂತೂ ನ್ಯೂಸ್ ಚಾನೆಲ್ ಬಂದ ನಂತರ ಅರ್ಥವನ್ನೇ ಕಳೆದುಕೊಂಡಿತು.
ಒಂದು ಘಟನೆ ಸಂಭವಿಸಿದ ಅರ್ಧ ಗಂಟೆಯೊಳಗೆ ಅದರ ಸಂಪೂರ್ಣ ವಿವರವನ್ನು ಗುಡಿಸಿ, ಸಾರಿಸಿ, ನಿವಾಳಿಸಿ, ತೊಳೆದು, ಒಣ ಹಾಕಿ ಹಿಂಜಿ ಬಿಡುವುದು ನ್ಯೂಸ್ ಚಾನೆಲ್್ನ ಧರ್ಮ. ಘಟನೆ ನಡೆದ ಎರಡು ಗಂಟೆಯೊಳಗೆ ಶವ ಸಂಸ್ಕಾರವಾದ ಮನೆಯಂತಿರುತ್ತದೆ ಸುದ್ದಿಮನೆ. ಸುದ್ದಿ ಹೀರುವುದರಲ್ಲಿ, ಉಗುಳುವುದರಲ್ಲಿ ಅಂಥ ತೀವ್ರತೆ, ದಾಹ. ನಿಂತಮೆಟ್ಟಲ್ಲಿ ಒಂದು ಕೊಡ ಉ….ಹುಯ್ಯಬೇಕು ಅಂದ್ರೆ ಹುಯ್ಯಬೇಕು ಅಷ್ಟೆ. ಚೌಕಾಶಿ ವ್ಯವಹಾರ ಇಲ್ಲ. ಅದು ಒಂದು ಸುದ್ದಿಗೆ ಮುಗಿಯಿತು ಎಂಬುದಿಲ್ಲ. ಮುಂದಿನ ಸುದ್ದಿಗೆ ಜಿಗಿಯಬೇಕು. ಅಲ್ಲೂ ಅದೇ ತೀವ್ರತೆ, ಅದೇ ಕೊಡ. ಟಿವಿ ಪರದೆ ಒಂದು ಕ್ಷಣ ಮಂಕಾಗಬಾರದು, ಸಪ್ಪೆಯಾಗಬಾರದು. ಬ್ರೇಕಿಂಗ್ ನ್ಯೂಸ್್ನ ಒರತೆ ಸದಾ ಜಿನುಗುತ್ತಿರಬೇಕು.
ಕಳೆದ ಹತ್ತು ತಿಂಗಳಿಂದ ನಾನು ‘ಸುವರ್ಣ ನ್ಯೂಸ್್’ನಲ್ಲಿದ್ದೇನೆ. ಇಪ್ಪತ್ತು ವರ್ಷ ಪತ್ರಿಕೆಯಲ್ಲಿ ಕೆಲಸ ಮಾಡಿದ ಕತೆಯೇ ಬೇರೆ. ಈ ಹತ್ತು ತಿಂಗಳ ಅನುಭವವೇ ಬೇರೆ. ರಾತ್ರಿ ಎಂಟೂವರೆಯಾಗುತ್ತಿದ್ದಂತೆ ನ್ಯೂಸ್ ಚಾನೆಲ್ ಸೊರಗಲಾರಂಭಿಸಿದರೆ, ಪತ್ರಿಕೆಗಳಿಗೆ ಅದು ಮೈ ಕೊಡವಿ ಸೆಟೆದು ನಿಂತುಕೊಳ್ಳುವ ಕಾಲ. ‘ಸುವರ್ಣ ನ್ಯೂಸ್್’ನಿಂದ ‘ಕನ್ನಡಪ್ರಭ’ಕ್ಕೆ ಹೋದರೆ, ಎಲ್ಲ ಸುದ್ದಿಯೂ ಹಳಸಲು ಹಳಸಲು ಥರಾ ಕಾಣುತ್ತವೆ. ನಾಳೆ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುವ ಸುದ್ದಿಯನ್ನೆಲ್ಲ ನ್ಯೂಸ್ ಚಾನೆಲ್್ಗಳು ಇಡೀ ದಿನ ಬಿತ್ತರಿಸಿ ವಾಕರಿಕೆ ಹುಟ್ಟಿಸುವ ರೀತಿಯಲ್ಲಿ ವರದಿ ಮಾಡಿ ತಿಪ್ಪೆ ಸಾರಿಸಿರುತ್ತವೆ.
ಆಗ ಪತ್ರಿಕೆಯನ್ನು ಬೇರೆ ದೃಷ್ಟಿಕೋನದಿಂದಲೇ ನೋಡಬೇಕು. ಇಡೀ ದಿನ ಟಿವಿಯಲ್ಲಿ ಬಿತ್ತರಿಸಿದ್ದನ್ನು ಸಂಪೂರ್ಣ ಮರೆತು, ಬೇರೆ ಮನಸ್ಥಿತಿಯೊಳಗೆ ತೂರಿಕೊಂಡು ಫ್ರೆಶ್ ಆಗಿ ಯೋಚಿಸಿ ಪತ್ರಿಕೆಯನ್ನು ರೂಪಿಸಬೇಕು. ಇಡೀ ದಿನ ನ್ಯೂಸ್ ಚಾನೆಲ್್ನಲ್ಲಿ ಕೆಲಸ ಮಾಡಿದ ಮನಸ್ಥಿತಿ ಪತ್ರಿಕೆಗೆ ಒಗ್ಗುವುದಿಲ್ಲ. ಪತ್ರಿಕೆಯ ‘ನಿಧಾನವೇ ಪ್ರಧಾನ’ ಟಿವಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ನ್ಯೂಸ್ ಚಾನೆಲ್್ಗೆ ಸ್ಪೀಡ್ ಒಂದೇ ಗೊತ್ತು.
ಈ ಬ್ರೇಕಿಂಗ್ ನ್ಯೂಸ್ ಹುಟ್ಟಿಕೊಳ್ಳುವುದು ಆಗಲೇ. ಅದು ‘ವೇಗ’ಕ್ಕೆ ಬಸಿರಾಗಿ ಹಡೆದ ಕೂಸು! ತಂದೆ-ತಾಯಿ ಯಾರು ಅಂತ ಸಹ ಅದಕ್ಕೆ ಗೊತ್ತಿರುವುದಿಲ್ಲ. ಎಲ್ಲರಿಗಿಂತ ಮೊದಲು, ಈ ಜಗತ್ತಿಗೆ ನಾವೇ ಸುದ್ದಿ ಬಿತ್ತರಿಸಬೇಕು ಎಂಬ ಧಾವಂತ ಬಿಟ್ಟರೆ ಮತ್ತ್ಯಾವ ಸಂಗತಿಯೂ ಗೊತ್ತಿಲ್ಲ. ಹೀಗಾಗಿ ಸುದ್ದಿಯಲ್ಲದ್ದು, ಸುದ್ದಿಯಾಗುತ್ತದೆ. ಸುದ್ದಿಯಾಗಲೇ ಬಾರದ್ದು ಸುದ್ದಿಯಾಗುತ್ತದೆ. ಕೆಲವು ಸುದ್ದಿ ನೋಡಿದರೆ, ಇದೂ ಸುದ್ದಿಯಾ? ಅಂತೆನಿಸುತ್ತದೆ. ಸುದ್ದಿಯಾಗಿದ್ದು ಹಾಗೂ ಸುದ್ದಿ ಮಾಡಿದ್ದರ ನಡುವಿನ ಫರಕು ತಿಳಿಯದ ಹಾಗೆ ‘ಸುದ್ದಿಸ್ಫೋಟ’ವಾಗುತ್ತದೆ.
ಜೈಲಿನಲ್ಲಿ ಚಿತ್ರನಟ ದರ್ಶನ್ ವಾಂಗೀಭಾತ್ ತಿಂದರೆ, ಕುಕ್ಕೆ ಸುಬ್ರಮಣ್ಯದಲ್ಲಿ ಕ್ರಿಕೆಟ್್ತಾರೆ ಸಚಿನ್ ತೆಂಡುಲ್ಕರ್ ಮಡಿ ಬಟ್ಟೆ ಧರಿಸಿದರೆ ಬ್ರೇಕಿಂಗ್ ನ್ಯೂಸ್ ಆಗುತ್ತದೆ. ಆ ದಿನ ಜೈಲಿನಲ್ಲಿ ಉಪಾಹಾರಕ್ಕೆ ವಾಂಗೀಭಾತ್ ಮಾಡಿದ್ದರೆ, ದರ್ಶನ್ ಅದನ್ನು ಸೇವಿಸಿದ್ದರೆ ಅದರಲ್ಲೇನು ವಿಶೇಷ ಹೇಳಿ.
ಕುಕ್ಕೆಯಲ್ಲಿ ಪೂಜೆ ಸಲ್ಲಿಸುವವರು, ವಿಶೇಷ ಹವನ-ಹೋಮ ಮಾಡುವವರು ಕನಿಷ್ಠ ಮಡಿಬಟ್ಟೆ ಧರಿಸಲೇಬೇಕಾದುದು ಅಲ್ಲಿನ ಸಂಪ್ರದಾಯ. ಅದೇ ಪರಮ ಸುದ್ದಿ ಎಂಬಂತೆ ಬಿತ್ತರಿಸಿದರೆ ಹೇಗೆ? ಐಶ್ವರ್ಯ ರೈಗೆ ಮಗು ಜನಿಸಿದಾಗ ಕನ್ನಡದ ನ್ಯೂಸ್ ಚಾನೆಲ್್ನಲ್ಲಿ ಬ್ರೇಕಿಂಗ್ ನ್ಯೂಸ್ ಹಾದು ಹೋಗುತ್ತಿತ್ತು- ‘ಹುಟ್ಟುವಾಗ ಅತ್ತ ಐಶ್ವರ್ಯ ರೈ ಮಗು’ ನಿಜಕ್ಕೂ ಇದು hilarious ಬ್ರೇಕಿಂಗ್ ನ್ಯೂಸ್ ಭಲೇ ತಮಾಷೆಯಾಗಿರುತ್ತದೆಂದು ದಿಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾವಿಸಿದ್ದೇಕೆ ಎಂಬುದು ಗೊತ್ತಾಗಿರಲು ಸಾಕು.
ನಾಲ್ಕು ಜನ ಸೇರಿದಾಗ, ಪತ್ರಿಕೆ-ನ್ಯೂಸ್ ಚಾನೆಲ್ ವಿಷಯ ಪ್ರಸ್ತಾಪವಾದಾಗ, ‘ನೀವ್ಯಾಕೆ ಇಂಥ ಕ್ಷುಲ್ಲಕ ಘಟನೆಗಳನ್ನು ಸುದ್ದಿ ಮಾಡ್ತೀರ? ಐಶ್ವರ್ಯರೈ ದಪ್ಪ ಆದ್ರೆ ನಿಮಗೇನಾಗುತ್ತದೆ? ಅದನ್ನೂ ದೊಡ್ಡ ಸುದ್ದಿ ಮಾಡಿ ಬಿತ್ತರಿಸುತ್ತೀರಲ್ಲಾ? ನಿಮಗೆ ಒಳ್ಳೆಯ ಸುದ್ದಿ ಸಿಗೊಲ್ಲವಾ? ಪಾಸಿಟಿವ್ ಸುದ್ದಿ, ಸುದ್ದಿಯಲ್ಲವಾ? ಬರೀ ನೆಗೆಟಿವ್ ಸುದ್ದಿಯನ್ನೇ ಪ್ರಸಾರ ಮಾಡುವುದೇಕೆ? ಮುಂತಾದ ಪ್ರಶ್ನೆಗಳಿಂದ ದಾಳಿ ಮಾಡುತ್ತಾರೆ. ಕೆಲವು ಸಲ ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಬರಿದಾಗಿದ್ದರೆ, ನಿರುತ್ತರವಾಗಿದ್ದಿದೆ. ಅವರು ಹೇಳೋದರಲ್ಲಿ ತಪ್ಪಿಲ್ಲ. ಆದರೆ ಅವರಿಗೆ ನಮ್ಮ ಸಂಕಷ್ಟ ವಸಿ ಅರ್ಥವಾಗಿರುವುದಿಲ್ಲ. ಅರ್ಥ ಮಾಡಿಕೊಂಡರೆ ಆ ರೀತಿ ನಮ್ಮ ಮೇಲೆ ‘ದಾಳಿ’ ಮಾಡುತ್ತಿರಲಿಲ್ಲ.
‘ದಿ ವಾಷಿಂಗ್್ಟನ್ ಪೋಸ್ಟ್್’ನ ಖ್ಯಾತ ಸಂಪಾದಕ ಬೆಂಜಮಿನ್ ಬ್ರಾಡ್ಲಿ ತಮ್ಮ ಆತ್ಮಕತೆ ‘ಆ Good Life’ ನಲ್ಲಿ ಬರೆದಿರುವುದು ನೆನಪಾಗುತ್ತಿದೆ. ಒಂದು ದಿನ ಸಾಯಂಕಾಲ ಬ್ರಾಡ್ಲಿ ಸುದ್ದಿಮನೆಗೆ ಹೋಗಿ, ಸುದ್ದಿ ಸಂಪಾದಕರನ್ನು ಕರೆದು, ‘ಇಂದಿನ ಪ್ರಮುಖ ಸುದ್ದಿಯೇನು? ಮುಖಪುಟದ ಲೀಡ್ ಸುದ್ದಿಯೇನು? ಮುಖಪುಟಕ್ಕೆ ಬೇರೆ ಯಾವ ಸುದ್ದಿ ತೆಗೆದುಕೊಳ್ಳುತ್ತೀರಿ?’ ಎಂದು ಪ್ರಶ್ನಿಸಿದರಂತೆ. ಅದಕ್ಕೆ ಸುದ್ದಿ ಸಂಪಾದಕರು, ‘ಇಂದು ಯಾವ ಸುದ್ದಿಯೂ ಇಲ್ಲ, ಯಾರೂ ಸತ್ತಿಲ್ಲ. ಜಗತ್ತಿನಲ್ಲಿ ಎಲ್ಲೂ ಪ್ರಕೃತಿ ವಿಕೋಪಗಳಾಗಿಲ್ಲ. ಎಲ್ಲೂ ಅಪಘಾತಗಳಾಗಲಿ, ದುರಂತಗಳಾಗಲಿ ಸಂಭವಿಸಿಲ್ಲ. ಇಡೀ ವಿಶ್ವ ಶಾಂತಿಯಿಂದ ಕೂಡಿದೆ. ಎಲ್ಲರೂ ಸಂತಸದಿಂದ ಇದ್ದಾರೆ. ಇಂದು ಎಲ್ಲೂ ಜಗಳ-ರಗಳೆಗಳಿಲ್ಲ. ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ. ಒಂದು ಗಂಟೆಯಿಂದ ತಲೆಕೆಡಿಸಿಕೊಂಡು ಕುಳಿತಿದ್ದೇನೆ. ಮುಖಪುಟಕ್ಕೆ ಸುದ್ದಿಯೇ ಸಿಗುತ್ತಿಲ್ಲ. ಪತ್ರಿಕೆಯ ಮುಖಪುಟವನ್ನು ಖಾಲಿ ಕಳಿಸುವುದೊಂದೇ ಬಾಕಿ, ಸುದ್ದಿಯೇ ಇಲ್ಲ’ ಎಂದು ಹೇಳಿದರಂತೆ. ಜಗತ್ತು ಸುಖ-ಸಂತಸ-ಶಾಂತಿಯಿಂದ ಇದ್ದರೆ ಪತ್ರಕರ್ತರಿಗೆ ಆಗುವ ಹಿಂಸೆ, ಚಡಪಡಿಕೆ ಅಷ್ಟಿಷ್ಟಲ್ಲ!
ಸುದ್ದಿ ಸಂಪಾದಕನ ಮುಖದಲ್ಲಿ ಮಡುಗಟ್ಟಿದ ಚಿಂತೆಯನ್ನು ಗಮನಿಸಿದ ಬ್ರಾಡ್ಲಿ ಕೇಳಿದರಂತೆ- ‘ಅದು ಸರಿ, ಏನಾದರೂ ಲೀಡ್ ಸುದ್ದಿಯನ್ನು ಪ್ರಕಟಿಸಲೇಬೇಕು ತಾನೆ? ಟೈಮ್ ಆಗ್ತಾ ಇದೆ, ಬೇರೆ ಯಾವುದಾದರೂ ವರದಿಯನ್ನು ಸಿದ್ಧಪಡಿಸಿ’ ಅದಕ್ಕೆ ಸುದ್ದಿ ಸಂಪಾದಕರು, ‘ಒಂದು ಐಡಿಯಾ! ವಿಶ್ವದ ಪತನ ಸನ್ನಿಹಿತ ಎಂಬ ಸುದ್ದಿ ಮಾಡಿದರೆ ಹೇಗೆ?’ ಎಂದು ಕೇಳಿದರಂತೆ.
ಬ್ರಾಡ್ಲಿಗೆ ಗಲಿಬಿಲಿ. ಸುದ್ದಿ ಸಂಪಾದಕ ಮಹಾಶಯನ ಮುಖವನ್ನೊಮ್ಮೆ ನೋಡಿ, ‘ಅಂಥ ಸುದ್ದಿಯೇಕೆ? ಈ ಐಡಿಯಾ ಬಂದಿದ್ದಾದರೂ ಹೇಗೆ?’ ಎಂದು ಕೇಳಿದ್ದಕ್ಕೆ ಸಿಕ್ಕ ಉತ್ತರ- ‘ಜಗತ್ತಿನಲ್ಲಿ ಏನೂ ನಡೆದೇ ಇಲ್ಲ. ಎಲ್ಲವೂ ಸುವ್ಯವಸ್ಥಿತವಾಗಿದೆ ಅಂದ್ರೆ ನಮ್ಮ ಪತ್ರಿಕೆಯನ್ನು ಯಾರೂ ಮೂಸಿ ನೋಡುವುದಿಲ್ಲ, ಓದುವುದಿಲ್ಲ ಅಂತ ನೀವೇ ಹೇಳ್ತಾ ಇದ್ರಿ. ಏನೂ ಸಂಭವಿಸದ ದಿನ, ವಿಶ್ವದ ಅಂತ್ಯ ಸನ್ನಿಹಿತ ಅಂತ ಬರೆದರೆ ಜನ ಗಾಬರಿಯಿಂದ ಓದೇ ಓದುತ್ತಾರೆ. ಹೇಗಿದೆ ಐಡಿಯಾ?
ಇಬ್ಬರೂ ತಮಾಷೆಯಿಂದ ಜೋರಾಗಿ ನಕ್ಕರಂತೆ.
ಒಮ್ಮೆ ಸಂಪಾದಕನ ಬಳಿ ಬಂದ ಮುಖ್ಯ ವರದಿಗಾರನೊಬ್ಬ ‘ಭೂಕಂಪ ದಿನಾಲೂ ಸಂಭವಿಸುವಂತಿದ್ದರೆ ಚೆನ್ನಾಗಿರುತ್ತಿತ್ತು ಅಲ್ವಾ? ಪ್ರತಿದಿನ ಜನ ಮುಗಿಬಿದ್ದು ಓದುತ್ತಿದ್ದರು. ಪತ್ರಿಕೆ ಪ್ರಸಾರ ಹೆಚ್ಚಾಗುತ್ತಿತ್ತು’ ಎಂದನಂತೆ. ಅದಕ್ಕೆ ಸಂಪಾದಕರು ‘ಪ್ರತಿ ದಿನ ಭೂಕಂಪವಾದರೆ ಜನರೆಲ್ಲ ಸತ್ತು, ಆಸ್ತಿಪಾಸ್ತಿಗೆ ಹಾನಿಯಾಗಿ ಜನ ಪತ್ರಿಕೆ ಓದುವುದನ್ನೇ ನಿಲ್ಲಿಸುತ್ತಿದ್ದರು. ಪ್ರಸಾರ ನೆಲಕಚ್ಚುತ್ತಿತ್ತು’ ಎಂದರಂತೆ. ಪೆಚ್ಚುಮೋರೆ ಹಾಕಿಕೊಂಡು ಅಲ್ಲಿಂದ ನಿರ್ಗಮಿಸಬೇಕು ಎನ್ನುವಾಗ ಸಂಪಾದಕರು, ಮುಖ್ಯ ವರದಿಗಾರರನ್ನು ಕರೆದು ಹೇಳಿದರಂತೆ- ‘ಪ್ರತಿದಿನ ಭೂಕಂಪ ಸಂಭವಿಸುವುದಿಲ್ಲ. ಆದರೆ ನೆನಪಿಟ್ಟುಕೋ. ಪ್ರತಿದಿನ ಪತ್ರಿಕೆಯಲ್ಲಿ ಭೂಕಂಪವನ್ನು ಸೃಷ್ಟಿಸುವುದು ಸಾಧ್ಯವಿದೆ. ನೀನು ಮಾಡಬೇಕಿರುವುದು ಅದನ್ನೇ. ಪ್ರತಿದಿನ ನಿನ್ನ ವರದಿಯಿಂದ ಭೂಕಂಪವನ್ನು ಸೃಷ್ಟಿಸು. ಆಗ ಜನ ನಮ್ಮ ಪತ್ರಿಕೆ ಹೇಗೆ ಓದುತ್ತಾರೆ ನೋಡ್ತಾ ಇರು.’
ಪತ್ರಿಕೆ ಹೇಗೆ ಇರಲಿ, ಆದರೆ ಎಲ್ಲ ಪತ್ರಕರ್ತರು ಮಾತ್ರ ಒಂದೇ. ಅವರು ಪತ್ರಿಕೆಯಲ್ಲಿರಲಿ, ನ್ಯೂಸ್ ಚಾನೆಲ್್ನಲ್ಲಿರಲಿ, ಅವರ ಯೋಚನೆ ಮಾತ್ರ ಒಂದೇ. ಪಾಸಿಟಿವ್ ಸಂಗತಿ ಸುದ್ದಿಯಾಗುವುದಿಲ್ಲ. ಹೀಗಾಗಿ ನೆಗೆಟಿವ್ ಅಂಶಗಳನ್ನೇ ವೈಭವೀಕರಿಸುತ್ತಾರೆ. ಇದು ಪತ್ರಕರ್ತರ ರಕ್ತದಲ್ಲೇ ಇದ್ದಿರಬಹುದು.
ಪತ್ರಕರ್ತರ ಕುರಿತು ಒಂದು ಕಾಲ್ಪನಿಕ ಪ್ರಸಂಗವಿದೆ. ಕೇಳಿ.
ಒಮ್ಮೆ ಪತ್ರಕರ್ತ ನಿಧನನಾದ. ಆತ ನೇರವಾಗಿ ಸ್ವರ್ಗಕ್ಕೆ ಹೋದ. ಅಲ್ಲಿನ ಬಾಗಿಲು ಮುಚ್ಚಿತ್ತು. ಬಾಗಿಲು ಬಡಿದು ಅದನ್ನು ತೆರೆಯುವಂತೆ ಕೂಗಿದ. ಒಂದು ಸಣ್ಣ ಕಿಟಕಿಯ ಬಾಗಿಲು ತೆರೆಯಿತು. ಒಳಗಿನಿಂದ ಚಿತ್ರಗುಪ್ತ ಹೇಳಿದ- ‘ಕ್ಷಮಿಸು, ಸ್ವರ್ಗದಲ್ಲಿ ಪತ್ರಕರ್ತರಿಗೆ ಇಂತಿಷ್ಟು ಅಂತಾ ಕೋಟಾ ಇದೆ. ಅದು ಈಗ ಭರ್ತಿಯಾಗಿದೆ. ನಾವು ಇಲ್ಲಿ ಹನ್ನೆರಡು ಮಂದಿ ಪತ್ರಕರ್ತರನ್ನಷ್ಟೇ ಇಟ್ಟುಕೊಳ್ಳುತ್ತೇವೆ. ಅವರಿಗೂ ಇಲ್ಲಿ ಕೆಲಸ ಇಲ್ಲ. ಯಾಕೆಂದರೆ ಇದು ಸ್ವರ್ಗ. ಇಲ್ಲಿ ಯಾವ ಪಾಪಕಾರ್ಯ, ಅಹಿತಕರ ಘಟನೆ ನಡೆಯುವುದಿಲ್ಲವಲ್ಲ. ಹೀಗಾಗಿ ಅವರಿಗೆ ಇಲ್ಲಿ ಯಾವ ಸುದ್ದಿಯೂ ಸಿಗುವುದಿಲ್ಲವಲ್ಲ! ಪತ್ರಕರ್ತರು ಸ್ವರ್ಗದಲ್ಲಿ ಹೆಚ್ಚು ದಿನ ಇರಬಯಸುವುದಿಲ್ಲ. ಬೋರಾಗುತ್ತದೆ. ಹಾಗಾಗಿ ನಿನಗೇನು ಕೆಲಸ ಇಲ್ಲಿ?’
ಆದರೆ ಆ ಪತ್ರಕರ್ತ ಕೇಳಬೇಕಲ್ಲ? ‘ನನಗೊಂದು ಅವಕಾಶ ಕೊಡಿ.’ ಬೇಕಾದರೆ ಇಪ್ಪತ್ನಾಲ್ಕು ಗಂಟೆ ಕಾಯುತ್ತೇನೆ ಇಲ್ಲೇ’ ಎಂದ. ‘ಇಪ್ಪತ್ನಾಲ್ಕು ಗಂಟೆ ಸ್ವರ್ಗದ ಬಾಗಿಲಲ್ಲಿ ಏನು ಮಾಡ್ತೀಯಾ?’ ಎಂದು ಚಿತ್ರಗುಪ್ತ ಕೇಳಿದ್ದಕ್ಕೆ, ‘ನಾನು ಇಲ್ಲಿ ಸುಮ್ಮನೆ ಕುಳಿತಿರುವುದಿಲ್ಲ. ನಾನು ಒಳಗಿರುವ ಪತ್ರಕರ್ತರಲ್ಲೊಬ್ಬನನ್ನು ನರಕಕ್ಕೆ ಹೋಗುವಂತೆ ಮನವೊಲಿಸುತ್ತೇನೆ. ಆ ಜಾಗಕ್ಕೆ ನಾನು ಬರುತ್ತೇನೆ. ಆಗ ನಿಮ್ಮ ಕೋಟಾ ಪ್ರಕಾರ ನನಗೆ ಇಲ್ಲಿರಲು ಅವಕಾಶ ಸಿಗುತ್ತದೆ’ ಎಂದ ಪತ್ರಕರ್ತ.
ಅದಕ್ಕೆ ಚಿತ್ರಗುಪ್ತ ಸಮ್ಮತಿಸಿದ. ಸ್ವರ್ಗದ ಬಾಗಿಲನ್ನು ತೆರೆದು ಪತ್ರಕರ್ತನನ್ನು ಒಳಬಿಟ್ಟುಕೊಂಡ. ಇಪ್ಪತ್ನಾಲ್ಕು ಗಂಟೆ ಕಳೆಯುವುದರೊಳಗೆ ಪತ್ರಕರ್ತ ಎಲ್ಲರ ವಿಶ್ವಾಸ ಗಳಿಸಿ ತುರ್ತಾಗಿ ಸಭೆ ಕರೆದು ಅಲ್ಲಿ ಘೋಷಿಸಿದ- ‘ಸದ್ಯದಲ್ಲಿಯೇ ನರಕದಲ್ಲಿ ಹೊಸ ಪತ್ರಿಕೆಯೊಂದು ಆರಂಭವಾಗಲಿದೆ. ದೊಡ್ಡ ಬಂಡವಾಳ ಹೂಡಿ ಭಾರಿ ಪ್ರಮಾಣದಲ್ಲಿ ಪತ್ರಿಕೆ ಆರಂಭಿಸಲು ತಯಾರಿ ನಡೆದಿದೆ. ಆ ಪತ್ರಿಕೆಗೆ ಸಂಪಾದಕರು, ಉಪಸಂಪಾದಕರು, ವರದಿಗಾರರು ಬೇಕಾಗಿದ್ದಾರೆ. ಆಕರ್ಷಕ ಸಂಬಳ, ಸವಲತ್ತುಗಳನ್ನು ನೀಡಲಾಗುವುದು.’
ಮರುದಿನ ಬೆಳಗಾಗುವುದರೊಳಗೆ ಸ್ವರ್ಗದ ಬಾಗಿಲ ಬಳಿ ಈ ಪತ್ರಕರ್ತ ಹೋದರೆ ಚಿತ್ರಗುಪ್ತ ತಡೆದ. ‘ನೀನು ಇಲ್ಲಿಯೇ ಇರಬೇಕು. ನೀನು ನರಕಕ್ಕೆ ಹೋಗುವಂತಿಲ್ಲ’ ಎಂದ. ‘ಏಕೆ?’ ಎಂದು ಪ್ರಶ್ನಿಸಿದ್ದಕ್ಕೆ, ‘ಇಲ್ಲಿರುವ ಎಲ್ಲ ಹನ್ನೆರಡು ಪತ್ರಕರ್ತರು ಈಗಾಗಲೇ ಕಾಲ್ಕಿತ್ತಿದ್ದಾರೆ. ನರಕದಲ್ಲಿನ ಪತ್ರಿಕೆ ಸೇರಲು ಹೋಗುತ್ತಿರುವುದಾಗಿ ಹೇಳಿದರು. ನಾನು ಬೇರೆ ದಾರಿಯಿಲ್ಲದೇ ಸಮ್ಮತಿಸಿದೆ. ಈಗ ಇಲ್ಲಿ ನೀನೊಬ್ಬನೇ ಪತ್ರಕರ್ತನಿರುವುದು- ಇಲ್ಲಿ ನಮಗೆ ಒಬ್ಬನಾದರೂ ಬೇಕೇ ಬೇಕು’ ಎಂದ ಚಿತ್ರಗುಪ್ತ.
ಆದರೆ ಪತ್ರಕರ್ತ ಬಿಲ್್ಕುಲ್ ಸಾಧ್ಯವೇ ಇಲ್ಲ ಎಂದ. ಅದಕ್ಕೆ ಚಿತ್ರಗುಪ್ತ ‘ನೋಡು ನೀನು ಸುಳ್ಳು ಹೇಳಿದೆ. ನರಕದಲ್ಲಿ ಯಾವ ಪತ್ರಿಕೆಯೂ ಆರಂಭವಾಗುತ್ತಿಲ್ಲ’ ಎಂದ. ಈ ಮಾತನ್ನು ಕೇಳಿದ ಪತ್ರಕರ್ತ ನುಡಿದ- ‘ಹೌದು, ನಾನೊಂದು ಸುಳ್ಳನ್ನು ಸೃಷ್ಟಿಸಿದೆ. ಅದಕ್ಕೆ ಹನ್ನೆರಡು ಪತ್ರಕರ್ತರು ನಂಬಿದ್ದಾರೆ ಅಂದ್ರೆ ಅದರಲ್ಲಿ ಏನೋ ಇರಬೇಕು? ನನಗೂ ಇಲ್ಲಿರಲು ಇಷ್ಟವಿಲ್ಲ. ದಯವಿಟ್ಟು ಸ್ವರ್ಗದ ಬಾಗಿಲನ್ನು ತೆರೆಯಿರಿ. ನಾನು ನರಕಕ್ಕೆ ಹೋಗಬಯಸುವೆ. ನಾನು ಇಲ್ಲಿಗೆ ಸೇರಿದವನಲ್ಲ. ನಾನಿರಬೇಕಾದ್ದು ನರಕದಲ್ಲಿ’
ಅಂದರೆ ಸ್ವರ್ಗದಲ್ಲಿ ಪತ್ರಕರ್ತರಿರುವುದು ಸಾಧ್ಯವೇ ಇಲ್ಲ. ಅಷ್ಟಕ್ಕೂ ಅಲ್ಲಿ ಅವರಿಗೆ ಕೆಲಸವೇನಿದೆ?
ಈ ಅಂಕಣ ಮುಗಿಸುವ ಹೊತ್ತಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಹೆಜ್ಜೇನು ಕಡಿದಿದೆಯೆಂಬ ಸುದ್ದಿ ಬಂತು. ಅದಕ್ಕೂ ಹದಿನೈದು ದಿನಗಳ ಹಿಂದೆ ರಾಜ್ಯ ಬಿಜೆಪಿ ಅಧ್ಯಕ್ಷರ ಮೇಲೆ ಹೆಜ್ಜೇನು ದಾಳಿ ಮಾಡಿತ್ತು. ನಮ್ಮ ನ್ಯೂಸ್ ಚಾನೆಲ್್ನ ಸುದ್ದಿ ನಿರ್ವಾಹಕರು ಬಂದು, ‘ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹೆಜ್ಜೇನು ದಾಳಿ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್್ನಲ್ಲಿ ಕೊಟ್ಟಾಯ್ತು. ಜೆಡಿಎಸ್ ಅಧ್ಯಕ್ಷರ ಮೇಲೆ ಮುಂದಿನ ದಾಳಿ ನಡೆಯಬಹುದಾ ಎಂದು ಬ್ರೇಕಿಂಗ್ ನ್ಯೂಸ್ ಕೊಡೋಣವಾ ಸಾರ್?’ ಎಂದು ಕೇಳಿದರು.
ನಾನು ನಿರುತ್ತರನಾದೆ.
-ವಿಶ್ವೇಶ್ವರ ಭಟ್
Sir, Nimma atma vimarshe sariyagide.Yellarigu e breaking news kirikiri yagibittide.Especially
nenu hakikondu sattaru, heart attack ninda sattaru. Adu beligge 7 to 9.30 pratatidina ella channelnalli
sattavarade breaking news.Sir nive heli prati nimish jagattinalli yesto jana huttatare, yestojana sayatare
idanne suddi illaddakke breaking news madodu yestu sari & idarinda samajakke yestu upayog.
E Comment bareyuvaga innondu breaking news bantu ” CM New Delhiyalli plane ninda ilidarante”
Egina yela channel navru ee samikshe enda adru tilkoli avara kartavya na…
breaking news ge mahatwa ede, janaru adak mahatwa kodbeku adre madyamadvre adanna joke gala riti prasara madta erodrinda, pramukha vishyakku mahatva sigta ela…. janaranna dushiso badalu avara pramukha suddiyannu matra, adannu gambira bhasheyalli bitarisidare valledu annodu nanna bhavane.
‘ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹೆಜ್ಜೇನು ದಾಳಿ ಸುದ್ದಿಯನ್ನು ಬ್ರೇಕಿಂಗ್ ನ್ಯೂಸ್್ನಲ್ಲಿ ಕೊಟ್ಟಾಯ್ತು. ಜೆಡಿಎಸ್ ಅಧ್ಯಕ್ಷರ ಮೇಲೆ ಮುಂದಿನ ದಾಳಿ ನಡೆಯಬಹುದಾ ಎಂದು ಬ್ರೇಕಿಂಗ್ ನ್ಯೂಸ್ ಕೊಡೋಣವಾ ಸಾರ್?’ ಎಂದು ಕೇಳಿದರು.
ನಾನು ನಿರುತ್ತರನಾದೆ.
lolzzzzzzzzzzzzzzzzz
:D
Sir,
Ee vaara Breaking News and kannadadalli release aagta ide…Adakke PROMO nim lekhana annisutte….
ನಮ್ಮ ಭಾರತದೇಶವು ಹಾಳಗಲು ಈ ಪತ್ರಕರ್ತರು ಕಾರಣ ಪತ್ರಿಕಾಕಾರರೇ ಮೊದಲನೇ ದೇಶ ದ್ರೋಹಿಗಳು ಇವರು ಯಾವ ದೇಶದಲ್ಲಿ ಈ ಅವಿದ್ಯಾವಿದ್ಯಾವಂತರಾದ ಇವರು ಸರಿಯಾಗಿರುತ್ತಾರೋ, ಅವರು ಸರಿಯಾಗಿದ್ದರೇ, ಆ ದೇಶ ರಾಜಕೀಯವಾಗಿ ನ್ಯಾಯ ಧರ್ಮ ( ಧಾರ್ಮಿಕವಾಗಲ್ಲ ) ಶಿಸ್ತು ಗಳಿಂದ ಸಂವೃದ್ಧಿಹೊಂದಿ ಆ ದೇಶದ ಸುತ್ತಲು ಸುಂದರದಿ ಸುಖದಿ ಸುಪ್ರಸಿದ್ಧವಾಗಿ ಸುಭಿಕ್ಷೆ ಸುಭದ್ರತೆ ಸುಚಿತ್ವದಲಿ ಸುಪಥದಲ್ಲಿ ಸುಧಾರಣೆ ಕಂಡು ಬಹು ಏತ್ತರಕ್ಕೆ ಹೋಗಬಹುದು. ಆದರೇ, ನಮ್ಮದೇಶದ ಪತ್ರಿಕೆಗಾರರು ನಾಚಿಕೆಗೇಡಿನ ಜನ ಹಣಕ್ಕೂ , ಗೌರವಕ್ಕೂ, ಅಧಿಕಾರಕ್ಕೂ , ಭಯಕ್ಕೂ ಹೆದರಿ ಭಯದಿಂದ ಬರೆಯುತ್ತಾರೆ. ಈ ದೇಶದ ಜನ, ಸಮಾಜ, ವಿದ್ಯಾಅವಿದ್ಯಾವಂತರು ಸಂಕುಚಿತ ಭಾವನೆಯುಳ್ಳವರಿಂದ ಹೊರಗಿನ ಪತ್ರಿಕೆಗೆ ಅವಕಾಶ ಸಿಗದೇ ಈ ದೇಶ ಅಂಧಪತನಕ್ಕೆ ಕಾರಣವಾಗಿದೆ, ಅದರಿಂದಲೇ ನಾವು ಬಯಿಸಿದ ಹೊರಗಿನವರು ವಿದೇಶಿ ಪತ್ರಕರ್ತರು ಬಂದಿದ್ದರೇ, ಈ ನೋಟವಿರುತಿರಲಿಲ್ಲ ಈ ದೇಶದ ಭವಿಷತ್ಕಾಲ ಸುಭದ್ರವಾಗಿರುತ್ತಿತ್ತು.
ಭಾರತೀಯ ಪತ್ರಕರ್ತರ ತಪ್ಪುಗಳನ್ನು ಹೇಳಲು ಹೋದರೇ ದೊಡ್ಡ ಪಟ್ಟಿಯನ್ನೇ ಮಾಡಬೇಕಿರುತ್ತದೆ. ಮುಂದೆ ನೀವಾಗಿ ಕೇಳಿದರೇ ಬರೆಯುತ್ತೇನೆ.