ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ದೇವರ ಕೆಲಸದಲ್ಲಿ ದೈವತ್ವ ಕಂಡ ತ್ರಿಮೂರ್ತಿಗಳು!

algappanಕಳೆದ ವಾರ ನಿಧನರಾದ ಮೂವರು ಪರಿಚಿತರು ಹಾಗೂ ಆತ್ಮೀಯರನ್ನು ಸ್ಮರಿಸಿಕೊಳ್ಳಲೇಬೇಕು. ಮೂವರೂ ಹೆಚ್ಚು -ಕಮ್ಮಿ ಒಂದೇ ಉದ್ದೇಶಕ್ಕಾಗಿ ಜೀವ ಸವೆಸಿದವರು. ಅವರ ಕಾಯಕ ಚಿಂತನೆ ಒಂದೇ ಆಗಿತ್ತು. ವೈಯಕ್ತಿಕವನ್ನು ಮೀರಿ ಸಾರ್ವಜನಿಕವನ್ನು ಜೀವನದಲ್ಲಿ ಅಳವಡಿಸಿಕೊಂಡವರು. ಹಾಗಂತ ಎಂದೂ ಪ್ರಚಾರ ಬಯಸಿದವರಲ್ಲ. ಎಂದೂ ಪ್ರಶಸ್ತಿ, ಶಿಫಾರಸುಗಳಿಂದ ದೂರ ಉಳಿದವರು. ತಮ್ಮ ನೆಲೆಯಲ್ಲಿಯೇ ಬದುಕನ್ನು ಕಟ್ಟಿಕೊಂಡು ಅದನ್ನು ಸಮಾಜಮುಖಿಯಾಗಿ ಮಾಡುವತ್ತ ಹಂಬಲಿಸಿದವರು. ಅವರ ಸಾಧನೆ ಗುರುತಿಸಿ ಯಾರೂ ಅವರನ್ನು ಸನ್ಮಾನಿಸದೇ ಇದ್ದುದು ದುರ್ದೈವ.

ಈ ಮೂವರ ಜತೆ ಮಾತಾಡುವಾಗ, ನನ್ನಲ್ಲೊಂದು ವಿಚಿತ್ರ ಕೋರಿಕೆಯನ್ನಿಡುತ್ತಿದ್ದರು-‘ನನ್ನ ಬಗ್ಗೆ ಬರೆಯಬಾರದು. ನನ್ನ ಬಗ್ಗೆ ಬರೆದರೆ ನನಗೆ ಸಂಕೋಚ, ಮುಜುಗರ. ನನ್ನ ಕೆಲಸ ದೇವರಿಗೆ ಇಷ್ಟವಾದರೆ ಸಾಕು.’ ಈ ಮೂವರೂ ನನಗೆ ಆತ್ಮೀಯರಾಗಿದ್ದರು. ಆದರೆ ಆ ಮೂವರು ಒಬ್ಬರನ್ನೊಬ್ಬರು ಭೇಟಿಯಾಗುವುದು ಇರಲಿ, ಪರಸ್ಪರರ ಹೆಸರನ್ನು ಕೇಳಿರಲೂ ಇಲ್ಲ. ಮೂವರೂ ಬೇರೆ ಬೇರೆ ಊರುಗಳಲ್ಲಿದ್ದರು. ಇವರ ಕುರಿತು ಈಗ ಬರೆದರೆ ನನ್ನನ್ನೇನೂ ಕೇಳುವುದಿಲ್ಲ. ಬರೆಯಬಾರದಿತ್ತು ಎಂದು ಬೇಸರಿಸಿಕೊಳ್ಳು–ವುದೂ ಇಲ್ಲ. ಅದಕ್ಕಿಂತ ಹೆಚ್ಚಾಗಿ ಇವರ ಬಗ್ಗೆ ಈಗಲೂ ಬರೆಯದಿದ್ದರೆ ಇನ್ಯಾವಾಗ ಬರೆಯುವುದು? ಅಂದ ಹಾಗೆ ಈ ಮೂವರ ಜೀವನದ ಉದ್ದೇಶ ಒಂದೇ ಆಗಿತ್ತು ಎಂದೆನಲ್ಲ, ಅದೇನೆಂದರೆ ದೇವಸ್ಥಾನ ಕಟ್ಟುವುದು. ತಮ್ಮ ಜೀವನದುದ್ದಕ್ಕೂ ಅವರು ದೈನಂದಿನ ಕೆಲಸ-–ಕಾರ್ಯಗಳ ನಡುವೆಯೇ ದೇವಸ್ಥಾನ ನಿರ್ಮಿಸುವುದರಲ್ಲಿಯೇ ಆನಂದ, ನೆಮ್ಮದಿ, ಸಮಾಧಾನ–ವನ್ನು ಕಂಡುಕೊಂಡರು.

ಇಂದು ಅವರಿಲ್ಲದಿರಬಹುದು. ಆದರೆ ಅವರು ನಿರ್ಮಿಸಿದ ದೇಗುಲಗಳಿವೆ. ಅಲ್ಲಿ ನಮ್ಮ ನಂಬಿಕೆಗಳಿವೆ. ಆಚರಣೆ, ಶ್ರದ್ಧೆಗಳಿವೆ. ಅಲ್ಲಿ ನಾವು ಶಾಂತಿ, ಸಮಾಧಾನವನ್ನು ಅರಸುತ್ತೇವೆ. ನಮ್ಮಂತೆ ಅಸಂಖ್ಯ ಜನರು ಸಹ ಅಲ್ಲಿ ಭಕ್ತಿ-ಭಾವವನ್ನು ಧಾರೆಯೆರೆದು ಕೃತಾರ್ಥರಾಗುತ್ತಾರೆ. ಜೀವನ ಸಾರ್ಥಕ್ಯ ಪಡೆಯುತ್ತಾರೆ. ಹೀಗಾಗಿ ಇಂಥ ದೇಗುಲ ಅಥವಾ ಪೂಜಾ ಸ್ಥಳಗಳನ್ನು ನಿರ್ಮಿಸಿ–ದವರು ತಾವು ನಿಧನರಾದರೂ ಸೂರ್ಯ- ಚಂದ್ರರಿರುವ ತನಕ ತಮ್ಮ ಕಾಯಕ–ಗಳಿಂದ ಅಜರಾಮರರಾಗಿರುತ್ತಾರೆ. ಅದಕ್ಕಿಂತ ದೊಡ್ಡ ಸಾಧನೆ ಯಾವುದಿದೆ?

ಈ ಪೈಕಿ ಮೊದಲನೆಯವರು ಅಳಗಪ್ಪ ಅಳಗಪ್ಪನ್. ಇವರು ಹಿಂದಿನವಾರ ನಿಧನರಾದಾಗ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಇವರ ಕುರಿತು ಶ್ರದ್ಧಾಂಜಲಿ (Obituary) ಲೇಖನ ಪ್ರಕಟಿಸಿತು. ನಮ್ಮ ದೇಶದ ಎಷ್ಟು ಪತ್ರಿಕೆಗಳಲ್ಲಿ ಕನಿಷ್ಠ ಇವರು ನಿಧನರಾದ ಸುದ್ದಿಯಾದರೂ ಪ್ರಕಟವಾಯಿತೋ ಇಲ್ಲವೋ ಗೊತ್ತಿಲ್ಲ. ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ Alagappa Alagappan, founder of Hindu Temple movement in North America, dies at ೮೮ ಎಂಬ ಶೀರ್ಷಿಕೆಯಡಿ ಅರ್ಧಪುಟದ ಲೇಖನ ಪ್ರಕಟಿಸಿತ್ತು.

ಅಳಗಪ್ಪ ಅಳಗಪ್ಪನ್ ಎಂಬ ಹೆಸರನ್ನು ಹೆಚ್ಚು ಮಂದಿ ತಮಿಳರು ಕೇಳಿರಲಿಕ್ಕಿಲ್ಲ. ಆದರೆ ಅಮೆರಿಕದಲ್ಲಿರುವ ಭಾರತೀಯರೂ ಇವರ ಹೆಸರನ್ನು ಕೇಳಿರುವ ಸಾಧ್ಯತೆ ಕಡಿಮೆಯೇ. ಆದರೆ ಅಲ್ಲಿನ ಪ್ರತಿ ದೇವಾಲಯದ ನಿರ್ಮಾಣದ ಹಿಂದೆ ಇವರ ಪರಿಶ್ರಮ ಅಥವಾ ಪ್ರೇರಣೆ ಒಂದಿಲ್ಲೊಂದು ರೀತಿಯಲ್ಲಿ ಕೆಲಸ ಮಾಡಿದೆ. ಹನ್ನೆರಡು ವರ್ಷಗಳ ಹಿಂದೆ, ಅಮೆರಿಕದ ನ್ಯೂಜೆರ್ಸಿಯಲ್ಲಿ ಇವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಆಗ ಅವರು ಎಡಿಸನ್‌ನಲ್ಲಿ ಜೈನ ಮಂದಿರವೊಂದರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಮೆರಿಕದ ದೇವಾಲಯಗಳಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳ ಕುರಿತು ನನಗೆ ಇಮೇಲ್ ಮೂಲಕ ತಪ್ಪದೇ ವಿವರಗಳನ್ನು ಕಳಿಸಿಕೊಡುತ್ತಿದ್ದರು. ಅವರು ಖಾಸಗಿಯಾಗಿ ಬರೆದ ಪತ್ರಗಳಲ್ಲೂ ದೇಗುಲಗಳೇ ಇಣುಕುತ್ತಿದ್ದವು. ಹಣವಿದ್ದವರು ಮನೆ ಕಟ್ಟುವ ಕನಸು ಕಾಣುತ್ತಿದ್ದರೆ, ಈ ಮಹಾನುಭಾವ ಮಾತ್ರ ದೇವಸ್ಥಾನಗಳನ್ನು ಎಲ್ಲಿ ಕಟ್ಟುವುದು, ಹೇಗೆ ಕಟ್ಟುವುದು, ಅಭಿವೃದ್ಧಿಪಡಿಸುವುದೆಂತು ಎಂದು ಯೋಚಿಸುತ್ತಿದ್ದರು. ಅವರಿಗೆ ಅದು ಒಂದು ರೀತಿಯ Obsession ಆಗಿತ್ತು.

ನಮ್ಮೂರಿನಲ್ಲಿ ದೇವಾಲಯ ನಿರ್ಮಾಣ ಮಾಡುವುದಿದೆಯಲ್ಲ ಅದು ದೊಡ್ಡ ಕೆಲಸ. ಅದರಲ್ಲೂ ಅಮೆರಿಕದಂಥ ದೇಶದಲ್ಲಿ ಈ ಕೆಲಸಕ್ಕೆ ಮುಂದಾಗುವುದು ಇನ್ನೂ ದೊಡ್ಡ ಕೆಲಸವೇ. ದೇವಾಲಯ ನಿರ್ಮಾಣಕ್ಕಾಗಿ ಭಾರತೀಯರ ಹೊರತಾಗಿ ಬೇರೆ ಯಾರ ಬಳಿಯೂ ಹಣವನ್ನು ಕೇಳುವಂತಿಲ್ಲ. ಅಮೆರಿಕದಲ್ಲಿ ನೆಲೆಸಿರುವ ಶ್ರೀಮಂತ ಭಾರತೀಯರಿಂದ ಮಾತ್ರ ಹಣ ಕೇಳಬೇಕಾಗುತ್ತಿತ್ತು. ಆದರೆ ಅವರೆಲ್ಲ ಕೇಳಿದಾಕ್ಷಣ ಕೊಡುತ್ತಿರಲಿಲ್ಲ. ಹತ್ತಾರು ಸಲ ಅಲೆದಾಡಬೇಕಾಗುತ್ತಿತ್ತು. ಅಲ್ಲದೇ ಹಣ ಸಂಗ್ರಹವಾದ ಮಾತ್ರಕ್ಕೆ ದೇಗುಲ ನಿರ್ಮಾಣ ಸುಲಭವಾಗಿರಲಿಲ್ಲ. ಕಾನೂನಿನ ತೊಡಕುಗಳಿದ್ದವು. ಸ್ಥಳೀಯ ಆಡಳಿತದ ಪರವಾನಗಿ ತೆಗೆದುಕೊಳ್ಳುವ ಹೊತ್ತಿಗೆ ಏಳೋ-ಹನ್ನೊಂದೋ ಆಗಿರುತ್ತಿತ್ತು. ದೇವಾಲಯದ ನಿರ್ಮಾಣದ ಕಾರಣಗಳನ್ನು ತಿಳಿಸಿ ಅವರಿಗೆ ಮನದಟ್ಟು ಮಾಡಿಕೊಟ್ಟರೂ ಕಾನೂನಿನ ನಿಬಂಧನೆಗಳಿಂದ ಅನಗತ್ಯ ಅಡ್ಡಿ- ಆತಂಕಗಳು ಎದುರಾಗುತ್ತಿದ್ದವು.

ಇಂಥ ಸಂದರ್ಭಗಳಲ್ಲಿ ಅಳಗಪ್ಪ ಅಳಗಪ್ಪನ್ ಸ್ವಲ್ಪವೂ ಧೃತಿಗೆಡಲಿಲ್ಲ. ಕಾನೂನಿನ ಕಾರಣಕ್ಕಾಗಿ ತಾವು ಕೈಗೆತ್ತಿಕೊಂಡ ಕಾರ್ಯವನ್ನು ಮುಂದೂಡುವುದು ಸಹ ಅವರಿಗೆ ಇಷ್ಟವಿರಲಿಲ್ಲ. ದೇಗುಲ ನಿರ್ಮಾಣಕ್ಕೆ ವಿಶೇಷ ಅನುಮತಿ ಪಡೆಯಬೇಕಾಗಿತ್ತು. ತಾವು ಕೈಗೆತ್ತಿಕೊಂಡ ಕಾರ್ಯ ವಿಳಂಬವಾಗುವುದೆಂದು, ನ್ಯೂಯಾರ್ಕಿನ ಹೊರವಲಯದಲ್ಲಿ ಪಾಳುಬಿದ್ದ ಚರ್ಚ್‌ನ ಒಂದು ಮೂಲೆಯಲ್ಲಿ ಅನುಮತಿ ಪಡೆದು ಗಣಪತಿ ದೇವಾಲಯವನ್ನು ಆರಂಭಿಸಿದರು.

ಇದಕ್ಕೆ ಮೂಲ ಒಂದು ರಾತ್ರಿ ಅವರಿಗೆ ಬಿದ್ದ ಕನಸು. ಕನಸಿನಲ್ಲಿ ಗಣಪತಿಯೇ ಬಂದು ‘ನೀನು ಅಮೆರಿಕದಲ್ಲಿರುವಷ್ಟು ಕಾಲ ದೇಗುಲ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೋ’ ಎಂದನಂತೆ. ಅಳಗಪ್ಪ ಅಳಗಪ್ಪನ್‌ಗೆ ಅಷ್ಟೇ ಸಾಕಾಯಿತು. ಬೆಳಗ್ಗೆ ಎದ್ದವರೇ ಸಂಕಲ್ಪ ಮಾಡಿದರು. ಅಮೆರಿಕದಲ್ಲಿ ಎಲ್ಲಿಯವರೆಗೆ ಇರುತ್ತೇನೋ, ಅಲ್ಲಿ ತನಕ ಒಂದಿಲ್ಲೊಂದು ಊರಿನಲ್ಲಿ ದೇವಸ್ಥಾನ ಕಟ್ಟುವ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು. ಆ ಸಂಕಲ್ಪ ಹೇಗಿತ್ತೆಂದರೆ, ಮುಂದಿನ ಐವತ್ತು ವರ್ಷಗಳವರೆಗೆ ಈ ಕೆಲಸ ನಿರ್ವಿಘ್ನವಾಗಿ, ನಿರಂತರವಾಗಿ ನಡೆದುಕೊಂಡು ಬಂದಿತು. ಅಮೆರಿಕದಲ್ಲಿರುವ ಸುಮಾರು ಏಳು ನೂರು ದೇಗುಲಗಳ ಪೈಕಿ ಬಹುತೇಕ ದೇಗುಲಗಳ ಹಿಂದೆ ಅಳಗಪ್ಪ ಅಳಗಪ್ಪನ್ ಒಂದಿಲ್ಲೊಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಏನೂ ಇಲ್ಲ ಅಂತ ಅಂದರೂ, ಕೊನೆಯಲ್ಲಿ ಹೋಗಿ ಗೋಪುರ ಕಳಶವನ್ನೋ, ಬ್ರಹ್ಮ ಕಳಶವನ್ನೋ, ನಂದಿ ಧ್ವಜವನ್ನೋ ಇಟ್ಟು ಬಂದಿದ್ದಾರೆ. ಇಲ್ಲವೇ ದೇವಸ್ಥಾನ ಕಟ್ಟಲು ನಿರ್ಧರಿಸಿದವರು ಇವರ ಸಲಹೆ, ಸಹಕಾರ ಯಾಚಿಸಿದ್ದಾರೆ. ಅಷ್ಟರಮಟ್ಟಿಗಾದರೂ ಅಲ್ಲಿನ ದೇಗುಲ ನಿರ್ಮಾಣದ ಹಿಂದೆ ಅವರ ಯೋಗದಾನವಿದೆ.

‘ಅಳಗಪ್ಪ ಅಳಗಪ್ಪನ್ ನಿಮಗೇಕೆ ಈ ಖಯಾಲಿ?’ ಎಂದು ಕೇಳಿದ್ದಕ್ಕೆ ‘ದೇಗುಲ ನಿರ್ಮಾಣದಂಥ ಪವಿತ್ರ ಕಾರ್ಯ ಮತ್ತೊಂದಿಲ್ಲ. ಇದಕ್ಕಿಂತ ಶ್ರೇಷ್ಠ ಕೆಲಸ ಈ ಭೂಮಿ ಮೇಲೆ ಮನುಷ್ಯನಾಗಿ ಮಾಡುವುದು ಸಾಧ್ಯವಿದ್ದರೆ, ನಾನು ಅದನ್ನೇ ಮಾಡುತ್ತಿದ್ದೆ. ಆದರೆ ಅಂಥ ಕೆಲಸ ಇಲ್ಲವಲ್ಲ, ಹೀಗಾಗಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಬೇರೆಲ್ಲ ಕೆಲಸಗಳ ಹಿಂದೆ ಸ್ವಾರ್ಥವಿದೆ. ಆದರೆ ದೇವಸ್ಥಾನ ಕಟ್ಟುವುದರ ಹಿಂದೆ ಯಾವ ಸ್ವಾರ್ಥವೂ ಇಲ್ಲ. ಇದ್ದರೆ ನನಗೂ ಪುಣ್ಯ ಸಿಗಲಿ ಎಂದಿರಬಹುದಷ್ಟೆ. ಅದರಲ್ಲಿ ತಪ್ಪೇನೂ ಇಲ್ಲವಲ್ಲ.’ ಎಂದು ತಮ್ಮ ಕಾಯಕ ಸಿದ್ಧಾಂತವನ್ನು ಸರಳವಾಗಿ ವಿವರಿಸಿದ್ದರು.

‘ಯಾರೇ ಆಗಲಿ ದೇಗುಲಕ್ಕೆ ಬಂದರೆ, ಮನುಷ್ಯರಂತೆ ವರ್ತಿಸುತ್ತಾರೆ. ಅವರಲ್ಲಿ ಯಾವುದೇ ಕೆಟ್ಟ ಯೋಚನೆಗಳು ಬರುವುದಿಲ್ಲ. ಅವರೆಂಥ ಕಟುಕರೇ ಇರಬಹುದು, ದೇವರ ಮುಂದೆ ನಿಂತಾಗ ತನ್ನ ಪಾಪಗಳನ್ನು ತೊಳೆದುಕೊಂಡು ಮಾನವನಾಗುವ ಹಂಬಲ ಕಾಣುತ್ತಾನೆ. ಅವನಲ್ಲಿರುವ ಮೃಗೀಯ ಭಾವ ಅಷ್ಟರಮಟ್ಟಿಗಾದರೂ ಶಮನವಾಗುತ್ತದೆ. ಪ್ರತಿಯೊಬ್ಬರಿಗೂ ದೇವರ ಸನ್ನಿಧಾನದಲ್ಲಿ ಮನಶ್ಶಾಂತಿ ಲಭಿಸುತ್ತದೆ. ನಮ್ಮ ಬದುಕಿನ ಅಂತಿಮ ಗುರಿ ಅದೇ ಅಲ್ಲವೇ? ಮನಶ್ಶಾಂತಿಯನ್ನು ಪಡೆಯುವುದು, ಹೀಗಾಗಿ ನನಗೆ ಈ ಕೆಲಸ ಜೀವನ ಸಾರ್ಥಕ್ಯ ತಂದುಕೊಟ್ಟಿದೆ.’ ಎಂದಿದ್ದರು ಅಳಗಪ್ಪ ಅಳಗಪ್ಪನ್.

‘ಭಾರತದಲ್ಲಿ ಮಂದಿರ ಕಟ್ಟುವುದಕ್ಕೂ, ಅಮೆರಿಕದಲ್ಲಿ ಕಟ್ಟುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮ ಎಲ್ಲರ ಊರುಗಳಲ್ಲಿ ಪೂರ್ವಜರು ಈಗಾಗಲೇ ದೇಗುಲಗಳನ್ನು ಕಟ್ಟಿದ್ದಾರೆ. ಆದರೆ ಅಮೆರಿಕಕ್ಕೆ ಬಂದ ಲಕ್ಷಾಂತರ ಭಾರತೀಯರಿಗೆ ಹಿಂದಿನ ಶತಮಾನದ ಅರವತ್ತರ (೧೯೬೦ರ ಸುಮಾರಿಗೆ) ದಶಕದಲ್ಲಿ ದೇವಾಲಯಗಳೇ ಇರಲಿಲ್ಲ. ಅಮೆರಿಕದಲ್ಲಿ ಮನೆ ಕಟ್ಟಿಕೊಂಡ ಪ್ರತಿ ಭಾರತೀಯನಿಗೆ ತಾವು ವಾಸಿಸುವ ಊರಿನಲ್ಲಿ ಒಂದು ದೇಗುಲ ಇಲ್ಲ ಅಂದ್ರೆ ಬಹಳ ಖಿನ್ನವಾಗುತ್ತದೆ. ನಾವು ಆರಾಧಿಸುವ ದೇವರ ಹೆಸರಿನಲ್ಲಿ ಒಂದು ದೇಗುಲವಿದ್ದರೆ ಅದರಿಂದ ಸಿಗುವ ಸಮಾಧಾನವೇ ಬೇರೆ. ಆಗಲೇ ನಮ್ಮತನ ನೆಲೆಯೂರಲು ಸಾಧ್ಯ’ ಎಂದು ಅವರು ತಮ್ಮ ಹೋರಾಟದ ಹಿಂದಿನ ಉದ್ದೇಶ, ಆಶಯವನ್ನು ವಿವರಿಸಿದ್ದರು.

ಮೂಲತಃ ಅಳಗಪ್ಪ ಅಳಗಪ್ಪನ್ ತಮಿಳುನಾಡಿನ ಕನಡುಕಥನ ಊರಿನವರು. ಬಿಎ ಹಾಗೂ ಎಂಎ ಡಿಗ್ರಿಯನ್ನು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪಡೆದ ಬಳಿಕ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಎಂಎಸ್ಸಿ ಪದವಿ ಪಡೆದರು. ಆನಂತರ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ವ್ಯಾಸಂಗ ಮಾಡಿ ಪಿಎಚ್.ಡಿ. ಡಿಗ್ರಿ ಪಡೆದರು. ಆನಂತರ ಭಾರತಕ್ಕೆ ಆಗಮಿಸಿದ ಅವರು ಕೆಲಕಾಲ ‘ದಿ ಹಿಂದು’ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿದರು. ಇದೇ ಸಂದರ್ಭದಲ್ಲಿ ಅವರು ವಿಶ್ವಸಂಸ್ಥೆಯಲ್ಲಿನ ಕೆಲಸಕ್ಕೆ ಅರ್ಜಿ ಹಾಕಿದರು. ಜಾಗತಿಕ ಶಾಂತಿ ಹಾಗೂ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ವಿಶ್ವದೆಲ್ಲೆಡೆ ಪ್ರಚುರಪಡಿಸಿ, ಜನಪ್ರಿಯಗೊ–ಳಿಸುವ ಮಹತ್ವಾಕಾಂಕ್ಷೆ ಕೆಲಸವದು. ಅದೃಷ್ಟವಶಾತ್ ಅವರಿಗೆ ಈ ನೌಕರಿ ಸಿಕ್ಕಿತು. ಇದರ ಪ್ರಯುಕ್ತ ಅವರು ಮೊದಲು ಬ್ಯಾಂಕಾಕ್‌ಗೆ ಹೋದರು. ಅಲ್ಲಿ ಎರಡು ವರ್ಷ ಕೆಲಸ ಮಾಡಿದ ಬಳಿಕ ನ್ಯೂಯಾರ್ಕ್‌ಗೆ ಬರುವಂತೆ ಬುಲಾವ್ ಬಂದಿತು. ಅಳಗಪ್ಪನ್ ಇಡೀ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಎಷ್ಟು ಜನಪ್ರಿಯರಾಗಿದ್ದರೆಂದರೆ, ಹತ್ತು ಸಾವಿರ ನೌಕರರಿರುವ ಸಂಘದ ಅಧ್ಯಕ್ಷರಾಗಿದ್ದರು. ಮೂವತ್ತು ವರ್ಷ ಅವರು ವಿಶ್ವಸಂಸ್ಥೆಯಲ್ಲಿ ವಿವಿಧ ಜವಾಬ್ದಾರಿಗಳಲ್ಲಿ ಕೆಲಸ ಮಾಡಿದರು.

ಅಮೆರಿಕಕ್ಕೆ ಹೋದ ಆರಂಭದಲ್ಲಿ ಆದ ಪ್ರೇರಣೆಯಿಂದ ಉತ್ತೇಜಿತರಾದ ಅಳಗಪ್ಪನ್, ‘ಉತ್ತರ ಅಮೆರಿಕ ಹಿಂದು ದೇಗುಲ ಸೊಸೈಟಿ’ಯನ್ನು ಸ್ಥಾಪಿಸಿದರು. ಈ ಮೂಲಕ ಅಲ್ಲಿನ ನೆಲದಲ್ಲಿ ದೇಗುಲ ನಿರ್ಮಾಣಕ್ಕೆ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಿದ್ದರು. ಮೊದಲು ನ್ಯೂಯಾರ್ಕಿನ ಫ್ಲಷಿಂಗ್‌ನಲ್ಲಿ ಮಹಾವಲ್ಲಭ ಗಣಪತಿ ದೇವಾಲಯವನ್ನು ಕಟ್ಟಿದರು. ತಮ್ಮ ಸಂಪರ್ಕಕ್ಕೆ ಬಂದವರೆಲ್ಲರಿಗೂ ದೇವಾಲಯವನ್ನು ಸ್ಥಾಪಿಸುವ ಯೋಚನೆಯನ್ನು ಅವರು ಬಿಡುತ್ತಿದ್ದರು. ಹಣ ಸಂಗ್ರಹಿಸುವುದಕ್ಕೂ ನೆರವಾಗುತ್ತಿದ್ದರು. ದೇಗುಲ ನಿರ್ಮಾಣ ಕಾರ್ಯದಲ್ಲಿ ಅವರು ಎಷ್ಟು ಸಕ್ರಿಯರಾಗಿ ತೊಡಗಿಸಿಕೊಂಡಿದ್ದರೆಂದರೆ, ವಿಶ್ವಸಂಸ್ಥೆಯಲ್ಲೂ ಅವರು ‘ಟೆಂಪಲ್ ಅಳಗಪ್ಪನ್’ ಎಂದೇ ಖ್ಯಾತರಾಗಿದ್ದರು. ದೇವಸ್ಥಾನ ಕಟ್ಟುತ್ತೇನೆ ಎಂದು ಪ್ರಸ್ತಾವನೆ ಇಟ್ಟರೆ, ಭಾರತೀಯರಲ್ಲದವರೂ ಅವರಿಗೆ ದೇಣಿಗೆ ಕೊಡುತ್ತಿದ್ದರು. ದೇವಾಲಯ ನಿರ್ಮಾಣದಲ್ಲಿ ಪಾಲಿಸಬೇಕಾದ ಆಚರಣೆ, ಸಂಪ್ರದಾಯ, ವಿಧಿ-ವಿಧಾನ, ಧಾರ್ಮಿಕ ಕಟ್ಟುಪಾಡುಗಳು, ಸ್ತಪತಿಗಳ ಆಯ್ಕೆ ಮುಂತಾದ ಪ್ರಾಥಮಿಕ ಹಾಗೂ ಮೂಲಭೂತ ಸಂಗತಿಗಳನ್ನು ಅವರು ತಿಳಿದುಕೊಂಡಿದ್ದರು. ದೇವಾಲಯ ನಿರ್ಮಾಣದಲ್ಲಿ ಯಾವ ಕೆಲಸವನ್ನು ಯಾರಿಂದ ಮಾಡಿಸಬೇಕು, ಅವರು ಎಲ್ಲಿ ಸಿಗುತ್ತಾರೆ, ಅವರನ್ನು ಕರೆ ತರುವುದು ಹೇಗೆ…ಎಲ್ಲ ಮಾಹಿತಿಯೂ ಅವರಿಗಿತ್ತು. ಅಮೆರಿಕದ ಬೇರೆ ಊರುಗಳಲ್ಲಿ ದೇವಸ್ಥಾನ ಕಟ್ಟುವವರು ಅಳಗಪ್ಪನ್ ಅವರ ಒಂದು ಮಾತನ್ನಾದರೂ ಕೇಳದೇ ಮುಂದಡಿಯಿಡುತ್ತಿರಲಿಲ್ಲ.

ಅಮೆರಿಕವೊಂದೇ ಅಲ್ಲ, ತಾವು ಹುಟ್ಟಿದ ರಾಜ್ಯದಲ್ಲಿಯೂ ಅಳಗಪ್ಪನ್‌ಗೆ ದೇಗುಲ ನಿರ್ಮಿಸುವ ಆಸೆಯಿತ್ತು. ಅದನ್ನು ಸಹ ಅವರು ನೆರವೇರಿಸದೇ ಬಿಡಲಿಲ್ಲ. ಆರು ಪುಣ್ಯ ಕ್ಷೇತ್ರಗಳಲ್ಲಿರುವ ದೇವರುಗಳನ್ನು ಒಂದೇ ಕಳಶದಡಿ ಸೇರಿಸಿ ಚೆನ್ನೈಯಲ್ಲಿ ನಿರ್ಮಿಸಿರುವ ವಿಶಿಷ್ಟ ದೇವಸ್ಥಾನ ಅವರ ಸಂಕಲ್ಪ ಸಿದ್ಧಿಗೆ ಹಿಡಿದ ಕೈಗನ್ನಡಿ.

ಮೂಲತಃ ಬೆಂಗಳೂರಿನ ಹೊರವಲಯದ ರಾಮೋಹಳ್ಳಿಯ ಲಿಂಗೇಗೌಡರು ಅಳಗಪ್ಪನ್ ಅವರಂತೆ ಓದಿಕೊಂಡವರೂ ಅಲ್ಲ, ದೇಶ ಸುತ್ತಿದವರೂ ಅಲ್ಲ. ಆದರೆ ಗೌಡರ ಪ್ರೇರಣೆ, ಜೀವನೋತ್ಸಾಹ, ಕರ್ತೃತ್ವ ಶಕ್ತಿ ಮಾತ್ರ ಯಾವ ಲೆಕ್ಕದಲ್ಲೂ ಅಳಗಪ್ಪನ್ ಅವರಿಗಿಂತ ಕಡಿಮೆಯಿರಲಿಲ್ಲ. ಲಿಂಗೇಗೌಡರು ಅನಕ್ಷರಸ್ಥರು. ಆದರೆ ವ್ಯವಹಾರ ಚತುರರು. ಲೋಕಾನುಭವ ಪಡೆದವರು. ದಿನವಿಡೀ ಹೊಲದಲ್ಲಿ ಪರಿಶ್ರಮದಿಂದ ದುಡಿದು ಚೊಕ್ಕದಾದ ಸಂಸಾರ ಕಟ್ಟಿಕೊಂಡವರು. ಗೌಡರಿಗೆ ನಲವತ್ತಾದಾಗ ಊರಿನಲ್ಲೊಂದು ಆಂಜನೇಯನ ಗುಡಿಯನ್ನು ಕಟ್ಟಬೇಕೆಂದು ಆಲೋಚನೆ ಬಂದಿತು. ಪರಿಚಿತರಾದ ನಾಲ್ಕೈದು ಜನರ ಮುಂದೆ ತಮ್ಮ ಆಸೆಯನ್ನು ಹಂಚಿಕೊಂಡಾಗ, ಎಲ್ಲರೂ ಕೈ ಜೋಡಿಸಿದರು. ಮುಂದಿನ ಎರಡು ವರ್ಷಗಳಲ್ಲಿ ಆಂಜನೇಯ ದೇಗುಲ ತಲೆಯೆತ್ತಿತು. ಅದಾದ ಬಳಿಕ ಆ ಊರಿನ ಚಹರೆಯೇ ನಿಧಾನವಾಗಿ ಬದಲಾಯಿತು. ಸುಮಾರು ಐನೂರು ಜನರಿರುವ ಆ ಊರಿನ ಮಹಿಳೆಯರು, ಯುವಕರು, ಮಕ್ಕಳು, ಹಿರಿಯರು ಪ್ರತಿದಿನ ಗುಡಿಗೆ ಬರಲಾರಂಭಿಸಿದರು. ಊರಿಗೆ ಆಂಜನೇಯ ಬಂದಿದ್ದಾನೆಂಬ ಭಾವನೆ ಜನರಲ್ಲಿ ಮೊಳಕೆಯೊಡೆಯಿತು. ಕುಡಿತ, ಕಳ್ಳತನ, ಹೊಡೆದಾಟ, ಕಲಹಗಳು ಗಣನೀಯವಾಗಿ ಇಳಿಮುಖವಾದವು. ಸಾಯಂಕಾಲದ ಹೊತ್ತಿಗೆ ಗುಡಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಲಾರಂಭಿಸಿತು. ಆಂಜನೇಯ ಆ ಊರಿನ ಶ್ರದ್ಧಾ ಕೇಂದ್ರವಾದ. ಒಂದು ಗುಡಿ ಆ ಊರಿನ ಸಾಂಸ್ಕೃತಿಕ ಕೇಂದ್ರವಾಯಿತು.

ಲಿಂಗೇಗೌಡರು ಯಾವುದೇ ಮಂತ್ರ ಹೇಳದೇ ತಮ್ಮ ಊರಿನಲ್ಲಿ ಮಾವಿನ ಕಾಯಿಯನ್ನು ಉದುರಿಸಿದ್ದರು! ಮಂತ್ರದಂಡ ಹಿಡಿಯದೆ ಪವಾಡ ಮಾಡಿದ್ದರು!

ತಮ್ಮ ಊರಿನಲ್ಲಾದ ಬದಲಾವಣೆ ಬೇರೆ ಊರುಗಳಿಗೂ ದಕ್ಕಲಿ ಎಂದು ತಮ್ಮ ಸ್ನೇಹಿತರು, ಬಂಧು-ಬಾಂಧವರನ್ನು ಪ್ರಚೋದಿಸಿದ ಲಿಂಗೇಗೌಡರು, ದೇವಸ್ಥಾನಗಳನ್ನು ನಿರ್ಮಿಸಲು ತಾವೇ ದೇಣಿಗೆ ಸಂಗ್ರಹಿಸಲಾರಂಭಿಸಿದರು. ಮೊದಲ ದೇಣಿಗೆಯಾಗಿ ತಾವೇ ಒಂದು ಲಕ್ಷ, ಐದು ಲಕ್ಷ, ಹತ್ತು ಲಕ್ಷ ರುಪಾಯಿಗಳನ್ನು ನೀಡುತ್ತಿದ್ದರು. ಇದರಿಂದ ಗೌಡರ ಮಾತನ್ನು ಯಾರೂ ತೆಗೆದು ಹಾಕುತ್ತಿರಲಿಲ್ಲ. ಆರಂಭದ ದಿನಗಳಲ್ಲಿ ಗೌಡರು ಬಹಳ ಖರ್ಚು ಮಾಡಿ ದೇಗುಲ ಕಟ್ಟಲು ಹೋಗುತ್ತಿರಲಿಲ್ಲ. ಏಳೆಂಟು ಲಕ್ಷ ರುಪಾಯಿಗಳಲ್ಲಿ ಇಡೀ ಕೆಲಸ ಮುಗಿಯಬೇಕು, ಹಾಗೆ ಯೋಜನೆಯನ್ನು ರೂಪಿಸುತ್ತಿದ್ದರು. ದೇವಾಲಯ ನಿರ್ಮಾಣ ಕಾರ್ಯ ಆರಂಭವಾಗುತ್ತಿದ್ದಂತೆ, ದಾನಿಗಳ ಮುಂದೆ ಹೋದಾಗ ಯಾರೂ ಇಲ್ಲವೆನ್ನುತ್ತಿರಲಿಲ್ಲ. ತಮ್ಮ ತಮ್ಮ ಶಕ್ತ್ಯಾನುಸಾರ ದೇಣಿಗೆ ನೀಡುತ್ತಿದ್ದರು. ಈ ಸಂಗತಿ ಮನದಟ್ಟಾದ ಬಳಿಕ ಗೌಡರು ದೊಡ್ಡ ದೊಡ್ಡ ದೇಗುಲ ನಿರ್ಮಾಣಕ್ಕೂ ಮುಂದಾದರು.

‘ದೇವಾಲಯ ಕಟ್ಟುತ್ತೇವೆಂದು ಹೊರಡಿ. ಯಾರೂ ಇಲ್ಲ ಎನ್ನುವುದಿಲ್ಲ. ಯಾರೂ ನಿಮ್ಮನ್ನು ಬರಿಗೈಲಿ ಕಳಿಸುವುದಿಲ್ಲ. ನೂರು ರುಪಾಯಿ ಅಪೇಕ್ಷಿಸಿದವರಿಂದ ಹತ್ತು ರುಪಾಯಿಯಾದರೂ ಸಿಗುತ್ತದೆ. ಒಂದು ದೇವಾಲಯ ಹತ್ತು ಶಾಲೆಗೆ ಸಮ. ಶಾಲೆ ವಿದ್ಯೆಯನ್ನು ಕಲಿಸುತ್ತದೆ. ಮಂದಿರ ಸಂಸ್ಕಾರವನ್ನು ಕಲಿಸುತ್ತದೆ. ನಮ್ಮ ಪೂರ್ವಜರು ದೇವಾಲಯದಲ್ಲಿಯೇ ವಿದ್ಯೆ ಕಲಿಸಿದರು. ದೇವಸ್ಥಾನ ಇಲ್ಲದ ಊರು ಸಂಸ್ಕಾರಹೀನ.’ ಎಂದು ಲಿಂಗೇಗೌಡರು ಆಗಾಗ ಹೇಳುತ್ತಿದ್ದರು.
ಲಿಂಗೇಗೌಡರ ಪ್ರಚೋದನೆ, ಒತ್ತಾಸೆ, ಪರೋಕ್ಷ ಸಹಾಯ, ಸಕ್ರಿಯ ಪಾಲ್ಗೊಳ್ಳುವಿಕೆ, ಉತ್ತೇಜನದಿಂದಾಗಿ ಬೆಂಗಳೂರಿನ ಸುತ್ತಮುತ್ತ ಕನಿಷ್ಠ ನಲವತ್ತು ದೇವಾಲಯಗಳಾದರೂ ತಲೆಯೆತ್ತಿವೆ. ಗೌಡರು ಯಾವುದಾದರೂ ಊರಿಗೆ ಹೋದಾಗ ಅಲ್ಲೊಂದು ದೇವಸ್ಥಾನ ಕಾಣದಿದ್ದರೆ, ಒಂದು ವರ್ಷದೊಳಗೆ ಒಂದು ಗುಡಿಯನ್ನು ಕಟ್ಟಿದ್ದೇ ಖರೆ. ಆ ಊರಿನಲ್ಲಿ ಅವರಿಗೆ ಯಾರ ಪರಿಚಯ ಇರಲಿ, ಬಿಡಲಿ. ಊರಿನ ಹಿರಿಯರ ಮನವೊಲಿಸಿ ಮಂದಿರ ನಿರ್ಮಿಸುವ ತನಕ ಅವರು ವಿರಮಿಸುತ್ತಿರಲಿಲ್ಲ.

‘ಗೌಡರೇ, ಇಲ್ಲಿ ತನಕ ಕಟ್ಟಿದ ದೇವಸ್ಥಾನಗಳೆಷ್ಟು?’ ಎಂದು ಕೇಳಿದರೆ, ‘ನನಗೆ ಗೊತ್ತಿಲ್ಲ. ನಾನು ಅದರ ಲೆಕ್ಕ ಇಟ್ಟಿಲ್ಲ. ಅದನ್ನು ಕಟ್ಟಿಕೊಂಡು ನನಗೇನಾಗಬೇಕು. ನಾನು ನಿಮಿತ್ತ ಮಾತ್ರ. ದೇವರ ಕೆಲಸದಲ್ಲಿ ನಾನು ಹುಲುಮಾನವ. ದೇವರು ಎಲ್ಲರಿಂದಲೂ ಕೆಲಸ ಮಾಡಿಸಿಕೊಳ್ಳುತ್ತಾನೆ. ನನಗೆ ಸಿಕ್ಕಿದ್ದು ನನ್ನ ಪುಣ್ಯ. ಅವನ್ನೆಲ್ಲ ನೆನಪಿಸಿಕೊಳ್ಳಬಾರದು. ಆ ಭಗವಂತನಿಗೆ ಯಾರಿಂದ, ಯಾವಾಗ, ಏನು ಮಾಡಿಸಿಕೊಳ್ಳಬೇಕೆನ್ನುವುದು ಗೊತ್ತಿದೆ’ ಎಂದು ಕೇಳಿದ ಪ್ರಶ್ನೆಯನ್ನು ಮರೆಯಿಸಿ, ‘ಎಲ್ಲ ದೈವೇಚ್ಛೆ’ ಎಂದು ಮೇಲೆ ನೋಡುತ್ತಿದ್ದರು.

ದೇವರ ಕಾಯಕದಲ್ಲಿ ಬದುಕು ಸವೆಸಿ ಪರಮಾನಂದ ಕಂಡ ಮತ್ತೊಬ್ಬ ಕಾಯಕ ಜೀವಿ ಅಂದ್ರೆ ಶಂಕರ ಆಚಾರಿ ಅಥವಾ ಶಂರಕನಾರಾಯಣ ಆಚಾರ್ಯ. ಅವರನ್ನು ಯಾರೂ ಆಚಾರ್ಯ ಎಂದು ಕರೆದಿದ್ದಿಲ್ಲ. ಕೆಲ ವರ್ಷಗಳ ಹಿಂದೆ ಅವರನ್ನು ಹಾಗೆ ಕರೆದಾಗ, ‘ನಾನು ಆಚಾರ್ಯ ಅಲ್ಲ, ಶಂಕರ ಆಚಾರಿ. ದಯವಿಟ್ಟು ನನ್ನನ್ನು ಹಾಗೆಯೇ ಕರೆಯಿರಿ’’ಎಂದು ವಿನೀತರಾಗಿ ಹೇಳಿದ್ದರು.

ಆಚಾರಿಯವರು ಮೂಲತಃ ಬಾಣಾವರದವರು. ಬೈಂದೂರಿನಲ್ಲಿ ಮರಗೆಲಸ ಕಲಿತವರು. ಆರಂಭದ ದಿನಗಳಲ್ಲಿ ತಮ್ಮ ಚಿಕ್ಕಪ್ಪನ ಜತೆ ಸೇರಿ ಕಸುಬನ್ನು ಕಲಿತ ಆಚಾರಿ, ತಮಿಳುನಾಡು, ಆಂಧ್ರ-ಕೇರಳದೆಲ್ಲೆಡೆ ದೇವಸ್ಥಾನಗಳಲ್ಲಿ ಮರಗೆಲಸ, ಕೆತ್ತನೆಯ ಕೆಲಸದಲ್ಲಿ ಪರಿಣತಿ ಸಾಧಿಸಿದರು. ದೇಶದ ಯಾವುದಾದರೂ ಕಡೆ ಭವ್ಯ ದೇಗುಲ ನಿರ್ಮಾಣವನ್ನು ಕೈಗೆತ್ತಿಕೊಂಡರೆ ಶಂಕರ ಆಚಾರಿಯವರಿಗೆ ಅಗ್ರ ತಾಂಬೂಲ!

ಕೆಲವರು ಇವರ ಸಲಹೆಯನ್ನು ಕೇಳದೇ ಮುಂದಡಿಯಿಡುತ್ತಿರಲಿಲ್ಲ. ದೇವಾಲಯದ ಪ್ರಧಾನ ದ್ವಾರ, ಗರ್ಭಗುಡಿ ಹಾಗೂ ಅದರ ಬಾಗಿಲುಗಳನ್ನು ನಿರ್ಮಿಸುವುದರಲ್ಲಿ ಇವರದು ಎತ್ತಿದ ಕೈ. ಕೆಲವು ಕಾಲ ಗರ್ಭಗುಡಿಯ ದ್ವಾರ ಹಾಗೂ ಬಾಗಿಲುಗಳನ್ನು ಇವರಿಂದಲೇ ಮಾಡಿಸಿಕೊಳ್ಳಲು ಜನ ವರ್ಷಗಟ್ಟಲೆ ಕಾಯುತ್ತಿದ್ದರು.
ಆಚಾರಿಯವರು ಯಾರನ್ನೂ ವಾಪಸ್ ಕಳಿಸುತ್ತಿರಲಿಲ್ಲ. ಕೈಯಲ್ಲಿರುವ ಕೆಲಸಗಳನ್ನು ಮುಗಿಸಲು ಅವರು ಹಗಲು-ರಾತ್ರಿಯೆನ್ನದೇ ದುಡಿಯುತ್ತಿದ್ದರು. ಅವರು ಅವೆಷ್ಟು ಪ್ರಧಾನ ದ್ವಾರ ಹಾಗೂ ಗರ್ಭಗುಡಿಯ ಬಾಗಿಲುಗಳ ಮೇಲೆ ತಮ್ಮ ಕೆತ್ತನೆಯ ಕೆಲಸ ಮಾಡಿದ್ದಾರೋ, ಯಾರೂ ಲೆಕ್ಕವಿಟ್ಟಿಲ್ಲ. ಅವರಿಗೂ ಗೊತ್ತಿರಲಿಲ್ಲ. ತಮ್ಮ ಕಲಾಕೃತಿಯ ಒಂದು ಫೋಟೋ ಸಹ ಅವರ ಬಳಿಯಿರಲಿಲ್ಲ. ಯಾರಾದರೂ ಬಂದು ದೇಗುಲದ ಬಾಗಿಲುಗಳ ನಿರ್ಮಾಣಕ್ಕೆ ಎಷ್ಟು ಖರ್ಚಾಗುತ್ತದೆ ಎಂದು ಕೇಳಿದರೆ, ‘ನಾನು ಹೇಳುವುದಿಲ್ಲ. ನಿಮಗೆ ತಿಳಿದಷ್ಟು ಕೊಡಿ. ದೇವರ ಕೆಲಸಕ್ಕೆ ಮಜೂರಿ ಕೇಳಿದರೆ ಭಗವಂತ ಮೆಚ್ಚುತ್ತಾನಾ? ಒಂದು ವೇಳೆ ಹಣ ಕೊಡದಿದ್ದರೂ ಪರವಾಗಿಲ್ಲ. ನನ್ನ ಕೆಲಸ ಆ ದೇವರಿಗೆ ಇಷ್ಟವಾದರೆ ಸಾಕು’ ಎಂದು ಹೇಳುತ್ತಿದ್ದರೇ ಶಿವಾಯ್, ಅಪ್ಪಿತಪ್ಪಿಯೂ ಇಂತಿಷ್ಟು ಕೊಡಿ ಎಂದು ಎಂದೂ ಹೇಳುತ್ತಿರಲಿಲ್ಲ. ಕೆಲವರು ಅವರಿಂದ ಮೂರ್ನಾಲ್ಕು ತಿಂಗಳು ಕೆಲಸ ಮಾಡಿಸಿಕೊಂಡು ಹಣ ಕೊಡದೇ ಪಂಗನಾಮ ಹಾಕುತ್ತಿದ್ದರು. ಆಚಾರಿಯವರು ಸ್ವಲ್ಪವೂ ಬೇಸರಿಸಿಕೊಳ್ಳುತ್ತಿರಲಿಲ್ಲ. ‘ನನ್ನ ಕೆಲಸ ದೇವರ ದೃಷ್ಟಿಗೆ ಬಿದ್ದರೆ ಸಾಕು. ನನಗೆ ಹಣ ಬಂದಂತೆ’ ಎಂದು ವಿನಮ್ರರಾಗಿ ಹೇಳುತ್ತಿದ್ದರು.

ಆಚಾರಿಯವರು ಆರು ಸಲ ಅಮೆರಿಕಕ್ಕೆ ಹೋಗಿ ಬಂದರು. ಒಮ್ಮೊಮ್ಮೆ ಹೋದಾಗ ಆರೇಳು ತಿಂಗಳು ಉಳಿದು ಬಿಡುತ್ತಿದ್ದರು. ಅವರಿಗೆ ಸಾವಿರಾರು ಡಾಲರ್ ಸಂಭಾವನೆ ಸಿಗುತ್ತಿತ್ತು. ಹಾಗೆಂದು ಅವರು ಅಮೆರಿಕದಲ್ಲಿ ಹೆಚ್ಚು ದಿನಗಳಿರಲು ಇಷ್ಟಪಡುತ್ತಿರಲಿಲ್ಲ. ‘ನಮ್ಮ ರಾಜ್ಯದ ಅನೇಕ ಹಳ್ಳಿಗಳಿಂದ ದೇಗುಲ ಕೆಲಸ ಮಾಡಿಕೊಡುವಂತೆ ಕೋರಿಕೆ ಬರುತ್ತಿದೆ. ಅವುಗಳನ್ನು ಕೈಗೆತ್ತಿಕೊಳ್ಳಬೇಕಾದುದು ನನ್ನ ಜವಾಬ್ದಾರಿ. ನಾನು ಇಲ್ಲಿಯೇ ಉಳಿದು ಬಿಟ್ಟರೆ ಜನ ಏನೆಂದಾರು? ಅದೂ ಸಹ ದೇವರ ಕೆಲಸವಲ್ಲವೇ?’ ಎಂದು ಅಮೆರಿಕದಿಂದ ತಪ್ಪಿಸಿಕೊಂಡು ಬರುತ್ತಿದ್ದರು.

ಕೊನೆ ಕೊನೆಗೆ ಆಚಾರಿಯವರು ಪ್ರವೇಶದ್ವಾರ ಹಾಗೂ ಗರ್ಭಗುಡಿಯ ಕೆತ್ತನೆ ಕೆಲಸಗಳಲ್ಲಿ ಮಾತ್ರವಲ್ಲದೇ ರಥದ ಕೆಲಸಕ್ಕೂ ಕೈ ಹಾಕಿದರು. ಅವರಿಗೆ ಅದೆಷ್ಟು ಬೇಡಿಕೆಯಿತ್ತೆಂದರೆ, ತಮ್ಮ ಜತೆ ಕೆಲಸಕ್ಕೆ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಇಟ್ಟುಕೊಂಡಿದ್ದರು. ಆಗ ಅವರಿಗೆ ಯಾರೋ ‘ಆಚಾರ್ಯ’ ಎಂಬ ಹೊಸ ಅಡ್ಡ ಹೆಸರನ್ನು ದಯಪಾಲಿಸಿದರು. ಅದನ್ನು ನಯವಾಗಿ ತಿರಸ್ಕರಿಸಿದ ಅವರು ‘ನಾನು ಆಚಾರಿ, ಶಂಕರ ಆಚಾರಿ’ ಎಂದು ತಾವು ಇನ್ನೂ ನೆಲದ ಮೇಲೆಯೇ ಇದ್ದೇವೆಂಬುದನ್ನು ಹೇಳಿದ್ದರು.

ಈ ಮೂವರೂ ಇಂದು ನಮ್ಮ ಮಧ್ಯೆ ಇಲ್ಲ. ಆದರೆ ಅವರು ಮಾಡಿದ ಹಾಗೂ ಬಿಟ್ಟು ಹೋದ ಮಹಾನ್ ಕೆಲಸಗಳು ನಮ್ಮ ಮುಂದಿವೆ. ಈ ಕೆಲಸಗಳು ಬರುವ ನೂರಾರು ವರ್ಷಗಳ ತನಕ ನಮ್ಮಲ್ಲಿ ಒಂದಿಲ್ಲೊಂದು ಸ್ಫೂರ್ತಿ, ಪ್ರೇರಣೆ ನೀಡಲಿವೆ. ನಮ್ಮ ಸಂಸ್ಕೃತಿಯ ತೋರು ಬೆರಳಾಗಿ ಕಂಗೊಳಿಸಲಿವೆ.

ಈ ಮೂವರೂ ಒಂದು ವಾರದ ಅವಧಿಯಲ್ಲಿ ದೈವಾಧೀನರಾಗಿದ್ದು ಕಾಕತಾಳೀಯ. ಭಗವಂತ ಒಟ್ಟಿಗೆ ಈ ಮೂವರನ್ನೂ ಕರೆಯಿಸಿಕೊಂಡಿದ್ದರ ಹಿಂದೆ ಯಾವುದಾದರೂ ದೊಡ್ಡ ಯೋಜನೆ ಇದ್ದಿರಬಹುದಾ?

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.