ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಇಲ್ಲಿತನಕ ಪತ್ರಿಕಾ ಮಾಲೀಕರು, ಸಂಪಾದಕರಿಗೆ ಸಾಧ್ಯವಾಗದಿರುವುದನ್ನು ಮೋದಿ ಮಾಡಿದರಾ?

imageದಿಲ್ಲಿ ಪತ್ರಕರ್ತರು ಒಂದೇ ಸಮನೆ ಅಲವತ್ತುಕೊಳ್ಳುತ್ತಿದ್ದಾರೆ. ಅವರಿಗೆ ತಮ್ಮ ಅಸಮಾಧಾನ, ಬೇಗುದಿಯನ್ನು ಹಿಡಿದಿಟ್ಟುಕೊಳ್ಳಲಾಗುತ್ತಿಲ್ಲ. ಬಿಜೆಪಿಯ, ಕಾಂಗ್ರೆಸ್ಸಿನ ನಾಯಕರ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೇ ತಮ್ಮ ತಮ್ಮ ಪತ್ರಿಕೆಗಳಲ್ಲಿ ಇವನ್ನೆಲ್ಲ ಬರೆದುಕೊಂಡಿದ್ದಾರೆ. ಇವೆಲ್ಲವುಗಳಿಂದ ಏನೂ ಪ್ರಯೋಜನವಾಗಿಲ್ಲ. ಹಾಗಂತ ಅವರ ಗೊಣಗಾಟ ನಿಂತಿಲ್ಲ. ಆತ್ಮೀಯರು ಎದುರಾ––ದಾಗಲೆಲ್ಲ ಪುನಃ ಈ ಗೊಣಗಾಟದ ಲಬುಡು ಟೇಪನ್ನು ಹಚ್ಚುತ್ತಾರೆ. ದಿಲ್ಲಿ ಪತ್ರಕರ್ತರಿಗೆ ಇಂಥ ದೈನೇಸಿ ಸ್ಥಿತಿ ಎಂದಿಗೂ ಬಂದಿರಲಿಲ್ಲ. ನಿಜಕ್ಕೂ ಅವರು ಅವಜ್ಞೆಗೆ ಒಳಗಾಗಿದ್ದಾರೆ. ಅವರನ್ನು ‘ಐಡೆಂಟಿಟಿ ಕ್ರೈಸಿಸ್’ ಕಾಡಲಾರಂಭಿಸಿದೆ.

ಕಾರಣ ಇಷ್ಟೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಮಾಧ್ಯಮದವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಅಕ್ಷರಶಃ ‘ಹಚ್ಯಾ’ಎಂದು ಓಡಿಸಿ ಬಿಟ್ಟಿದ್ದಾರೆ. ಕೇಂದ್ರ ಸರ್ಕಾರದ ಆಯಕಟ್ಟಿನ ಜಾಗಗಳಾದ ನಾರ್ತ್-ಬ್ಲಾಕ್, ಸೌತ್ ಬ್ಲಾಕ್ ಹಾಗೂ ಪ್ರಧಾನಿ ಕಾರ್ಯಾಲಯಗಳ ಸುತ್ತಮುತ್ತ ಪತ್ರಕರ್ತರು ಸುಳಿಯದಂತೆ ಮಾಡಿಬಿಟ್ಟಿ––ದ್ದಾರೆ. ಹಾಗೆಂದು ಅವರು ಮಾಧ್ಯಮದವರಿಗೆ ಪ್ರವೇಶ ನಿಷೇಧ ಹೇರಿಲ್ಲ. ಮಾಧ್ಯಮದವರು ಅತ್ತ ಹೋದಾಗ ಅವರೊಂದಿಗೆ ಯಾರೂ ಮಾತಾಡುತ್ತಿಲ್ಲ. ಕಾರಣ ‘ಮೂಲಗಳು’ (Sources) ಮಾತಾಡದಂತೆ ಪ್ರಧಾನಿ ತಾಕೀತು ಮಾಡಿದ್ದಾರೆ. ಅಧಿಕಾರದ ಪಡಸಾಲೆ, ಮೊಗಸಾಲೆ, ಕಾರಿಡಾರ್‌ಗಳಲ್ಲಿ ಮಾಧ್ಯಮದವರಿಗೆ ಗುಸುಗುಸು, ಪಿಸುಪಿಸು ಸಹ ಕೇಳಿಸುತ್ತಿಲ್ಲ. ಪ್ರತಿದಿನ ಇಲ್ಲೆಲ್ಲ ಓಡಾಡಿ ಖಾಲಿ ಕೈಯಲ್ಲಿ ಮಾಧ್ಯಮದವರು ಬರುವಂತಾಗಿದೆ. ಅವರಿಗೆ ಯಾವುದೇ ಎಕ್ಸ್‌ಕ್ಲೂಸಿವ್‌ಗಳಾಗಲಿ, ಸ್ಕೂಪ್‌ಗಳಾಗಲಿ, ವದಂತಿಗಳಾಗಲಿ, ಅಡಪಡ ಸುದ್ದಿಯಾಗಲಿ, ಗಾಳಿ ಮಾತಾಗಲಿ, ಕೈಫಿಯತ್ತುಗಳಾಗಲಿ ಸಿಗುತ್ತಿಲ್ಲ. ಮೂಲಗಳೆಲ್ಲ ಮಾತು ಮರೆತವರಂತೆ ಗಪ್‌ಚುಪ್! ಸರ್ಕಾರದಲ್ಲಿ ಏನು ನಡೆಯುತ್ತಿದೆ, ಹಕೀಕತ್ತು ಏನು, ಏನು ಕುಬಿ ಎಂಬುದು ಮಾಧ್ಯಮದವರಿಗೆ ಗೊತ್ತಾಗುತ್ತಿಲ್ಲ.

ಯಾರೂ ತುಟಿ ಪಿಟಿಕ್ಕೆನ್ನುತ್ತಿಲ್ಲ. ‘ಏನ್ಸಮಾಚಾರ’ ಎಂದರೂ ಮುಖ ಅಡ್ಡ ಹಾಕಿಕೊಂಡು ಅಧಿಕಾರಿಗಳು ಸೈಡಿಗೆ ಹೋಗುತ್ತಿದ್ದಾರೆ. ಕೆಲವು ಹಿರಿಯ ಪತ್ರಕರ್ತರು, ಸಂಪಾದಕರು ಈಗಾಗಲೇ ಈ ಬಗ್ಗೆ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಕೆಲವರಂತೂ ತಮ್ಮ ಅಂಕಣಗಳಲ್ಲಿ ಬರೆದುಕೊಂಡಿದ್ದಾರೆ. ‘ಮೋದಿಯವರು ಮಾಧ್ಯಮದವರನ್ನು ದೂರವಿಡುತ್ತಿರುವುದು ಸರಿ ಅಲ್ಲ’ ಎಂದು ಕೆಲವರು, ‘ಇದು ಸರ್ವಾಧಿಕಾರಿ ಆಡಳಿತದ ಮುನ್ಸೂಚನೆಯಾ’ ಎಂದು ಮತ್ತೆ ಕೆಲವರು ಪತ್ರಿಕೆಗಳಲ್ಲಿ ಸಂಪಾದಕೀಯಗಳನ್ನೂ ಬರೆದು ಅಸಹನೆ ವ್ಯಕ್ತಪಡಿಸಿದ್ದಾರೆ. ಇವ್ಯಾವವೂ ಮೋದಿಯವರ ಮೇಲೆ ಸ್ವಲ್ಪವೂ ಪರಿಣಾಮ ಬೀರಿಲ್ಲ. ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗೆ, ಅಧಿಕಾರಿಗಳಿಗೆ ಮಾಧ್ಯಮದವರಿಗೆ ‘ಮೂಲ’ಗಳಾಗಬೇಡಿ ಎಂದು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಸಂಸದರಿಗೂ ಅಷ್ಟೇ, ‘ನಿಮ್ಮ ಕೆಲಸಗಳನ್ನು ನೀವು ಮಾಡಿ, ಸರ್ಕಾರದ ಪರ ನೀವು ಮಾತಾಡಬೇಕಿಲ್ಲ’ ಎಂದು ಖಡಕ್ ಆಗಿ ಹೇಳಿದ್ದಾರೆ. ಹೀಗಾಗಿ ಸರ್ಕಾರದ ನಿರ್ಧಾರ, ಕಡತಗಳ ಓಡಾಟ, ಮಹತ್ವದ ನಿಲುವುಗಳ ಬಗ್ಗೆ ಮಾಧ್ಯಮದವರಿಗೆ ಯಾರೂ ವಿಷಯ ತಿಳಿಸುತ್ತಿಲ್ಲ. ವಿಷಯ ಸೋರಿಕೆಯಾದರೆ ತಮ್ಮ ಕೆಲಸಕ್ಕೆ ಸಂಚಕಾರ ಬಂದೀತೆಂಬ ಭಯದಿಂದ ಯಾರೂ ಮಾತಾಡುತ್ತಿಲ್ಲ.

ಹಿಂದಿನ ಯುಪಿಎ ಸರ್ಕಾರದಲ್ಲಿ ಐದಾರು ಅಧಿಕಾರ ಕೇಂದ್ರಗಳಿದ್ದವು. ಸೋನಿಯಾ–ಗಾಂಧಿ, ರಾಹುಲ್‌ಗಾಂಧಿ, ಮನಮೋಹನ ಸಿಂಗ್, ಅಹಮ್ಮದ್ ಪಟೇಲ್, ದಿಗ್ವಿಜಯ ಸಿಂಗ್, ಚಿದಂಬರಂ, ಕಪಿಲ್ ಸಿಬಲ್… ಮುಂತಾದ ಅಧಿಕಾರ ಕೇಂದ್ರಗಳಿದ್ದವು. ಇವರು ತಮಗೆ ನಿಷ್ಠರಾದ ಪತ್ರಕರ್ತರ ಪಡೆಯನ್ನು ಕಟ್ಟಿಕೊಂಡಿದ್ದರು. ಪತ್ರಕರ್ತರೂ ಸಹ ಈ ನಾಯಕರ ಸನಿಹ ಆಗಾಗ ಎಡತಾಕಿ ತಮಗೆ ಬೇಕಾದ ಮಾಹಿತಿ ಪಡೆಯುತ್ತಿದ್ದರು. ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಎಲ್.ಕೆ. ಆಡ್ವಾಣಿ, ಜಾರ್ಜ್ ಫರ್ನಾಂಡೀಸ್, ಜಸ್ವಂತ ಸಿಂಗ್ ಸಹ ಇಂಥ ‘ಮಾಧ್ಯಮ ಮಾಗಧ’ರನ್ನು ತಮ್ಮ ಸುತ್ತ ಬಿಟ್ಟುಕೊಂಡಿದ್ದರು.

ಹೀಗಾಗಿ ಈ ನಾಯಕರೆಲ್ಲ ತಮಗೆ ಅಪಥ್ಯವಾಗುವ, ಅಗತ್ಯವೆನಿಸುವ ಮಾಹಿತಿಯನ್ನೆಲ್ಲ ಮಾಧ್ಯಮಗಳಿಗೆ ಸೋರಿಕೆ ಮಾಡುತ್ತಿದ್ದರು. ಪ್ರಧಾನಿ ಅವರ ಮಾಧ್ಯಮ ಸಲಹೆಗಾರರ ಕಚೇರಿಯಲ್ಲಿ ಸದಾ ಹತ್ತಾರು ಪತ್ರಕರ್ತರು ಕುಳಿತಿರುತ್ತಿದ್ದರು. ಕೆಲವೊಮ್ಮೆ ಕ್ಯಾಬಿನೆಟ್ ಸಚಿವರೂ ಇಲ್ಲಿಗೆ ಆಗಮಿಸುತ್ತಿದ್ದರು. ಅಕ್ಷರಶಃ ಅದು ಗಾಸಿಪ್ ಕೇಂದ್ರವಾಗಿ ಪರಿವರ್ತಿತವಾಗುತ್ತಿತ್ತು. ಸುದ್ದಿವಾಸನೆ ಹಿಡಿಯುವ ಪತ್ರಕರ್ತರಿಗೆ ಒಂದೆರಡು ಸ್ಟೋರಿಗಳಿಗೇನೂ ಕೊರತೆಯಾಗುತ್ತಿರಲಿಲ್ಲ. ಅಲ್ಲದೇ ಅಧಿಕಾರದಲ್ಲಿದ್ದವರಿಗೆ, ಸರ್ಕಾರದೊಳಗೆ ಇದ್ದವರಿಗೆ ಯಾವುದೇ ರಹಸ್ಯವನ್ನೂ ಕಾಪಾಡಲು ಸಾಧ್ಯವಾಗುತ್ತಿರಲಿಲ್ಲ. ಒಂದು ಸುದ್ದಿ ಎರಡನೆಯವನನ್ನು ಬಿಟ್ಟು ಹೇಗೋ ಮೂರನೆಯವನಿಗೆ ಗೊತ್ತಾಗಿ ಬಿಟ್ಟರೆ ಅದು ಪತ್ರಕರ್ತರಿಗೆ ಸೋರಿ ಇಡೀ ಜಗತ್ತಿಗೆ ಗೊತ್ತಾಗುವಂಥ ಸ್ಥಿತಿಯಿತ್ತು. ಮೊದಲೇ ಹೇಳಿ ಕೇಳಿ ಅದು ದಿಲ್ಲಿ. ಅಲ್ಲಿ ಗೋಡೆ, ನೆಲಗಳಿಗೆ ಕಣ್ಣು, ಕಿವಿಗಳು! ಒಬ್ಬರ ಹುಳುಕು ಎಲ್ಲರಿಗೂ ಗೊತ್ತು. ಅಲ್ಲಿ ಯಾರು ಯಾರಿಗೆ ಗೊತ್ತಿಲ್ಲ ಅಂತಿಲ್ಲ. ಎಲ್ಲರೂ ಪರಿಚಿತರೇ. ಎಲ್ಲರೂ ನೆರೆಹೊರೆ–ಯವರೇ. ಮಾಧ್ಯಮದವರಿಗೆ ತಿಳಿಯದೇ ಸೀನುವುದು, ಆಕಳಿಸುವುದು ಸಹ ಕಷ್ಟ.
ಮೋದಿ ಇವೆಲ್ಲವುಗಳಿಗೆ ತಿಲಾಂಜಲಿ ಇಟ್ಟು ಬಿಟ್ಟಿದ್ದಾರೆ. ಮೋದಿ ಪ್ರಧಾನಿಯಾಗುತ್ತಲೇ ಕೆಲವು ಹಿರಿಯ ಸಂಪಾದಕರು ಮನಸ್ಸಿನಲ್ಲಿ ಮಂಡಿಗೆ ತಿನ್ನಲಾರಂಭಿಸಿದರು. ಮಾಧ್ಯಮ ಸಲಹೆಗಾರರಾಗುವ ವಾಂಛೆಯನ್ನು ಮೋದಿ ಆಪ್ತರ ಮುಂದೆ ತೋಡಿಕೊಂಡಿದ್ದರು. ಆದರೆ ಪ್ರಧಾನಿ ಅದಕ್ಕೆಲ್ಲ ಸೊಪ್ಪು ಹಾಕಿಲ್ಲ. ಅವರು ಮಾಧ್ಯಮ ಸಲಹೆಗಾರರನ್ನು ಈ ತನಕ ನೇಮಿಸಿಕೊಂಡಿಲ್ಲ. ಪ್ರಾಯಶಃ ಆ ಸ್ಥಾನ ಹಾಗೆಯೇ ಖಾಲಿ ಉಳಿದರೂ ಅಚ್ಚರಿಯಿಲ್ಲ. ಹೀಗಾಗಿ ಕೆಲವು ಪತ್ರಕರ್ತರಿಗೆ ಇವನ್ನೆಲ್ಲ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಅಧಿಕಾರ ಕೇಂದ್ರಗಳಿಗೆ ಹತ್ತಿರದಲ್ಲಿರುವ ಕೆಲವು ಪತ್ರಕರ್ತರಂತೂ ಪತ್ರಿಕೆಗಳ ಪ್ರತಿನಿಧಿಗಳೋ, ಈ ಮಂತ್ರಿಗಳ ಪ್ರತಿನಿಧಿಗಳೋ ಎಂದು ಅನುಮಾನ ಹುಟ್ಟಿಸುವ ರೀತಿಯಲ್ಲಿ ಬೆಳೆದಿದ್ದರು. ಕೆಲವರಂತೂ ಯಾವುದೇ ಸರ್ಕಾರ ಬರಲಿ, ಅವರ ಸ್ಥಾನಮಾನಗಳಿಗೆ ಚ್ಯುತಿ ಬರದಷ್ಟು ಗಟ್ಟಿಯಾಗಿ ಬೇರೂರಿದ್ದರು. ಇನ್ನು ಕೆಲವರನ್ನು ನೋಡಿದರೆ, ಇವರು ಪತ್ರಕರ್ತರಾ, ದಲ್ಲಾಳಿಗಳಾ, ತಲೆಹಿಡುಕರಾ, ಚೇಲಾಗಳಾ, ವಕ್ತಾರರಾ, ಸಲಹೆಗಾರರಾ, ಚಾಕರಿಕಾರರಾ ಎಂಬ ಸಂದೇಹ ಮೂಡಿಸುವಷ್ಟು ಮಂತ್ರಿಗಳು ಹಾಗೂ ರಾಜಕೀಯ ನಾಯಕರ ಜತೆ ತಮ್ಮ ‘ಸಂಬಂಧ’ ಬೆಳೆಸಿಕೊಂಡಿದ್ದರು. ಮಂತ್ರಿಗಳು ಇವರಿಗೂ ಒಂದು ಪಾಲನ್ನು ಇಟ್ಟು ತಮ್ಮದನ್ನು ತೆಗೆದುಕೊಳ್ಳುತ್ತಿದ್ದರು. ಯಾವುದೇ ಪತ್ರಿಕೆಗೆ ಬರೆಯದ, ಆದರೆ ಪತ್ರಕರ್ತ ಎಂಬ ಅಧಿಕೃತ ಮಾನ್ಯತೆ ಪತ್ರವನ್ನು ಹೊಂದಿದವರಂತೂ ಮಾಡೋದು ಇದೇ ಕೆಲಸ. ಸಂಸತ್ ಅಧಿವೇಶನ ನಡೆಯುವಾಗ ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‌ನಲ್ಲಿ ಇಂಥ ಪತ್ರಕರ್ತರ ದೊಡ್ಡ ಠೋಳಿಯೇ ಒಂದಿಲ್ಲೊಂದು ಸಚಿವರು, ನಾಯಕರ ಸುತ್ತಮುತ್ತ ಬೀಡು ಬಿಟ್ಟಿರುತ್ತದೆ. ಇವರಲ್ಲಿ ಬಹುತೇಕ ಮಂದಿ ಪತ್ರಕರ್ತರಿದ್ದಾರಲ್ಲಾ, ಅವರಿಗೂ ಪತ್ರಿಕೋದ್ಯಮಕ್ಕೂ ಏನೇನೂ ಸಂಬಂಧ ಇಲ್ಲ. ಅವರು ಬರೆಯುವುದು, ಓದುವುದು ಬಿಟ್ಟು ಎಷ್ಟೋ ವರ್ಷಗಳಾದವು. ಇವರಲ್ಲಿ ಕೆಲವರು ಏಜೆಂಟ್‌ಗಳು, ಮಧ್ಯವರ್ತಿಗಳು, ಡಿಫೆನ್ಸ್ ಡೀಲರ್‌ಗಳು, ರಿಯಲ್ ಎಸ್ಟೇಟ್ ಏಜೆಂಟ್‌ಗಳು, ವರ್ಗಾವರ್ಗಿ ದಂಧೆಕೋರರು, ಚಾಡಿಕೋರರು… ಇವರಿಗೆ ಪತ್ರಿಕೆಗಳಿಲ್ಲ, ಚಾನೆಲ್‌ಗಳಿಲ್ಲ, ಆದರೂ ಪತ್ರಕರ್ತರು. ಇವರು ಹತ್ತಾರು ವರ್ಷಗಳಿಂದ ಸರ್ಕಾರ ಪತ್ರಕರ್ತರಿಗೆ ನೀಡುವ ಮನೆಯಲ್ಲಿ ವಾಸವಾಗಿದ್ದಾರೆ. ಕೆಲವರಂತೂ ನಿವೃತ್ತರಾದರೂ, ಸಾಯೋತನಕ ಈ ಮನೆಯನ್ನು ಖಾಲಿ ಮಾಡುವುದಿಲ್ಲ. ಇವರು ಯಾವುದೇ ಆಫೀಸಿಗೆ ಹೋದರೂ ಕಾಣಸಿಗುತ್ತಾರೆ.
ಇಂಥ ಪತ್ರಕರ್ತರೆಲ್ಲ ಈಗ ನೀರಿನಿಂದ ಹೊರಬಿಟ್ಟ ಮೀನಿನಂತಾಗಿ ಹೋಗಿದ್ದಾರೆ. ಎಲ್ಲಿ ತಮ್ಮ accreditation card (ಅಧಿಕೃತ ಮಾನ್ಯತಾ ಪತ್ರ)ಗೆ ಸಂಚಕಾರ ಬಂದು ಬಿಡಬಹುದಾ ಎಂಬ ಅಳುಕು ಇವರನ್ನೆಲ್ಲ ಕೊರೆಯುತ್ತಿದೆ. ಈ ಮಾನ್ಯತಾ ಪತ್ರವೇನಾದರೂ ರದ್ದಾದರೆ ಅವರಿಗೆ ಸಿಗುತ್ತಿರುವ ಸವಲತ್ತುಗಳೆಲ್ಲ ಕಟ್ ಆಗುತ್ತವೆ. ಪಾರ್ಲಿಮೆಂಟಿನೊಳಗೆ ಹೋಗಲು ಆಗುವುದಿಲ್ಲ. ದಂಧೆಯೆಲ್ಲ ನಿಂತು ಹೋಗುತ್ತವೆ. ಪತ್ರಕರ್ತರನ್ನೆಲ್ಲ ಹೊರಗಿಟ್ಟು ಮೋದಿಯವರು ಸರ್ವಾಧಿಕಾರಿ ಧೋರಣೆ ತಳೆಯುತ್ತಿದ್ದಾರೆಂದು ಗುಲ್ಲೆಬ್ಬಿಸುತ್ತಿರುವವರು ಈ ವರ್ಗಕ್ಕೆ ಸೇರಿದವರು. ಯಾರದೋ ಕೃಪಾಪೋಷಿತ ನಾಟಕ ಮಂಡಳಿ, ಭಜನಾ ಮಂಡಳಿ, ತಾಡುತಪೇರು ಮಂಡಳಿಗಳ ಕಾಯಂ ಆಹ್ವಾನಿತ ಹಾಗೂ ಸದಸ್ಯರಾಗಿರುವ ಈ ಪತ್ರಕರ್ತರು ಮೋದಿ ಮಾಧ್ಯಮ ವಿರೋಧಿ ಎಂಬ ವದಂತಿ ಹಬ್ಬಿಸುತ್ತಿದ್ದಾರೆ.

ಹಾಗೆ ನೋಡಿದರೆ, ಪತ್ರಿಕಾ ಮಾಲೀಕರು, ಟಿವಿ ಚಾನೆಲ್ ಮಾಲೀಕರು ಹಾಗೂ ಸಂಪಾದಕರುಗಳಿಗೆ ಸಾಧ್ಯವಾಗದಿರು–ವುದನ್ನು ಮೋದಿ ಮಾಡುತ್ತಿದ್ದಾರೆ. ಬೇರೊಂದು ರೀತಿಯಲ್ಲಿ ಪತ್ರಿಕೋದ್ಯಮವನ್ನು ‘ಸಾಫ್’ ಮಾಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಮಾಧ್ಯಮದವರ ದುಪಳಿ ಜಾಸ್ತಿಯಾಗಿತ್ತು. ರಾಜಕೀಯ ವರದಿಗಾರರು ಯಾರೊಬ್ಬರಿಗೆ, ಪಕ್ಷಕ್ಕೆ, ಬಣಕ್ಕೆ ಅನುಕೂಲ ಮಾಡಿಕೊಡಲು ಸುದ್ದಿ ಬಿತ್ತುವುದರಲ್ಲಿಯೇ (Plant ಮಾಡುವುದು) ಹೆಚ್ಚು ಆಸಕ್ತರಾಗಿದ್ದರು. ಕೆಲವು ಸಚಿವಾಲಯ–ಗಳನ್ನು ಕವರ್ ಮಾಡುವ ಬೀಟ್ ವರದಿಗಾರರು ಸಚಿವರ ಆಪ್ತ ಕಾರ್ಯದರ್ಶಿಗಳಾಗಿ ಮಾರ್ಪಾಡಾಗಿ ಹೋಗಿದ್ದರು. ಸುದ್ದಿ ಸೋಗಿನಲ್ಲಿ ಅವರಿಗೆ ಅನುಕೂಲವಾಗುವ, ಇನ್ಯಾರಿಗೋ ಹಾನಿಯಾಗುವ ವರದಿಗಳೇ ಪ್ರಕಟವಾಗು––ತ್ತಿದ್ದವು. ಪತ್ರಿಕಾಲಯ–ಗಳಲ್ಲಿ ಕುಳಿತ ಮಾಲೀಕರಾಗಲಿ, ಸಂಪಾದಕರಿ––ಗಾಗಲಿ ಈ ಕುಚೋದ್ಯಗಳು ತಟ್ಟನೆ ಗೊತ್ತಾಗುವುದಿಲ್ಲ. ತಮ್ಮ ಪತ್ರಿಕೆ ಯಾರದ್ದೋ ಆಸಕ್ತಿಗೆ ದಾಳವಾಗುತ್ತಿದೆಯೆಂಬ ಸಣ್ಣ ಸುಳಿವೂ ಸಿಗುವುದಿಲ್ಲ. ಅಷ್ಟೊಂದು ವ್ಯವಸ್ಥಿತವಾಗಿ ಈ ಪತ್ರಕರ್ತರು ಆಪರೇಟ್ ಮಾಡುತ್ತಾರೆ. ಇನ್ನು ಇಂಥ ವರದಿಗಾರನ ಜತೆ ಸಂಪಾದಕನೇ––ನಾದರೂ ಕೈ ಜೋಡಿಸಿ ಬಿಟ್ಟರೆ, ಎಂಥೆಂಥ ವರದಿಗಳು ಪ್ರಕಟವಾಗಬಹುದು, ಊಹಿಸಿ.

ಮೋದಿ ಪ್ರಧಾನಿಯಾದ ಬಳಿಕ ಈ ಎಲ್ಲ ಅಪಸವ್ಯಗಳೂ ತನ್ನಿಂದ ತಾನೇ ಬಂದ್ ಆಗಿವೆ. ಅದರಲ್ಲೂ ಮೋದಿಯವರೇನಾದರೂ ವಾರ್ತಾ ಮತ್ತು ಪ್ರಸಾರ ಮಂತ್ರಿಗಳಿಗೆ, ‘ಮಾನ್ಯತೆ ಪಡೆದ ಪತ್ರಕರ್ತರ ಪಟ್ಟಿಯ ಮೇಲೆ ಕಣ್ಣಾಡಿಸಿ, ನಿಜವಾದ ಪತ್ರಕರ್ತರಿಗೆ ಮಾತ್ರ ಮಾನ್ಯತಾ ಪತ್ರ ನೀಡಿ’ ಎಂದು ಸೂಚನೆ ಕೊಟ್ಟರೆ, ಪತ್ರಿಕೋದ್ಯಮ ಒಂದು ಹೊಡೆತಕ್ಕೆ ಸ್ವಚ್ಛವಾಗುತ್ತದೆ.

ಈಗಾಗಲೇ ಮೋದಿಯವರು ನಾಲ್ಕೈದು ಬಾರಿ ವಿದೇಶ ಯಾತ್ರೆ ಹೋಗಿ ಬಂದಿದ್ದಾರೆ. ಅವರು ಒಂದು ಸಲವೂ ಪತ್ರಕರ್ತರ ದಂಡನ್ನು ತಮ್ಮೊಂದಿಗೆ ಕಟ್ಟಿಕೊಂಡು ಹೋಗಿಲ್ಲ. ಇದೂ ಸಹ ಅನೇಕ ಹಿರಿಯ ಪತ್ರಕರ್ತರಿಗೆ ತೀವ್ರ ಬೇಸರವನ್ನುಂಟು ಮಾಡಿದೆ. ಸಾಮಾನ್ಯವಾಗಿ ಪ್ರಧಾನಿಯವರು ವಿದೇಶ ಪ್ರವಾಸಕ್ಕೆ ತೆರಳುವಾಗ ೨೫-೩೦ ಪತ್ರಕರ್ತರನ್ನೂ ಕರೆದುಕೊಂಡು ಹೋಗುವುದು ಲಾಗಾಯ್ತಿ–ನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಹಿರಿಯ ವರದಿಗಾರರು, ಅಂಕಣಕಾರರು, ಸಂಪಾದಕರು ಈ ತಂಡದಲ್ಲಿರುತ್ತಾರೆ. ವಾಜಪೇಯಿ ಹಾಗೂ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಅವರೊಂದಿಗೆ ನಾಲ್ಕು ಬಾರಿ ನಾನು ವಿದೇಶ ಪ್ರವಾಸ ಮಾಡುವಾಗ ಪತ್ರಕರ್ತರ ತಂಡದಲ್ಲಿದ್ದ ಹತ್ತಾರು ಮಂದಿ ಹಿರಿಯರು ಒಂದು ಅಕ್ಷರವನ್ನು ಸಹ ಬರೆದಿದ್ದನ್ನು ನಾನಂತೂ ನೋಡಿಲ್ಲ. ಪ್ರಧಾನಿಯವರೊಂದಿಗೆ ತೆರಳಿದ ಪತ್ರಕರ್ತರೆಲ್ಲ ಬರೆದ ವರದಿಗಳನ್ನು ಮರುದಿನ ಅಧಿಕಾರಿಗಳು ಫೈಲ್ ಮಾಡಿಕೊಟ್ಟಾಗ, ಅರ್ಧಕ್ಕರ್ಧ ಮಂದಿ ಏನೂ ಬರೆಯದಿರುವುದು ಗೊತ್ತಾಗುತ್ತಿತ್ತು.

ನಾನು ಹೀಗೆ ನಾಲ್ಕೂ ಸಲ ಹೋದಾಗ, ಒಬ್ಬ ಹಿರಿಯ ಸಂಪಾದಕರೊಬ್ಬರು ಜತೆಗಿದ್ದುದನ್ನು ಕಂಡು ವಿದೇಶಾಂಗ ವ್ಯವಹಾರಗಳ ಖಾತೆ ಅಧಿಕಾರಿಯೊಬ್ಬರನ್ನು ಕೇಳಿದಾಗ, ‘ಕಳೆದ ಇಪ್ಪತ್ತು ವರ್ಷಗಳಿಂದ ಎಷ್ಟೋ ಪ್ರಧಾನಿಗಳು ಬದಲಾಗಿದ್ದಾರೆ. ಆದರೆ ಪ್ರಧಾನಿ ವಿದೇಶ ಪ್ರವಾಸದಲ್ಲಿ ಇವರು ಮಾತ್ರ ಬದಲಾಗಿಲ್ಲ’ ಎಂದು ಹೇಳಿ ನಕ್ಕಿದ್ದರು. ಮತ್ತೊಬ್ಬ ಸಂಪಾದಕರ ವರದಿಗಾರಿಕೆ ಮಾತ್ರ ನನ್ನಲ್ಲಿ ಹಾಸ್ಯ ಹಾಗೂ ಹೇಸಿಗೆ ಹುಟ್ಟಿಸಿತ್ತು. ಅವರು ಪತ್ರಿಕೆ ಹಾಗೂ ಟಿವಿಗಳೆರಡನ್ನೂ ಹೊಂದಿರುವ ಆಂಧ್ರ ಮೂಲದ ಸುದ್ದಿ ಸಂಸ್ಥೆಯ ದಿಲ್ಲಿ ಮುಖ್ಯಸ್ಥರು. ಪ್ರಧಾನಿಯವರು ರಷ್ಯಾ ತಲುಪುತ್ತಿದ್ದಂತೆ, ವಿಮಾನದೊಳಗಿಂದಲೇ ಫೋನ್ ಮಾಡಿ, ‘ಪ್ರಧಾನಿ ಮಾಸ್ಕೋ ತಲುಪಿದರು’ ಎಂದು ಬ್ರೇಕಿಂಗ್ ನ್ಯೂಸ್ ಬಿತ್ತರಿಸುವಂತೆ ಸೂಚಿಸುತ್ತಿದ್ದರು. ಮಾಸ್ಕೋ ಭೇಟಿ ಮುಗಿಸಿ ಹೊರಡುವಾಗ, ವಿಮಾನ ಟೇಕಾಫ್ ಆಗುವ ಮುನ್ನ ‘ಪ್ರಧಾನಿ ಮಾಸ್ಕೋದಿಂದ ಹೊರಟರು ಎಂದು ಬ್ರೇಕಿಂಗ್ ಹಾಕಿಕೊಳ್ಳಿ. ಉಳಿದ ವರದಿಗಳನ್ನು ಏಜೆನ್ಸಿ (ಸುದ್ದಿ ಸಂಸ್ಥೆ ವರದಿಗಾರರು ಕಳಿಸುವ ವರದಿ) ಗಳಿಂದ ತೆಗೆದುಕೊಳ್ಳಿ’ ಎಂದು ಹೇಳುತ್ತಿದ್ದರು. ಈ ಮಹಾಶಯರು ಪ್ರಧಾನಿಯವರ ಯಾವ ಕಾರ್ಯಕ್ರಮದಲ್ಲಾಗಲೀ, ಇಡೀ ದಿನದ ವಿವರ ನೀಡುವ ಸಾಯಂಕಾಲದ ಪತ್ರಿಕಾಗೋಷ್ಠಿಯಲ್ಲಾಗಲಿ ಭಾಗವಹಿಸುತ್ತಿರಲಿಲ್ಲ. ಒಂದಿಬ್ಬರು ಕಿರಿಯ ವರದಿಗಾರರ ಸಖ್ಯ ಬೆಳೆಸಿ ಅವರು ಫೈಲ್ ಮಾಡಿದ್ದ ವರದಿಯನ್ನು ತೆಲುಗಿಗೆ ಅನುವಾದ ಮಾಡಿ ಕಳಿಸಿಬಿಡುತ್ತಿದ್ದರು. ಇನ್ನು ಕೆಲವು ಸಲ ಅನುವಾದವನ್ನೂ ಮಾಡದೇ, ಯಥಾವತ್ತಾಗಿ ಇಂಗ್ಲಿಷ್ ಕಾಪಿಯನ್ನೇ ಕಳಿಸಿ, ನೀವೇ ಅನುವಾದ ಮಾಡಿಕೊಳ್ಳಿ’ ಎಂದು ಸಾಗ ಹಾಕಿ ತಾವು ಪಾನಾಮೃತಮಗ್ನರಾಗಿ ಬಿಡುತ್ತಿದ್ದರು. ವಿಮಾನದಲ್ಲಿ ಪ್ರಧಾನಿ ಪತ್ರಿಕಾಗೋಷ್ಠಿ ಆರಂಭವಾಗುತ್ತಿದ್ದಂತೆ, ‘Mr. Prime Minister , how was your visit?’ ಅಥವಾ ‘Mr. Prime Minister , whats the outcome of your visit?’ ಎಂಬ ‘ಖಾಯಂ’ ಪ್ರಶ್ನೆಗಳನ್ನು ಕೇಳಿ ತಮ್ಮ ಕೆಲಸ ಮುಗಿಯಿತು ಎಂಬಂತೆ ಸುಮ್ಮನಾಗುತ್ತಿದ್ದರು. ಅದನ್ನು ನೋಡಿ ಉಳಿದ ಪತ್ರಕರ್ತರು ಮತ್ತು ಅಧಿಕಾರಿಗಳು ಮುಸಿ ಮುಸಿ ನಗುತ್ತಿದ್ದುದು ಬಹಳ ತಮಾಷೆಯಾಗಿರುತ್ತಿತ್ತು. ಕೆಲವು ಸಂಪಾದಕರಂತೂ ತಾವು ಪ್ರಧಾನಿ ಜತೆ ಹಾಲಿಡೇಗೆ ಬಂದವರಂತೆ ವರ್ತಿಸುತ್ತಿದ್ದರು. ಪತ್ರಿಕಾ ಮಾಲೀಕರೇನಾದರೂ ಬಂದರಂತೂ ಮುಗಿದೇ ಹೋಯಿತು. ಅವರಿಗೆ ಮೊದಲೇ ಬರೆದು ಗೊತ್ತಿಲ್ಲ. ಇನ್ನು ವರದಿ ಮಾಡುವುದೆಂತು?

ಪ್ರಧಾನಿಯವರು ವಿದೇಶಕ್ಕೆ ಹೋದಾಗ, ವಿಮಾನದಿಂದ ಇಳಿಯುತ್ತಿದ್ದಂತೆ ಅಲ್ಲಿನ ಗಣ್ಯರು ಸ್ವಾಗತಿಸಿದ ಬಳಿಕ ಮೋಟರ್‌ಕೇಡ್‌ನಲ್ಲಿ ಸಾಗುತ್ತಾರಷ್ಟೆ. ಅವರ ವಾಹನದ ಹಿಂದೆ ಅಧಿಕಾರಿಗಳು, ರಾಯಭಾರಿಗಳ, ರಾಜತಾಂತ್ರಿಕರ ವಾಹನಗಳಿರುತ್ತವೆ. ಕೊನೆಯಲ್ಲಿರುವ ಬಸ್‌ನಲ್ಲಿ ಪತ್ರಕರ್ತರಿರುತ್ತಾರೆ. ಇದು ಶಿಷ್ಟಾಚಾರ. ವಾಜಪೇಯಿ ಪ್ರಧಾನಿಯಾಗಿದ್ದಾಗ ಅವರ ಅಳಿಯ ರಂಜನ್ ಭಟ್ಟಾಚಾರ್ಯ ಅವರ ವಿಶೇಷ ಸೂಚನೆ ಮೇರೆಗೆ ದಿಲ್ಲಿಯ ಪ್ರಭಾವಿ ಸಂಪಾದಕರೊಬ್ಬರಿಗೆ (ಔಟ್‌ಲುಕ್ ವಾರಪತ್ರಿಕೆಯ ವಿನೋದ ಮೆಹತಾ ಇದ್ದಿರಬಹುದೆಂಬ ಗುಮಾನಿ) ಪ್ರತ್ಯೇಕ ಮರ್ಸಿಡಿಸ್ ಬೆಂಜ್ ಕಾರು ಮೀಸಲಾಗಿರುತ್ತಿತ್ತು ಎಂದು Accidental Prime Minister ಕೃತಿಯಲ್ಲಿ ಅಂದಿನ ಪ್ರಧಾನಿ ಡಾ. ಮನಮೋಹನಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ ಬಾರು ಬರೆದಿದ್ದಾರೆ.

ನಾನು ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ ಜತೆಗೆ ಇಸ್ರೇಲ್ ಹಾಗೂ ಪಾಕಿಸ್ತಾನಕ್ಕೆ ಹೋಗಿದ್ದೆ. ಕೃಷ್ಣ ಅವರು ಪ್ರತಿದಿನ ಆರೇಳು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಬಿಡುವಿಲ್ಲದಂತೆ ಅವರ ದಿನಚರಿ ಕೂಡಿರುತ್ತಿತ್ತು. ಪತ್ರಕರ್ತರಿಗೆ ಐದು ನಿಮಿಷ ಸಹ ಪುರುಸೊತ್ತು ಇರುತ್ತಿರಲಿಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿ ಬರೆಯಬೇಕು ಹಾಗೂ ಅದನ್ನು ಆಫೀಸಿಗೆ ಕಳಿಸಬೇಕು. ಈ ಧಾವಂತದಲ್ಲಿ ಎಂಥ ನುರಿತ ಕಸುಬಿಯಾದರೂ ಸುಸ್ತಾಗಿ ಹೋಗುತ್ತಾನೆ. ನಮ್ಮ ಜತೆಗೆ ವಾರಪತ್ರಿಕೆಯ ಸಂಪಾದಕರೊಬ್ಬರು ಬಂದಿದ್ದರು. ನಾಲ್ಕು ದಿನಗಳ ಅವಧಿಯಲ್ಲಿ ಕೃಷ್ಣ ಅವರು ಇಸ್ರೇಲ್‌ನಲ್ಲಿ ಕನಿಷ್ಠ ಹದಿನೈದು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಿರಬಹುದು. ಈ ಮಹಾಶಯರು ಒಂದೆರಡು ಕಾರ್ಯಕ್ರಮಗಳಲ್ಲಿ ಮಾತ್ರ ಪಾಲ್ಗೊಂಡಿದ್ದಿರಬಹುದು. ಎರಡು ದಿನ ಹೋಟೆಲ್ ರೂಮಿನಿಂದ ಸಹ ಹೊರ ಬರದೇ ಅಲ್ಲಿಯೇ ಕುಳಿತು ಕುಡಿಯುತ್ತಾ ಹೊರಬರಲು ಸಾಧ್ಯವಾಗದಂಥ ಸ್ಥಿತಿಯಲ್ಲಿದ್ದರು. ಪಾಕಿಸ್ತಾನದಲ್ಲಿ ವಿಮಾನ ನಿಲ್ದಾಣದಿಂದ ನೇರವಾಗಿ ಹೋಟೆಲ್ ರೂಮು ಸೇರಿದವರು ಹೊರಬಿದ್ದಿದ್ದು ವಾಪಸ್ ಬರುವಾಗಲೇ. ವಾರಪತ್ರಿಕೆ ಸಂಪಾದಕರಾದುದರಿಂದ ನಿತ್ಯ ವರದಿ ಮಾಡುವ ಗೋಜಿರಲಿಲ್ಲ. ಹಾಗೆಂದು ಅವರು ವಾಪಸ್ ಬಂದು ಬರೆದಿದ್ದು ಅಷ್ಟಕ್ಕಷ್ಟೇ.

ಇಂಥ ಪತ್ರಕರ್ತರಿಗೆ, ಪತ್ರಕರ್ತರ ಗುಂಪಿಗೆ ಮೋದಿಯವರ ಈ ಕ್ರಮ ಬೇಸರ, ಆಕ್ರೋಶ ಹುಟ್ಟಿಸಿದೆ. ವಿನೋದ ಮೆಹತಾ ಅವರಂತೂ ಮೊದಲಿಗೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮೋದಿಯವರು ತಮ್ಮ ಮೊದಲ ವಿದೇಶ ಪ್ರವಾಸದಲ್ಲಿ ಪತ್ರಕರ್ತರನ್ನು ವಿಮಾನದೊಳಗೆ ಹತ್ತಿಸಿಕೊಳ್ಳದಿದ್ದುದನ್ನೇ ಅವರು ಪ್ರಸ್ತಾಪಿಸಿ ಬರೆದರು. ಈಗ ದಿಲ್ಲಿಯ ಕಾರ್ಯಮರೆತ ಪತ್ರಕರ್ತರು, ಪ್ರಧಾನಿ ವಿಮಾನದ ಖಾಯಂ ಸದಸ್ಯರು, ಹಾಲಿಡೇ ಪತ್ರಿಕಾ ಮಾಲೀಕರು, ಅಕ್ಷರದ್ವೇಷಿ ವರದಿಗಾರರು ಮೋದಿಯವರು ಮಾಧ್ಯಮ ವಿರೋಧಿ ಎಂದು ಕಿರುಚಲಾರಂಭಿಸಿದ್ದಾರೆ.

ಮೊದಲೇ ಮೋದಿಯವರು ಸ್ಪಷ್ಟಪಡಿಸಿದ್ದಾರೆ. ವಿದೇಶ ಪ್ರವಾಸದಲ್ಲಿ ೨೫-೩೦ ಪತ್ರಕರ್ತರನ್ನು ಕರೆದುಕೊಂಡು ಹೋದರೆ, ದೇಶದಲ್ಲಿರುವ ಮಿಕ್ಕ ನೂರಾರು ಪತ್ರಿಕಾ ಪ್ರತಿನಿಧಿಗಳಿಗೆ ಈ ಅವಕಾಶ ವಂಚಿತವಾಗಿ ಅವರು ಬೇಸರಿಸಿಕೊಳ್ಳುವ ಸಾಧ್ಯತೆಯಿದೆ. ಅದರ ಬದಲು ಅವರು ದೂರದರ್ಶನ, ಆಕಾಶವಾಣಿ, ಎಎನ್‌ಐ ಪ್ರತಿನಿಧಿಗಳು, ಕೆಮರಾಮನ್ ಹಾಗೂ ಫೋಟೋಜರ್ನಲಿಸ್ಟ್‌ಗಳನ್ನು ಮಾತ್ರ ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೇ ಅವರು ವಿದೇಶದಲ್ಲಿನ ಪ್ರತಿ ವಿದ್ಯಮಾನವನ್ನು ಟ್ವೀಟ್ ಮೂಲಕ ತಿಳಿಸುತ್ತಿದ್ದಾರೆ. ಅವರ ವಿದೇಶಿ ಭೇಟಿಯ ಎಲ್ಲ ವಿವರಗಳೂ ಸಿಗುತ್ತಿವೆ. ಅವರೊಂದಿಗೆ ಪತ್ರಕರ್ತರು ಹೋಗಿಲ್ಲ ಎಂಬ ಭಾವನೆ ಓದುಗರಿಗಂತೂ ಬರುತ್ತಿಲ್ಲ. ಒಂದು ವೇಳೆ ಹೋಗಿದ್ದಿದ್ದರೆ ಇನ್ನಷ್ಟು ಪ್ರತ್ಯಕ್ಷದರ್ಶಿ, ಸ್ವಾನುಭವ ಸ್ಟೋರಿಗಳು, ವಿಶ್ಲೇಷಣಾತ್ಮಕ ವರದಿಗಳು, ಪ್ರಕಟವಾಗುತ್ತಿದ್ದವೇನೋ? ಹಾಗೆಂದು ಅದು ಭಾರೀ ನಷ್ಟ ಎಂದು ಭಾವಿಸುವಷ್ಟು ಗಂಭೀರವಾದುದಲ್ಲ.

ಪತ್ರಕರ್ತರು ಹೇಗೆ ಸುದ್ದಿಯನ್ನು ಪ್ಲಾಂಟ್ ಮಾಡುತ್ತಾರೆ, ರಾಜಕಾರಣಿಗಳು ಹೇಗೆ ಪತ್ರಕರ್ತರನ್ನು ಬಳಸಿಕೊಳ್ಳುತ್ತಾರೆ, ಸುದ್ದಿಯಲ್ಲದ್ದನ್ನು ಪತ್ರಕರ್ತರು ಹೇಗೆ ಸುದ್ದಿ ಮಾಡುತ್ತಾರೆ, ಅದು ಹೇಗೆ ಸರ್ಕಾರದ ಸೃಜನಶೀಲತೆಗೆ ಧಕ್ಕೆಯಾಗುತ್ತದೆ––ಯೆಂಬುದನ್ನು ಸಂಜಯ ಬಾರು ತಮ್ಮ ಕೃತಿಯಲ್ಲಿ ಒಂದು ಪ್ರಸಂಗದ ಮೂಲಕ ಹೇಳಿದ್ದಾರೆ. ಒಮ್ಮೆ ಯುಪಿಎ-೧ ಸರ್ಕಾರದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವರಾ––ಗಿದ್ದ ಅರ್ಜುನ್ ಸಿಂಗ್ ಅವರಿಗೆ ಬಾರು ಆಕಸ್ಮಿಕವಾಗಿ ಸಿಕ್ಕಿದರಂತೆ. ‘ಬಿಡುವಿದ್ದಾಗ ನನ್ನನ್ನು ಬಂದು ಕಾಣಿ’ ಎಂದು ಹೇಳಿದರಂತೆ. ಈ ವಿಷಯವನ್ನು ಬಾರು ಪ್ರಧಾನಿಯವರಿಗೆ ತಿಳಿಸಿದರಂತೆ. ಆ ಸಂದರ್ಭದಲ್ಲಿ ಪ್ರಧಾನಿ ಹಾಗೂ ಅರ್ಜುನ್ ಸಿಂಗ್ ಸಂಬಂಧ ಸರಿ ಇರಲಿಲ್ಲ. ಇಬ್ಬರು ಮುಖ ಮುಖ ನೋಡಿಕೊಳ್ಳುತ್ತಿರಲಿಲ್ಲ.

ಮರುದಿನ ಬಾರು ಅರ್ಜುನ್ ಸಿಂಗ್ ಅವರ ಆಫೀಸಿನಲ್ಲಿ ಭೇಟಿ ಮಾಡಿದರಂತೆ. ಉಭಯ ಕುಶಲೋಪರಿ, ಚಹ ಸೇವನೆ ಬಳಿಕ ಸಿಂಗ್ ಅವರಲ್ಲಿ ಹೇಳಲು ವಿಷಯಗಳೇನೂ ಇರಲಿಲ್ಲ. ಕೊನೆಗೆ ಬಾರು ಅವರೇ ತಾವು ಬಂದಿದ್ದಕ್ಕೆ, ವಿದೇಶಗಳಲ್ಲಿ ಐಐಎಂ ಸ್ಥಾಪಿಸುವ ವಿಚಾರ ಕುರಿತು ಪ್ರಸ್ತಾಪಿಸಿದರಂತೆ. ಈ ಮಾತುಕತೆ ಸುಮಾರು ಅರ್ಧ ಗಂಟೆ ಕಾಲ ಲಂಬಿಸಿತಂತೆ. ಅಷ್ಟರೊಳಗೆ ಸಿಂಗ್ ಏನೂ ಆಸಕ್ತಿ ಇಲ್ಲದವರಂತೆ ಸುಮ್ಮನೆ ಕುಳಿತಿದ್ದರಂತೆ. ಅವರಿಂದ ಬೀಳ್ಕೊಂಡು ಬಂದ ಬಾರು, ಪ್ರಧಾನಿಯವರಿಗೆ ಎಲ್ಲ ವಿವರಗಳನ್ನು ಒಪ್ಪಿಸಿದರಂತೆ. ಎರಡು ದಿನಗಳ ಬಳಿಕ, ಅರ್ಜುನ್ ಸಿಂಗ್ ತವರು ರಾಜ್ಯ ಮಧ್ಯಪ್ರದೇಶದಿಂದ ಪ್ರಕಟವಾಗುವ ಆಂಗ್ಲದೈನಿಕವೊಂದರಲ್ಲಿ ‘ PM reaches out to Arjun Singh’ಎಂಬ ಶೀರ್ಷಿಕೆಯಡಿಯಲ್ಲಿ ಅರ್ಜುನ್ ಸಿಂಗ್ ಜತೆಗೆ ಸಂಬಂಧವನ್ನು ಸುಧಾರಿಸಿಕೊಳ್ಳಲು ಪ್ರಧಾನಿ ರಾಯಭಾರಿಯೊಬ್ಬರನ್ನು ಕಳಿಸಿಕೊಟ್ಟಿದ್ದರು ಎಂಬ ವಿವರಗಳುಳ್ಳ ವರದಿ ಪ್ರಕಟವಾಯಿತಂತೆ. ದಿಲ್ಲಿಯಲ್ಲಿ ಅರ್ಜುನ್‌ಸಿಂಗ್ ‘ಏಜೆಂಟ್’ ನಂತಿರುವ ಆ ಪತ್ರಿಕೆಯ ದಿಲ್ಲಿ ವರದಿಗಾರ ಈ ಸುದ್ದಿ ಬರೆದಿದ್ದ!

ತಮಗಾದ ಕಹಿ ಅನುಭವದ ಹಿನ್ನೆಲೆಯಲ್ಲಿ ಹಾಗೂ ಸರ್ಕಾರದ ಮೇಲೆ ಒಂದು ಹಂತದ ನಿಯಂತ್ರಣ ಸಾಧಿಸಲು ಮೋದಿಯವರು ಮಾಧ್ಯಮದವರನ್ನು ಪಕ್ಕಕ್ಕಿಟ್ಟಿದ್ದಾರೆ, ತಪ್ಪಿಲ್ಲ ಬಿಡಿ. ಆದರೆ ಇದು ಹೀಗೆ ಮುಂದುವರೆಯುವುದೂ ಒಳ್ಳೆಯದಲ್ಲ. ನಾಲ್ಕನೆ ಅಂಗವನ್ನು ನೂಕುವುದೂ ಬೇಡ, ಅಲ್ಲವೇ?

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.