ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಒಂದು ಸೋಲು, ಸೋಲಲ್ಲ

sachin-tendulkar-62dಜೀವನದಲ್ಲಿ ಪದೇ ಪದೆ ಫೇಲ್ ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನವನ್ನು ಸಹಿಸಿಕೊಂಡು ಪುನಃ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ.

ಆದರೆ ಜೀವನದಲ್ಲಿ ಯಶಸ್ಸನ್ನು ಕಂಡವರು, ಸೋಲನ್ನೇ ಕಾಣದವರು ಏಕಾಏಕಿ ಫೇಲ್ ಆದಾಗ ಚಡಪಡಿಸುತ್ತಾರಲ್ಲ, ಒಳಗೊಳಗೇ ಬೇಯುತ್ತಾರಲ್ಲ, ಅದನ್ನು ನೋಡಲಾಗುವುದಿಲ್ಲ. ಯಶಸ್ಸು ಅವರಲ್ಲೊಂದು ದಾರ್ಷ್ಟ್ಯವನ್ನು ರೂಪಿಸಿರುತ್ತದೆ. ಯಶಸ್ಸಿನ ಗುಂಗಿನಲ್ಲಿ ಅವರು ಮೈಮರೆತಿರುತ್ತಾರೆ. ಜೀವನ ಸದಾ ಹೀಗೇ ಇರುತ್ತದೆಂದು ಭಾವಿಸಿರುತ್ತಾರೆ. ಆದರೆ ಹಠಾತ್ತನೆ ಸೋಲು ಎದುರಾದರೆ ಅವರಿಗೆ ಅದನ್ನು ಹೇಗೆ ಸ್ವೀಕರಿಸಬೇಕೆಂಬುದೇ ಗೊತ್ತಾಗದೇ ಒದ್ದಾಡುತ್ತಾರೆ. ಎಷ್ಟೋ ಸಲ ಸೋಲಿಗಿಂತ, ಸೋಲಿನ ಹೊಡೆತಕ್ಕೆ ನರಳುವ, ಕೊರಗುವ ಸೋಲಿದೆಯಲ್ಲ, ಅದರ ಪರಿಣಾಮ ಮಾತ್ರ ಭಯಾನಕ ವಾಗಿರುತ್ತದೆ. ಸೋಲನ್ನು ಸಹಿಸಿಕೊಳ್ಳಬಹುದು. ಆದರೆ ಅದರ ಪರಿಣಾಮವನ್ನು ಎದುರಿಸಲಾಗದೇ ಸೋಲುವುದು ನಿಜಕ್ಕೂ ಘನಘೋರ.

ಇಂಥ ಸ್ಥಿತಿಯಲ್ಲಿದ್ದವರು ‘ಕ್ರಿಕೆಟ್‌ನ ದೇವರು’ ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡುಲ್ಕರ್ ಮಾತುಗಳನ್ನು ಕೇಳಿಸಿ ಕೊಳ್ಳಬೇಕು. (ಅಷ್ಟಕ್ಕೂ ದೇವರು ಹೇಳಿದರೆ ಯಾರು ಕೇಳುವುದಿಲ್ಲ ಹೇಳಿ) ‘ನಾನು ಸಾಮಾನ್ಯ ಆಟಗಾರನಾಗಿ ಭಾರತ ಕ್ರಿಕೆಟ್ ತಂಡವನ್ನು ಸೇರಿದೆ. ಉತ್ತಮ ಪ್ರದರ್ಶನದ ಫಲವಾಗಿ ತಂಡದ ಕ್ಯಾಪ್ಟನ್ ಕೂಡ ಆದೆ. ಆದರೆ ನಾಯಕನಾಗಿ ನನ್ನ ಸಾಧನೆ ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ. ನಾಯಕನಾಗಿ ಒತ್ತಡಕ್ಕೆ ಸಿಲುಕುತ್ತಿದ್ದುದರಿಂದ, ಅದು ನನ್ನ ಸಹಜ ಬ್ಯಾಟಿಂಗ್ ಮೇಲೆ ಸಹ ಪರಿಣಾಮ ಬೀರಲಾರಂಭಿಸಿತು. ನಾಯಕನಾಗಿ ಫೇಲ್ ಆದರೂ ಪರವಾಗಿಲ್ಲ, ಕ್ರಿಕೆಟ್ ಆಟಗಾರನಾಗಿ ಫೇಲ್ ಆಗಬಾರದು ಎಂದು ಭಾವಿಸಿ, ನಾಯಕತ್ವದಿಂದ ಹೊರಬಂದೆ. ಆನಂತರ ಹನ್ನೊಂದರಲ್ಲಿ ಒಬ್ಬನಾಗಿ ತಂಡದಲ್ಲಿ ಮುಂದುವರಿದೆ. ನನ್ನ ಬ್ಯಾಟಿಂಗ್ ಕೌಶಲವನ್ನು ಮುಂದುವರಿಸಲು ಇದರಿಂದ ಸಹಾಯಕವಾಯಿತು. ಸಂಪೂರ್ಣವಾಗಿ ನಾನು ಬ್ಯಾಟಿಂಗ್ ಮೇಲೆ ನನ್ನ ಗಮನವನ್ನು ಕೇಂದ್ರೀಕರಿಸಿದೆ.’ ಎಂದು ಸಚಿನ್ ಹೇಳಿದ್ದರು.

ಕ್ಯಾಪ್ಟನ್ ಆಗಿ ವಿಫಲನಾದರೆ, ಮುಂದೆ ಆಟಗಾರನಾಗಿ ಮುಂದುವರಿಯುವುದು ಹೇಗೆ ಎಂದು ಅವರು ಯೋಚಿಸಲಿಲ್ಲ. ಕ್ಯಾಪ್ಟನ್ ಆಗಿ ವಿಫಲನಾದರೆ ಆಟಗಾರನಾಗಿಯೂ ವಿಫಲನಾದಂತೆ ಎಂದು ಸಹ ಯೋಚಿಸಲಿಲ್ಲ.

ನನಗೆ ಇಲ್ಲಿ ಬ್ರಿಟನ್‌ನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ನೆನಪಾಗುತ್ತಾರೆ. ಎರಡನೆ ಮಹಾಯುದ್ಧದಲ್ಲಿ ಬ್ರಿಟನ್‌ಗೆ ಜಯವನ್ನು ತಂದುಕೊಟ್ಟರೂ, ಮುಂದಿನ ವರ್ಷ ನಡೆದ ಮಹಾ ಚುನಾವಣೆಯಲ್ಲಿ ಚರ್ಚಿಲ್ ಅಧಿಕಾರ ವಂಚಿತರಾಗುತ್ತಾರೆ. ತಮ್ಮ ಸಾರ್ವಜನಿಕ ಜೀವನ ಇಲ್ಲಿಗೇ ಮುಗಿಯಿತು ಎಂದು ಅವರು ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ನಿರಂತರ ರಾಜಕೀಯ ಚಟುವಟಿಕೆಯಿಂದ ಬಿಡುವು ಪಡೆದು ಸಾಹಿತ್ಯ ಅಧ್ಯಯನ ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರಿಗೆ ಸಾಹಿತ್ಯಕ್ಕೆ ನೀಡುವ ಅತ್ಯುಚ್ಚ ಪ್ರಶಸ್ತಿಯಾದ ನೊಬೆಲ್ ಪುರಸ್ಕಾರ ಸಹ ಪ್ರಾಪ್ತವಾಗುತ್ತದೆ. ಅದಾದ ನಂತರ ಪುನಃ ಅವರು ಕೆಲ ಕಾಲ ಬ್ರಿಟನ್‌ನ ಪ್ರಧಾನಮಂತ್ರಿಯೂ ಆಗುತ್ತಾರೆ.

ಒಂದು ಸೋಲು ಸೋಲಲ್ಲ. ಸೋಲಿನಿಂದ ಧೃತಿಗೆಡುವುದು, ಸೋತೆ ಎಂದು ಸತ್ತಂತೆ ಭಾವಿಸುವುದು ನಿಜವಾದ ಸೋಲು. ಸೋಲು ಸಹ ನಮ್ಮನ್ನು ಅರಿಯಲು, ನಿಜ ಸಾಮರ್ಥ್ಯ ತಿಳಿಯಲು ಸಹಕಾರಿಯಾಗಬಹುದು. ಸೋಲು ಎದುರಾದಾಗ, ಜೀವನದ ಎಲ್ಲ ಬಾಗಿಲುಗಳು ಮುಚ್ಚಿ ಹೋದವು ಎಂದು ಭಾವಿಸುವುದು ಬೇಡ. ಕೇವಲ ಒಂದು ಬಾಗಿಲಷ್ಟೇ ಮುಚ್ಚಿರಬಹುದು. ನೀವು ಪ್ರಯತ್ನ ಪಟ್ಟರೆ ಅದೂ ತೆರೆದುಕೊಳ್ಳಬಹುದು.

*****
ನೋಕಿಯಾ: ಎರಡು ಪ್ರತಿಕ್ರಿಯಾ

ಕಳೆದ ವಾರದ ‘ನೂರೆಂಟು ನೋಟ’ ಅಂಕಣದಲ್ಲಿ ನೋಕಿಯಾ ಕಂಪನಿಯ ಅವಸಾನದ ಬಗ್ಗೆ ಬರೆದಿದ್ದೆ. ಈ ಲೇಖನಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.

ಹೊನ್ನಾವರದಿಂದ ಶಂಭು ನಾಯ್ಕ ಎಂಬುವವರು ಬರೆದಿದ್ದಾರೆ- ‘ಕಳೆದ ಎಂಟು ವರ್ಷಗಳಿಂದ ನಾನು ನೋಕಿಯಾ ಮೊಬೈಲು ಹ್ಯಾಂಡ್‌ಸೆಟ್‌ನ್ನು ಬಳಸುತ್ತಿದ್ದೇನೆ. ಈ ಅವಧಿಯಲ್ಲಿ ಇದು ಕನಿಷ್ಠ ಐವತ್ತು ಸಲ ಕೆಳಕ್ಕೆ ಬಿದ್ದಿರಬಹುದು. ಏನೂ ಆಗಿಲ್ಲ. ಈಗ ಕೀಬೋರ್ಡ್ ಮೇಲಿರುವ ಎಲ್ಲ ಅಕ್ಷರಗಳು ಅಳಿಸಿ ಹೋಗಿವೆ. ಸ್ಕ್ರೀನ್ ಮೇಲೆ ಏನೂ ಮೂಡುವುದಿಲ್ಲ. ಆದರೂ ನಾನು ಈ ಮೊಬೈಲ್‌ನ್ನೇ ಬಳಸುತ್ತಿರುವೆ. ಈ ಕಂಪನಿ ಮುಚ್ಚಿ ಹೋಯಿತಂತೆ ಎಂದು ಕೇಳಿದಾಗ ಬಹಳ ಬೇಸರವಾಯಿತು. ನನ್ನ ಮಾತು ಬೇರೆಯವರಿಗೆ, ಬೇರೆಯವರ ಮಾತು ನನಗೆ ಕೇಳಿಸುವ ತನಕ ನಾನು ಈ ಫೋನನ್ನೇ ಬಳಸುತ್ತೇನೆ. ಆನಂತರ ಇದನ್ನೇ ಕವಳದ ಡಬ್ಬವನ್ನಾಗಿಯೋ, ಸುಣ್ಣದ ಡಬ್ಬವನ್ನಾಗಿಯೋ ಮಾಡಿಟ್ಟುಕೊಳ್ಳುತ್ತೇನೆ.’

ಸ್ನೇಹಿತರಾದ ಜೋಗಿಯವರು ನೋಕಿಯಾ ಕಂಪನಿಯ ಅಧಃಪತನವನ್ನು ಕೇವಲ ಒಂದೇ ಸಾಲಿನಲ್ಲಿ ಹೇಳಿದ್ದಾರೆ- ‘ಇತ್ನೆ ಸಾಲ್ ಕ್ಯಾ ಕಿಯಾ ಅಂತ ಹೇಳಿದರೆ ನೋ ಕಿಯಾ ಅಂದಿದ್ದರ ಪರಿಣಾಮವಿದು.’

*****

ಕುಕ್‌‘ಗೇ’ ಆದ್ರೆ ನಿಮ‘ಗೇ’ನು?

ಆ್ಯಪಲ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಟಿಮ್ ಕುಕ್ ಅವರು ತಮ್ಮ ಸಂಸ್ಥೆಯ ಪ್ರಾಡಕ್ಟ್ ಬಿಡುಗಡೆಯ ಭರಾಟೆಯನ್ನು ಸರಿಗಟ್ಟುವಂತೆ ಒಂದು ಹೇಳಿಕೆ ನೀಡಿ ಭಾರೀ ಸುದ್ದಿ ಮಾಡಿದ್ದಾರೆ. ಯಾರೂ ಕೇಳದಿದ್ದರೂ, ಒತ್ತಾಯಿಸದಿದ್ದರೂ, ಸ್ವಯಂಪ್ರೇರಿತರಾಗಿ ತಾವು ಗೇ ಅರ್ಥಾತ್ ಸಲಿಂಗಿ ಎಂದು ಘೋಷಿಸಿಕೊಂಡಿದ್ದಾರೆ. ಫಾರ್ಚೂನ್ ೫೦೦ ಕಂಪನಿಗಳ ಮುಖ್ಯಸ್ಥರೊಬ್ಬರ ಈ ಘೋಷಣೆ ವಿವಾದ, ಕೋಲಾಹಲ, ಚರ್ಚೆ, ಜಿಜ್ಞಾಸೆ, ಕುತೂಹಲ, ಬೇಸರ, ಆನಂದ… ಹೀಗೆ ಹಲವು ಭಾವ-ಭಾವಾತಿರೇಕಗಳನ್ನು ಮೂಡಿಸಿದೆ. ಜಗತ್ತಿನ ೭೮ ದೇಶಗಳಲ್ಲಿ ಸಲಿಂಗಕಾಮ ನಿಷೇಧವಿರುವುದರಿಂದ ಕುಕ್ ಅವರ ಈ ಹೇಳಿಕೆ ಆ್ಯಪಲ್ ಪ್ರಾಡಕ್ಟ್‌ಗಳ ಮಾರಾಟದ ಮೇಲೆ ಪರಿಣಾಮ ಬೀರಬಹುದಾ ಎಂಬುದು ಕೆಲವರ ಚಿಂತೆ.

ಟಿಮ್ ಕುಕ್ ಅವರ ಈ ಹೇಳಿಕೆಗೆ ‘ಎಕನಾಮಿಕ್ ಟೈಮ್ಸ್’ ಸೊಗಸಾದ ಹೆಡ್‌ಲೈನ್ ನೀಡಿತ್ತು-‘ಅಟ್ಝಛಿ’ ಜಿಞ ಇಟಟ ಖಛಿ ಖಿ: ಜಿಎ’
ಕುಕ್ ಸಲಿಂಗಿಯಾದರೆ ಅವರ ಕಂಪನಿ ಪ್ರಾಡಕ್ಟ್‌ಗಳ ಮಾರಾಟದ ಮೇಲೆ ಏನೂ ಪರಿಣಾಮವಾಗೊಲ್ಲ ಎಂಬ ಲೇಖನಕ್ಕೆ ನಮ್ಮ ಪತ್ರಿಕೆಯಲ್ಲಿನ ಶೀರ್ಷಿಕೆ- ಕುಕ್‌‘ಗೇ’ ಆದ್ರೆ ಆ್ಯಪಲ್‌‘ಗೇ’ನೂ ಆಗೊಲ್ಲ!

ಕುಕ್ ‘ಗೇ’ ಎಂದು ಘೋಷಿಸಿಕೊಂಡಿದ್ದಕ್ಕೆ ಮೈಸೂರಿನ ಎಚ್.ಕೆ. ಮೀನಾಕ್ಷಿದೇವಿ ಅವರ ಟ್ವೀಟ್ ಪ್ರತಿಕ್ರಿಯೆ- ೧) ‘ಆ್ಯಪಲ್‌‘ಗೇ’ ಕುಕ್ ಮಾಡಿ ಮಾಡಿ ಟಿಮ್ ಗೇ ‘ಗೇ’ನೋದಯ ಆಯ್ತು! ಹಾ‘ಗೇ’ ಸುಮ್ಮ‘ಗೆ’ ಮನಸ್ಸಿ‘ಗೆ’ ಹೊಳೆದಿದ್ದು.’

೨) ‘ಮಿಸ್ಟರ್ ಟಿಮ್, ತಮ‘ಗೆ’ ಅಭಿನಂದನೆ ಹೇ‘ಗೆ’ ತಿಳಿಸುವುದು? ಯಾಕೆ ಹೀ‘ಗೆ’ ನೀವು? ಇದ್ದಕ್ಕಿದ್ದ ಹಾ‘ಗೆ’ ಏನಾಯ್ತು ನಿಮ‘ಗೆ’? ನಮ‘ಗೆ’ ತಿಳಿಸಿ.’

*****

ಡೋನಾಲ್ಡ್ ಓಪಸ್‌ನನ್ನು ಕೊಂದಿದ್ದು ಡೋನಾಲ್ಡ್ ಓಪಸ್ಸೇ!

ಅಮೆರಿಕದ ಪತ್ರಿಕೆಗಳು, ಟಿವಿ, ಇಂಟರ್‌ನೆಟ್ ಸುದ್ದಿ ಸಂಸ್ಥೆ ಹಾಗೂ ರೇಡಿಯೋ ಸ್ಟೇಶನ್‌ಗಳೆಲ್ಲ ಸೇರಿ ನಡೆಸುತ್ತಿರುವ ಎಪಿ ಎಂದೇ ಪ್ರಸಿದ್ಧವಾಗಿರುವ ಅಸೋಸಿಯೇಟೆಡ್ ಪ್ರೆಸ್ ಆರಂಭವಾಗಿ ೧೬೮ ವರ್ಷಗಳಾದವು. ಇದರ ನೆನಪಿಗೆ ಹೊರತರಲಾಗಿರುವ ಒಂದು ಅಪರೂಪದ ಪುಸ್ತಕದಲ್ಲಿ, ೧೯೯೪ರ ಮಾರ್ಚ್ ೨೩ರಂದು ನಡೆದ ಒಂದು ಕೊಲೆ ಪ್ರಕರಣದ ವರದಿಯನ್ನು ಪ್ರಸ್ತಾಪಿಸಲಾಗಿದೆ. ಈ ೧೬೮ ವರ್ಷಗಳಲ್ಲಿ ತಾನು ಮಾಡಿದ ಕುತೂಹಲದ ವರದಿಗಳನ್ನು ಎಪಿ ಈ ಕೃತಿಯಲ್ಲಿ ಸಂಗ್ರಹಿಸಿದೆ.

ಡೋನಾಲ್ಡ್ ಓಪಸ್ ತನ್ನ ತಲೆಗೆ ಗುಂಡು ಹೊಡೆದುಕೊಂಡು ಸತ್ತಿದ್ದಾನೆಂದು ವೈದ್ಯಕೀಯ ವರದಿ ಹೇಳಿದ ನಂತರ ಇಡೀ ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡಿತು. ಒಂದು ಕೊಲೆ ಅಥವಾ ಆತ್ಮಹತ್ಯೆ ಪ್ರಸಂಗದಲ್ಲಿ ಇಷ್ಟೆಲ್ಲ ತಿರುವುಗಳಿರಲು ಸಾಧ್ಯವಾ?

ಹತ್ತನೆ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಓಪಸ್ ನಿರ್ಧರಿಸಿದ. ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದೇ ಆತ್ಮಹತ್ಯೆಗೆ ಕಾರಣ ಎಂದು ಆತ ಚೀಟಿ ಬರೆದಿಟ್ಟು ಹತ್ತನೆ ಮಹಡಿಯಿಂದ ಜಿಗಿದ. ಆತ ಎಂಟನೆ ಮಹಡಿಗೆ ಬರುವಷ್ಟರಲ್ಲಿ ಕಿಟಕಿಯಿಂದ ತೂರಿಬಂದ ಗುಂಡು ಅವನ ತಲೆಗೆ ತಗುಲಿತು. ಆತ ಕೆಳಕ್ಕೆ ಬೀಳುವಷ್ಟರಲ್ಲಿ ಕೊನೆಯುಸಿರೆಳೆದಿದ್ದ. ಓಪಸ್‌ನನ್ನು ಸಾಯಿಸುವುದು ಗುಂಡು ಹೊಡೆದವನ ಉದ್ದೇಶವಾಗಿರಲಿಲ್ಲ. ಆ ರೀತಿ ಸಾಯುವುದು ಸಹ ಓಪಸ್‌ನ ಉದ್ದೇಶವಾಗಿರಲಿಲ್ಲ.

ಎಂಟನೆ ಮಹಡಿಯಿಂದ ಗುಂಡು ತೂರಿ ಬಂತಲ್ಲ, ಅಲ್ಲಿ ಸುಮಾರು ಅರವತ್ತರ ವಯಸ್ಸಿನ ಗಂಡ-ಹೆಂಡತಿ ವಾಸಿಸುತ್ತಿದ್ದರು. ಅವರಿಬ್ಬರ ನಡುವೆ ವಿಪರೀತ ಜಗಳ, ಚಕಮಕಿ ನಡೆದಿತ್ತು. ನಿನ್ನನ್ನು ರಿವಾಲ್ವರ್‌ನಿಂದ ಸಾಯಿಸಿ ಬಿಡ್ತೀನಿ ಎಂದು ಗಂಡ ಹೆದರಿಸುತ್ತಿದ್ದ. ಅಂದು ಆತ ಹೆಂಡತಿ ಮೇಲೆ ಅದೆಷ್ಟು ಕೋಪಗೊಂಡಿದ್ದನೆಂದರೆ ರಿವಾಲ್ವರ್‌ನ ಟ್ರಿಗರ್‌ನ್ನು ಎಳೆದೇಬಿಟ್ಟ. ಆದರೆ ಅದು ಅವನ ಹೆಂಡತಿಗೆ ತಗಲುವ ಬದಲು ಮಹಡಿಯಿಂದ ಜಿಗಿದ ಓಪಸ್‌ಗೆ ತಾಕಿತು. ತನಿಖೆ ಆರಂಭವಾಯಿತು. ಆಗ ಗಂಡ-ಹೆಂಡತಿ ಇಬ್ಬರೂ ತಮಗೆ ಓಪಸ್‌ನನ್ನು ಕೊಲ್ಲುವ ಉದ್ದೇಶವಿರಲಿಲ್ಲ ಎಂದು ಸಾರಿ ಸಾರಿ ಹೇಳಿದರು.

ಯಾವತ್ತೂ ಹೆಂಡತಿ ಜತೆ ಜಗಳವಾದಾಗಲೆಲ್ಲ, ‘ನಿನ್ನನ್ನು ರಿವಾಲ್ವರ್‌ನಿಂದ ಗುಂಡು ಹೊಡೆದು ಸಾಯಿಸುತ್ತೇನೆ’ ಎಂದು ಗಂಡ ಹೆದರಿಸುತ್ತಿದ್ದ. ಅದು ಅವನ ಸ್ವಭಾವ, ಚಾಳಿ. ಆದರೆ ರಿವಾಲ್ವರ್ ಒಳಗೆ ಗುಂಡು ಇರುತ್ತಿರಲಿಲ್ಲ. ಹೀಗಿರುವಾಗ ಓಪಸ್ ಕೊಲೆ ಪ್ರಕರಣ ಒಂದು ಆಕಸ್ಮಿಕ ಅವಘಡ ಎಂದಷ್ಟೇ ಭಾವಿಸಬಹುದಿತ್ತು. ಆದರೆ ಖಾಲಿ ರಿವಾಲ್ವರ್ ಒಳಗೆ ಗುಂಡನ್ನು ಇಟ್ಟಿದ್ದು ಯಾರು?

ತನಿಖೆ ಮುಂದುವರಿದಾಗ ಗೊತ್ತಾಗಿದ್ದೇನೆಂದರೆ ಆರು ವಾರಗಳ ಹಿಂದೆ ಈ ದಂಪತಿಯ ಮಗನೇ ಯಾರಿಗೂ ಗೊತ್ತಾಗದಂತೆ ಗುಂಡನ್ನು ರಿವಾಲ್ವರ್ ಒಳಗಿಟ್ಟು ಲೋಡ್ ಮಾಡಿದ್ದ. ತಾಯಿಯ ನಿಧನದ ಬಳಿಕ ತನ್ನ ತಂದೆ ಮತ್ತೊಂದು ಮದುವೆಯಾಗಿರುವುದು ಆತನಿಗೆ ಇಷ್ಟವಿರಲಿಲ್ಲ. ಮಲತಾಯಿಯ ಧೋರಣೆಗಳಿಂದ ಆತ ಮಾನಸಿಕವಾಗಿ ಜರ್ಝರಿತನಾಗಿದ್ದ. ಇದರಿಂದ ಮನೆಯಲ್ಲಿ ಆಗಾಗ ಜಗಳಗಳಾಗುತ್ತಿದ್ದವು. ಜಗಳವಾದಾಗಲೆಲ್ಲ ಖಾಲಿ ರಿವಾಲ್ವರ್ ತೆಗೆದು ಮಲತಾಯಿಯೆಡೆಗೆ ಗುರಿಯಿಟ್ಟು ‘ನಿನ್ನನ್ನು ಸಾಯಿಸಿಬಿಡುತ್ತೇನೆ’ ಎಂದು ಅಪ್ಪ ಹೆದರಿಸುತ್ತಿದ್ದ. ಇದನ್ನು ಅರಿತಿದ್ದ ಮಗ, ರಿವಾಲ್ವರ್‌ನ್ನು ಲೋಡ್ ಮಾಡಿದ್ದ. ಜಗಳ ತಾರಕಕ್ಕೇರಿದಾಗ ಅಪ್ಪ, ರಿವಾಲ್ವರ್‌ನ ಟ್ರಿಗರ್ ಎಳೆದರೆ, ಮಲತಾಯಿ ಸತ್ತು ಹೋಗಲಿ ಎಂಬುದು ಅವನ ಯೋಚನೆಯಾಗಿತ್ತು.

ರಿವಾಲ್ವರ್‌ನ ಟ್ರಿಗರ್‌ನ್ನು ಮಗನು ಎಳೆಯದಿದ್ದರೂ ಅದರೊಳಗೆ ಬುಲೆಟ್‌ಗಳನ್ನಿಟ್ಟ ಮಗನೇ ಕೊಲೆಗೆ ಕಾರಣ ಹಾಗೂ ಅವನೇ ಅಪರಾಧಿ ಎಂಬ ನಿರ್ಧಾರಕ್ಕೆ ಬರಲಾಯಿತು.

ನಿಜವಾದ ಕ್ಲೈಮಾಕ್ಸ್ ಈಗ…

ತನಿಖೆಯನ್ನು ಮುಂದುವರಿಸಿದಾಗ ಗೊತ್ತಾಗಿದ್ದೇನೆಂದರೆ – ಈ ದಂಪತಿ ಪುತ್ರನೇ ಡೋನಾಲ್ಡ್ ಓಪಸ್! ಆತನಿಗೆ ತನ್ನ ಮಲತಾಯಿಯನ್ನು ಕಂಡರೆ ಆಗುತ್ತಿರಲಿಲ್ಲ. ಆಕೆಯ ಕಾಟದಿಂದ ಬೇಸತ್ತು, ಹತಾಶನಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ಚೀಟಿ ಬರೆದಿಟ್ಟು ಹತ್ತನೇ ಮಹಡಿಯಿಂದ ಜಿಗಿದ. ಆದರೆ ಎಂಟನೆ ಮಹಡಿಯಿಂದ ತೂರಿ ಬಂದ ಗುಂಡಿನಿಂದ ಸತ್ತ. ಗುಂಡು ತೂರಿ ಬರಲು ಅವನೇ ಕಾರಣ ಎಂದು ಆಗಲೇ ತನಿಖೆಯಿಂದ ದೃಢಪಟ್ಟಿತ್ತು ತಾನೆ?
ಅಂದರೆ ಡೋನಾಲ್ಡ್ ಓಪಸ್‌ನನ್ನು ಕೊಂದವನು ಡೋನಾಲ್ಡ್ ಓಪಸ್‌ನೇ. ಇದೊಂದು ಆತ್ಮಹತ್ಯೆ ಎಂದು ತೀರ್ಮಾನಿಸಿ ಕೇಸನ್ನು ಮುಗಿಸಲಾಯಿತು.
ರಾಮ್ ಗೋಪಾಲ್ ವರ್ಮನಿಗೆ ಈ ಕತೆ ಹೇಳಿದರೆ ಒಂದು ಸಿನಿಮಾ ಗ್ಯಾರಂಟಿ. ಅದನ್ನು ನಮ್ಮ ಗಾಂಧಿನಗರದ ಮಂದಿ ರಿಮೇಕ್ ಮಾಡೋದೂ ಗ್ಯಾರಂಟಿ.

*****

ರಾಜ್ಯದ ಸಚಿವರ ಬಗ್ಗೆ ಮೋದಿ ಗರಂ

ಪ್ರಧಾನಿ ನರೇಂದ್ರ ಮೋದಿ ಕುರಿತು ಜೋಕುಗಳು ಬರುವಂತಾಗಿದೆ. ಅವರು ಅಧಿಕಾರಕ್ಕೆ ಬಂದು ನೂರೈವತ್ತು ದಿನಗಳಾದವು. ಆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದ ಮೂವರು ಕೇಂದ್ರ ಮಂತ್ರಿಗಳನ್ನು ಕರೆದು, ‘ಪ್ರಧಾನಿ ಮೋದಿಯವರು ನನ್ನನ್ನು ಕರೆಯಿಸಿಕೊಂಡು, ನಿಮ್ಮ ಬಗ್ಗೆ ಬಹಳ ಕಂಪ್ಲೇನ್ ಮಾಡಿದರು. ನೀವೆಂಥ ಕೆಲಸ ಮಾಡಿದಿರಿ? ಛೆ…ಛೆ!! ಎಂದು ಹೇಳಿದರು. ಅದಕ್ಕೆ ಮೂವರೂ ಮಂತ್ರಿಗಳು ‘ನಾವಾ? ನಾವೇನೂ ಮಾಡಿಲ್ಲ. ದಯವಿಟ್ಟು ನಂಬಿ’ ಎಂದು ಅಂಗಲಾಚಿದರು. ಅದಕ್ಕೆ ಅಮಿತ್ ಶಾ ಹೇಳಿದ್ದು-‘ಅದಕ್ಕೇ. ನೀವೇನೂ ಮಾಡಿಲ್ಲ ಎಂದೇ ಕಂಪ್ಲೇನ್ ಮಾಡಿದರು.’ ಮೂವರೂ ಮುಖ ಮುಖ ನೋಡಿಕೊಂಡು ತಲೆತಗ್ಗಿಸಿದರು.

ಹೆಸರು ಬದಲಾದಾಗ…

ಪಾಕಿಸ್ತಾನದ ಹುಡುಗನೊಬ್ಬ ಅಮೆರಿಕದ ಶಾಲೆಗೆ ಸೇರಿಕೊಂಡ. ತರಗತಿಗಳು ಆರಂಭವಾದವು. ಮೊದಲ ದಿನ, ಅಧ್ಯಾಪಕರು ಅವನನ್ನು ಕೇಳಿದರು: ನಿನ್ನ ಹೆಸರೇನು?

ಬಾಲಕ: ಸರ್, ನಾನು ನಾದಿರ್. ಪಾಕಿಸ್ತಾನದಿಂದ ಬಂದಿದೀನಿ.

ಪಾಕಿಸ್ತಾನಿ ಎಂದರೆ ಸಾಕು; ಆತ ಭಯೋತ್ಪಾದಕನೇ ಇರಬೇಕು ಎಂದು ನೋಡುವ ರಾಷ್ಟ್ರ ಅಮೆರಿಕ. ಅದನ್ನು ನೆನಪಿಸಿಕೊಂಡ ಅಧ್ಯಾಪಕರು- ಮುಸ್ಲಿಂ ಹೆಸರಿಟ್ಟುಕೊಂಡರೆ ಅಮೆರಿಕದಲ್ಲಿ ಏನೇನೆಲ್ಲಾ ತೊಂದರೆಗಳು ಎದುರಾಗಬಹುದು ಎಂಬುದನ್ನು ಅರ್ಧ ಗಂಟೆ ವಿವರಿಸಿದರು. ನಂತರ -‘ನೋಡೂ, ಇವತ್ತಿನಿಂದ ನಿನ್ನ ಹೆಸರು ನಾದಿರ್ ಅಲ್ಲ. ಈ ಕ್ಷಣದಿಂದಲೇ ನಿನಗೆ ಜಾನಿ ಎಂದು ನಾಮಕರಣ ಮಾಡಲಾಗಿದೆ. ಅರ್ಥವಾಯ್ತಾ?’ ಎಂದರು.

ಗುರುಗಳ ಮಾತಿಗೆ ಎದುರಾಡುವುದುಂಟೆ? ಆ ಹುಡುಗ ತಕ್ಷಣದಿಂದಲೇ ಹೆಸರು ಬದಲಿಸಿಕೊಂಡ.

ಶಾಲೆಯಿಂದ ಮನೆಗೆ ಬಂದ ಮಗನನ್ನು ಕಂಡು ಅಮ್ಮ ಕೇಳಿದಳು: ನಾದಿರ್, ಯಾಕಿಷ್ಟು ಲೇಟು?

ಈ ಹುಡುಗ ತಕ್ಷಣವೇ -‘ಅಮ್ಮಾ, ನೆನಪಿಟ್ಟುಕೋ. ನಾನೀಗ, ಅಮೆರಿಕನ್. ನನ್ನ ಹೆಸರು ಜಾನಿ. ನೀವು ನನ್ನನ್ನು ಜಾನಿ ಎಂದೇ ಕರೆಯಬೇಕು’ ಎಂದುಬಿಟ್ಟ.
ಮಗನ ಉದ್ಧಟತನವನ್ನು ಕಂಡು ತಾಯಿಗೆ ಸಿಟ್ಟು ಬಂತು. ಆಕೆ ತಕ್ಷಣವೇ ನಡೆದಿದ್ದನ್ನೆಲ್ಲ ಗಂಡನಿಗೆ ವರದಿ ಮಾಡಿದಳು. ಎದುರು ಬಂದ ಅಪ್ಪ-‘ನಾದಿರ್, ಏನೋ ಇದೆಲ್ಲಾ ರಗಳೆ…’ ಎನ್ನುತ್ತಿದ್ದಂತೆಯೇ ಈ ಹುಡುಗ- ‘ನಾನೀಗ ಅಮೆರಿಕನ್. ನನ್ನ ಹೆಸರು ಜಾನಿ’ಎಂದ.

ಮಗನ ಉದ್ಧಟತನ ಕಂಡು ಹೆತ್ತವರಿಗೆ ವಿಪರೀತ ಸಿಟ್ಟು ಬಂತು. ಇಬ್ಬರೂ ಸೇರಿಕೊಂಡು ಮಗನಿಗೆ ಚೆನ್ನಾಗಿ ಬಾರಿಸಿದರು.

ಮರುದಿನ ಕುಂಟುತ್ತಾ ಬಂದ ಹುಡುಗನನ್ನು ಕಂಡು ಅಧ್ಯಾಪಕರು ಕೇಳಿದರು: ‘ಜಾನಿ, ಯಾಕೆ ಕುಂಟುತ್ತಾ ಇದ್ದೀಯಲ್ಲ , ಏನಾಯ್ತು?’

ಆ ಹುಡುಗ ಹೇಳಿದ: ‘ಸಾರ್, ನಾನು ಅಮೆರಿಕನ್ ಆಗಿ ಬದಲಾದೆನಲ್ಲ, ಆನಂತರದ ೬ ಗಂಟೆಯೊಳಗೆ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ನನ್ನ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಿದರು!’

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.