ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಇವರೇಕೆ ನಮ್ಮ ನಾಯಕರೆನಿಸೊಲ್ಲ?

ರಾಜಕೀಯ ನಾಯಕರು, ಮಹಾನ್ ನಾಯಕರು, ಜಾಗತಿಕ ಧುರೀಣರು, ವಿಜ್ಞಾನಿಗಳು ಮುಂತಾದವರ ಭಾಷಣಗಳನ್ನು ಕೇಳುವುದೆಂದರೆ ಬಹಳ ಇಷ್ಟ. ರಾಜಕಾರಣಿಗಳ ಮಾತಿಗೂ, ವಿಜ್ಞಾನಿಗಳ ಮಾತಿಗೂ ಬಹಳ ಅಂತರ. ವಿಜ್ಞಾನಿಗಳು ಮೂಲತಃ ಭಾಷಣಕಾರರಲ್ಲ. ಅವರಿಗೂ ಭಾಷಣಕ್ಕೂ ಅಷ್ಟಕ್ಕಷ್ಟೆ. ಅಂಥವರು ಮಾತಿಗೆ ಎದ್ದು ನಿಂತರೆ ಕುತೂಹಲ ಮೂಡುವುದು ಸಹಜ.

ಸುಮಾರು ಏಳು ವರ್ಷಗಳ ಹಿಂದೆ (2005) ಖ್ಯಾತ ಕೃಷಿ ವಿಜ್ಞಾನಿ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಡಾ.ನಾರ್ಮನ್ ಇ. ಬೊರ್ಲಾಗ್ ಭಾರತಕ್ಕೆ ಬಂದಿದ್ದರು. ಭಾರತದ ಹಸಿರು ಕ್ರಾಂತಿಗೆ ಕಾರಣರಾದ ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಹೆಸರಿನಲ್ಲಿ ಕೊಡುವ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ಅವರು ಬಂದಿದ್ದರು. ಅಂದು ಡಾ. ಬೊರ್ಲಾಗ್ ಮಾಡಿದ ಭಾಷಣವನ್ನು ಇತ್ತೀಚೆಗೆ ಓದುವ ಮತ್ತು ಕೇಳುವ ಅವಕಾಶ ಸಿಕ್ಕಿತು.

ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ. ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ, ಪ್ರಧಾನಿ ಡಾ. ಮನಮೋಹನ್ ಸಿಂಗ್, ಅವರ ಸಂಪುಟದ ಸಹೋದ್ಯೋಗಿಗಳು ಮತ್ತು ಗಣ್ಯರು ಭಾಗವಹಿಸಿದ್ದ ಅಪರೂಪದ ಸಮಾರಂಭವದು. ಡಾ.ಬೊರ್ಲಾಗ್್ರಿಗೆ ತೊಂಬತ್ತೊಂದು ವರ್ಷ. ಬತ್ತದ ಉತ್ಸಾಹ, ಕ್ರಿಯಾಶೀಲ ಶರೀರ. ವೇದಿಕೆಯ ಮೇಲಿದ್ದ ಗಣ್ಯರೆಲ್ಲ ಡಾ. ಬೊರ್ಲಾಗ್ ಅವರನ್ನು ಮನಸೋ ಇಚ್ಛೆ ಹೊಗಳಿದರು.

ಆದರೆ ಅಂದು ಎಲ್ಲರಿಗೂ ಕುತೂಹಲವಿದ್ದದ್ದು ಡಾ. ಬೊರ್ಲಾಗ್ ಏನು ಮಾತಾಡಬಹುದು ಎಂಬುದರಲ್ಲಿ.

ಡಾ. ಬೊರ್ಲಾಗ್ ಎದ್ದು ಮೈಕಿನ ಮುಂದೆ ನಿಂತರು. ಇನ್ನೂ ಒಂದೂ ಮಾತಾಡಿಲ್ಲ, ಆಗಲೇ ದೀರ್ಘ ಕರತಾಡನ!

‘ಭಾರತ ಕೃಷಿ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಅಸಾಮಾನ್ಯವಾದುದು. ನೂರು ಕೋಟಿ ಜನರಿಗೆ ತುತ್ತು ನೀಡುವುದು ಸಣ್ಣ ಮಾತಲ್ಲ. ವಿಶ್ವದಲ್ಲಿ ಇಂಥ ಸಾಧನೆ ಮಾಡಿದ ಕೆಲವೇ ಕೆಲವು ದೇಶಗಳಲ್ಲಿ ಭಾರತ ಅಂಗ್ರಪಂಕ್ತಿ ದೇಶ.’ ಎಂದಾಗ ದೀರ್ಘ ಕರತಾಡನ.

ಡಾ. ಬೊರ್ಲಾಗ್್ಅಂದು ಶ್ರೇಷ್ಠಚಿಂತಕ, ರಾಜಕಾರಣಿ ಸಿ.ಸುಬ್ರಮಣ್ಯಂ ಮತ್ತು ಡಾ.ಎಂ.ಎಸ್. ಸ್ವಾಮಿನಾಥನ್ ಅವರು ಭಾರತದ ಪ್ರಥಮ ಹಸಿರು ಕ್ರಾಂತಿಗೆ ಕಾರಣರಾದ ಬಗೆ, ಅವರ ಅಪರಿಮಿತ ಕೊಡುಗೆಯನ್ನು ಸಾದ್ಯಂತವಾಗಿ ವಿವರಿಸಿದರು. ಈ ಮಾತನ್ನು ಬೇರೆಯವರು ಹೇಳಿದ್ದರೆ ಆ ಮಾತು ಶುಷ್ಕವಾಗುವ ಅಪಾಯವಿತ್ತು. ಆದರೆ ಅದೇ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿದ ಮತ್ತೊಬ್ಬ ಸಾಧಕ ಮುಕ್ತಕಂಠದಿಂದ ಪ್ರಶಂಸಿಸಿದಾಗ ಅದರ ಮಹತ್ವ ಮತ್ತಷ್ಟು ಹೆಚ್ಚುತ್ತದೆ.

ನನಗೆ ಅಂದು ಡಾ. ಬೊರ್ಲಾಗ್ ಬಗ್ಗೆ ಅತೀವ ಅಭಿಮಾನ ಮೂಡಲು ಕಾರಣವಾದ ಬೇರೊಂದು ಸಂಗತಿಯಿತ್ತು. ಸಭಿಕರ ಸಾಲಿನಲ್ಲಿ ಕುಳಿತಿದ್ದ ನಾಲ್ಕೈದು ವಿಜ್ಞಾನಿಗಳನ್ನು ಅವರು ಗುರುತಿಸಿದರು. ಆ ಪೈಕಿ ಗೋಧಿ ಪರಿಣತರಾದ ಡಾ.ರಾಜಾರಾಮ್, ಖ್ಯಾತ ಜೋಳದ ವಿಜ್ಞಾನಿ ಡಾ.ಎಸ್.ಕೆ.ವಾಸಲ್ ಮತ್ತು ಖ್ಯಾತ ಬೀಜ ವಿಜ್ಞಾನಿ ಡಾ.ಬಿ.ಆರ್.ಬರ್ವಾಳೆ ಅವರನ್ನು ಡಾ. ಬೊರ್ಲಾಗ್ ಸಭೆಗೆ ಪರಿಚಯಿಸಿದರು. ಆಗ ಇಡೀ ಸಭೆ ಎದ್ದು ನಿಂತು ಚಪಾಳೆ ತಟ್ಟಿತು.

‘ಇವರು ನಿಮ್ಮ ದೇಶದ ಹೀರೋಗಳು. ಇವರ ಶ್ರಮದ ಫಲವಾಗಿ ಭಾರತ ಇಂದು ಕೃಷಿಯಲ್ಲಿ ಅಸಾಧಾರಣ ಸಾಧನೆ ಮಾಡಿದೆ. ಯಾವ ದೇಶದಲ್ಲಿ ಕೃಷಿಕರಿಗೆ ಮಾನ್ಯತೆ ಸಿಗುವುದಿಲ್ಲವೋ ಆ ದೇಶ ಉದ್ಧಾರವಾಗಲು ಸಾಧ್ಯವೇ ಇಲ್ಲ. ಕೃಷಿ ವಿಜ್ಞಾನಿಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೆಲಸ ಮಾಡುವವರು. ಇದಕ್ಕಾಗಿ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ. ಇಂಥವರ ಸೇವೆಯನ್ನು ಸಮಾಜ ಮರೆಯಬಾರದು’ ಎಂದು ಡಾ. ಬೊರ್ಲಾಗ್ ಹೇಳಿದಾಗ ಇಡೀ ಸಭೆಯೇ ನಿಬ್ಬೆರಗಾಗಿತ್ತು.

ಈ ಸಭೆಯ ನಂತರ ರಾಷ್ಟ್ರಪತಿ ಡಾ.ಕಲಾಂ ಹೇಳುತ್ತಾರೆ – “ಸಾರ್ವಜನಿಕ ಸಮಾರಂಭದಲ್ಲಿ ವಿಜ್ಞಾನಿಗಳ ಸಾಧನೆಗೆ ಜನ ಎದ್ದು ನಿಂತು ಚಪ್ಪಾಳೆ ತಟ್ಟಿದ್ದನ್ನು ನಾನಂತೂ ನೋಡಿಲ್ಲ. ಯಾವ ದೇಶದಲ್ಲಿ ಕೃಷಿ ವಿಜ್ಞಾನಿಗಳಿಗೆ ಆದ್ಯತೆ ಸಿಗುವುದಿಲ್ಲವೋ ಆ ದೇಶದಲ್ಲಿ ಹಸಿವು ನೀಗುವುದಿಲ್ಲ.’

ಈ ಮಾತನ್ನು ಹೇಳುವಾಗ ಎರಡು ದಿನಗಳ ಹಿಂದೆ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಪ್ರೊ . ಯು. ಆರ್. ರಾವ್ ಹೇಳಿದ ಮಾತು ನೆನಪಿಸಿಕೊಳ್ಳಬಹುದು-”ದೇಶದಲ್ಲಿ ಕ್ರಿಕೆಟ್ಟಿಗರಿಗೆ ಮತ್ತು ಸಿನಿಮಾ ನಟ, ನಟಿಯರಿಗೆ ಸಿಗುತ್ತಿರುವಷ್ಟು ಮನ್ನಣೆ ವಿಜ್ಞಾನಿಗಳಿಗೆ ಸಿಗುತ್ತಿಲ್ಲ. ಸಿನಿಮಾ ನಟರು ಮತ್ತು ಕ್ರಿಕೆಟ್ಟಿಗರಷ್ಟೇ ವಿಜ್ಞಾನಿಗಳು ಸಹ ಪ್ರಮುಖರು ಎಂಬುದನ್ನು ಮನಗಾಣದಿದ್ದರೆ, ನಾವು ಅದಕ್ಕೆ ಬಹಳ ಬೆಲೆ ತೆರಬೇಕಾಗುತ್ತದೆ.’
ಅಂದು ಡಾ. ಬೊರ್ಲಾಗ್್ಗೆ ಅನಿಸಿದ್ದು ನಮಗೆ ಇನ್ನೂ ಅನಿಸುತ್ತಿಲ್ಲವಲ್ಲ, ಅದೇ ವ್ಯಥೆ!

…………..

ಆಕಾಶ ನೋಡಿ ಏನನಿಸುತ್ತೆ?

ಶೆರ್ಲಾಕ್ ಹೋಮ್ಸ್ ಎಂಬ ಪತ್ತೇದಾರಿ ಪಾತ್ರವನ್ನು ನೀವು ಕೇಳಿಯೇ ಇರುತ್ತೀರಿ. ಅಂದಮೇಲೆ ಆತನ ಜೊತೆಗೆ ಕಾಣಿಸಿಕೊಳ್ಳುವ ಡಾಕ್ಟರ್ ವ್ಯಾಟ್ಸನ್ ಎಂಬ ಪಾತ್ರದ ಬಗ್ಗೆಯೂ ತಿಳಿದಿರುತ್ತದೆ.

ಈ ಎರಡು ಪಾತ್ರಗಳ ಸುತ್ತ ಹೆಣೆದ ಒಂದು ಮಜದ ಪ್ರಸಂಗವಿದೆ. ಇದನ್ನೊಂದು ತಮಾಷೆಯ ಘಟನೆಯಾಗಿ ಓದಿಕೊಳ್ಳಬಹುದು. ಆದರೆ ಪತ್ತೇದಾರ ಎಂದರೆ ಆತನಿಗಿರಬೇಕಾದ ಅರ್ಹತೆ ಹಾಗೂ ಗ್ರಹಿಕೆಯ ಗುಣಗಳನ್ನೂ ಇದು ಸೂಕ್ಷ್ಮವಾಗಿ ತಿಳಿಸುತ್ತದೆ.

ಶೆರ್ಲಾಕ್ ಮತ್ತು ವ್ಯಾಟ್ಸನ್ ಒಮ್ಮೆ ಕಾಡಿಗೆ ಪ್ರವಾಸ ಹೋಗಿದ್ದರು. ಆ ರಾತ್ರಿ ಅಲ್ಲೇ ಬಿಡಾರ ಹೂಡಿದರು. ಕುಡಿವ-ತಿನ್ನುವ ಕಾರ್ಯಗಳು ಮುಗಿದ ಮೇಲೆ ಇಬ್ಬರನ್ನೂ ನಿದ್ದೆ ಆವರಿಸಿತು. ಮಧ್ಯರಾತ್ರಿ ಶೆರ್ಲಾಕ್್ಗೆ ಎಚ್ಚರವಾಯಿತು. ತಟ್ಟನೆ ಪಕ್ಕದಲ್ಲಿದ್ದ ವ್ಯಾಟ್ಸನ್್ನನ್ನು ಬಡಿದೆಬ್ಬಿಸಿದ ಆತ,”ಹೇಯ್.. ಆಕಾಶ ನೋಡುತ್ತಿದ್ದರೆ ನಿನಗೇನನಿಸುತ್ತೆ’ ಅಂತ ಕೇಳಿದ.

ಕ್ಷಣ ಸಾವರಿಸಿಕೊಂಡು ಎಚ್ಚರದ ಜಗತ್ತಿಗೆ ಬಂದ ವ್ಯಾಟ್ಸನ್ ಮಾತಿಗಿಳಿದ-”ಖಗೋಳಶಾಸ್ತ್ರದ ಪ್ರಕಾರ ಹೇಳಬೇಕಾದರೆ ಅಲ್ಲಿ ಲಕ್ಷಾಂತರ ಗ್ಯಾಲಕ್ಸಿಗಳಿವೆ. ಇವಕ್ಕೂ ಮಿಕ್ಕಿದ ಗ್ರಹಗಳನ್ನು ಅದು ಹೊಂದಿದೆ. ಬಹುಶಃ ಈಗ ತಡರಾತ್ರಿ ಮೂರುವರೆ ಗಂಟೆ ಇದ್ದಿರಬಹುದು. ತಾತ್ವಿಕವಾಗಿ ಹೇಳಬೇಕೆಂದರೆ, ಇಷ್ಟೆಲ್ಲ ನಕ್ಷತ್ರಗಳು- ಬೆಳದಿಂಗಳ ಪ್ರಪಂಚವನ್ನು ಸೃಷ್ಟಿಸಿದ ಆ ದೇವರು ಎಷ್ಟು ದೊಡ್ಡವನು ಹಾಗೂ ನಾವೆಲ್ಲ ಅವನ ಮುಂದೆ ತೃಣ ಸಮಾನರು ಎಂಬ ಅಂಶ ಗೊತ್ತಾಗುತ್ತದೆ. ಹವಾಮಾನ ನೋಡಿ ಹೇಳಬಹುದಾದರೆ, ನಾಳಿನ ದಿನ ಶುಭ್ರವಾಗಿರಲಿದೆ ಎನಿಸುತ್ತಿದೆ… ಹೌದು, ನಿನಗೇನನಿಸುತ್ತೆ ಶೆರ್ಲಾಕ್?’

‘ಯಾವನೋ ಐನಾತಿ ನಮ್ಮ ಬಿಡಾರ ಕಿತ್ತುಕೊಂಡು ಹೋಗಿದ್ದಾನೆ ಅಂತ ತಿಳೀತಿದೆ’- ಶೆರ್ಲಾಕ್ ಗುಡುಗಿದ!

………

ಎರಡು ತಮಾಷೆ

ಆತ- ಪ್ರಿಯೆ. ನಿಜ ಹೇಳು. ನೀನು ಪ್ರೀತಿಸಿದ ಮೊದಲ ವ್ಯಕ್ತಿ ನಾನೇನಾ?

ಈಕೆ- ಹೌದು ಪ್ರಿಯ…ಆದರೆ ನನಗೆ ಅರ್ಥವಾಗದ ಸಂಗತಿ ಅಂದ್ರೆ, ಏಕೆ ಎಲ್ಲಾ ಗಂಡಸರೂ ನನಗೆ ಈ ಪ್ರಶ್ನೆ ಕೇಳ್ತಾರೆ?

……………

ಕೈಯಲ್ಲಿ ಗನ್ ಹಿಡಿದ ಮುಸುಕುಧಾರಿಯೊಬ್ಬ ಅಂಗಡಿಯನ್ನು ಪ್ರವೇಶಿಸಿದ. ಗಲ್ಲಾಪೆಟ್ಟಿಗೆಯಲ್ಲಿ ಕುಳಿತವನ ತಲೆಗೆ ಬಂದೂಕು ಹಿಡಿದು ಅಷ್ಟೂ ನಗದನ್ನು ಚೀಲಕ್ಕೆ ತುಂಬಿಕೊಡುವಂತೆ ಅಬ್ಬರಿಸಿದ. ಬೇರೆ ಆಯ್ಕೆ ಇಲ್ಲದೇ ಆತ ಹಣವನ್ನೆಲ್ಲ ಬಾಚಿಕೊಟ್ಟ. ಇನ್ನೇನು ಅದನ್ನು ಹೆಗಲಿಗೇರಿಸಿಕೊಂಡು ಹೊರನಡೆಯಬೇಕು, ಆಗ ಆತನಿಗೆ ಅಂಗಡಿಯಾತನ ಹಿಂದಿದ್ದ ಸ್ಕಾಚ್ ಬಾಟಲ್ ಕಾಣಿಸಿತು. ಅದನ್ನೂ ಬ್ಯಾಗ್್ಗೆ ಹಾಕಿಕೊಡುವಂತೆ ಅಬ್ಬರಿಸಿದ. ಈ ಬಾರಿ ಮಾತ್ರ ಅಂಗಡಿಯವ ಜಗ್ಗಲಿಲ್ಲ.”ಕೊಡುವುದಕ್ಕೇನೂ ಅಡ್ಡಿ ಇಲ್ಲ, ಆದರೆ ನಿನಗೆ 18 ವರ್ಷಗಳಾಗಿಲ್ಲ ಅಂತ ನನ್ನ ನಂಬಿಕೆ. ಹಾಗಾಗಿ ಕೊಡಲಾಗುವುದಿಲ್ಲ.’

ಇಲ್ಲ, ನನಗೆ 18 ವರ್ಷವಾಗಿದೆ ಎಂದು ಮುಸುಕುಧಾರಿ ಕೂಗಿದರೂ ಈತ ಈ ವಿಷಯದಲ್ಲಿ ಮಾತ್ರ ತಾನು ಆದರ್ಶ ಪಾಲಿಸುತ್ತೇನೆ, ಕಡಿಮೆ ವಯಸ್ಸಿನವರಿಗೆ ಮದ್ಯ ನೀಡಲಾರೆ ಎಂದ. ಕಳ್ಳನಿಗೆ ರೋಸಿ ಹೋಗಿ ಕಿಸೆಯಿಂದ ಡ್ರೈವಿಂಗ್ ಲೈಸೆನ್ಸ್ ತೆಗೆದು ತೋರಿಸಿ,”ನೋಡು, 18 ದಾಟಿದೆ. ಕೊಡು ಈಗ’ ಎಂದ. ಅಂಗಡಿಯಾತ ಅದನ್ನೊಮ್ಮೆ ಪರಿಶೀಲಿಸಿ ಸ್ಕಾಚ್ ಬಾಟಲಿಯನ್ನು ಕೊಟ್ಟು ನಿರ್ಭಾವುಕನಾಗಿ ಆತ ಹೊರ ಹೋಗುವುದನ್ನೇ ಕಾಯ್ದ. ನಂತರ ಪೊಲೀಸರಿಗೆ ಫೋನು ಹಚ್ಚಿ ಹೆಸರು-ವಿಳಾಸ ಒಪ್ಪಿಸಿದ. ಎರಡೇ ಗಂಟೆಗಳಲ್ಲಿ ಕಳ್ಳ ಸಿಕ್ಕಿದ್ದ.

…………

ಪೆನ್ಸಿಲ್-ರಬ್ಬರ್, ಪೋಷಕರು-ಮಕ್ಕಳು

ಅದೊಂದು ಶಾಲೆ. ವಿದ್ಯಾರ್ಥಿಯೊಬ್ಬ ಜಾಮಿಟ್ರಿ ಬಾಕ್ಸ್ ತೆರೆದಿಟ್ಟು ಹೊರಗೆ ಹೋಗಿದ್ದ. ಆಗ ರಬ್ಬರ್್ನ ಹತ್ತಿರ ಬಂದ ಪೆನ್ಸಿಲ್ ಹೇಳಿತು:”ದಯವಿಟ್ಟು ಕ್ಷಮಿಸಿ…’

ರಬ್ಬರ್ ಅಚ್ಚರಿಯಿಂದ ಕೇಳಿತು: ನಿನ್ನಿಂದ ಯಾವ ತಪ್ಪು ಆಗಿಲ್ಲವಲ್ಲ, ಹಾಗಿರುವಾಗ”ಸಾರಿ’ ಅನ್ನುವುದೇಕೆ?’
‘ಯಾಕೆ ಅಂದರೆ ನಾನು ಹಾಳೆಯ ಮೇಲೆ ತಪ್ಪಾದ ಅಕ್ಷರಗಳನ್ನು ಮೂಡಿಸಿದಾಗೆಲ್ಲ ಆ ಹುಡುಗ ನಿನ್ನನ್ನು ಕೈಗೆತ್ತಿಕೊಂಡು ಉಜ್ಜ ತೊಡಗುತ್ತಾನೆ. ಆಗ ನನ್ನ ತಪ್ಪುಗಳೇನೋ ಅಳಿಸಿ ಹೋಗುತ್ತದೆ. ಆದರೆ ಅದಕ್ಕಾಗಿ ನಿನ್ನ ದೇಹ ಇಷ್ಟಿಷ್ಟೇ ಸವೆಯುತ್ತಾ ಹೋಗುತ್ತದೆ. ಕಡೆಗೊಂದು ದಿನ ಬದುಕೇ ಮುಗಿದು ಹೋಗುತ್ತದೆ. ನಿನ್ನ ತ್ಯಾಗ ಕಂಡಾಗಲೆಲ್ಲಾ ನನಗೆ ಅಯ್ಯೋ ಅನಿಸುತ್ತದೆ’ ಎಂದಿತು ಪೆನ್ಸಿಲ್.

‘ನನ್ನನ್ನು ಸೃಷ್ಟಿಸಿರುವುದೇ ತಪ್ಪು ಅಕ್ಷರಗಳನ್ನು ಅಳಿಸಲೆಂದು, ಹಾಗಾಗಿ ನನ್ನ ಕೆಲಸವನ್ನು ನಾನು ಮಾಡಲೇಬೇಕು. ಹೊಣೆ ನಿಭಾಯಿಸಿದೆನೆಂಬ ಆತ್ಮತೃಪ್ತಿಯಂತೂ ನನ್ನ ಪಾಲಿಗಿದೆ’ ಎಂದಿತು ರಬ್ಬರ್.
ಪೆನ್ಸಿಲ್-ರಬ್ಬರ್್ಗಳೂ ಮಾತಾಡಿಕೊಂಡವೆ ಎಂಬ ತಮಾಷೆಯನ್ನು ಪಕ್ಕಕ್ಕಿಟ್ಟು ಯೋಚಿಸೋಣ. ಪೆನ್ಸಿಲ್ ಇದೆಯೆಲ್ಲ, ಅದು ಮಕ್ಕಳನ್ನು ಸಂಕೇತಿಸುತ್ತದೆ. ರಬ್ಬರ್-ತಂದೆ-ತಾಯಿಗಳನ್ನು ಸಂಕೇತಿಸುತ್ತದೆ! ಈಗ ಹುಷಾರಾಗಿ ಕೇಳಿಸಿಕೊಳ್ಳಿ. ಮಕ್ಕಳು ಬದುಕಿನುದ್ದಕ್ಕೂ ಒಂದೊಂದೇ ತಪ್ಪು ಮಾಡುತ್ತಾ ಹೋಗುತ್ತಾರೆ. ತಾಯ್ತಂದೆಯರು ಅದನ್ನೆಲ್ಲ ತಿದ್ದುತ್ತಲೇ ಬದುಕು ಸವೆಸುತ್ತಾರೆ. ಹೀಗೆ ತಪ್ಪು ತಿದ್ದುವ ಸಂದರ್ಭದಲ್ಲಿ ಎಷ್ಟೋ ಬಾರಿ ಅವರಿಗೆ ಅವಮಾನವಾಗುತ್ತದೆ. ನೋವಾಗುತ್ತದೆ. ಆದರೆ ಅದಕ್ಕೆಲ್ಲಾ ಆ ಹಿರಿಯ ಜೀವಗಳು ಬೇಸರ ಮಾಡಿಕೊಳ್ಳುವುದಿಲ್ಲ. ಮಕ್ಕಳನ್ನು ತಿದ್ದುವ ಸಂದರ್ಭದಲ್ಲೇ ಸಾವು ಬಂದು ಬಿಟ್ಟರೆ, ಅದಕ್ಕಾಗಿ ವ್ಯಥೆ ಪಡುವುದಿಲ್ಲ. ಬದಲಿಗೆ, ಈವರೆಗಿನ ಹೊಣೆಯನ್ನು ಚೆನ್ನಾಗಿ ನಿಭಾಯಿಸಿದ್ದೇನೆ ಎಂಬ ಸಂತೃಪ್ತಿ ಯಿಂದಲೇ ಕಣ್ಮುಚ್ಚುತ್ತಾರೆ!

ಮುಂದೆ ಯಾವುದಾದರೂ ತಪ್ಪು ಎಸಗಿದ ಸಂದರ್ಭದಲ್ಲಿ ತಪ್ಪದೇ ಪೆನ್ಸಿಲ್- ರಬ್ಬರ್್ನ ಮಾತುಕತೆ ನೆನಪಿಸಿಕೊಳ್ಳಿ. ಆನಂತರದಲ್ಲಿ ತಪ್ಪುಗಳೇ ಆಗದಂತೆ ಮನಸ್ಸು ನಿಮ್ಮನ್ನು ಕಾಪಾಡುತ್ತದೆ!

-ವಿಶ್ವೇಶ್ವರ ಭಟ್
—-

6 Comments

  1. Dear Sir,

    Its really nice… that’s why India is Not Still developed because of youths are moving their occupation form irrigation to other fields.Yours artical written on Israel Forming That has to remember in this point.How they developed tools.Still we have to develop better techniques

    Some days Before i read artical on Soichiro Honda.Can you please write about him

    Warm Regards,
    Prashanth

  2. Nice sir. We are expecting more writings like this.

  3. ಆಕಾಶ ನೋಡಿ ಏನನಿಸುತ್ತೆ?, Its one of the best Joke that impressed me very much, among Many from
    your articles.
    Thank you for sharing sir,

  4. so Nice information on Agreeculture! Hts off to you sir

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.