ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...ವೈ.ಎಂ.ಎನ್. ಮೂರ್ತಿ ಬುಲೆಟಿನ್
ಹ್ಯೂಮರ್ ಕ್ಲಬ್ ಇಂಟರ್‌ನ್ಯಾಶನಲ್‌ನ ವೈ.ಎಂ.ಎನ್. ಮೂರ್ತಿ ಖಾಸಗಿ ಪ್ರಸರಣಕ್ಕೆಂದು ಒಂದು ಬುಲೆಟಿನ್ ಹೊರಡಿಸುತ್ತಾರೆ. 1975ರಲ್ಲಿ ಸ್ಥಾಪಿಸಿದ ಈ ಕ್ಲಬ್ ಅನ್ನು ಅವರು ಇಲ್ಲಿಯ ತನಕವೂ ಬಹಳ ಆಸ್ಥೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ತಿಂಗಳ ಕೊನೆಯ ಭಾನುವಾರ ದಂದು ಸಮಾನಮನಸ್ಕ ನಗೆಪ್ರೇಮಿಗಳನ್ನು ಒಂದೆಡೆ ಸೇರಿಸಿಕೊಂಡು ನಗೆಕೂಟಗಳನ್ನು ನಿರಂತರವಾಗಿ ಸಂಘಟಿಸುತ್ತಿರುವ ಮೂರ್ತಿ ಅವರು ಸ್ವತಃ ಉತ್ತಮ ಹಾಸ್ಯಪ್ರeಯುಳ್ಳವರು ಹಾಗೂ ಸೊಗಸಾದ ಮಾತುಗಾರರು. ಅವರು ಪ್ರಕಟಿಸುತ್ತಿರುವ ಎರಡು ಪುಟಗಳ ಬುಲೆಟಿನ್ ಅನ್ನು ತಪ್ಪದೇ ಕಳಿಸಿಕೊಡುತ್ತಾರೆ. ಜತೆಯಲ್ಲಿ ಒಂದು ಸ್ಟಿಕರ್ ಇರುತ್ತದೆ. ಮೊಬೈಲ್ ಫೋನ್ ಕುರಿತು ಈ ಸಲ ತಯಾರಿಸಿದ ಸ್ಟಿಕರ್‌ನಲ್ಲಿ ಹೀಗೆ ಬರೆದಿತ್ತು- ‘Do not use mobile phone, while driving and become an immobile, while living’.
ಬೆಂಗಳೂರಿನಲ್ಲಿ ಹಲವಾರು ನಗೆಕೂಟಗಳು, ಹಾಸ್ಯೋತ್ಸವಗಳು ತಲೆಯೆತ್ತಿ, ಅಷ್ಟೇ ಬೇಗ ತಲೆಚಿಟ್ಟು ಹಿಡಿಸಿ ಕಣ್ಮರೆಯಾದರೂ ಮೂರ್ತಿ ಅವರ ಹ್ಯೂಮರ್ ಕ್ಲಬ್ ಇಂಟರ್‌ನ್ಯಾಶನಲ್ ಮಾತ್ರ ಇಂದಿಗೂ ತನ್ನ ನಗೆಕಾರಂಜಿ ಬತ್ತದಂತೆ ಉಳಿಸಿಕೊಂಡಿದೆ. ಮೂರ್ತಿಯವರು ಹಾಸ್ಯವನ್ನು ಒಂದು ವೃತ್ತಿ ಅಥವಾ ಕಮರ್ಷಿಯಲ್ ಬಳಕೆಗೆ ಬಳಸದೇ ಅದನ್ನು ಹಾಸ್ಯವನ್ನಾಗಿಯೇ ಉಳಿಸಿಕೊಂಡು, ಅದನ್ನು ಸದಭಿರುಚಿಯ ಹವ್ಯಾಸವನ್ನಾಗಿ ಸ್ವೀಕರಿಸಿರುವುದರಿಂದ ಅವರ ಸಂಘಟನೆ ತನ್ನ ಪಾವಿತ್ರ್ಯವನ್ನು ಉಳಿಸಿಕೊಂಡಿದೆ.
ಕಳೆದ ವಾರ ಮೂರ್ತಿಯವರು ಕಳಿಸಿದ ಬುಲೆಟಿನ್‌ನಲ್ಲಿ ಬರೀ ‘ಇನ್‌ಕಮ್ ಟ್ಯಾಕ್ಸ್’ಗೆ ಸಂಬಂಧಿಸಿದ ಜೋಕುಗಳಿದ್ದವು. ಆ ಪೈಕಿ ಕೆಲವು:
ಇನ್‌ಕಮ್ ಟ್ಯಾಕ್ಸ್ ಅಧಿಕಾರಿ- ನೀವು ನಗುನಗುತ್ತಾ ಟ್ಯಾಕ್ಸ್ ಕೊಡಬೇಕು.
ಯುವತಿ- ಹಾಗೆ ಕೊಡಲು ಪ್ರಯತ್ನಿಸಿದೆ. ಆದರೆ ಪ್ರತಿ ಬಾರಿ ನಿಮ್ಮವರು ಕ್ಯಾಶ್‌ನಲ್ಲೇ ಕೊಡಬೇಕು ಅಂದ್ರು.
* *
ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗೆ ಬರೆದ ಪತ್ರ- ‘ಹಿಂದಿನ ವರ್ಷದ ನನ್ನ ಆದಾಯಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿದ್ದೆ. ಹೀಗಾಗಿ ನನಗೆ ರಾತ್ರಿ ಸರಿ ನಿದ್ದೆಯೇ ಬರುತ್ತಿರಲಿಲ್ಲ. ಇದರೊಂದಿಗೆ ಐದು ಸಾವಿರ ರೂ. ಚೆಕ್ ಕಳಿಸುತ್ತಿದ್ದೇನೆ. ಇಷ್ಟಾಗಿಯೂ ಸರಿಯಾಗಿ ನಿದ್ದೆ ಬರದಿದ್ದರೆ, ಉಳಿದ ಬ್ಯಾಲೆನ್ಸ್ ಹಣವನ್ನು ಕಳಿಸಿಕೊಡುತ್ತೇನೆ.’
* *
ಇನ್‌ಕಮ್ ಟ್ಯಾಕ್ಸ್ ಅಧಿಕಾರಿ- ನಿಮ್ಮ ಆದಾಯದ ಬಗ್ಗೆ ಸುಳ್ಳು ಹೇಳಿ, ಸುಳ್ಳು ದಾಖಲೆ ನೀಡಿದರೆ ಏನಾಗುತ್ತದೆ ಎಂಬುದು ಗೊತ್ತಿದೆಯಾ? ನೀನು ಎಲ್ಲಿಗೆ ಹೋಗ್ತೀಯಾ ಗೊತ್ತಾ?
ಉದ್ದಿಮೆದಾರ- ಗೊತ್ತಿದೆ. ನಾನು ನರಕಕ್ಕೆ ಹೋಗ್ತೇನೆ.
ಇನ್‌ಕಮ್ ಟ್ಯಾಕ್ಸ್ ಅಧಿಕಾರಿ- ನಿಜ ಹೇಳಿದರೆ ಏನಾಗುತ್ತದೆ ಹೇಳು?
ಉದ್ದಿಮೆದಾರ- ಜೈಲಿಗೆ ಹೋಗ್ತೇನೆ.
* *
ಜಾರ್ಜ್ ವಾಷಿಂಗ್‌ಟನ್ ಆಗಲಿ, ಸತ್ಯ ಹರಿಶ್ಚಂದ್ರನಾಗಲಿ ತಮ್ಮ ಜೀವನದಲ್ಲಿ ಒಂದೂ ಸುಳ್ಳನ್ನು ಹೇಳಲಿಲ್ಲ. ಯಾಕೆ ಗೊತ್ತಾ? ಅವರ ಕಾಲದಲ್ಲಿ ಇನ್‌ಕಮ್ ರಿಟರ್ನ್ಸ್ ಫೈಲ್ ಮಾಡಬೇಕಿರಲಿಲ್ಲ.
* *
ಸಂತಾ ರೆಸ್ಟೊರೆಂಟ್‌ಗೆ ಹೋಗಿ ವೇಟರ್‌ಗೆ, ಒಂದು ಗ್ಲಾಸ್ ಹಾಗೂ ಲಿಂಬೇಹಣ್ಣು ತರುವಂತೆ ಹೇಳಿದ. ವೇಟರ್ ಅವನ ಮುಂದೆ ತಂದಿಟ್ಟ. ಸಂತಾ ಲಿಂಬೇಹಣ್ಣನ್ನು ಗಟ್ಟಿಯಾಗಿ ಹಿಂಡಿದ. ಅದರಿಂದ ಕಾಲುಗ್ಲಾಸು ಲಿಂಬೆ ರಸ ಬಂತು. ‘ಒಂದು ಲಿಂಬೆಯಿಂದ ಇಷ್ಟೊಂದು ರಸ ಹಿಂಡಿದೆ. ನಿಮಗೆ ಓಪನ್ ಛಾಲೆಂಜ್. ನಿಮ್ಮಲ್ಲಿ ಯಾರಾದರೂ ನನಗಿಂತ ಜಾಸ್ತಿ ರಸ ಹಿಂಡಿದರೆ ನಿಮ್ಮ ಊಟದ ಬಿಲ್ ನಾನೇ ಕೊಡ್ತೇನೆ’ ಎಂದ ಸಂತಾ.
ಆಗ ಒಬ್ಬ ಮುಂದೆ ಬಂದು ಗಟ್ಟಿಯಾಗಿ ಲಿಂಬೇಹಣ್ಣನ್ನು ಹಿಂಡಿದ. ಏನಾಶ್ಚರ್ಯ!? ಒಂದು ಇಡೀ ಗ್ಲಾಸ್ ರಸ ಬಂತು! ಸಂತಾ ಅವನನ್ನು ಆಲಂಗಿಸಿ ‘ನೀನೇನು ಕುಸ್ತಿ ಪೈಲ್ವಾನನಾ?’ ಎಂದು ಕೇಳಿದ. ಅದಕ್ಕೆ ಆ ಆಸಾಮಿ ಹೇಳಿದ- ‘ಇಲ್ಲ, ಇಲ್ಲ, ನಾನು ಇನ್‌ಕಮ್ ಟ್ಯಾಕ್ಸ್ ಆಫೀಸರ್.’
ಅನ್ನುವವರು ಅಂದುಕೊಳ್ಳಲಿ, ಆದರೆ ನೀವು ಹಾಗೇ ಇರಿ
ಹಿಂದಿನ ವಾರ ಪತ್ರಿಕೆಯ ಓದುಗರಾದ ಪುಷ್ಪಲತಾ ಎಂ.ಎಸ್. ಎಂಬುವವರು ಇ-ಮೇಲ್‌ನಲ್ಲಿ ಮದರ್ ತೆರೇಸಾ ಅವರ ಪುಟ್ಟ ಸಂದೇಶವನ್ನು ಕಳಿಸಿಕೊಟ್ಟಿದ್ದರು. ಅದು ನಿಮಗೂ ಇಷ್ಟವಾಗಬಹುದೆಂದು ಕೊಡುತ್ತಿದ್ದೇನೆ.
ಕೆಲವು ಸಲ ಜನ ಅತಾರ್ಕಿಕವಾಗಿರುತ್ತಾರೆ, ತಾವೇ ಜಗತ್ತು ಎಂದು ಭಾವಿಸಿರುತ್ತಾರೆ. ಪರವಾಗಿಲ್ಲ, ಅವರು ಹಾಗೇ ಭಾವಿಸಲಿ. ನೀವು ಹಾಗೇ ಭಾವಿಸಬೇಡಿ.
ನೀವು ದಯಾಳುವಾಗಿದ್ದರೆ, ಕರುಣೆ ತೋರಿದರೆ ಸ್ವಾರ್ಥಿ ಅಂತಾರೆ, ಏನೋ ಕುತ್ಸಿತ ಉದ್ದೇಶವಿರಬೇಕು ಅಂತ ಭಾವಿಸುತ್ತಾರೆ. ಪರವಾಗಿಲ್ಲ ಅವರು ಹಾಗೇ ಭಾವಿಸಲಿ. ನೀವು ಹಾಗೇ ಭಾವಿಸಬೇಡಿ.
ನೀವು ಗೆದ್ದಾಗ, ಯಶಸ್ವಿಯಾದಾಗ, ಹಣ-ವಶೀಲಿಯಿಂದ ಗೆದ್ದಿರಬಹುದು ಅಂತಾರೆ. ಪರವಾಗಿಲ್ಲ, ಅವರು ಹಾಗೇ ಭಾವಿಸಲಿ, ನೀವು ಹಾಗೇ ಭಾವಿಸಬೇಡಿ.
ನೀವು ಪ್ರಾಮಾಣಿಕರಾಗಿದ್ದರೆ ಜನ ನಿಮಗೆ ಮೋಸ ಮಾಡಬಹುದು. ಪರವಾಗಿಲ್ಲ, ನೀವು ಮಾತ್ರ ಪ್ರಾಮಾಣಿಕರೇ ಆಗಿರಿ.
ನೀವು ಹಲವು ವರ್ಷ ಕಟ್ಟಿದ್ದನ್ನು ಕೆಲವು ಜನ ಕ್ಷಣಮಾತ್ರದಲ್ಲಿ ಕೆಡವಬಹುದು. ಪರವಾಗಿಲ್ಲ, ಆದರೆ ನೀವು ಕಟ್ಟುವುದನ್ನು ಬಿಡಬೇಡಿ.
ನೀವು ಸಮಾಧಾನ, ನೆಮ್ಮದಿಯಿಂದ ಇದ್ದರೆ, ಕೆಲವು ಮಂದಿ ಅಸೂಯೆಪಡ ಬಹುದು, ಪರವಾಗಿಲ್ಲ ನೀವು ಮಾತ್ರ ಸಮಾಧಾನ, ನೆಮ್ಮದಿಯಿಂದಲೇ ಇರಿ.
ನೀವು ಇಂದು ಮಾಡಿದ ಉತ್ತಮ ಕಾರ್ಯವನ್ನು ಜನ ನಾಳೆ ಮರೆಯ ಬಹುದು. ಪರವಾಗಿಲ್ಲ, ನೀವು ಉತ್ತಮ ಕಾರ್ಯ ಮಾಡುವುದನ್ನು ನಿಲ್ಲಿಸಬೇಡಿ.
ಸದಾ ನಿಮ್ಮಿಂದ ಉತ್ತಮವಾದುದೇ ಬರಲಿ.
ಕೊನೆಯದಾಗಿ, ಇರುವುದೆಂದರೆ ನೀವು ಹಾಗೂ ನಿಮ್ಮ ಬದುಕು, ಹೊರತು ನೀವು ಹಾಗೂ ಟೀಕಾಕಾರರಲ್ಲ.
ಹೀಗಾದರೆ ಏನಾಗಬೇಡ?
ಎಲ್ಲ ಪತ್ರಿಕೆಗಳಿಗೂ ಒಂದು ಘೋಷವಾಕ್ಯವಿರುತ್ತದೆ ತಾನೆ? ಉದಾಹರಣೆಗೆ ನಮ್ಮ ಪತ್ರಿಕೆಯ ಘೋಷವಾಕ್ಯ- ‘ಸಮಸ್ತ ಕನ್ನಡಿಗರ ಹೆಮ್ಮೆ’. ದಿ ಟೈಮ್ಸ್ ಆಫ್ ಇಂಡಿಯಾದ್ದು truth prevail. ಎಲ್ಲ ಪತ್ರಿಕೆಗಳಿಗೂ ಇಂಥದ್ದೊಂದು ಇರಲೇಬೇಕು ಎಂಬ ನಿಯಮ ಇಲ್ಲದಿದ್ದರೂ ಇದು ಇರುತ್ತದೆ.
‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ 1897ರಿಂದಲೂ ಈ ಘೋಷವಾಕ್ಯವನ್ನು ಮುಖಪುಟದಲ್ಲಿ ಪ್ರಕಟಿಸುತ್ತಿದೆ. ಅದಕ್ಕಿಂತ ಮೊದಲು ಅದು ಸಂಪಾದಕೀಯ ಪುಟದಲ್ಲಿ ಪ್ರಕಟವಾಗುತ್ತಿತ್ತು. All the News That’s Fit to Print ಎಂಬುದು ‘ನ್ಯೂಯಾರ್ಕ್ ಟೈಮ್ಸ್’ನ ಘೋಷವಾಕ್ಯ. 1950ರ ಜೂನ್ 21ರ ಸಂಚಿಕೆಯಲ್ಲಿ ಒಂದು ವಿಚಿತ್ರವಾಗಿಬಿಟ್ಟಿತ್ತು. ಪ್ರತ್ರಿಕೆಯ ಘೋಷವಾಕ್ಯ That’s Fit to Print All the News ಎಂದು ಪ್ರಕಟವಾಗಿಬಿಟ್ಟಿತ್ತು. ಮರುದಿನ ಪತ್ರಿಕೆ ಈ ಬಗ್ಗೆ ಕ್ಷಮೆಯಾಚಿಸಿ ಅದಕ್ಕೆ ಸುದೀರ್ಘ ಸ್ಪಷ್ಟನೆ ನೀಡಿತು. ಬೇರೆ ಸಮಜಾಯಿಷಿ ನೀಡಿದ್ದರೆ ಒಪ್ಪಬಹುದಿತ್ತು. ಆದರೆ ಪತ್ರಿಕೆಯ ಘೋಷವಾಕ್ಯದಲ್ಲೇ ಎಡವಟ್ಟಾದರೆ ಏನಾಗಬೇಡ?
ಒಮ್ಮೆ ಕನ್ನಡದ ಪ್ರಮುಖ ದಿನಪತ್ರಿಕೆಯೊಂದರ ಸಂಪಾದಕರ ಹೆಸರೇ ತಪ್ಪಾಗಿ ಹಾಗೂ ಕೆಟ್ಟ ಅರ್ಥ ಕೊಡುವ ರೀತಿಯಲ್ಲಿ ಪ್ರಕಟವಾಗಿಬಿಟ್ಟಿತ್ತು. ಇಂಥ ಸಂದರ್ಭದಲ್ಲಿ ಏನೂಂತ ಸ್ಪಷ್ಟನೆ ಕೊಡೋದು? ಈ ಪ್ರಮಾದ ಹೇಗಾಯಿತು, ಅದಕ್ಕೆ ಯಾರು ಕಾರಣ ಎಂಬುದನ್ನು ಸಂಪಾದಕರು ಕೇಳಿ, ತಪ್ಪಿತಸ್ಥರಿಗೆ ಗದರಿ ಸುಮ್ಮನಾದರು.
ಮರುದಿನದಿಂದ ತಮ್ಮ ಮುದ್ರಿತ ಹೆಸರಿನ ಬದಲು ಪ್ರತ್ರಿಕೆಯ ಹೆಸರಿನ (ಮಾಸ್ಟ್ ಹೆಡ್. ಪತ್ರಕರ್ತರೂ ಸೇರಿ ಅನೇಕರು ಮಾಸ್ಟರ್‌ಹೆಡ್ ಅಂತಾರೆ) ಕೆಳಗೆ ಸಹಿ ಮಾಡಲಾರಂಭಿಸಿದರು. ಅದನ್ನು ಯಾರೂ ತಿದ್ದಲಿಕ್ಕಿಲ್ಲ ಎಂದು. ಅವರು ಆ ಪತ್ರಿಕೆಯಲ್ಲಿ ಇರುವತನಕ ಅವರ ಸಹಿ ಪ್ರಕಟವಾಗುತ್ತಿತ್ತು!
ಏ ಒನ್ ಇಲ್ಲಾಂದ್ರೆ ಏ-ಟು
ದಿವಂಗತ ಪತ್ರಕರ್ತ ವೈಯೆನ್ಕೆ ಅವರದು ಸ್ಪಾಟ್ ಜೋಕು. ಯಾರೋ ಹೇಳಿದ ಜೋಕನ್ನು ರಿಪೀಟ್ ಮಾಡಿ ಗೋಳು ಹುಯ್ದುಕೊಳ್ಳುತ್ತಿರಲಿಲ್ಲ. ಅವರ ಒಂದು ಸಾಲಿನ (ಒನ್‌ಲೈನರ್) ವಕ್ರತುಂಡೋಕ್ತಿ ಮಾದರಿಯ ಚಟಾಕಿಗಳಂತೂ ಸೊಗಸಾಗಿರು ತ್ತಿದ್ದವು.
ಒಮ್ಮೆ ಅವರ ಜತೆ ಬೇಲೂರಿಗೆ ಹೋಗಿದ್ದೆ. ಮಾರ್ಗಮಧ್ಯದಲ್ಲಿ ಹೋಟೆಲ್‌ಗೆ ಹೋಗಿ ವೇಟರ್‌ನನ್ನು ಕರೆದ ವೈಯೆನ್ಕೆ ‘ಏ ಒನ್ ಚಹ ತರಬೇಕು ಆಯ್ತಾ? ಇಲ್ಲದಿದ್ದರೆ ಏ-ಟು’ ಎಂದರು. ಅವನಿಗೆ ಅವರ ಪನ್ ಅರ್ಥವಾಗಲಿಲ್ಲ.
ಅವನೇನು ಅರ್ಥಮಾಡಿಕೊಂಡನೋ ಏನೋ, ಅಂತೂ ಚಹ ತೆಗೆದುಕೊಂಡು ಬಂದ. ವೈಯೆನ್ಕೆ ಒಂದು ಗುಟುಕು ಕುಡಿದವರೇ, ವೇಟರ್‌ನನ್ನು ಕರೆದು ‘ಚಹ ಸರಿ ಇಲ್ಲ, ಬಿಸಿಯೂ ಇಲ್ಲ’ ಎಂದರು. ವೇಟರ್ ಸುಮ್ಮನಾಗದೇ ‘ಸಾರ್, ಇದು ಡಾರ್ಜಿಲಿಂಗ್ ಟೀ ಗೊತ್ತಾ?’ ಎಂದ. ಅದಕ್ಕೆ ವೈಯೆನ್ಕೆ ಹೇಳಿದರು- ‘ಅದಕ್ಕೇ ಚಹ ಅಷ್ಟೊಂದು ತಣ್ಣಗೆ.’
YNK avara haasya prajne nijakku shlaghaniyava…