ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಹುಲಿಯ ಬಣ್ಣಕ್ಕಾಗಿ ನರಿ ಮೈ ಸುಟ್ಟುಕೊಂಡಂತೆ! (ಆಪ್ತ ಕಾಲ)

ಇಪ್ಪತ್ತೈದು ವರ್ಷದ ಗೃಹಿಣಿ. ಅತಿಯಾಗಿ ಪ್ರೀತಿಸುವ ಸುಂದರ, ಬುದ್ಧಿವಂತ ಗಂಡ. ಮುದ್ದಾದ ಮಗು. ಒಟ್ಟಿನಲ್ಲಿ ಸುಖ ಸಂಸಾರ. ಎಲ್ಲವೂ ಇದ್ದರೂ ಭವಿಷ್ಯದ ಆತಂಕ ಆರಂಭವಾಗಿದೆ. ಕಾರಣ ಯೋಚಿಸಿದರೆ ಅದು ಸಮಸ್ಯೆ ಹೌದೇ ಅಲ್ಲವೇ ಎಂಬ ಅನುಮಾನವೂ ಕಾಡಿದ್ದಿದೆ. ವಿಷಯ ಇಷ್ಟೇ. ಪತಿಯ ಆತ್ಮೀಯ ಗೆಳೆಯರೊಬ್ಬರಿದ್ದಾರೆ. ಆತ ಅಗರ್ಭ ಶ್ರೀಮಂತ, ಬ್ಯುಸಿನೆಸ್್ಮನ್. ತುಂಬಾ ಒಳ್ಳೆಯವರೇ. ಆಗಾಗ ಪಾರ್ಟಿ, ಸುತ್ತಾಟ, ವೀಕೆಂಡ್ ಎಂದು ನನ್ನವರು ಅವರ ಜತೆಯಲ್ಲಿ ಕಳೆಯುತ್ತಾರೆ. ಇಬ್ಬರ ಕುಟುಂಬದವರಾಗಿ ನಾವೂ ಉತ್ತಮ ಒಡನಾಟವನ್ನೇ ಹೊಂದಿದ್ದೇವೆ. ಸಮಸ್ಯೆ ಏನೆಂದರೆ ಅವರಿದ್ದಂತೆಯೇ ನಾವೂ ಇರಬೇಕೆಂದು ನನ್ನ ಗಂಡ ಬಯಸುತ್ತಾರೆ. ಇತ್ತೀಚೆಗೆ ಅವರ ಒಂದು ವರ್ಷದ ಮಗುವಿನ ಜನ್ಮ ದಿನವನ್ನು ಸ್ಟಾರ್ ಹೋಟೆಲ್್ವೊಂದರಲ್ಲಿ ಅದ್ಧೂರಿಯಾಗಿ ವ್ಯವಸ್ಥೆಗೊಳಿಸಲಾಗಿತ್ತು. ಲಕ್ಷಾಂತರ ರು. ಖರ್ಚು ಮಾಡಿ ವೈಭವೋಪೇತವಾಗಿ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು. ಮುಂದಿನ ತಿಂಗಳು ನನ್ನ ಮಗುವಿನ ಎರಡನೇ ವರ್ಷದ ಬರ್ತ್ ಡೇ ಇದೆ. ‘ಅದೇ ಹೋಟೆಲ್್ನಲ್ಲಿ, ಅದೇ ರೀತಿ ನಾವೂ ಆಚರಿಸೋಣ’ ಅಂತ ನನ್ನವರು ಸಿದ್ಧತೆಗೆ ತೊಡಗಿದ್ದಾರೆ. ಹಾಗೆ ಮಾಡಲು ಕನಿಷ್ಠವೆಂದರೂ ನನ್ನ ಗಂಡನ ಒಂದು ತಿಂಗಳ ಸಂಬಳ ಬೇಕು. ಎಲ್ಲ ವಿಚಾರದಲ್ಲೂ ಅವರು ಗೆಳೆಯನನ್ನೇ ಅನುಕರಿಸುತ್ತಾರೆ. ನನ್ನವರ ಇಂಥ ಮನೋಭಾವವೇ ಮುಂದುವರಿದರೆ ನಾವೆಲ್ಲಿಗೆ ಹೋಗಿ ಮುಟ್ಟುತ್ತೇವೋ ಎಂಬ ಭಯ ಕಾಡುತ್ತಿದೆ. ಇದನ್ನವರಿಗೆ ಮನವರಿಕೆ ಮಾಡಿಸುವುದು ಹೇಗೆ?
- ರಂಜಿತಾ ರಾಯ್ಕರ್, ಬೆಂಗಳೂರು

ನಿಮ್ಮ ಆತಂಕ ಸಕಾರಣದ್ದು. ಹುಲಿಯ ಬಣ್ಣಕ್ಕೆ ನರಿ ಮೈ ಸುಟ್ಟುಕೊಂಡಂತೆ ಆಗುವ ಎಲ್ಲ ಸಾಧ್ಯತೆ ನಿಮ್ಮವರ ಮನೋಭಾವದಲ್ಲಿ ಕಾಣುತ್ತಿದೆ. ಒಬ್ಬ ಉತ್ತಮ ಪತ್ನಿಯಾಗಿ, ಜವಾಬ್ದಾರಿಯುತ ಗೃಹಿಣಿಯಾಗಿ ನೀವು ಸರಿಯಾದ ದಿಕ್ಕಿನಲ್ಲೇ ಯೋಚಿಸುತ್ತಿದ್ದೀರ. ಈಗ ಸದ್ಯಕ್ಕೆ ಇದೇನು ಅಂಥ ಸಮಸ್ಯೆಯಾಗಿ ಕಾಣದಿದ್ದರೂ ಇಂಥ ಪೈಪೋಟಿಯೇ ಮುಂದೊಂದು ದಿನ ನಿಮ್ಮನ್ನು ವೃಥಾ ಸಂಕಷ್ಟಕ್ಕೆ ಸಿಲುಕಿಸುವುದರಲ್ಲಿ ಅನುಮಾನವಿಲ್ಲ. ಮೊದಲಿಗೆ ಅವರಿಬ್ಬರ ಸ್ನೇಹ ಯಾವ ರೀತಿಯದ್ದು ಎಂಬುದನ್ನು ಗಮನಿಸಿ. ನೈಜ ಪ್ರೀತಿ, ವಿಶ್ವಾಸ, ನಂಬಿಕೆಯ ಆಧಾರದಲ್ಲಿ ಅದು ಬೆಳೆದುಬಂದದ್ದೋ ಅಥವಾ ಕೇವಲ ಮೋಜು ಮಸ್ತಿಯೊಂದಿಗೆ ದೊಡ್ಡಸ್ತಿಕೆ ಮೆರೆಯಲು ಸೀಮಿತವೋ ಎಂಬುದಿಲ್ಲಿ ಮುಖ್ಯವಾಗುತ್ತದೆ. ಒಂದೊಮ್ಮೆ ಅದು ಅಂಥ ಸ್ನೇಹ ಅಲ್ಲದಿದ್ದಲ್ಲಿ, ನಿಮ್ಮ ಆಂತರ್ಯದ ಸಲಹೆ, ಕಳಕಳಿಯನ್ನು ನಿಮ್ಮ ಪತಿ ಅರ್ಥೈಸಿಕೊಂಡು ತಿದ್ದಿಕೊಳ್ಳಬಲ್ಲರು. ಅವರ ನಡುವಿನದ್ದು ಉತ್ತಮ ಬಾಂಧವ್ಯವೇ ಆಗಿದ್ದಲ್ಲಿ ಅಲ್ಲಿ ಪೈಪೋಟಿಯ ಪ್ರಶ್ನೆಯೇ ಇರುತ್ತಿರಲಿಲ್ಲ.
ನಿಮ್ಮವರು ಕೀಳರಿಮೆಯಿಂದ ಬಳಲುತ್ತಿದ್ದಾರೆ ಎನಿಸುತ್ತದೆ. ಶ್ರೀಮಂತ ಸ್ನೇಹಿತ ನೀರಿನಂತೆ ಹಣ ಚೆಲ್ಲುತ್ತಾನೆಂದು ಅನಗತ್ಯವಾಗಿ ಅವನೊಂದಿಗೆ ಪೈಪೋಟಿಗಿಳಿಯುವುದು ದುರದೃಷ್ಟಕರ ಸಂಗತಿ. ಜತೆಗೆ ನೀವು ಸುಖವಾಗಿ ಇರುವಾಗ ಅನಗತ್ಯವಾಗಿ ಅವರಂತೆಯೇ ಮಾಡಬೇಕು, ಅವರ ಹಾಗೆಯೇ ಬದುಕಬೇಕು ಎಂದು ಬಯಸುವುದರಲ್ಲಿ ಅರ್ಥವೇ ಇಲ್ಲ. ಪೈಪೋಟಿ ಬೇಕಿರುವುದು ಅವರ ಮಟ್ಟಕ್ಕೆ ನಾವು ಬೆಳೆಯಬೇಕೆಂಬುದರಲ್ಲಿಯೇ ಹೊರತು ಅವರಂತೆ ಐಷಾರಾಮಿಯಾಗಿ ಬದುಕಬೇಕೆಂಬುದರಲ್ಲಲ್ಲ. ಹೇಗೂ ಇರಲಿ. ಈ ಎಲ್ಲದರ ಬಗ್ಗೆ ನೀವು ತಿಳಿಹೇಳಲೇಬೇಕು. ಈ ಮೂರ್ಖತನದ ಬಗ್ಗೆ ಮೆದು ಮಾತಿನಲ್ಲಿ ತಿಳಿಸಿ. ಜತೆಯಾಗಿ ಕುಳಿತು ಮಾತನಾಡಿ. ‘ನೀವು ಹೇಗೇ ಇದ್ದರೂ ನಿಮ್ಮನ್ನು ಗೌರವದಿಂದ ಕಾಣುತ್ತೇನೆ, ನಿಮ್ಮ ದುಡಿಮೆ, ಬದುಕು ಇತ್ಯಾದಿ ವಿಚಾರದಲ್ಲಿ ನಾನು ತೃಪ್ತೆ’ ಎಂಬುದನ್ನು ಮನವರಿಕೆ ಮಾಡಿಕೊಡಿ. ಆಡಂಬರದ ಆಚರಣೆಯ ಬದಲು ಮಗುವಿನ ಗೆಳೆಯರನ್ನು ಜತೆಗೆ ಪುಟ್ಟ ಪ್ರವಾಸಕ್ಕೆ ಕೊಂಡೊಯ್ದೋ, ಅಬಲ ಮಕ್ಕಳೊಂದಿಗೆ ಆ ದಿನವನ್ನು ಕಳೆಯುವಂತೆಯೋ ವಿಭಿನ್ನ, ವಿಶಿಷ್ಟ ಅರ್ಥಪೂರ್ಣ ಕಾರ್ಯಕ್ರಮದ ಬಗ್ಗೆ ಯೋಜನೆ ರೂಪಿಸಿ. ನಿಮ್ಮ ಎರಡು ವರ್ಷದ ಮಗು ತೋರಿಕೆಯ ದೊಡ್ಡಸ್ತಿಕೆಯನ್ನು ಅರ್ಥಮಾಡಿಕೊಳ್ಳಲಾರದು ಎಂಬುದನ್ನೂ ಹೇಳಿ. ನಿಮ್ಮದೇ ಆರ್ಥಿಕ ಸ್ಥಿತಿಯಲ್ಲಿರುವ ಇತರ ಸ್ನೇಹಿತರು ಹೇಗೆ ಬದುಕುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸುವಂತೆ ನಿಮ್ಮ ಪತಿಗೆ ಹೇಳಿ. ಮಗುವಿನ ಶಿಕ್ಷಣ, ಭವಿಷ್ಯದ ಬದುಕು ಇತ್ಯಾದಿಗಳಿಗಾಗಿ ಇವತ್ತೇ ಯೋಚಿಸಲು ಇದು ಸಕಾಲವೇ ಹೊರತು ಅನಾರೋಗ್ಯಕರ ಪೈಪೋಟಿಗೆ ಅಲ್ಲ. ನಿಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸಿ ಹೊರತಾಗಿ ಬೇರೊಬ್ಬರಿಂದ ಬುದ್ಧಿ ಹೇಳಿಸಲು ಹೋಗಿ ಅವರ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ. ಪ್ರೀತಿ ಮಾತಿಗೆ ಬೆಲೆ ಸಿಕ್ಕೇ ಸಿಗುತ್ತದೆ.

>>>>>

ನಾನು 66 ವರ್ಷದ ವಿಧವೆ. ಇಬ್ಬರು ಗಂಡು ಮಕ್ಕಳಿದ್ದಾರೆ. ಬೇಗನೆ ಪತಿ ತೀರಿಕೊಂಡಿದ್ದು, ಯಾರ ಬೆಂಬಲವೂ ಸಿಗದೇ ತುಂಬಾ ಕಷ್ಟಪಟ್ಟು ಅಲ್ಲಿ ಇಲ್ಲಿ ಮನೆಪಾಠ ಹೇಳಿಕೊಂಡು ಏನೇನೋ ಮಾಡಿ ಮಕ್ಕಳನ್ನು ಓದಿಸಿ ಉತ್ತಮ ಸ್ಥಿತಿಗೆ ತಂದೆ. ಇಬ್ಬರಿಗೂ ಮದುವೆ ಮಾಡಿದ್ದೇನೆ. ಮುತ್ತಿನಂಥ ಸೊಸೆಯರು ಮನೆ ತುಂಬಿದ್ದಾರೆ. ನಾಲ್ವರೂ ಉತ್ತಮ ಉದ್ಯೋಗದಲ್ಲಿದ್ದು, ಯಾವುದಕ್ಕೂ ಕೊರತೆ ಎಂಬುದೇ ಇಲ್ಲ. ಸ್ವಂತ ಮನೆಯನ್ನು ಮಕ್ಕಳು ಕಟ್ಟಿಸಿಕೊಂಡು ಎಲ್ಲರೂ ಒಟ್ಟಿಗೇ ಇದ್ದೇವೆ. ಸೊಸೆಯರು ನನಗೆ ಕಷ್ಟವಾಗದಂತೆ ತಾವೇ ಎಲ್ಲ ಕೆಲಸ ಮುಗಿಸಿ ಆಫೀಸ್್ಗೆ ಹೋಗಿ ಬರುತ್ತಾರೆ. ಎಲ್ಲರೂ ಅತ್ಯಂತ ಕಾಳಜಿಯಿಂದಲೇ ನನ್ನನ್ನು ನೋಡಿಕೊಳ್ಳುತ್ತಿದ್ದರೂ ನನಗೆ ಮನಸ್ಸಿನಲ್ಲಿ ಸಮಾಧಾನವೆಂಬುದೇ ಇಲ್ಲ. ಒಮ್ಮೊಮ್ಮೆ ನಾನೇ ಕ್ಷುಲ್ಲಕ ಕಾರಣಕ್ಕೆ ಕೋಪಿಸಿಕೊಂಡು ಎಲ್ಲರನ್ನೂ ನೋಯಿಸುತ್ತೇನೆ. ಮಕ್ಕಳಿಗೆ ಇದೇ ಚಿಂತೆಯಾಗಿದ್ದು ಮಾನಸಿಕ ತಜ್ಞರ ಬಳಿ ಕರಕೊಂಡು ಹೋಗುವುದಾಗಿ ಹೇಳುತ್ತಿದ್ದಾರೆ. ಏನಾಗಿದೆ ನನಗೆ? ನಿಜಕ್ಕೂ ನಾನು ಹುಚ್ಚಿಯಾಗಿಬಿಟ್ಟಿದ್ದೇನೆಯೇ? ಮಕ್ಕಳಿಗೆ ಗೊತ್ತಾಗದಂತೆ ನಿಮ್ಮ ಸಲಹೆ ಬೇಕು ನನಗೆ. (ಬದಲಿ ಹೆಸರು ಬರೆದಿದ್ದೇನೆ, ಅದೇ ಮುದ್ರಿಸಿ ಪ್ಲೀಸ್).
- ಸುಮಿತ್ರಾ ಟೀಚರ್, ಮೈಸೂರು

ಖಂಡಿತಾ ನೀವು ಹುಚ್ಚಿಯಲ್ಲ. ನಿಮ್ಮ ಮಕ್ಕಳೂ ಹಾಗೆಂದು ನಿರ್ಧರಿಸಿ ನಿಮ್ಮನ್ನು ವೈದ್ಯರಿಗೆ ತೋರಿಸುತ್ತಿಲ್ಲ. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರತಿ ವ್ಯಕ್ತಿಯೂ ಒಂದಲ್ಲಾ ಒಂದು ಮಾನಸಿಕ ಸಮಸ್ಯೆಯಿಂದ, ಒತ್ತಡದಿಂದ ಬಳಲುತ್ತಿರುತ್ತಾನೆ. ಅದಕ್ಕೆ ನೀವು ಹೊರತಲ್ಲ. ಮಾನಸಿಕ ತಜ್ಞರನ್ನು ಭೇಟಿ ಮಾಡುವುದೆಂದರೆ ಹೊಟ್ಟೆನೋವು, ಜ್ವರಕ್ಕೆ ವೈದ್ಯರ ಬಳಿ ಹೋಗುವಷ್ಟೇ ಸಹಜ- ಅಗತ್ಯ ಪ್ರಕ್ರಿಯೆ. ಅದನ್ನು ಅಪಮಾನ ಎಂಬಿತ್ಯಾದಿ ಅನ್ಯಥಾ ಭಾವಿಸಬೇಕಿಲ್ಲ. ಮೊದಲು ಆ ಬಗ್ಗೆ ಪೂರ್ವಗ್ರಹ ಬಿಟ್ಟು ಮಕ್ಕಳ ಸಲಹೆ ಒಪ್ಪಿಕೊಳ್ಳಿ.

ಇನ್ನು ನಿಮ್ಮ ವಿಚಾರಕ್ಕೆ ಬಂದರೆ, ಕಹಿನೆನಪುಗಳ ಭಾರ ನಿಮ್ಮನ್ನು ಇನ್ನೂ ಹಗುರಾಗಿಸಿಲ್ಲ. ಈಗ ಎಲ್ಲ ಸುಖವಾಗಿದ್ದರೂ ಹಿಂದಿನದ್ದನ್ನು ನೀವು ಮರೆಯುತ್ತಿಲ್ಲ. ನೀವು ಪಟ್ಟ ನೋವು ಇತ್ಯಾದಿಗಳಿಂದಾದ ಬಲವಾದ ಗಾಯದ ಕಲೆ ಇನ್ನೂ ನಿಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದುಹೋಗಿದೆ. ಜತೆಗೆ ಇವತ್ತು ಆರ್ಥಿಕವಾಗಿ ಸುಭದ್ರ ಸ್ಥಿತಿಯಲ್ಲಿರುವ ನಿಮ್ಮ ಮಕ್ಕಳು- ಸೊಸೆಯರ ಯುವ ಮನಸ್ಸು ಸಹಜವಾಗಿಯೇ ಅವರ ಮೋಜಿನ ಲೋಕದಲ್ಲಿ ವಿಹರಿಸುತ್ತಿದೆ. ನಿಮ್ಮ ಅಂಥ ವಯಸ್ಸಿನಲ್ಲಿ ನೀವು ಸಂಕಷ್ಟದಲ್ಲೇ ಮುಳುಗಿದ್ದುದರಿಂದ ಈಗಿನ ಅವರ ಮನೋಭಾವವನ್ನು ಅರ್ಥಮಾಡಿಕೊಳ್ಳಲು ನಿಮಗೆ ಸ್ವಲ್ಪ ಕಷ್ಟವಾಗಿದೆ. ಇದರಿಂದ ಎಲ್ಲರೊಂದಿಗಿದ್ದೂ ಒಂಟಿಯಾಗಿಬಿಟ್ಟಿದ್ದೀರ. ಇದು ನಿಮ್ಮನ್ನು ಖಿನ್ನತೆಯೆಡೆಗೆ ತಳ್ಳುತ್ತಿದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಎಲ್ಲರೂ ಉದ್ಯೋಗದಲ್ಲಿರುವುದರಿಂದ ಹೆಚ್ಚಿನ ವೇಳೆ ಮನೆಯಲ್ಲಿರುವ ನಿಮ್ಮನ್ನು ಒಂಟಿ ತನವೂ ಬಾಧಿಸುತ್ತಿದೆ. ಸುಖದಿಂದಿಡುವ ಭರದಲ್ಲಿ ನಿಮ್ಮನ್ನು ಸೊಸೆಯರು ನಿರುದ್ಯೋಗಿಯಾಗಿಸಿದ್ದಾರೆ. ಹೀಗಾಗಿ ಗಮನ ಬೇರೆಡೆ ಹೋಗುವ ಪ್ರಮೇಯವೇ ಇಲ್ಲದೇ ಕೇವಲ ಹಳೆಯ ನೋವನ್ನೇ ಮರುಕಳಿಸಿಕೊಳ್ಳುತ್ತಾ, ಕೊರಗುತ್ತಾ ಕುಳಿತಿರುತ್ತೀರಿ. ಮೊದಲಿಗೆ ಮನೆಯ ಸಣ್ಣಪುಟ್ಟ ಕೆಲಸವನ್ನು ನೀವೇ ಸಂಭಾಳಿಸುವುದಾಗಿ ಹೇಳಿ ಅದನ್ನು ಕೈಗೆತ್ತಿಕೊಳ್ಳಿ. ಆಗ, ಉದ್ಯೋಗಸ್ಥ ಸೊಸೆಯರಿಗೂ ಸ್ವಲ್ಪ ಬಿಡುವು ದೊರೆತು ನಿಮ್ಮೊಂದಿಗೆ ಕಳೆಯಲು ಅವರಿಗೂ ಸಮಯ, ವ್ಯವಧಾನ ಸಿಗುತ್ತದೆ. ಕೊನೆಪಕ್ಷ ರಾತ್ರಿಯಾದರೂ ಎಲ್ಲರೂ ಸ್ವಲ್ಪ ಹೊತ್ತು ಮುಕ್ತವಾಗಿ ಹರಟಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ನೆನಪುಗಳನ್ನು ಬಿಚ್ಚಿಟ್ಟು ಹಗುರಾಗಿ. ಹಾಡು, ಹಸೆ, ಭಜನೆ, ಓದು ಇತ್ಯಾದಿಗಳಲ್ಲಿ ತೊಡಗಿಕೊಳ್ಳಿ. ನಿಮ್ಮ ಮನೋಗುಣ ಅರಿತು ಮಕ್ಕಳು, ಮಕ್ಕಳ ವಯೋ ಸಹಜ ಭಾವನೆಗಳಿಗೆ ನೀವು ಸ್ಪಂದಿಸಲಾರಂಭಿಸಿ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮಕ್ಕಳು- ಸೊಸೆಯರಿಗೆ ಕಿವಿಮಾತು ಹೇಳಿ, ಉದ್ಯೋಗ, ಕೆರಿಯರ್ ಇತ್ಯಾದಿಗಳನ್ನು ಸ್ವಲ್ಪ ಬದಿಗಿಟ್ಟು ನಿಮ್ಮ ಕೈಗೆ ಒಂದೊಂದು ಮುದ್ದು ಕಂದಮ್ಮಗಳನ್ನು ಹೆತ್ತು ಕೊಡಲು ಹೇಳಿ. ಎಲ್ಲ ಸರಿ ಹೋಗುತ್ತದೆ.
>>>>>

ಬಹಳ ಹಿಂದೆ. ನಾನು ಕಾಲೇಜಿನ ಮೊದಲ ವರ್ಷಗಳಲ್ಲಿದ್ದಾಗ ನಾನೊಬ್ಬ ಹುಡುಗನನ್ನು ಪ್ರೀತಿಸಿದೆ. ಆತನೂ ನನ್ನನ್ನು ಗಾಢವಾಗಿ ಪ್ರೀತಿಸುತ್ತಿದ್ದ. ನಾವಿಬ್ಬರೂ ಮದುವೆಯಾಗಲೂ ತೀರ್ಮಾನಿಸಿದ್ದೆವು. ನಮ್ಮಿಬ್ಬರ ನಡುವೆ ದೈಹಿಕ ಸಂಪರ್ಕವೂ ಇತ್ತು. ಕೊನೆಗೆ ಆತ ಉನ್ನತ ಅಧ್ಯಯನಕ್ಕೆ ಅಮೆರಿಕಕ್ಕೆ ತೆರಳಿ ಅಲ್ಲಿಯೇ ಉದ್ಯೋಗಕ್ಕೂ ಸೇರ್ಪಡೆಯಾದ. ನಾವಿಬ್ಬರೂ ತೀರಾ ಇತ್ತೀಚಿನವರೆಗೂ ಸಂಪರ್ಕದಲ್ಲಿದ್ದೆವು. ಎಲ್ಲ ಜವಾಬ್ದಾರಿಯೂ ಒಂದು ಹಂತಕ್ಕೆ ನೆರವೇರಿದೆ ಎನಿಸಿ ನಾನು ಮದುವೆಯ ಕನಸಿಗೆ ಜಾರುತ್ತಿದ್ದಾಗಲೇ ಆತ ಅಮೆರಿಕನ್ ಯುವತಿಯೊಂದಿಗೆ ವಿವಾಹವಾಗಿರುವ ಸುದ್ದಿ ಹೊತ್ತ ಮೇಲ್ ಕಳುಹಿಸಿದ್ದ. ತುಂಬಾ ನೊಂದೆ. ನಿಧಾನಕ್ಕೆ ಅದರಿಂದ ಹೊರಬಂದೆ. ಇದೀಗ ಇನ್ನೊಬ್ಬ ವ್ಯಕ್ತಿಯ ನನ್ನನ್ನು ಮದುವೆಯಾಗಲು ಮುಂದೆ ಬಂದಿದ್ದಾರೆ. ನಾನೂ ಒಪ್ಪಿಕೊಂಡಿದ್ದೇನೆ. ನನ್ನ ಭಾವಿ ಪತಿ ನನ್ನ ಹಿಂದಿನ ಯಾವ ಸಂಗತಿಯ ಬಗ್ಗೆಯೂ ಕೇಳಿಲ್ಲ. ಅವರ ಬಗ್ಗೆಯೂ ಹೇಳಿಕೊಂಡಿಲ್ಲ. ಆದರೆ ಅವರಿಗೆ ಮೊದಲು ಒಬ್ಬಾಕೆಯೊಂದಿಗೆ ಪ್ರೇಮ ಸಂಬಂಧವಿತ್ತು ಎಂಬುದು ಬೇರೆಯವರಿಂದ ತಿಳಿದಿದೆ. ಮದುವೆಗೆ ಮುನ್ನ ನಾನೂ ನನ್ನ ಬಗ್ಗೆ ಎಲ್ಲವನ್ನೂ ಪ್ರಾಮಾಣಿಕವಾಗಿ ಹೇಳಿಕೊಂಡುಬಿಡಬೇಕೆನಿಸುತ್ತಿದೆ. ಏನು ಮಾಡಲಿ?
- ಸ್ವಾತಿ ಪೈ, ಮಂಗಳೂರು

ಸಂಬಂಧಕ್ಕೆ ನೀವು ಕೊಡುತ್ತಿರುವ ಬೆಲೆಯ ಪ್ರತೀಕ ನಿಮ್ಮ ಮನೋಭಾವ. ಇವತ್ತಿನ ಯುವ ಜನಾಂಗ ಮದುವೆಯಂಥ ವಿಚಾರದಲ್ಲಿ ಅತ್ಯಂತ ಪ್ರಾಯೋಗಿಕವಾಗಿ ಯೋಚಿಸುತ್ತಿರುವುದು ಒಂದೆ ಡೆಯಾದರೆ, ನಿಮ್ಮಂಥ ಭಾವ ಜೀವಿಗಳೂ ಇನ್ನೂ ಪ್ರೀತಿ, ಸಂಬಂಧಗಳ ಅಸ್ತಿತ್ವ ಉಳಿಸುತ್ತಿದ್ದಾರೆ. ಎರಡೂ ಬಗೆಯ ಮನೋಭಾವಕ್ಕೆ ನಿಮ್ಮ ಪ್ರಶ್ನೆಯಲ್ಲಿ ಉದಾಹರಣೆ ಸಿಗುತ್ತದೆ. ಇರಲಿ, ನೀವು ಪ್ರೀತಿಸಿದ ಹುಡುಗನಂತೆಯೇ ನಿಮ್ಮ ಭಾವಿ ಪತಿಯೂ ಪ್ರಾಯೋಗಿಕ ಮನೋಭಾವದವರು ಎಂಬುದಕ್ಕೆ ಅವರು ತಮ್ಮ ಮುಂಚಿನ ಪ್ರೀತಿಯ ಚೌಕಟ್ಟಿನಿಂದ ಹೊರಬಂದು ನಿಮ್ಮನ್ನು ವಿವಾಹವಾಗಲು ಹೊರಟಿರುವುದೇ ಸಾಕ್ಷಿ. ಹೆಣ್ಣುಮಕ್ಕಳೂ ಸುಶಿಕ್ಷಿತರಾಗಿ ಉದ್ಯೋಗಕ್ಕಿಳಿದು ಹೊರ ಹೊರಟಿರುವ ದಿನಗಳಲ್ಲಿ ಪ್ರೀತಿ, ಪ್ರೇಮ ಸಂಬಂಧಗಳು ತೀರಾ ಸಾಮಾನ್ಯವಾಗಿದೆ. ಹೀಗಾಗಿ ನಿಮಗೆ ಹಿಂದಿನ ನೆನಪುಗಳ ಬಗ್ಗೆ ಗಿಲ್ಟ್ ಅಗತ್ಯವಿಲ್ಲ. ನೀವು ಹಗುರಾಬೇಕು, ನಿಮ್ಮ ವೈವಾಹಿಕ ಬದುಕಿನ ಬದ್ಧತೆ ಹೆಚ್ಚಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಭಾವಿ ಸಂಗಾತಿಗೆ ಹಳೆಯದನ್ನು ತಿಳಿಸಬೇಕೆಂದುಕೊಂಡಿದ್ದರೆ ಒಳ್ಳೆಯದೇ. ಇಂದಿನ ಮುಕ್ತ ಜೀವನ ರೀತಿಯಲ್ಲಿ ಅದೇನೂ ವಿಶೇಷವೆಂದಾಗಲೀ, ಅಪರಾಧವೆಂದಾಗಲೀ ಪರಿಗಣಿತವಾಗುವುದಿಲ್ಲ. ಹಳೆಯ ಪ್ರೀತಿಯ ವಿಷಯ ವೈವಾಹಿಕ ಜೀವನಕ್ಕೆ ಧಕ್ಕೆಯನ್ನೇನೂ ತರಲಿಕ್ಕಿಲ್ಲ. ದಂಪತಿಗಳ ನಡುವೆ ರಹಸ್ಯಗಳಿರಬಾರದೆಂಬುದೂ ವಿಹಿತವೇ. ಒಂದು ಕೆಲಸ ಮಾಡಿ ನೀವು ಮದುವೆಯಾಗುವವರನ್ನು ನೇರವಾಗಿ ಅವರ ಹಿಂದಿನ ಪ್ರೀತಿಯ ವಿಚಾರದಲ್ಲಿ ಕೇಳಿ ನೋಡಿ. (ಹಾಗೆಂದು ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ಪ್ರಶ್ನಿಸುವಂತೆ ಪ್ರಶ್ನಿಸಬೇಡಿ). ಅವರು ಅದನ್ನು ಒಪ್ಪಿಕೊಂಡರೆ, ನಿಮ್ಮ ಬಗ್ಗೆ ಸೂಕ್ಷ್ಮವಾಗಿ ತಿಳಿಸಿ. ಅವರೂ ಮುಕ್ತವಾಗಿ ಮನಸ್ಸು ತೆರೆದಿಟ್ಟರೆ ನೀವೂ ಎಲ್ಲವನ್ನೂ ತಿಳಿಸಿ ಮುಕ್ತವಾಗಿ. ಹೊಸ ಮನಸ್ಸಿನೊಂದಿಗೆ ಮಧುರ ಜೀವನಕ್ಕೆ ಅಡಿ ಇಡಿ. ಎಷ್ಟು ಹೇಳಬೇಕು, ಏನು ಹೇಳಬೇಕು ಎಂಬುದು ಅವರ ಪ್ರತಿಕ್ರಿಯೆಯನ್ನವಲಂಬಿಸಿ ಇರಲಿ. ಗುಡ್ ಲಕ್.

-ವಿಶ್ವೇಶ್ವರ ಭಟ್

3 Comments

  1. ಚೆನ್ನಾಗಿ ಬರೆದಿದ್ದೀರಿ. ಒಂದು ಸಂಶಯ. ನೀವು ಈ ಲೇಖನದಲ್ಲಿ ’ಪೂರ್ವಗ್ರಹ’ ಎಂಬ ಪದ ಪ್ರಯೋಗಿಸಿರುವಿರಿ. ಅದು ’ಪೂರ್ವಾಗ್ರಹ’ ಎಂದಾಗಬೇಕಿತ್ತೇ???

  2. All topics are nice …. Felt like it reflects the current society …

  3. nice so i like u r blogs

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.