ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ರಾಹುಲ್ ಮಾತು ನೋಡಲು, ಕೇಳಲು ಚೆಂದ, ಆದರೆ ಕಾರ್ಯಸಾಧುವಲ್ಲ, ಅವರ ಐಡಿಯಾಗಳಿಗೆ ಅವರಷ್ಟೇ ಖರೀದಿದಾರರು!

ರಾಹುಲ್ ಜೊತೆ

rahul-gandhi‘ಅವರ ಮಾತುಗಳನ್ನು ಕೇಳಲು, ನೋಡಲು ಚೆಂದವಾಗಿತ್ತು. ಆದರೆ ಯಾವುದೂ ಕಾರ್ಯಸಾಧುವಲ್ಲ!’

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಯವರು ಶನಿವಾರ ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಪತ್ರಿಕೆ-ಟಿವಿ ಚಾನೆಲ್ ಸಂಪಾದಕರ ಜತೆ ಸುಮಾರು ನಲವತ್ತೈದು ನಿಮಿಷಗಳ ಕಾಲ ನಡೆಸಿದ ಅನೌಪಚಾರಿಕ ಮಾತುಕತೆ ಮುಗಿದ ಬಳಿಕ ನನಗೆ ತಕ್ಷಣ ಅನಿಸಿದ್ದು ಇದು.

‘ಜನವರಿ 27ರಂದು ‘ಟೈಮ್ಸ್ ನೌ’ ಟಿವಿ ಚಾನೆಲ್‌ನ ಸಂಪಾದಕ ಅರ್ನಾಬ್ ಗೋಸ್ವಾಮಿಯವರಿಗೆ ರಾಹುಲ್‌ಗಾಂಧಿ ಅವರು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನೀಡಿದ ಮೊಟ್ಟ ಮೊದಲ ಸಂದರ್ಶನದಲ್ಲಿ ಮಾತಾಡಿದ್ದರಲ್ಲ, ಅವರೊಂದಿಗಿನ ಇಂದಿನ ಮಾತುಕತೆ ಅದರ ಮುಂದುವರಿದ ಭಾಗದಂತಿತ್ತು ಅಥವಾ ಅದರ ಎರಡನೆಯ ಕಂತಿನಂತಿತ್ತು.’

ಇದು ಎರಡನೆಯ ಪ್ರತಿಕ್ರಿಯೆ.

ಉನ್ನತ ಆಶಯ, ಹಂಬಲವನ್ನೇನೋ ಇಟ್ಟುಕೊಂಡಿದ್ದಾರೆ. ಆದರೆ ಅವನ್ನೆಲ್ಲ ಅನುಷ್ಠಾನಗೊಳಿಸಲು ಸಾಧ್ಯವಾ? ರಾಹುಲ್‌ಗಾಂಧಿ ವಾಸ್ತವ ಜಗತ್ತಿನಲ್ಲಿದ್ದಾರಾ? ಹಗಲುಗನಸು ಕಾಣುತ್ತಿದ್ದಾರಾ? ಬೆರಗು ಮೂಡಿಸುವ, ಹುಬ್ಬೇರಿಸುವ ಪದಪುಂಜಗಳನ್ನು ಬಳಸಿದರೆ ತಮ್ಮ ಮಾತು ಹಾಗೂ ವಾದವನ್ನು ಬೇರೆಯವರು ಒಪ್ಪಿಕೊಂಡು ಬಿಡುತ್ತಾರೆ ಎಂದು ಭಾವಿಸಿದ್ದಾರಾ? ಇದು ಬೇರೆಯವರನ್ನು ಒಪ್ಪಿಸುವ ಕಸರತ್ತಾ ಅಥವಾ ಡಜಟಜಿ ್ಛ್ಟಟಿಢ್ಝಟ್ಛ್ಝಿಟ್ಜಿ ಅಂದ್ರೆ ತಮ್ಮನ್ನು ತಾವೇ ನಂಬಿಸಿಕೊಳ್ಳುವ ಪ್ರಯತ್ನವಾ?
ರಾಹುಲ್ ಮಾತನ್ನು ಕೇಳಿದ ಬಳಿಕ ಹೀಗೆ ಅನಿಸಿದ್ದು ಸುಳ್ಳಲ್ಲ. ಕಾಂಗ್ರೆಸ್‌ನ ಭಾವಿ ಪ್ರಧಾನಿಯ ಮಾತುಗಳನ್ನು ಕೇಳಿದಾಗ, ‘ಪಾಪ! ಅಯ್ಯೋ’ ಎಂದೆನಿಸಿತು ಎಂದು ಸಂಪಾದಕ ಮಿತ್ರರೊಬ್ಬರು ಉದ್ಗಾರ ತೆಗೆದರು. ಇದು ಅವರನ್ನು ‘ಪಪ್ಪು’ ಎಂದು ಜರೆಯುವ, ಟೀಕಿಸುವ ಮನಸ್ಥಿತಿಯ ಅನಾವರಣ ಅಥವಾ ಮೋದಿ ಭಕ್ತರ ಹುನ್ನಾರ ಎಂದು ಹೇಳಬಹುದಾದರೂ, ಆ ಟೀಕೆ, ಅದನ್ನು ನಿಜ ಎಂದು ಸಾಬೀತುಪಡಿಸುವ ರೀತಿಯಲ್ಲಿ ಅವರ ಮಾತಿನ ಧಾಟಿ, ವಿಚಾರಗಳು ಇದ್ದವು ಎಂಬುದನ್ನು ಅಲ್ಲಗಳೆಯುವಂತಿರಲಿಲ್ಲ.

ರಾಹುಲ್‌ಗಾಂಧಿಯವರ ಆಶಯ, ಸಂಕಲ್ಪ, ಹಂಬಲ, ಉನ್ನತ ಧ್ಯೇಯೋದ್ದೇಶವನ್ನು ಮೆಚ್ಚಲೇಬೇಕು. ಅವರು ತಮ್ಮ ಭವಿಷ್ಯವನ್ನು ಈ ಸಂಗತಿಗಳ ಆಧಾರದ ಮೇಲೆ ಕಟ್ಟಲು ಬಯಸಿದಂತಿದೆ. ನಿಜಕ್ಕೂ ಕೇಳಲು ಮಧುರವಾದ, ಇಂಪಾದ ಅಂಶಗಳೇ. ಪ್ರಜಾಪ್ರಭುತ್ವದ ಖಠ್ಝ್ಠ್ಝಡಿ, ಚೈತನ್ಯ ದೇಶದ ಎಲ್ಲೆಡೆ ಹರಡಬೇಕು, ಪ್ರಜಾಪ್ರಭುತ್ವದ ಫಲ ಎಲ್ಲರಿಗೂ ದಕ್ಕುವಂತಾಗಬೇಕು ಎಂಬುದರಲ್ಲಿ ಯಾರ ತಕರಾರೂ ಇಲ್ಲ. ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು, ಮಹಿಳೆಯರ ಸಬಲೀಕರಣವಾಗಬೇಕು ಎಂಬುದು ಸಹ ಒಳ್ಳೆಯ ವಿಚಾರಗಳೇ. ಆದರೆ ಮೂಲಭೂತ ಪ್ರಶ್ನೆಯೆಂದರೆ, ಕಳೆದ ಹತ್ತು ವರ್ಷಗಳಲ್ಲಿ ಅವರದ್ದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಇವನ್ನೆಲ್ಲ ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದಿತ್ತಲ್ಲ. ನೀವ್ಯಾಕೆ ಇವನ್ನೆಲ್ಲ ಅನುಷ್ಠಾನಗೊಳಿಸಲಿಲ್ಲ ಎಂದು ಕೇಳಿದರೆ, ‘ನಾನು ಇಂಥ ನಿರ್ಧಾರಗಳನ್ನೆಲ್ಲ ಜಾರಿಗೊಳಿಸುವ ವ್ಯವಸ್ಥೆಯ ಅಧಿಕಾರದ ಸ್ಥಾನದಲ್ಲಿರಲಿಲ್ಲ. ನಾನು ವ್ಯವಸ್ಥೆಯ ಒಂದು ಭಾಗ (್ಛ್ಟಟಠ್ಟಟಿಜಟಿಡಿ)ಆಗಿದ್ದೆ’ ಮಾತ್ರ ಅಂತಾರೆ.

ಮಾತು ಮಾತಿಗೆ ವ್ಯವಸ್ಥೆಯನ್ನು ಬದಲಿಸಬೇಕು, ರಾಜಕೀಯ ಪ್ರಕ್ರಿಯೆ ಮುಂದುವರಿಯಬೇಕೆಂದು ಮಾತಾಡುವ ರಾಹುಲ್ ತಮ್ಮ ಐಡಿಯಾಗಳನ್ನು ಮಾರ್ಕೆಟಿಂಗ್ ಮಾಡಿಕೊಳ್ಳುತ್ತಾ ಅದನ್ನು ತಾವೇ ಖರೀದಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿಕೊಂಡಂತಿದೆ. ಉದಾಹರಣೆಗೆ ಅವರೇ ಹೇಳುವಂತೆ, ‘ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ನೆಲೆಸಿದೆ. ಮೊದಲಿಗೆ ಪಕ್ಷದಲ್ಲಿ ಇಂಥ ವಾತಾವರಣವಿರಲಿಲ್ಲ. ಪಕ್ಷದಲ್ಲಿ ಸಾಕಷ್ಟು ಗೊಂದಲ(ಝಛ್ಟಡ)ತೊಳಸಂಬಟ್ಟೆ ವಾತಾವರಣವಿತ್ತು. ಕಾಂಗ್ರೆಸ್ ಅಂದ್ರೆ ಅದು ನಮ್ಮ ದೇಶದ ಪ್ರತಿಬಿಂಬದಂತೆ. ಆದರೆ ತಾವು ಯುವ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಬಳಿಕ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ
ನೆಲೆಸುವಂತಾಗಿದೆ. ಯಾವುದೇ ವ್ಯವಸ್ಥೆಯಾಗಲಿ ರಾತ್ರಿ ಬೆಳಗಾಗುವುದರೊಳಗೆ ಬದಲಿಸಲು ಸಾಧ್ಯವಿಲ್ಲ. ನಾವು ಇಡೀ ವ್ಯವಸ್ಥೆಯನ್ನು ಬದಲಾವಣೆಗೆ ತೆರೆದುಕೊಳ್ಳಲು ಬಿಡಬೇಕು. ಆನಂತರ ಅದು ಒಂದು ಸ್ವರೂಪವನ್ನು ತೆಗೆದುಕೊಳ್ಳುತ್ತದೆ. ಕ್ರಮೇಣ ಅದು ಗಟ್ಟಿಗೊಂಡು ಸುಧಾರಿತ ವ್ಯವಸ್ಥೆಯಾಗಿ ರೂಪುಗೊಳ್ಳುತ್ತದೆ. ನಾನು ಈಗ ಈ ಕೆಲಸದಲ್ಲಿ ನಿರತನಾಗಿದ್ದೇನೆ ಹಾಗೂ ಈ ಪ್ರಕ್ರಿಯೆಯಲ್ಲಿ ಯಶಸ್ಸನ್ನು ಕಂಡಿದ್ದೇನೆ.’

‘ಹಾಗಾದರೆ ಕಾಂಗ್ರೆಸ್‌ನಲ್ಲಿ ಹಾಸುಹೊಕ್ಕಾಗಿರುವ ಹೈಕಮಾಂಡ್ ಸಂಸ್ಕೃತಿಯ ಬಗ್ಗೆ ಏನು ಹೇಳ್ತೀರಾ?’ ಎಂಬ ಪ್ರಶ್ನೆಗೆ, ‘ನನಗೆ ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದೆ. ನಾನು ನಂಬುವ ವ್ಯವಸ್ಥೆಯಲ್ಲಿ ಹೈಕಮಾಂಡ್ ಸಂಸ್ಕೃತಿಗೆ ನೆಲೆ ಇಲ್ಲ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ’ ಎಂದು ಹೇಳುತ್ತಾರೆ. ಇದು ಮುಗ್ಧತೆಯೋ? ಜಾಣ ಮರೆವೋ? ಪಲಾಯನವಾದವೋ? ಸತ್ಯದ ತಲೆಯ ಮೇಲೆ ಹೊಡೆವ ಭಂಡತನವೋ? ಬೇರೆಯವರನ್ನು ಮೂರ್ಖರನ್ನಾಗಿ ಮಾಡಿದೆನೆಂದು ಬೀಗುವ ಸ್ವಯಂ ಬೆನ್ನು ತಟ್ಟಿಕೊಳ್ಳುವ ಅಸಹಾಯಕತೆಯೋ? ಗೊತ್ತಾಗುವುದಿಲ್ಲ.

‘ಸರಿ, ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ ಅಂತೀರಲ್ಲ. ನಿಮ್ಮ ಮಾತು ನಿಜವೇ ಆಗಿದ್ದರೆ ಮೆಚ್ಚುವಂಥದ್ದು. ನಿಮ್ಮ ಪಕ್ಕದಲ್ಲಿ ಕುಳಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರ ಪಕ್ಕದಲ್ಲಿ ಕುಳಿತ ಡಾ. ಪರಮೇಶ್ವರ ಅವರನ್ನು ಹೈಕಮಾಂಡ್ ಅನುಮತಿ ಪಡೆಯದೇ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಬಹುದಾ?’ ಎಂದು ನಾನು ರಾಹುಲ್ ಗಾಂಧಿಯವರನ್ನು ಕೇಳಿದೆ.

ಆ ಪ್ರಶ್ನೆಗೆ ರಾಹುಲ್ ಹೇಳಿದ್ದೇನು ಗೊತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಡೆ ತಿರುಗಿ, ‘ಮಂತ್ರಿ ಮಂಡಲ ರಚನೆಯ ವಿಚಾರವಾಗಿ ನಾನು ನಿಮ್ಮನ್ನು ಈ ತನಕ ಸಂಪರ್ಕಿಸಿದ್ದೇನಾ? ಯಾರನ್ನು ಮಂತ್ರಿ ಮಾಡಬೇಕು, ಬಿಡಬೇಕು ಎಂಬ ವಿಚಾರವಾಗಿ ನಾನು ಸೂಚನೆ ನೀಡಿದ್ದೇನಾ? ಹೈಕಮಾಂಡ್ ಈ ವಿಚಾರದಲ್ಲಿ ನಿಮಗೆ ಏನಾದರೂ ಆದೇಶ ನೀಡಿದೆಯಾ?’ ಎಂದು ಕೇಳಿದರು. ಅದಕ್ಕೆ ಸಿದ್ದರಾಮಯ್ಯನವರು ‘ಎಲ್ಲಾದ್ರೂ ಉಂಟಾ?’ ಎಂಬ ಧಾಟಿಯಲ್ಲಿ ‘ಇಲ್ಲ… ಇಲ್ಲ’ ಎಂದು ಹೇಳಿದರು. ಆಗ ರಾಹುಲ್ ವರಸೆ ಹೇಗಿತ್ತೆಂದರೆ ‘ಕೇಳಿದಿರಾ? ಹೈಕಮಾಂಡ್ ಇಂಥ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ’ ಎಂಬಂತಿತ್ತು.

ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಯಿಂದ ಹಿಡಿದು, ನಿಗಮ-ಮಂಡಳಿ ಅಧ್ಯಕ್ಷ ನೇಮಕಕ್ಕೂ ಹೈಕಮಾಂಡ್ ಕ್ಲಿಯರೆನ್ಸ್ ಬೇಕು. ನಮ್ಮ ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷರು ಪ್ರತಿಯೊಂದಕ್ಕೂ ‘ಹೈಕಮಾಂಡ್ ವಿವೇಚನೆಗೆ ಬಿಡಲಾಗಿದೆ’ ಅಂತಾರಲ್ಲ ಎಂದು ಕೇಳಿದರೆ, ‘ಇಂಥ ವಿಷಯಗಳಲ್ಲಿ ಹೈಕಮಾಂಡ್ ತಲೆ ಹಾಕುವುದಿಲ್ಲ. ನಾನು ಎಂದಾದರೂ ನಿಮಗೆ ಫೋನ್ ಮಾಡಿ ಸಂಪರ್ಕಿಸಿದ್ದೇನಾ? ಸೂಚನೆ ಕೊಟ್ಟಿದ್ದೇನಾ?’ ಎಂದು ಪಕ್ಕದಲ್ಲಿಯೇ ಕುಳಿತ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರರನ್ನು ಕೇಳಿದರು. ಅದಕ್ಕೆ ಅವರ ಉತ್ತರ ನಿರೀಕ್ಷಿಸಿದಂತೆಯೇ ಇತ್ತು.

ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತಾಡುವ ರಾಹುಲ್‌ಗಾಂಧಿ ಯಾರನ್ನು ‘ಮಂಗ’ ಮಾಡಲು ಹೊರಟಿದ್ದಾರೆ? ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸಂಸ್ಕೃತಿ ಇಲ್ಲ ಅಂದ್ರೆ ಯಾರಾದರೂ ನಂಬುತ್ತಾರಾ? ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಹಾಗೂ ರೋಶನ್‌ಬೇಗ್ ಸಚಿವ ಸಂಪುಟ ಸೇರಿದರಲ್ಲಾ, ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸೆಪಟ್ಟು ಮುಗಿಬಿದ್ದು ಸಂಪುಟಕ್ಕೆ ಸೇರಿಸಿಕೊಂಡರಾ? ಇವರಿಬ್ಬರನ್ನು ಹೊರಗಿಡಬೇಕೆಂದು ಸಿದ್ದರಾಮಯ್ಯನವರು ಹರಸಾಹಸ ಮಾಡಿದರು. ಕೊನೆಗೂ ಅವರು ಸಂಪುಟ ಸೇರುವುದನ್ನು ತಪ್ಪಿಸಲಾಗಲಿಲ್ಲ. ಯಾರನ್ನು ಮಂತ್ರಿ ಮಾಡಬೇಕೆಂಬುದು ಮುಖ್ಯಮಂತ್ರಿಯವರ ಪರಮಾಧಿಕಾರ ತಾನೆ? ಹಾಗಾದರೆ ಅವರಿಬ್ಬರನ್ನು ಮಂತ್ರಿಗಳನ್ನಾಗಿ ಮಾಡಿದ ಪರಮೋಚ್ಚ ಅಧಿಕಾರ ಯಾವುದು? ಹೈಕಮಾಂಡೇ ಅಲ್ಲವೇ? ರಾಹುಲ್ ಗಾಂಧಿಯವರೇಕೆ ಕಣ್ಣು ಮುಚ್ಚಿ ಹಾಲು ಕುಡಿಯುತ್ತಾರೆ? ಈ ರೀತಿ ಹಸಿಹಸಿ ಸುಳ್ಳು ಹೇಳಿದರೆ ಅವರ ಆಶಯ, ಹಂಬಲಗಳನ್ನು ಸಂದೇಹದಿಂದ ನೋಡಲು ಅವರೇ ಆಸ್ಪದ ನೀಡಿದಂತಾಗುವುದಿಲ್ಲವೇ?

ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಹಾಗೂ ಪಕ್ಷದ ವ್ಯವಸ್ಥೆಯನ್ನು ಮುಕ್ತವಾಗಿ ಸಾರ್ವಜನಿಕರಿಗೆ ತೆರೆದಿಡುವ ಪ್ರಯತ್ನವಾಗಿ ದೇಶದಲ್ಲಿ ಹದಿನೈದು ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆಗಾಗಿ ನಡೆಸುವ ಆಂತರಿಕ ಚುನಾವಣೆ (ಠ್ಠ್ಝಟಛ್ಠಣ ಜಟಜ್ಛಡ್ಝ್ಟಿಟಿ) ಯನ್ನು ರಾಹುಲ್‌ಗಾಂಧಿ ಪ್ರಸ್ತಾಪಿಸಿದರು. ಪಕ್ಷವನ್ನು ಕಟ್ಟುವ, ಹೊಸ ವಾತಾವರಣ ಮೂಡಿಸುವ ಪ್ರಯತ್ನದ ಭಾಗವಾಗಿ ಹಾಗೂ ಯುವಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಆಶಯದ ಒತ್ತಾಸೆಯಿಂದಾಗಿ ಕ್ರಮ ಕೈಗೊಂಡಿರುವುದಾಗಿ ಒತ್ತಿ ಹೇಳಿದರು. ಆದರೆ ಈ ಚುನಾವಣೆ ಪಕ್ಷದೊಳಗೆ ಎಬ್ಬಿಸಲಿರುವ ಆಂತರಿಕ ತುಮುಲದ ಅಪಾಯದ ಬಗ್ಗೆ ಅವರಿಗೆ ಮನಸ್ಸಿನ ಮೂಲೆಯಲ್ಲಿ ಅಳುಕಿದ್ದರೂ ಅದನ್ನು ಸಮರ್ಥಿಸಿಕೊಂಡರು. ಕರ್ನಾಟಕದಲ್ಲಿ ಮಂಗಳೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಈ ಚುನಾವಣೆ ನಡೆಯಲಿವೆ. ಮಂಗಳೂರಿನಲ್ಲಿ ಜನಾರ್ದನ ಪೂಜಾರಿ ಹಾಗೂ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಟಿಕೆಟ್ ಆಕಾಂಕ್ಷಿತರು. ಪೂಜಾರಿ ಹಿರಿಯ ಕಾಂಗ್ರೆಸ್ಸಿಗರು. ರಾಹುಲ್ ಅವರ ಅಜ್ಜಿ ಇಂದಿರಾಗಾಂಧಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದವರು. ಅವರ ವಿರುದ್ಧ ನಿನ್ನೆ ಮೊನ್ನೆ ಪಕ್ಷಕ್ಕೆ ಪದಾರ್ಪಣ ಮಾಡಿರುವ ಹರ್ಷ ಮೊಯಿಲಿ ಸೆಣಸುವ ಆಂತರಿಕ ಚುನಾವಣೆಯಿಂದ ಪಕ್ಷದಲ್ಲಿ ಅಸಮಾಧಾನ ಭುಗಿಲೇಳಬಹುದಲ್ಲ ಎಂಬ ಪ್ರಶ್ನೆಗೆ, ಪಕ್ಷದಲ್ಲಿ ಹೊಸ ವಾತಾವರಣ ಮೂಡಿಸುವ ಪ್ರಕ್ರಿಯೆ ಜಾರಿಯಲ್ಲಿರುವಾಗ ಇವೆಲ್ಲ ಸಾಮಾನ್ಯ. ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಅರಿಯಲು ಇದು ಸಹಾಯಕ. ಇದಕ್ಕೆ ಪಕ್ಷದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೋಗ್ಯ ಅಭ್ಯರ್ಥಿ ಆಯ್ಕೆಯೇ ಇದರ ಹಿಂದಿರುವ ಉದ್ದೇಶ ಎಂಬುದು ರಾಹುಲ್ ವಾದವಾಗಿತ್ತು.

ಲೋಕಸಭಾ ಚುನಾವಣೆಯೆಂಬ ಮಹಾ ಸಮರವನ್ನು ಎದುರಿಗಿಟ್ಟುಕೊಂಡು ಆಂತರಿಕ ಸಮರಕ್ಕೆ ಆಸ್ಪದ ಕೊಟ್ಟಿರುವುದು ಪಕ್ಷಕ್ಕೆ ಮುಳುವಾಗಬಹುದಲ್ಲ ಎಂದಾಗ ಅವರಲ್ಲಿ ಸ್ಪಷ್ಟ ಉತ್ತರ ಇದ್ದಂತಿರಲಿಲ್ಲ. ‘ಪಕ್ಷವನ್ನು ಬಲಪಡಿಸುವ ಐಡಿಯಾಗಳಲ್ಲಿ ನನಗೆ ನಂಬಿಕೆ. ಈ ಐಡಿಯಾಗಳನ್ನು ನಾನು ಪರೀಕ್ಷಿಸುತ್ತೇನೆ. ಅದು ಫಲಿಸಿದರೆ ಎಲ್ಲೆಡೆ ವಿಸ್ತರಿಸುತ್ತೇನೆ’ ಎಂಬುದು ಅವರ ಉತ್ತರವಾಗಿತ್ತು.

ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ, ಹೊಸ ವಾತಾವರಣ, ಹೊಸ ವ್ಯವಸ್ಥೆಯ ಸ್ಥಾಪನೆಯ ಅಗತ್ಯ, ಹೊಸ ಸಂಸ್ಕೃತಿಯ ಉದಯ… ಇಂಥ ಮಾತುಗಳನ್ನು ರಾಹುಲ್ ಪದೇ ಪದೆ ಹೇಳಿದಾಗ, ಟೈಮ್ಸ್ ಆಫ್ ಇಂಡಿಯಾದ ಅಮೆರಿಕದ ವರದಿಗಾರರಾಗಿರುವ ಚಿದಾನಂದ ರಾಜಘಟ್ಟ ಅವರು, ‘ಕಳೆದ ಇಪ್ಪತ್ತೈದು ವರ್ಷಗಳಿಂದ, ಮುಂಬೈನಲ್ಲಿ ನಡೆದ ಎಐಸಿಸಿ ಅಧಿವೇಶನದಿಂದ ಈ ಮಾತುಗಳನ್ನು ಕೇಳುತ್ತಿದ್ದೇನೆ. ನಿಮ್ಮ ಪಕ್ಷದ ನಾಯಕರ ಪದ ಬಳಕೆ ಹಾಗೆಯೇ ಇದೆ. ಇವೆ ಇವೆ ಮಾತುಗಳನ್ನು ಕೇಳುತ್ತಿದ್ದೇನೆ. ಆದರೆ ಪಕ್ಷ ಮಾತ್ರ ಹಾಗೆಯೇ ಇದೆ. ನಿಮ್ಮ ಪಕ್ಷದಲ್ಲಿ ಡೈನೋಸಾರ್‌ಗಳು ಹಾಗೇ ಉಳಿದಿವೆ’ ಎಂದಾಗ ರಾಹುಲ್ ಒಂದು ಕ್ಷಣ ವಿಚಲಿತರಾದರು. ಡೈನೋಸಾರಸ್ ಎಂಬ ಪದ ಬಳಸದೇ ಇದ್ದರೆ ನನಗೆ ಸಮಾಧಾನವಾಗುತ್ತಿತ್ತು ಎಂದರು.

ತಮ್ಮ ತಂದೆ ಹತ್ಯೆಯಾಗದಿದ್ದರೆ ಅವರು ಖಂಡಿತವಾಗಿಯೂ ಪಕ್ಷದ ಹಾಗೂ ದೇಶದ ವ್ಯವಸ್ಥೆಯನ್ನು ಬದಲಿಸುತ್ತಿದ್ದರು ಎಂದರು. ಹೀಗೆ ಹೇಳುವಾಗ ಈ ಅವಧಿಯಲ್ಲಿ ಪಕ್ಷದ ವ್ಯವಸ್ಥೆ ಬದಲಾಗಿಲ್ಲ ಎಂಬುದನ್ನೂ ಪರೋಕ್ಷವಾಗಿ ಒಪ್ಪಿಕೊಂಡಂತಿತ್ತು.

ನೀವು ಸಂಸದರಾಗಿ, ಯುವ ಕಾಂಗ್ರೆಸ್ ಮುಖಂಡರಾಗಿ ಹಾಗೂ ಈಗ ಉಪಾಧ್ಯಕ್ಷರಾಗಿ ಇಡೀ ದೇಶ ಸುತ್ತಿದ್ದೀರಿ. ರೈತರು, ಕೂಲಿಕಾರರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗಗಳೊಂದಿಗೆ ಬೆರೆತಿದ್ದೀರಿ. ನಿಮ್ಮ ಕನಸಿನ ಭಾರತ ಹೇಗಿರಬೇಕೆಂದು ಬಯಸುತ್ತೀರಿ ಎಂಬ ಪ್ರಶ್ನೆಗೆ ರಾಹುಲ್ ಏನು ಉತ್ತರ ನೀಡಬಹುದೆಂಬ ಕುತೂಲವಿತ್ತು. ಆದರೆ ಅವರ ಉತ್ತರದಿಂದ ನಿರಾಸೆಯೇ ಆಯಿತು. ಅವರು ತಮ್ಮ ಕಲ್ಪನೆಯನ್ನು ಸರಿಯಾಗಿ ಹರಿಯಬಿಡಲಿಲ್ಲ.

ನೀವು ಹೋದೆಡೆಯಲ್ಲೆಲ್ಲ ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುತ್ತೀರಿ. ಸ್ವತಃ ಅವಿವಾಹಿತರಾಗಿರುವ ನೀವು ಮಹಿಳೆಯರ ಹಿಂದೇಕೆ ಬಿದ್ದಿದ್ದೀರಿ ಎಂಬ ಟಿವಿ ಸಂಪಾದಕರೊಬ್ಬರ ಪ್ರಶ್ನೆಯಲ್ಲಿನ ತಮಾಷೆಯನ್ನು ಗ್ರಹಿಸದೇ, ‘ಅವಿವಾಹಿತರಾದವರು ಮಹಿಳೆಯರ ಬಗ್ಗೆ ಮಾತಾಡಬಾರದಾ? ಇದು ತಮಾಷೆಯ ಮಾತಲ್ಲ. ಈ ಹಾಲ್‌ನಲ್ಲಿ ನಾಲ್ವರು ಮಹಿಳೆಯರಿದ್ದಾರೆ. ಆದರೆ ಇಪ್ಪತ್ತಕ್ಕೂ ಹೆಚ್ಚು ಗಂಡಸರಿದ್ದಾರೆ. ಇದೇ ಸಾಕ್ಷಿ. ಮಹಿಳೆಯರಿಗೆ ಐವತ್ತರಷ್ಟು ಪ್ರಾತಿನಿಧ್ಯ ಸಿಗಬೇಕು’ ಎಂದು ಜೋರಾಗಿಯೇ ರಾಹುಲ್ ಹೇಳಿದರು. ‘ಹಾಗಾದರೆ ಲೋಕಸಭಾ ಚುನಾವಣೆಗೆ ಮಹಿಳೆಯರಿಗೆ ಅಷ್ಟೇ ಪ್ರಮಾಣದ ಆದ್ಯತೆ ನೀಡುತ್ತೀರಾ?’ ಎಂಬ ಪ್ರಶ್ನೆಗೆ ಉತ್ತರಿಸುವಾಗ ಈ ಜೋರು ಮಾಯವಾಗಿತ್ತು. ಅಲ್ಲಿ ವಾಸ್ತವವನ್ನು ವಿವರಿಸುವ ಸಮಜಾಯಿಶಿ ಇತ್ತು.

ನೀವು ಕಾಂಗ್ರೆಸ್‌ನ ಪ್ರಧಾನಿ ಅಭ್ಯರ್ಥಿಯಾ ಎಂಬ ಪ್ರಶ್ನೆಗೂ ರಾಹುಲ್ ತಮ್ಮ ಪಕ್ಷದ ಗುಣಗಾನದ ನೆಲೆಯಲ್ಲಿಯೇ ಉತ್ತರಿಸಿದರು. ‘ನಮ್ಮ ಪಕ್ಷದಲ್ಲಿ ಚುನಾವಣೆಗೆ ಮೊದಲೇ ಘೋಷಿಸುವ ಸಂಪ್ರದಾಯವಿಲ್ಲ. ನಮ್ಮ ಪಕ್ಷದ ವ್ಯವಸ್ಥೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದೆ. ಜನರು ತಮ್ಮ ಅಭ್ಯರ್ಥಿಯನ್ನು ಎಂಪಿಯನ್ನಾಗಿ ಆಯ್ಕೆ ಮಾಡುತ್ತಾರೆ ಹಾಗೂ ಎಂಪಿಗಳು ಪ್ರಧಾನಿಯನ್ನು ಆರಿಸುತ್ತಾರೆ. ಎಂಪಿಗಳನ್ನು ಕೇಳದೇ ಪ್ರಧಾನಿಯನ್ನು ಮೊದಲೇ ಘೋಷಿಸುವುದು ಎಷ್ಟು ಸರಿ? ನಮ್ಮ ಪಕ್ಷದಲ್ಲಿ ಒಂದು ಪ್ರಕ್ರಿಯೆ ಇದೆ. ಅದನ್ನು ನಾನು ಗೌರವಿಸುತ್ತೇನೆ.’

ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿಯವರು ಯಾವುದೇ ರಾಜ್ಯದ ರಾಜಧಾನಿಗೆ ಹೋದರೂ, ಅಲ್ಲಿನ ಸಂಪಾದಕರ ಜತೆ ಇಂಥ ಸಮಾಲೋಚನೆ ಅಥವಾ ಅನೌಪಚಾರಿಕ ಮಾತುಕತೆಯನ್ನು ನಡೆಸುತ್ತಿದ್ದು, ಆ ಸರಣಿಯಲ್ಲಿ ಇಂದು ನಡೆದದ್ದು ಏಳನೇ ಮುಖಾಮುಖಿಯಂತೆ.

ರಾಹುಲ್‌ಗಾಂಧಿಯವರ ಉತ್ಸಾಹ, ಲವಲವಿಕೆ, ಪ್ರಾಮಾಣಿಕ ಕಾಳಜಿ, ಆಶಯವನ್ನು ಖಂಡಿತವಾಗಿಯೂ ಇಷ್ಟಪಡಬಹುದು. ಆದರೆ ಒಬ್ಬ ನಾಯಕನನ್ನು, ಅದರಲ್ಲೂ ಪ್ರಧಾನಿಯಾಗಲು ಹೊರಟ ನಾಯಕನನ್ನು ಒಪ್ಪಲು ಇಷ್ಟೇ ಸಾಲದು. ಪ್ರಾಮಾಣಿಕ ಕಾಳಜಿ, ಆಶಯಗಳಷ್ಟೇ ಗುರಿ ತಲುಪಲು ಸಹಾಯಕವಾಗುವುದಿಲ್ಲ. ಈ ಆಶಯವನ್ನು ಪೊರೆಯುವ ರೀತಿ, ಸಲಹುವ ವಿಧಾನ, ಜಾರಿಗೊಳಿಸುವ ಪರಿ, ಅದಕ್ಕೆ ಕಾವು ಕೊಡುತ್ತಿರುವ ವ್ಯಕ್ತಿಯ ತಾಕತ್ತು ಸಹ ಮುಖ್ಯವಾಗುತ್ತದೆ. ರಾಹುಲ್ ಮಾತುಗಳನ್ನು ಕೇಳಿದರೆ ಸಮರಕ್ಕೆ ಸನ್ನದ್ಧರಾಗುವ ಸಂದರ್ಭದಲ್ಲಿ ಶಸ್ತ್ರಾಭ್ಯಾಸ ನಿರತರಾಗಿದ್ದಾರಾ ಎಂದು ಅನಿಸದಿರದು. ರಾಹುಲ್ ಹೇಳುವುದನ್ನೆಲ್ಲ ಕೇಳಿದ ಬಳಿಕ ಹೊಸ ಹೊಸ ಪ್ರಶ್ನೆಗಳು ಉದ್ಭವವಾಗುತ್ತವೆ. ಅವೆಲ್ಲಾ ಪ್ರಶ್ನೆಗಳಾಗಿಯೇ ಉಳಿಯುತ್ತವೆ.

ರಾಹುಲ್ ಅವರ ಹಂಬಲ, ಆಶಯ, ಐಡಿಯಾಗಳೇ ಅವರನ್ನು ಗುರಿ ತಲುಪಿಸುವಂತಿದ್ದರೆ ಅವರು ಈಗಾಗಲೇ ಗುರಿ ತಲುಪಿದ್ದಾರೆಂದು ಭಾವಿಸಬಹುದು!

-ವಿಶ್ವೇಶ್ವರ ಭಟ್

1 Comment

  1. Dear Sir,

    Article exposed what Rahul Gandhi is… But there is a spelling mistake in 3rd para – 4th line.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.