ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ಭೀಮಾ ತೀರದ ಕೊಲೆಗಳಿಗೆ ಅನಕ್ಷರತೆ, ಬಡತನ ಕಾರಣ ಎಂದು ತೀರ್ಪು ಕೊಟ್ಟವರು ಯಾರ್ರೀ? ನಮ್ಮ ಊರಿನ ಮಾನ ಮರ್ಯಾದೆ ಈ ಕೊಲೆಗಳಿಂದ ಹೋಗಲಿಲ್ಲ. ಪುಸ್ತಕ ಬರೆದ್ರಲ್ಲ, ಅವರಿಂದಲೇ ಹೋಗಿದ್ದು. ನಾವು ಹಂತಕರಲ್ರೀ.. (ಭೀಮಾ ತೀರದ ಅಮಾಯಕರು)
ಕನ್ನಡಪ್ರಭ ವಾರ್ತೆ ದೇವಣಗಾಂವ (ಬಿಜಾಪುರ) ಏ.21
ಭೀಮಾ ತೀರದಲ್ಲಿ ಆಗಿ ಹೋದ ಕೊಲೆಗಳಿಗೆ ಬಡತನ ಮತ್ತು ಅನಕ್ಷರತೆ ಕಾರಣವಾಗಿತ್ತೇ..?
ಇಂಥದೊಂದು ಪ್ರಶ್ನೆಯನ್ನು ಭೀಮಾ ತೀರದ ಹಂತಕರು ಎಂಬ ಹಣೆಪಟ್ಟಿ ಕಟ್ಟಿಸಿಕೊಂಡಿದ್ದವರ ಪ್ರಮುಖ ತಾಣವಾಗಿದ್ದ ದೇವಣಗಾಂವ ಮತ್ತು ಸೊನ್ನ ಗ್ರಾಮದ ಜನರನ್ನು ಕೇಳಬೇಕು. ಅವರ ಸಿಟ್ಟು ಆಗ ಒಮ್ಮೆಗೆ ನೆತ್ತಿ ಮುಟ್ಟುತ್ತದೆ.
ಯಾರ್ರೀ ಸರ, ನಿಮಗ ಹಂಗಂತ ಹೇಳಿದ್ದು? ನಾವು ಇಲ್ಲಿ ಉಣ್ಣಕ್ಕ ಇಲ್ದ ಅದಿವೇನು? ಇಲ್ಲಿ ಎಲ್ರೂ ಜಮೀನ್ದಾರ್ರು ಖರೇ ನೋಡ್ರಿ. ಆ ಭೀಮವ್ವ ನಮಗ ಏನೂ ಕಡಿಮಿ ಮಾಡಿಲ್ಲ ಎಂದು ಜನ ಕಣ್ಣು ಕೆಂಪಗೆ ಮಾಡಿಕೊಂಡು ಹೇಳುತ್ತಾರೆ. ಹೌದಲ್ರೀ, ಹೇಳಿದ್ದು ಖರೆ ಐತಲ್ರೀ? ಎಂದು ಪಕ್ಕದಲ್ಲಿದ್ದವರನ್ನೂ ಕೇಳುತ್ತಾರೆ.
ಹಿಂದಿನದು ಅವರಿಗೆ ಬೇಕಿಲ್ಲ. ಕೇಳಿದರೂ ಹೇಳುವವರಲ್ಲ. ಆಗಿದ್ದಾಯಿತು, ಈಗ ಎಲ್ಲರೂ ನೆಮ್ಮದಿಯಾಗಿದ್ದೇವೆ. ಅಣ್ಣ, ತಮ್ಮಂದಿರಂತೆ ಜೀವನ ನಡೆಸುತ್ತಿದ್ದೇವೆ ಎನ್ನುತ್ತಾರೆ ಹಳ್ಳಿಗರು.
ಹಾಗಾದರೆ, ಭೀಮಾ ತೀರದ ಕೊಲೆಗಳಿಗೆ ಬಡತನ ಮತ್ತು ಅನಕ್ಷರತೆ ಕಾರಣ ಎಂಬ ಒನ್ ಲೈನ್ ಜಡ್ಜ್್ಮೆಂಟ್ ಕೊಟ್ಟವರು ಯಾರು? ಎಂದು ಆ ಗ್ರಾಮದವರನ್ನೇ ಕೇಳಿದರೆ ಭೀಮಾ ತೀರದ ಹಂತಕರು ಪುಸ್ತಕದ ಕಡೆ ಕೈ ತೋರಿಸುತ್ತಾರೆ. ಇಲ್ಲಿ ನಡೆದ ಕೊಲೆಗಳಿಗಿಂತ ಹೆಚ್ಚಾಗಿ ಆ ಪುಸ್ತಕದಿಂದ ನಮ್ಮೂರಿನ ಮಾನ, ಮರ್ಯಾದೆ ಹರಾಜು ಆಯಿತು ಎಂದು ಪತ್ರಕರ್ತ ರವಿಬೆಳಗೆರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಹಣೆಪಟ್ಟಿ ಬೇಡ: ಭೀಮಾ ತೀರದ ಹಂತಕರು ಬುಕ್ನಾಗ ಇರೋದ ಒಟ್ಟ ಸುಳ್ಳಾ ನೋಡ್ರಿ. ಆ ಬುಕ್ ಮಾಡಿದವರು ಖಂಡಾಪಟ್ಟಿ ರೊಕ್ಕ ಮಾಡ್ಕೊಂಡಾರ. ಅದ್ರಾಗ ಹಸಿ ಹಸಿ ಸುಳ್ಳಾ ಐತ್ರಿ. ಅವರೇನೋ ಬುಕ್ ಮಾಡಿಕೊಂಡಾರ್ರೀ, ಆದ್ರ ನಮಗ ಹಂತಕರು ಅನ್ನೋ ಹಣೆಪಟ್ಟಿ ಉಳಿಸ್ಯಾರ ನೋಡ್ರೀ ಸರ ಎನ್ನುತ್ತಾರೆ ಹಳ್ಳಿಯ ಜನ.
ಏನೋ ಸಮಯ, ಸಂದರ್ಭ ಆಗಬಾರದ್ದು ಆಗಿ ಹೋಯಿತೇ ಹೊರತು ಬಡತನ ಅಥವಾ ಅನಕ್ಷರತೆಯ ಕಾರಣಕ್ಕೆ ಇಲ್ಲಿ ಕೊಲೆಗಳು ನಡೆಯಲಿಲ್ಲ ಎಂಬುದು ಜನರ ಅಭಿಪ್ರಾಯ.
ಮಾಡಿದವರು ಹೋದರು, ಈಗ ಇಲ್ಲಿರುವವರು ಯಾರೂ ಹಂತಕರಲ್ಲ. ಕೊಲೆ, ಸುಲಿಗೆ ನಮಗೆ ಬೇಕಾಗಿಯೂ ಇಲ್ಲ ಎಂಬುದು ಅವರ ಅಭಿಪ್ರಾಯ.
ಭೂಮಾಲೀಕರ ಎರಡು ಕುಟುಂಬಗಳ ನಡುವೆ ತಲೆದೋರಿದ ಸಣ್ಣದೊಂದು ಜಮೀನು ವಿವಾದ ಉಗ್ರ ಸ್ವರೂಪ ಪಡೆದುಕೊಂಡು, ಜಾತಿ ಜಗಳವೂ ಇದರೊಂದಿಗೆ ತಳಕು ಹಾಕಿಕೊಂಡು ಭೀಮಾ ತೀರದಲ್ಲಿ ಹಂತಕ ಪಡೆ ಹುಟ್ಟಿಕೊಳ್ಳಲು ಕಾರಣವಾಯಿತು. 1980ರ ದಶಕದಲ್ಲಿ ಇಡೀ ಭೀಮಾ ತೀರವನ್ನು ನಡುಗಿಸಿದ ಹಂತಕರ ಪಡೆಯಲ್ಲಿ ಪ್ರಮುಖವಾಗಿ ಇದ್ದವರು ಚಂದಪ್ಪ ಹರಿಜನ, ಕೇಶಪ್ಪ ತಾವರಖೇಡ ಮತ್ತು ಶಿವಾಜಿ ಬೋರಿಗಿ.
ಕೇಶಪ್ಪ ಮತ್ತು ಶಿವಾಜಿ ಕುಟುಂಬದವರಿಗೆ ತಲೆತಲಾಂತರದಿಂದ ಬಂದಿರುವ ಆಸ್ತಿ ಇದೆ. 40-50 ಎಕರೆ ಜಮೀನಿನಲ್ಲಿ ಬೇಸಾಯ ಮಾಡುವ ಕುಟುಂಬಗಳು ಅವರದ್ದಾಗಿವೆ. ಅಷ್ಟೇ ಅಲ್ಲ, ಕೊಲೆ ಪ್ರಕರಣಗಳಲ್ಲಿ ಕೇಳಿಬರುವ ಕಣಿಮೇಶ್ವರ, ಮಾಣಿಕಪ್ಪ, ಪುತ್ರಪ್ಪ ಸಾಹುಕಾರ್ ಮತ್ತು ಕಿಣಗಿ ಕುಟುಂಬಗಳಿಗೂ ಶ್ರೀಮಂತ ಮನೆತನಗಳು ಎಂಬ ಹೆಸರೇ ಇತ್ತು.
ಶಿವಾಜಿ ಬೋರಿಗಿ ಅವರ ತಂದೆ ಸಿದ್ದಪ್ಪ ಬೋರಿಗಿ ಅವರನ್ನು ಸೊನ್ನ ಮತ್ತು ದೇವಣಗಾಂವದ ಜನ ಅಪಾರವಾಗಿ ಗೌರವಿಸುತ್ತಿದ್ದರು. ಕೇಶಪ್ಪ ತಾವರಖೇಡ ಊರಿನ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಆಗಿದ್ದಾತ. ಅವರೊಂದಿಗೆ ಇದ್ದದ್ದು ಚಂದಪ್ಪ. ಕಾಲೇಜು ಮಟ್ಟಕ್ಕೆ ಹೋಗದಿದ್ದರೂ ಇವರೆಲ್ಲರೂ ಓದು, ಬರಹ ಬಲ್ಲವರೇ ಆಗಿದ್ದರು.
ಈಗಲೂ ಅಷ್ಟೇ. ಎರಡೂ ಗ್ರಾಮಗಳ ಎಲ್ಲ ಕುಟುಂಬಗಳಲ್ಲಿ ವಿದ್ಯಾವಂತರಿದ್ದಾರೆ. ಪದವಿ, ಸ್ನಾತಕೋತ್ತರ ಪದವೀಧರರಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ನೌಕರಿ ಮಾಡುವವರಿದ್ದಾರೆ. ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡು ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಮೆಟ್ಟಿಲು ಹತ್ತಿದವರನ್ನೂ ಕಾಣಬಹುದಾಗಿದೆ. ಹೀಗಿರುವಾಗ ಬಡನತ ಮತ್ತು ಅನಕ್ಷರತೆಯ ಮಾತೆಲ್ಲಿಯದು ಎಂದು ಹಳ್ಳಿಯ ಅಮಾಯಕ ಜನ ಕೇಳುತ್ತಾರೆ.
ದೇವಣಗಾಂವಕ್ಕೆ ಹೋದಾಗ ಮೊದಲು ಸಿಕ್ಕವರು ಕೇಶಪ್ಪ ತಾವರಖೇಡ ಅವರ ಕೊನೆಯ ತಮ್ಮ ಬಸವರಾಜ್ ಸಿದ್ದಪ್ಪ ತಾವರಖೇಡ. ಅವರ ಮತ್ತೂಬ್ಬ ಅಣ್ಣ ಸೇನೆಯಲ್ಲಿದ್ದಾರೆ. ಕೇಶಪ್ಪ ಅವರಿಗೆ ಮಿಲಿಟರಿಯಲ್ಲಿರೋ ಅಣ್ಣ ಮದ್ದು, ಗುಂಡು ಸರಬರಾಜು ಮಾಡುತ್ತಿದ್ದಾನೆ ಎಂದು ಪುಸ್ತಕದಲ್ಲಿ ಬರೆದಿದ್ದಾರೆ. ಅದು ಸಾಧ್ಯವೇ? ಒಂದು ವೇಳೆ ಆ ರೀತಿ ನಮ್ಮಣ್ಣ ಮಾಡಿದ್ದರೆ ಮಿಲಿಟರಿ ಅಧಿಕಾರಿಗಳು ಸುಮ್ಮನೆ ಬಿಡುತ್ತಿದ್ದರೇ? ಇದೇ ರವಿ ಬೆಳಗೆರೆ ತನಿಖೆ ಮಾಡಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು ಬಸವರಾಜ್. ಅವರು ಪುಸ್ತಕ ಬರೆದು ಮಾಡಿದ್ದೇನು? ಹಂತಕರು ಪರಿವರ್ತನೆಯ ಹಾದಿ ಹಿಡಿಯುವಂತೆ ಮಾಡಿದರೇ? ಖಂಡಿತಾ ಇಲ್ಲ. ಅವರ ಬರವಣಿಗೆಯಿಂದ ಇಲ್ಲಿ ಕೊಲೆಗಳು ಹೆಚ್ಚಾದವು. ಕಾಣದೇ ಇದ್ದುದ್ದನ್ನೆಲ್ಲಾ ವರ್ಣರಂಜಿತವಾಗಿ ಬರೆದು ಅವರು ತಮ್ಮ ಪತ್ರಿಕೆಯ ಪ್ರಸಾರ ಸಂಖ್ಯೆ ಜಾಸ್ತಿ ಮಾಡಿಕೊಂಡರು. ಇಂಥದ್ದು ಏಕೆ ಮಾಡಬೇಕಿತ್ತು ಎಂಬುದು ಅವರ ಪ್ರಶ್ನೆ.
ಎಲ್ಲಿದೆ ಬಡತನ?: ಸಿದ್ದಪ್ಪ ಬೋರಿಗಿ, ಕಣಮೇಶ್ವರ, ತಾವರಖೇಡ, ಮಾಣಿಕಪ್ಪ, ಪುತ್ರಪ್ಪ ಸಾಹುಕಾರ್, ಹೀಗೆ ಒಂದೊಂದು ಕುಟುಂಬಕ್ಕೂ ನೂರಾರು ಎಕರೆ ಜಮೀನಿದೆ. ಅರಮನೆಯಂಥಾ ಮನೆಗಳಿವೆ. ಜಮೀನಿನಲ್ಲಿ ಒಮ್ಮೆ ಕಬ್ಬು ಬೆಳೆದರೆ ಲಕ್ಷ, ಲಕ್ಷ ಎಣಿಸಿಕೊಂಡು ಬರುತ್ತೇವೆ. ಹೀಗಿರುವಾಗ ಬಡತನ ಎಲ್ಲಿಂದ ಬರಬೇಕು? ಭೀಮಾ ತೀರದಲ್ಲಿನ ಕೊಲೆಗಳಿಗೆ ಬಡತನ, ಅನಕ್ಷರತೆ ಕಾರಣ ಅನ್ನೋದು ಸುಳ್ಳು ಎಂದವರು ಸಿದ್ದಪ್ಪ ಬೋರಿಗಿ ಅವರ ಕುಟುಂಬದಲ್ಲಿ ಒಬ್ಬರಾದ ಚಂದ್ರಕಾಂತ ಬಸಣ್ಣ ಬೋರಿಗಿ.
ಮಕ್ಕಳೂ ಮೂವರಿದ್ದಾರೆ: ಮಾಣಿಕಪ್ಪ ಮಾಸ್ತರ್ ಮಕ್ಕಳ ಪೈಕಿ ಬದುಕಿ ಉಳಿದವರು ಒಬ್ಬರೇ ಎಂದು ಅವರ ಪುಸ್ತಕದಲ್ಲಿದೆ. ಫೋಟೋ ಕೂಡ ಹಾಕಿದ್ದಾರೆ. ಒಬ್ಬರಲ್ಲ ಇನ್ನೂ ಮೂವರಿದ್ದಾರೆ. ರಮೇಶ್, ಶಿವು ಮತ್ತು ರಾಘವೇಂದ್ರ. ಏನೋ ಸಮಯ, ಸಂದರ್ಭ ಆ ರೀತಿ ಇತ್ತು. ಕೊಲೆಗಳಾದವು. ಅದನ್ನೇ ತಿರುಚಿ ಬರೆಯೋದು ಯಾವ ನ್ಯಾಯ ಎಂದು ಬೋರಿಗಿ ಪ್ರಶ್ನಿಸಿದರು.
ನೈಜತೆಗೆ ದೂರ: ಭೀಮಾ ತೀರದಲ್ಲಿ ಹಂತಕರು ಪುಸ್ತಕ ನೈಜತೆಗೆ ಭಾರಿ ದೂರವಿದೆ. ನಮ್ಮೂರಿನಲ್ಲಿ ನಡೆದ ಘಟನೆಗಳಿಗೂ ಪುಸ್ತಕಕ್ಕೂ ಸಂಬಂಧವೇ ಇಲ್ಲ. ನಾವ್ಯಾರೂ ಬಡ ಕುಟುಂಬಗಳಿಂದ ಬಂದವರಲ್ಲ. ಅಸ್ತಿಪಾಸ್ತಿಯನ್ನ ನಾವು ಅಥವಾ ನಮ್ಮ ತಂದೆ ಸಂಪಾದನೆ ಮಾಡಿದ್ದೂ ಅಲ್ಲ. ನಮ್ಮ ತಾತ, ಮುತ್ತಾತನಿಂದ ಬಂದಿದ್ದು.
ಇರೋ ಜಮೀನಿನಲ್ಲಿ ಕಬ್ಬು, ತೊಗರಿ, ಜೋಳ ಬೆಳೆದು ಹಾಯಾಗಿದ್ದೇವೆ ಎಂದವರು ಜಹಂಗೀರ್ ಅಮೀನ್ ಸಾಬ್ ಔಟಿ. ಅಂದಹಾಗೆ ಇವರು ಕೇಶಪ್ಪ ತಾವರಖೇಡ ವಿರೋಧಿ ಗುಂಪಿನಲ್ಲಿದ್ದ ಅಮೀನ್ ಸಾಬ್ ಅವರ ಪುತ್ರ.
ಇವೆಲ್ಲಕ್ಕಿಂತ ಹೆಚ್ಚಾಗಿ ಸಿಂಧಗಿಯ ಪತ್ರಕರ್ತ ಟಿ.ಕೆ.ಮಲಗೊಂಡ ಅವರು ಹೇಳುವುದೇನು?: ಅವರು ವ್ಯವಹಾರಿಕ ದೃಷ್ಟಿಯಿಂದ ಪುಸ್ತಕ ಬರೆದರು. ಪುಸ್ತಕ ಬರೆದು ಊರಿನಲ್ಲಿ ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟಿದರು. ಯಾರದೋ ಭಾವಚಿತ್ರಕ್ಕೆ ಮತ್ಯಾರದೋ ಹೆಸರು ಹಾಕಿ ಅವಾಂತರ ಮಾಡಿಟ್ಟರು. ಮನೆಯಲ್ಲಿರುವ ಕೇಶಪ್ಪನ ಪುತ್ರಿಯನ್ನು ಕರಾಟೆ ಪಟು ಎಂದರು. ಕೊಲೆ ಮಾಡಲು ಆಕೆ ಸಂಚು ರೂಪಿಸುತ್ತಿದ್ದಾಳೆ ಎಂದು ತೀರ್ಪು ಕೊಟ್ಟುಬಿಟ್ಟರು. ಭೀಮಾ ತೀರದ ಹಂತಕರ ಮನಸ್ಸು ಪರಿವರ್ತನೆ ಆಗುವಂಥ ಒಂದೇ ಒಂದು ಕೆಲಸ ಅವರ ಬರವಣಿಗೆಯಿಂದ ಆಗಲಿಲ್ಲ. ಆ ಕೆಲಸ ಮಾಡಿದ್ದರೆ ಹೇಳಲಿ. ಇದು ನನ್ನ ಸವಾಲು ಎನ್ನುತ್ತಾರೆ ಮಲಗೊಂಡ.
ವೈಮನಸ್ಸಿಗೆ ಕಾರಣ
ಅವರ ಬರವಣಿಗೆಯಿಂದ ಇಲ್ಲಿ ಎಲ್ಲರ ಮನಸ್ಸು ಕೆಟ್ಟು ಹೋಯಿತು. ಒಬ್ಬರನ್ನೊಬ್ಬರು ದ್ವೇಷ ಭಾವನೆಯಿಂದ ನೋಡುವಂಥ ವಾತಾವರಣ ನಿರ್ಮಾಣ ಆಯಿತು. ಭೀಮಾ ತೀರದ ಪುಸ್ತಕ ಬರೆಯುವಂಥ ಅವಶ್ಯಕತೆ ಏನಿತ್ತು? ಯಾವ ಊರಿನಲ್ಲೂ ಕೊಲೆಗಳು ಆಗುವುದಿಲ್ಲವೇ? ಎಂದು ಕೇಳಿದವರು ಶರಣಪ್ಪ ಕಣಮೇಶ್ವರ ಅವರು.
ಒಂದು ಕುಟುಂಬದವರ ಬಗ್ಗೆ ಬರೆಯಲಿಕ್ಕೆ ಅವರಿಗೆ ಅಧಿಕಾರ ಕೊಟ್ಟವರು ಯಾರು? ಭೀಮಾ ತೀರ ಎಂದರೆ ಕೇವಲ ಕೊಲೆಗಳಿಗೆ ಸೀಮಿತವಾಗಿಲ್ಲ. ಕಾಳಿಂಗಪ್ಪ ಚೌಧರಿ, ಆರ್.ಬಿ. ಚೌಧರಿ ಅವರಂಥ ಘಟಾನುಘಟಿ ರಾಜಕಾರಣಿಗಳನ್ನು ಕೊಡುಗೆಯಾಗಿ ಕೊಟ್ಟ ಊರಿದು ಎಂದು ಅವರು ಹೇಳುತ್ತಾರೆ.
ಎಲ್ಲೆಲ್ಲೋ ಕೊಲೆಗಳಾಗುತ್ತವೆ. ಅಲ್ಲಿಗೆ ಹೋಗಿ ಪುಸ್ತಕ ಬರೆಯುವರೇ? ಪುಸ್ತಕ ಬರೆದು ವಾತಾವರಣ ಹಾಳು ಮಾಡಲಿಕ್ಕೆ ಅವರಿಗೆ ನಮ್ಮ ಹಳ್ಳಿಯೇ ಆಗಬೇಕಿತ್ತೇ?
-ಶರಣಪ್ಪ ಕಣಮೇಶ್ವರ
ನಾವು ಹೇಳದೇ ಇರುವುದನ್ನೆಲ್ಲಾ ಪುಸ್ತಕದಲ್ಲಿ ಬರೆದಿದ್ದಾರೆ. ಸೇನೆಯಲ್ಲಿರುವ ಅಣ್ಣನಿಂದ ಕೇಶಪ್ಪಗೆ ಮದ್ದು- ಗುಂಡು ಬರುತ್ತಿತ್ತು ಎಂಬುದನ್ನು ನೋಡಿ ನೋವಾಯಿತು.
-ಬಸವರಾಜ್ ಸಿದ್ದಪ್ಪ ತಾವರಖೇಡ
ಬಡತನ, ಅನಕ್ಷರತೆ ಭೀಮಾ ತೀರದ ಕೊಲೆಗಳಿಗೆ ಕಾರಣ ಎನ್ನುವುದು ಶುದ್ಧ ಸುಳ್ಳು. ಇಲ್ಲಿ ಎಲ್ಲರೂ ಉಳ್ಳವರೇ ಆಗಿದ್ದಾರೆ. ಸುಳ್ಳು ಬರೆಯಬಾರದು.
-ಚಂದ್ರಕಾಂತ ಬಸಣ್ಣ ಬೋರಿಗಿ
ಸಾಕ್ಷಾತ್ ವರದಿ – ಕೆ.ವಿ.ಪ್ರಭಾಕರ್
ಈ ವರದಿ ತುಂಬಾ ಸಮಯೋಚಿತವಾಗಿ ಹೊರಬಂದಿದೆ. ಇದೇ ವಿಷಯದ ಬಗ್ಗೆ ರವಿ ಬೆಳಗೆರೆ ತನ್ನನ್ನು ತಾನೇ ಹೊಗಳುತ್ತಾ, ತನ್ನ ಕಾರ್ಯಗಳನ್ನು ಅತಿರಂಜಕವಾಗಿ ವರ್ಣಿಸುತ್ತಾ ಕನ್ನಡ ವಾಹಿನಿಯೊಂದರಲ್ಲಿ ಕೊಚ್ಚಿಕೊಳ್ಳುತಿದ್ದದ್ದು ತೀರಾ ಬಾಲಿಶವಾಗಿ ಕಂಡು ಬಂದಿತ್ತು. ಈಗ ಭೀಮಾ ತೀರದ ನಿಜಾಂಶ ಕನ್ನಡ ಪ್ರಭ ಹೊರತಂದಿರುವುದರಿಂದ ರವಿ ಬಣ್ಣ ಬಯಲಾಗಿದೆ. ರವಿ ಬೆಳಗೆರೆ ಕಟ್ಟಿದ ಕತೆಯನ್ನು ಜನರೆದುರಿಗೆ ತರುವಾಗಲೂ ಕನ್ನಡ ಪ್ರಭ ಅತ್ಯಂತ ಸಭ್ಯ ಭಾಷೆಯನ್ನು ಬಳಸಿದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಮೌಲ್ಯಯುತ ಬರವಣಿಗೆಗೆ ಇನ್ನೂ ಜೀವಂತವಾಗಿ ಇದೆ ಅನ್ನುವುದನ್ನು ತೋರಿಸಿದೆ. ರವಿ ಹಾಗೂ ಆತನು ಕಟ್ಟಿದ ಹಾಯ್ ಬೆಂಗಳೂರು ಪತ್ರಿಕೆಯ ಕೊಳಕು ಬರವಣಿಗೆಗೆ ಸಭ್ಯವಾದ ಉತ್ತರ ಈ ಲೇಖನ.
ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಇನ್ಯಾರನ್ನೋ ಬಲಿಪಶು ಮಾಡುವ, ಸತ್ಯವನ್ನು ತಿರುಚುವವರ ವಿರುದ್ದದ ಹೋರಾಟಕ್ಕೆ ನನ್ನ ಬೆಂಬಲವಿದೆ. ನಿಮ್ಮದು ಕೋಳಿ ಜಗಳ, ಅದು ಇದೂ ಅಂತ ಯಾರೇನೇ ಹೇಳಿದರು ಕಿವಿಗೆ ಹಾಕಿಕೊಳ್ಳದೇ ಕೊಳಕನ್ನು ಕಿತ್ತು ಹಾಕಿ. ಪೀತಪತ್ರಿಕೆಗಳು ನಿಲ್ಲಲಿ. ನೊಂದ ಎಲ್ಲರೂ ಈಗಲಾದರೂ ಎಚ್ಚೆತ್ತು ಪೀತ ಪತ್ರಿಕೆಗಳ ವಿರುದ್ದ ಕಾನೂನು ಸಮರ ಸಾರಲಿ. ಈಗಾಗಲೆ ನೊಂದ ಕೆಲವರು ಕಾನೂನು ಸಮರದಲ್ಲಿ ಗೆದ್ದಿದ್ದಾರೆ. ನೊಂದವರು ಗೆಲ್ಲಲಿ, ಅಹಂಕಾರದಲ್ಲಿ ಮೆರೆದವರು ಬಿದ್ದು ಮಣ್ಣಾಗಲಿ. ಆ ಕೆಲಸ ಶೀಘ್ರವಾಗಿ ನಡೆಯಲಿ
this is not expected from Ravi belegere.
ಇಂತ ನಿಜ ಸಂಗತಿಗಳಿಂದ ರವಿ ಬೆಳೆಗೆರೆ ನಿಜವಾದ ಬಣ್ಣ ಬಯಲಾಗಿದೆ, ಬೆಳಗೆರೆ ಬೇರೊಬ್ಬರ ಮೇಲೆ ಕೆಸರು ಎರಚಲು ಹೋಗಿ ತನ್ನ ಮೇಲೆ ಎರಚಿಕೊಂಡಿದ್ದಾರೆ.